Thursday, April 18, 2024

ಸಿಬಿಐ ಬಲೆಗೆ ಕ್ರೀಡಾ ವಂಚಕರು!

ಏಜೆನ್ಸೀಸ್ ಹೊಸದಿಲ್ಲಿ

ಕ್ರೀಡೆಯ ಹೆಸರಿನಲ್ಲಿ ಅವ್ಯವಹಾರ ಮಾಡುತ್ತಿರುವುದನ್ನು ಗಮನಿಸಿದ ಸಿಬಿಐ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ದಿಲ್ಲಿಯ ಕಚೇರಿಗೆ ದಾಳಿ ಮಾಡಿ ಅದರ ನಿರ್ದೇಶಕರು ಸೇರಿದಂತೆ ಆರು ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಸಾಯ್ ನಿರ್ದೇಶಕ ಎಸ್.ಕೆ. ಶರ್ಮಾ, ಲೆಕ್ಕ ವಿಭಾಗದ ಕಿರಿಯ ಅಧಿಕಾರಿ ಹರಿಂದರ್ ಪ್ರಸಾದ್, ಮೇಲ್ವಿಚಾರಕ ಲಲಿತ್ ಜಾಲಿ ಮತ್ತು ವಿ.ಕೆ. ಶರ್ಮಾ ಅವರನ್ನು ಬಂಧಿಸಿದ್ದಾರೆ. ಜತೆಯಲ್ಲಿ ಖಾಸಗಿ ಗುತ್ತಿಗೆದಾರ ಮನ್‌ದೀಪ್ ಅಹುಜಾ ಹಾಗೂ ಅವರ ಉದ್ಯೋಗಿ ಯೂನಸ್ ಬಂಧನಕ್ಕೊಳಗಾಗಿದ್ದಾರೆ. ಗುತ್ತಿಗೆಯವರಿಗೆ ಸಂದಾಯವಾಗಬೇಕಿದ್ದ 19 ಲಕ್ಷ ರೂ. ನೀಡಬೇಕಾದರೆ ಶೇ. 3ರಷ್ಟು ಕಮಿಷನ್ ನೀಡಬೇಕೆಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರದ ಕುರಿತು ಕೇಂದ್ರ ಕ್ರೀಡಾ ಇಲಾಖೆಗೆ ಮಾಹಿತಿ ಇದ್ದು, ಈ ಮಾಹಿತಿಯನ್ನು ಇಲಾಖೆ ಸಿಬಿಐಗೆ ತಿಳಿಸಿರುವುದಾಗಿ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ  ಸಿಂಗ್ ರಾಥೋಡ್ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
‘ಭ್ರಷ್ಟಾಚಾರ ಮುಕ್ತಗೊಳಿಸುವುದು ನಮ್ಮ ಉದ್ದೇಶ, ಭಾರತದ ಕ್ರೀಡೆಯಲ್ಲಿ ಈ ರೀತಿಯ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಏಜೆನ್ಸೀಗೆ ನಾವು ಈ ಮಾಹಿತಿಯನ್ನು ರವಾನಿಸಿದ್ದೆವು. ಅಂಥವರನ್ನು ಸಿಬಿಐ ಇಂದು ಬಂಧಿಸಿದೆ,ನಮ್ಮ ಈ ಹೋರಾಟ ಮುಂದುವರಿಯಲಿದೆ,‘ ಎಂದು ರಾಥೋಡ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸಂಜೆ 5 ಗಂಟೆಗೆ ಆಗಮಿಸಿದ ಸಿಬಿಐ ತಂಡ ತಡರಾತ್ರಿವರೆಗೂ ಕಚೇರಿಯಲ್ಲಿ ಶೋಧ  ಕಾರ್ಯ ನಡೆಸಿದ್ದು, ಇನ್ನು ಅನೇಕರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.

Related Articles