Tuesday, April 16, 2024

ಫ್ರಾನ್ಸ್‌ಗೆ ಹೊರಟ ಪಂಜ ಕುಸ್ತಿಪಟು ಸುರೇಶ್‌ ಪಾಂಡೇಶ್ವರಗೆ ನೆರವಿನ ಅಗತ್ಯವಿದೆ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಸಮೀಪದ ಪಾಂಡೇಶ್ವರ ಗ್ರಾಮದ ವಿಶೇಷ ಚೇತನ ಕ್ರೀಡಾಪಟು ಸುರೇಶ್‌ ಬಿ. ಪಾಂಡೇಶ್ವರ ಅವರು ರಾಜ್ಯ ಮಟ್ಟದಲ್ಲಿ ಸಾಮಾನ್ಯರೊಂದಿಗೆ ಸ್ಪರ್ಧಿಸಿ ರಾಷ್ಟ್ರಮಟ್ಟದಲ್ಲಿ ನಡೆದ ಆರ್ಮ್‌ ರೆಸ್ಲಿಂಗ್‌ (ಪಂಜ ಕುಸ್ತಿ)ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಬಡ ಕುಟುಂಬದಿಂದ ಬಂದ ಈ ಕ್ರೀಡಾಪಟುವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳು ಆರ್ಥಿಕ ಸಮಸ್ಯೆ ಎದುರಾಗಿದ್ದು ಅವರಿಗೆ ಕ್ರೀಡಾಭಿಮಾನಿಗಳಿಂದ ನೆರವಿನ ಅಗತ್ಯವಿದೆ.

 

ಕರಾವಳಿ ಜಿಲ್ಲೆಯಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಮೊದಲ ಆರ್ಮ್‌ ರೆಸ್ಲರ್‌ ಎಂಬ ಹೆಗ್ಗಳಿಕೆಗೆ ಸುರೇಶ್‌ ಪಾತ್ರರಾಗಿದ್ದಾರೆ.

ಪಾಂಡೇಶ್ವರದ ಬಾಬು ಪೂಜಾರಿ ಹಾಗೂ ಶಾರದ ಪೂಜಾರ್ತಿಯ ಮಗನಾಗಿರುವ ಸುರೇಶ್‌ ಆರಂಭದಿಂದಲೂ ದೇಹದಾರ್ಢ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹುಟ್ಟಿದ ಒಂದು ವರ್ಷದಲ್ಲಿ ಪೋಲಿಯೊಗೆ ತುತ್ತಾಗಿ ಸುರೇಶ್‌ ಅವರ ಕಾಲು ವೈಕಲ್ಯಗೊಂಡಿತ್ತು. ಆದರೂ ದೇಹದಾರ್ಡ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಮಾನ್ಯರೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡವರು.

ಅನಿರೀಕ್ಷಿತವಾಗಿ ಆರ್ಮ್‌ ರೆಸ್ಲಿಂಗ್‌ನಲ್ಲಿ ಆಸಕ್ತಿ: ದೇಹದಾರ್ಢ್ಯ ಹೊರತಪಡಿಸಿದರೆ ಸುರೇಶ್‌ಗೆ ಬೇರೆ

ಯಾವುದೇ ಕ್ರೀಡೆಯ ಪರಿಚಯ ಇರಲಿಲ್ಲ. ಬ್ರಹ್ಮಾವರದ ಬಾಡಿಝೋನ್‌ ಫಿಟ್ನೆಸ್‌ ಕೇಂದ್ರದಲ್ಲಿ ಫಿಟ್ನೆಸ್‌ ಮಾಡುವಾಗ ಗೆಳೆಯರೊಬ್ಬರು ಈ ಕ್ರೀಡೆಯ ಬಗ್ಗೆ ಮಾಹಿತಿ ನೀಡಿದರು. “ಇದೆಲ್ಲ ನಮಗೆಲ್ಲಿ ಆಗುತ್ತದೆ” ಎಂದು ಸುರೇಶ್‌ ಸುಮ್ಮನಿದ್ದರು. ಆದರೆ ಒಂದು ದಿನ ಆ ಗೆಳೆಯನೇ ಸುರೇಶ್‌ ಅವರನ್ನು ಸ್ಪರ್ಧೆಗೆ ಬರುವಂತೆ ಆಹ್ವಾನಿಸಿದರು, ಸುರೇಶ್‌ ಪಂಜ ಕುಸ್ತಿಯ ಬಗ್ಗೆ ಅರಿವು ಇರುವ ಗೆಳೆಯನನ್ನು ಒಂದೇ ಉಸಿರಿನಲ್ಲಿ ಸೋಲಿಸಿದರು. ಕಾಲು ಊನವಾಗಿದ್ದರೂ ಉತ್ತಮ ಭುಜಬಲವನ್ನು ಹೊಂದಿರುವ ಸುರೇಶ್‌ಗೆ ಪಂಜ ಕುಸ್ತಿಯಲ್ಲಿ ಆಸಕ್ತಿ ಹುಟ್ಟಿತು.

ಬೆಂಗಳೂರಿನಲ್ಲಿ ಸಾಮಾನ್ಯರೊಂದಿಗೆ ಸ್ಪರ್ಧೆ!

ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸುರೇಶ್‌ ಅವರು ಆಸಕ್ತಿ ತೋರಿದರು. ತರಬೇತುದಾರರಿಲ್ಲ, ಆಟದ ನಿಯಮವೂ ಗೊತ್ತಿಲ್ಲದ ಸುರೇಶ್‌ಗೆ ಬೆಂಗಳೂರು ತಲುಪಿದಾಗ ಅಚ್ಚರಿ ಕಾದಿತ್ತು. ಅಲ್ಲಿ ಇವರಂತೆ ವಿಶೇಷ ಚೇತನರು ಯಾರೂ ಇರಲಿಲ್ಲ. 85 ಕೆಜಿ ವಿಭಾಗದಲ್ಲಿ ಸಾಮಾನ್ಯರೊಂದಿಗೆ ಓಪನ್‌ ವಿಭಾಗದಲ್ಲಿ ಸ್ಪರ್ಧಿಸಬೇಕೆಂದು ಸಂಘಟಕರು ಸೂಚಿಸಿದರು. ಸುರೇಶ್‌ ಈ ಅಚ್ಚರಿಯ ಆಹ್ವಾನದಿಂದ ದೃತಿಗೆಡಲಿಲ್ಲ. ಅತ್ಯಂತ ಆತ್ಮವಿಶ್ವಾಸದಲ್ಲಿ ಸ್ಪರ್ಧೆಗೆ ಇಳಿದರು. ನಾಲ್ಕೈದು ಸ್ಪರ್ಧಿಗಳನ್ನು ಮಣಿಸಿ  ಪದಕ ಗೆದ್ದರು. ಎಡಗೈಯಲ್ಲಿ ಕಂಚಿನ ಪದಕ ಮತ್ತು ಬಲಗೈಯಲ್ಲಿ ಐದನೇ ಸ್ಥಾನ ದಕ್ಕಿತು. ಪದಕಕ್ಕಿಂತ ಈ ವಿಶೇಷ ಸ್ಪರ್ಧಿಯ ತಾಕತ್ತು ನೋಡಿ ಅಲ್ಲಿಯ ಇತರ ಸ್ಪರ್ಧಿಗಳು ಬೆರಗಾದರು. ಸುರೇಶ್‌ ಗೆದ್ದಿರುವ ಪದಕವನ್ನು ಪರಿಗಣಿಸಿದರೆ ಅವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗುತ್ತಿರಲಿಲ್ಲ. ಆದರೆ ವಿಶೇಷ ಚೇತನರಾಗಿ ಅಂಥ ವೃತ್ತಿಪರ ಸ್ಪರ್ಧಿಗಳ ವಿರುದ್ಧ ನೀಡಿದ ಹೋರಾಟವನ್ನು ನೋಡಿ ಸಂಘಟಕರು ಗೋವಾದಲ್ಲಿ ನಡೆಯಲಿರುವ ಎರಡನೇ ರಾಷ್ಟ್ರೀ ಆರ್ಮ್‌ ರೆಸ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.

ರಾಷ್ಟ್ರ ಮಟ್ಟದಲ್ಲಿ ಚಿನ್ನ, ಬೆಳ್ಳಿ!:

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಾಮಾನ್ಯರ ಬೆವರಿಳಿಸಿದ ಸುರೇಶ್‌ಗೆ ಗೋವಾದಲ್ಲಿ ವಿಶೇಷ ಚೇತನರ ವಿಭಾಗದಲ್ಲಿ ಸ್ಪರ್ಧಿಸಿದರು. “ಎದುರಾಳಿಯಲ್ಲಿ ಯಾವುದೇ ಅಂಗ ವೈಕಲ್ಯ ಕಂಡು ಬಂದಿಲ್ಲ, ಅವರೊಂದಿಗೆ ವಾದ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಭಾಷೆಯ ಕೊರತೆ ಇತ್ತು. ಯಾರೇ ಇರಲಿ ಅವರ ವಿರುದ್ಧ ಸ್ಪರ್ಧಿಸಲು ನಾನು ಸಿದ್ಧನಾಗಿದ್ದೆ, ಹಾಗಾಗಿ ಪ್ರತಿರೋಧ ಮಾಡದೆ ಸ್ಪರ್ಧಿಸಿದೆ,” ಎಂದು ಹೇಳುವ ಸುರೇಶ್‌ ಅವರಲ್ಲಿ ಒಬ್ಬ ನೈಜ ಚಾಂಪಿಯನ್‌ ಇರುವುದು ಸ್ಪಷ್ಟವಾಗಿತ್ತು.

ಸುರೇಶ್‌ ಎಡಗೈ ವಿಭಾಗದಲ್ಲಿ ಚಿನ್ನ ಗೆದ್ದರೆ, ಬಲಗೈ ವಿಭಾಗದಲ್ಲಿ ಬೆಳ್ಳಿ ಗೆದ್ದರು, “ಬೆಂಗಳೂರಿನಲ್ಲಿ ಸ್ಪರ್ಧೆ ನಡೆಯುವಾಗ ಬಲಗೈಗೆ ನೋವಾಗಿತ್ತು. ಇದರಿಂದಾಗಿ ಬಲಗೈಯಲ್ಲಿ ಚಿನ್ನ ಗೆಲ್ಲಲಾಗಲಿಲ್ಲ. ನಿರಂತರವಾಗಿ ಸ್ಪರ್ಧೆ ಇದ್ದ ಕಾರಣ, ಅಲ್ಲದೆ ಅಲ್ಲಿ ಬಂದಿರುವವರೆಲ್ಲರೂ ವೃತ್ತಿಪರ ಕುಸ್ತಿಪಟುಗಳು ಹಾಗೂ ತರಬೇತುದಾರರನ್ನು ಒಳಗೊಂಡಿರುವವರು, ಹಾಗಾಗಿ ಬಲಗೈಯಲ್ಲಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು,” ಎಂದು ಸುರೇಶ್‌ ಹೇಳಿದರು.

ಆರ್ಥಿಕ ನೆರವಿನ ಅಗತ್ಯವಿದೆ:

ಗೋವಾದಲ್ಲಿ ನಡೆದ  ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಸುರೇಶ್‌ಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆರ್ಥಿಕ ಸಮಸ್ಯೆ ಇದೆ.  ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿರುವ ಸುರೇಶ್‌ಗೆ ತಂದೆ ತಾಯಿ ಮತ್ತು ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಆರ್ಮ್‌ ರೆಸ್ಲಿಂಗ್‌ ಫೆಡರೇಷನ್‌ ಅರ್ಧ ವೆಚ್ಚವನ್ನು ಭರಿಸುವುದಾಗಿ ಒಪ್ಪಿಕೊಂಡಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸುಮಾರು 2 ಲಕ್ಷ ರೂ, ತಗಲುತ್ತದೆ ಎಂದು ತಿಳಿಸಿದ್ದಾರೆ. ಪದಕ ಗೆಲ್ಲುತ್ತೇನೆಂಬ ಆತ್ಮವಿಶ್ವಾಸ ಹೊಂದಿರುವ ಸುರೇಶ್‌ಗೆ ಕ್ರೀಡಾಭಿಮಾನಿಗಳ ನೆರವಿನ ಅಗತ್ಯವಿದೆ. ನಮಗೆ ಅಪರೂಪವೆನಿಸಿರುವ ಈ ಕ್ರೀಡೆಯಲ್ಲಿ ನಮ್ಮೂರಿನ ಪ್ರತಿಭೆಯೊಂದು ಯಶಸ್ಸು ಕಾಣುವುದು ಕೂಡ ನಮ್ಮೆಲ್ಲರ ಬಯಕೆ.

“ಬದುಕು ಸದಾ ಹೋರಾಟದಿಂದ ಕೂಡಿದೆ. ಕೆಲಸದ ನಡುವೆ ಬಿಡುವಿನ ಸಮಯದಲ್ಲಿ ಚಾಲಕನಾಗಿ ಕೆಲಸ ಮಾಡುವೆ. ಮನೆಯಲ್ಲೇ ಪಿನಾಯಿಲ್‌ ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡುವೆ. ಸಂಜೆ ಒಂದು ಗಂಟೆ ಫಿಟ್ನೆಸ್‌ನಲ್ಲಿ ಪಾಲ್ಗೊಳ್ಳುವೆ,” ಎನ್ನುವ ಸುರೇಶ್‌ ಅವರ ಜೀವನೋಲ್ಲಾಸ ಇತರರಿಗೆ ಮಾದರಿ.

ಆರ್ಮ್‌ ರೆಸ್ಲಿಂಗ್‌ ಜನಪ್ರಿಯಗೊಳಿಸುವೆ:

“ನನ್ನ ಬದುಕಿಗೆ ಹೊಸ ತಿರುವು ನೀಡಿದ ಆರ್ಮ್‌ ರೆಸ್ಲಿಂಗ್‌ ಕ್ರೀಡೆಯನ್ನು ಹೆಚ್ಚು ಜನಪ್ರಿಯಗೊಳಿಸುವೆ. ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದ ನಂತರ ಅನೇಕ ಯುವಕರು ಈ ಕ್ರೀಡೆಯ ಬಗ್ಗೆ ಆಸಕ್ತಿ ತೋರಿದ್ದಾರೆ. ಈ ಕ್ರೀಡೆಯ ಬಗ್ಗೆ ತಾಂತ್ರಿಕವಾಗಿ ಚೆನ್ನಾಗಿ ತಿಳಿದುಕೊಳ್ಳಬೇಕು. ಹೆಚ್ಚಿನ ತರಬೇತಿ ಪಡೆಯಬೇಕು. ತಾಂತ್ರಿಕವಾಗಿ ತಿಳಿದುಕೊಳ್ಳದಿದ್ದರೆ ಕೈ ಮುರಿದುಹೋಗುವ ಸಾಧ್ಯತೆ ಇರುತ್ತದೆ,” ಎನ್ನುವ ಸುರೇಶ್‌ ಅವರಲ್ಲಿ ಕ್ರೀಡೆಯ ಬಗ್ಗೆ ಇರುವ ಕಾಳಜಿ ಮತ್ತು ಪ್ರೀತಿ ಸ್ಪರ್ಷವಾಗುತ್ತದೆ.

Related Articles