Thursday, October 10, 2024

ಗೋಲುಗಳ ಸರದಾರ ಹಾಕಿಯ ಹರೀಶ್‌ ಮುಟಗಾರ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು

ಬೆಂಗಳೂರಿನಲ್ಲಿ ನಡೆಯುತ್ತಿರುವ ಆರನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಡಿವೈಇಎಸ್‌ ಎ ತಂಡ ಪೋಸ್ಟಲ್‌ ವಿರುದ್ಧ 13-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಗದುಗಿನ ಹರೀಶ್‌ ಮುಟಗಾರ್‌ ವೈಯಕ್ತಿಕ 7 ಗೋಲುಗಳನ್ನು ಗಳಿಸಿ ಅಚ್ಚರಿ ಮೂಡಿಸಿದರು. ಇತ್ತೀಚಿಗೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ 9 ಗೋಲುಗಳನ್ನು ಗಳಿಸಿದರು. ಕಳೆದ ಬಾರಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ 8 ಗೋಲುಗಳನ್ನು ಗಳಿಸಿದರು. ರಾಷ್ಟ್ರೀಯ ಹಾಕಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ಗೋಲು ಗಳಿಸಿದರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕರ್ನಾಟಕ ಎರಡು ಕಂಚಿನ ಪದಕ ಗೆಲ್ಲುವಲ್ಲಿ ಹರೀಶ್‌ ಮುಟಗಾರ್‌ ಅವರ ಪಾತ್ರ ಪ್ರಮುಖವಾಗಿತ್ತು. 2016, 2017, 2018, 2019 ಹೀಗೆ ನಾಲ್ಕು ವರ್ಷಗಳ ಕಾಲ ಭಾರತದ ಕ್ಯಾಂಪ್‌ನಲ್ಲಿ ಇದ್ದರೂ ಈ ಪ್ರತಿಭೆಗೆ ಅವಕಾಶ ನೀಡಲಿಲ್ಲ. ಏಕೆಂದರೆ ಈ ಸಾಧಕ ಒಬ್ಬ ಗ್ರಾಮೀಣ ಪ್ರತಿಭೆ.

ಕಾಲಿಲ್ಲದ ಅಪ್ಪ ಸೋಮಪ್ಪ ಮುಟಗಾರ್‌, ಮನೆ ಕೆಲಸ ಮಾಡುವ ತಾಯಿ ರತ್ನಮ್ಮ ಮುಟಗಾರ್‌, ಹಾಕಿಯಲ್ಲಿ ಸಾಧನೆ ಮಾಡಿದರೂ ಉನ್ನತ ಮಟ್ಟಕ್ಕೇರಲಾರದೆ ಜಿಮ್‌ ನಡೆಸುತ್ತಿರುವ ರಾಷ್ಟ್ರೀಯ ಹಾಕಿ ಆಟಗಾರ ಮಹೇಶ್‌ ಮುಟಗಾರ್‌ ಇದು ಮುಟಗಾರ್‌ ಪುಟ್ಟ ಕುಟುಂಬ. ನೆರೆ ಹಾವಳಿಯಿಂದ ಮನೆ ಕುಸಿದಿತ್ತು. ಸರಕಾರ ಬೇರೆ ಮನೆ ಕಟ್ಟಿಕೊಡುವ ಆಶ್ವಾಸನೆ ನೀಡಿದೆ. ಆದರೆ ಈ ಚಾಂಪಿಯನ್‌ ಆಟಗಾರ ತನಗೆ ದೊರೆತ ಸ್ಕಾಲರ್‌ಷಿಪ್‌ ಹಣದಲ್ಲೇ ಮನೆ ದುರಸ್ತಿ ಮಾಡಿ ಜವಾಬ್ದಾರಿಯನ್ನು ಮೆರೆದ.

ಅಪ್ಪ ಅಮ್ಮನ ಕಷ್ಟ ನೋಡಿ ಹಾಕಿಗೆ ಬಂದೆ:

ಗದುಗಿನ ಗಾಂಧೀ ನಗರದಲ್ಲಿರುವ ಮುಟಗಾರ್‌ ಕುಟುಂಬದಿಂದ ಬಂದ ಹರೀಶ್‌ ಮುಟಗಾರ್‌ ಮನೆಯಲ್ಲಿರುವ ಕಷ್ಟವನ್ನು ದೂರ ಮಾಡುವ ಉದ್ದೇಶದಿಂದ ಹಾಕಿ ಆಡುವ ಮನಸ್ಸು ಮಾಡಿದರು. ಪ್ರಾಥಮಿಕ ಹಂತದಲ್ಲಿ ಕರ್ನಾಟಕದ ಉತ್ಕೃಷ್ಟ ಹಾಕಿ ಕೋಚ್‌ ಕ್ರೀಡಾ ಇಲಾಖೆಯ ದೇವರಾಜಮ್ಮ ಅವರು ಹರೀಶ್‌ಗೆ ತರಬೇತಿ ನೀಡಿ, ಹಾಕಿಯಲ್ಲಿ ಭವಿಷ್ಯ ಕಂಡುಕೊಳ್ಳಬಹುದು ಎಂದು ಹಾದಿ ತೋರಿದರು. ಅವರು ಹಾಕಿ ಕೊಟ್ಟ ಹಾದಿಯಲ್ಲೇ ಮುನ್ನಡೆದ ಹರೀಶ್‌ಗೆ ಮುಂದಿನ ಹಂತದಲ್ಲಿ ವಿಜಯ್‌ ಕೃಷ್ಣ ಅವರು ಉತ್ತಮ ತರಬೇತಿ ನೀಡಿದರು ಮಾತ್ರವಲ್ಲ, ತಮ್ಮ ಮಗನಂತೆ ಆರೈಕೆ ಮಾಡಿದರು. “ಈ ಇಬ್ಬರು ತರಬೇತುದಾರರನ್ನು ನನ್ನ ಬದುಕಿನಲ್ಲಿ ಮರೆಯವುದಿಲ್ಲ,” ಎನ್ನುತ್ತಾರೆ ಹರೀಷ್‌ ಮುಟಗಾರ್‌.

ಭಾರತ ತಂಡವನ್ನು ಪ್ರತಿನಿಧಿಸುವ ಹಂಬಲ:

ಪ್ರತಿಯೊಬ್ಬ ಹಾಕಿ ಆಟಗಾರನಿಗೂ ಇರುವಂತೆ ಹರೀಶ್‌ಗೂ ಕೂಡ ಭಾರತ ಹಾಕಿ ತಂಡದಲ್ಲಿ ಆಡುವ ಹಂಬಲ. ಅದಕ್ಕೆ ಪೂರಕವಾದ ಸಾಮರ್ಥ್ಯ ಇದ್ದರೂ ಅದೃಷ್ಟ ಇನ್ನೂ ಕೈಗೂಡಿ ಬಂದಿಲ್ಲ. ಹರೀಶ್‌ ಅವರ ಆಟ ನೋಡಿ ವಿವಿಧ ಲೀಗ್‌ಗಳ ತಂಡಗಳು ಇವರನ್ನು ಆಡಲು ಆಹ್ವಾನಿಸುತ್ತವೆ. ಅವರು ನೀಡುವ ಪಂದ್ಯದ ಶುಲ್ಕದಲ್ಲೇ ಬದುಕನ್ನು ನಿಭಾಯಿಸುತ್ತಿದ್ದಾರೆ. ಬುಧವಾರ ಕರೆ ಮಾಡಿದಾಗ ಹರೀಶ್‌ ಮೆಜೆಸ್ಟಿಕ್‌ನಲ್ಲಿ ಚೆನ್ನೈಗೆ ಹೋಗುವ ಬಸ್‌ ಏರಿದ್ದರು. ಅಲ್ಲಿ ನಡೆಯುವ ಲೀಗ್‌ ಪಂದ್ಯಗಳಲ್ಲಿ ಇಂಡಿಯನ್‌ ಬ್ಯಾಂಕ್‌ ಪರ ಆಡಲಿದ್ದಾರೆ. “ಹಾಕಿ ಆಡುವುದರ ಜೊತೆಯಲ್ಲಿ ಬದುಕಿಗೆ ಏನಾದರೂ ನೆರವಾಗಬಹದು ಎಂಬ ಉದ್ದೇಶದಿಂದ ಬೇರೆ ಬೇರೆ ಲೀಗ್‌ಗಳಲ್ಲಿ ಆಹ್ವಾನ ಬಂದರೆ ಆಡುತ್ತೇನೆ,” ಎಂದು ಹರೀಶ್‌ ಮುಟಗಾರ್‌ ಹೇಳಿದರು.

ಅಣ್ಣ ಉತ್ತಮ ಆಟಗಾರ: ಹರೀಶ್‌ ಮುಟಗಾರ್‌ ಅವರ ಅಣ್ಣ ಮಹೇಶ್‌ ಮುಟಗಾರ್‌ ರಾಷ್ಟ್ರೀಯ ಹಾಕಿಯಲ್ಲಿ ಮಿಂಚಿದ ಉತ್ತಮ ಆಟಗಾರ. ಆದರೆ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಪ್ರತಿಭೆ ಇದ್ದರೂ ಪ್ರೋತ್ಸಾಹ ಸಿಗಲಿಲ್ಲ. ಹೆತ್ತವರ ಪಾಲನೆ ಮಾಡುವ ಜವಾಬ್ದಾರಿ ಹಾಕಿಯ ಆಟದಲ್ಲಿ ಮುನ್ನಡೆಗೆ ಅಡ್ಡಿ ಮಾಡಿತು. ಕ್ರೀಡೆಗೆ ಸಂಬಂಧಿಸಿದ ಯಾವುದಾದರೂ ಉದ್ಯೋಗ ಮಾಡಬೇಕೆಂಬ ಮನಸ್ಸು ಮಾಡಿದಾಗ ರಾಜ್ಯ ಯುವ ಸಬಲೀಕರಣ ಕ್ರೀಡಾ ಇಲಾಖೆಯ ನೆರವಿನಿಂದ ಜಿಮ್‌ ಸ್ಥಾಪಿಸಿದರು. ಈಗ ಜಿಮ್‌ನಲ್ಲಿ ಬಂದ ಆದಾಯದಲ್ಲಿ ಹೆತ್ತವರ ಆರೈಕೆ ಮಾಡುತ್ತಿದ್ದಾರೆ, ಜೊತೆಯಲ್ಲಿ ಹರೀಶ್‌ ಅವರ ಪಂದ್ಯದ ಶುಲ್ಕ ಮನೆ ಸೇರುತ್ತಿದೆ.

ಎಲ್ಲರೂ ಸೇರಿದರೆ ಒಂದು ಹಾಕಿ ತಂಡ!: ಮುಟಗಾರ್‌ ಕುಟುಂಬದಲ್ಲಿ ಒಂದು ಹಾಕಿ ತಂಡಕ್ಕೆ ಬೇಕಾಗುವಷ್ಟು ಆಟಗಾರರಿದ್ದಾರೆ ಎಂದರೆ ಅಚ್ಚರಿಯಾಗುವುದು ಸಹಜ. ಆದರೆ ಇದು ಸತ್ಯ. ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಮಿಂಚಿದ ಆಟಗಾರರೇ, ಗೋಲ್‌ಕೀಪರ್‌, ಫಾರ್ವರ್ಡ್‌, ಡಿಫೆಂಡರ್‌, ಡ್ರ್ಯಾಗ್‌ಫ್ಲಿಕರ್‌ ಹೀಗೆ ಹಾಕಿ ತಂಡವೊಂದಕ್ಕೆ ಅಗತ್ಯವಿರುವ ಆಟಗಾರರು ಮುಟಗಾರ್‌ ಕುಟುಂಬದಲ್ಲಿದ್ದಾರೆ. ಮುಟಗಾರ್‌ ಕುಟುಂಬದಲ್ಲಿ ಮೊದಲು ಹಾಕಿ ಆಡಿದವರು ಉಮೇಶ್‌ ಮುಟಗಾರ್‌. ಇಡೀ ಕುಟುಂಬಕ್ಕೆ ಸ್ಫೂರ್ತಿಯ ಸೆಲೆಯಾಗಿ ನಿಂತವರು ಉಮೇಶ್‌. ಇವರು ಹರೀಶ್‌ ಮುಟಗಾರ್‌ ಅವರ ದೊಡ್ಡಪ್ಪನ ಮಗ. ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಪರ ಮಿಂಚಿದ ಆಟಗಾರ. ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.  ಅನಿಲ್‌ ಮುಟಗಾರ್‌, ಅಭಿಷೇಕ್‌ ಆರ್‌. ಮುಟಗಾರ್‌, ಅಭಿಷೇಕ್‌ ಎಸ್‌. ಮುಟಗಾರ್‌, ದೀಪಕ್‌ ಮುಟಗಾರ್‌, ದಿಲೀಪ್‌ ಮುಟಗಾರ್‌, (ಗೋಲ್‌ಕೀಪರ್‌), ಶೀನು ಮುಟಗಾರ್‌ (ಡಿಫೆನ್ಸ್‌), ರವಿ ಮುಟಗಾರ್‌, ಉಮೇಶ್‌ ಮುಟಗಾರ್‌, ಮಹೇಶ್‌ ಮುಟಗಾರ್‌, ಆದರ್ಶ್‌ ಮುಟಗಾರ್‌. ಹರೀಶ್‌ ಮುಟಗಾರ್‌,  ರಾಜೇಶ್‌ ಮುಟಗಾರ್‌. ಇವರಲ್ಲಿ ರಾಜೇಶ್‌ ಮುಟಗಾರ್‌ ಕುಟುಂಬದ ಹಾಕಿ ಆಟಗಾರರಿಗೆ ಒಂದು ರೀತಿಯಲ್ಲಿ ಪ್ರಾಯೋಜಕರಿದ್ದಂತೆ. ಕಷ್ಟಗಳಿಗೆ ಸ್ಪಂದಿಸುತ್ತಾರೆ.

ಕೊಡಗಿನ ಐತಿಹಾಸಿಕ ಹಾಕಿ ಕುಟುಂಬಗಳನ್ನು ಹೊರತುಪಡಿಸಿದರೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕಾಣ ಸಿಗುವ ಹಾಕಿ ಕುಟುಂಬವೆಂದರೆ ಅದು ಮುಟಗಾರ್‌ ಕುಟುಂಬ.

ಅವಕಾಶದ ನಿರೀಕ್ಷೆಯಲ್ಲಿ ಹರೀಶ್‌: ಕರ್ನಾಟಕದ ಉತ್ತಮ ಫಾರ್ವರ್ಡ್‌ ಆಟಗಾರ ಹರೀಶ್‌ಗೆ ಈಗ 23 ವರ್ಷ, ಈ ಹಂತದಲ್ಲಿ ಅವರು ಭಾರತ ತಂಡದ ಶಿಬಿರಗಳಲ್ಲಿ ಪಳಗಿ ಭಾರತ ತಂಡದಲ್ಲಿರಬೇಕಾಗಿತ್ತು. ಆದರೆ ಯಾರೂ ಇದುವರೆಗೂ ಗುರುತಿಸಿಲ್ಲ. ಭಾರತ ಹಾಕಿ ತಂಡಕ್ಕೆ ಅತಿ ಹೆಚ್ಚು ಆಟಗಾರರನ್ನು ನೀಡುತ್ತಿದ್ದ ಕರ್ನಾಟಕದಿಂದ ಈಗ ದೇಶದ ತಂಡದಲ್ಲಿ ಆಡುವವರ ಸಂಖ್ಯೆ ಕಡಿಮೆಯಾಗಿದೆ. ನೈಜ ಪ್ರತಿಭೆಗೆ ಒಂದಲ್ಲ ಒಂದು ದಿನ ಅವಕಾಶ ಸಿಕ್ಕಿಯೇ ಸಿಗುತ್ತದೆ. ಆ ಕಾಲ ಬೇಗನೇ ಕೂಡಿ ಬರಲಿ, ಉತ್ತರ ಕರ್ನಾಟಕದಲ್ಲಿ ಹಾಕಿ ಬೆಳಗಲಿ.

Related Articles