Thursday, March 28, 2024

ಎರವಲು ಪಡೆದ ಸೈಕಲ್‌ನಲ್ಲಿ ಏಷ್ಯನ್‌ ಪದಕ ಗೆದ್ದ ಬಸವರಾಜ್‌!

ಸೋಮಶೇಖರ್‌ ಪಡುಕರೆ, ಬೆಂಗಳೂರು

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 10ನೇ ಏಷ್ಯಾ ಪ್ಯಾರಾ ಟ್ರ್ಯಾಕ್‌  ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬಾಗಲಕೋಟೆ ಜಿಲ್ಲೆಯ ಮುದೋಳು ತಾಲೂಕಿನ ಹಲಕಿ ಗ್ರಾಮದ ಬಸವರಾಜ್‌ ಹೊರಡ್ಡಿ ಅವರು ಐತಿಹಾಸಿಕ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಪ್ಯಾರಾ ಸೈಕ್ಲಿಸ್ಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆದರೆ ಬಹಳ ನೋವಿನ ಸಂಗತಿಯೆಂದರೆ ಅವರು ಪದಕ ಗೆದ್ದಿರುವ ಸೈಕಲ್‌ನ ಟಯರ್‌ ಒಬ್ಬರು ನೀಡಿದರೆ, ಇತರ ಭಾಗ ಇನ್ನೊಬ್ಬರದ್ದು. ಹತ್ತು ವರ್ಷಗಳ ಹಿಂದೆ ಈ ರೀತಿಯ ಸುದ್ದಿ ಬಂದಾಗ ಅಚ್ಚರಿಯಾಗುತ್ತಿತ್ತು, ಆದರೆ ಪರಿಸ್ಥಿತಿ ಇನ್ನೂ ಬದಲಾಗಿಲ್ಲ ಎಂಬುದಕ್ಕೆ ನೋವಾಗುತ್ತಿದೆ.

ಮುರಿದ ಕೈ ಗೋಲ್ಡನ್‌ ಹ್ಯಾಂಡ್‌!!:

ಚಿಕ್ಕಂದಿನಲ್ಲಿ ಬಸವರಾಜ್‌ ದನ ಮೇಯಿಸುತ್ತಿರುವಾಗ ಕೈಗೆ ಹಗ್ಗ ಸಿಕ್ಕು ಮೂಳೆ ತುಂಡಾಗಿತ್ತು. ಹೀಗೆ ಮೂರು ಬಾರಿ ಕೈಯ ಮೂಳೆ ತುಂಡಾಗಿತ್ತು. ಮನೆಯವರಿಗೆ ಆಸ್ಪತ್ರೆಗೆ ಕೊಂಡೊಯ್ಯವು ಸಾಮರ್ಥ್ಯ ಇರಲಿಲ್ಲ. ಕೈಗೆ ಅರಸಿನ ಹಚ್ಚಿ, ದಬ್ಬೆ ಕಟ್ಟಿ ಬಿಡುತ್ತಿದ್ದರು. ಒಂದೆರಡು ತಿಂಗಳ ಬಳಿಕ ಬಿಡಿಸುತ್ತಿದ್ದರು. ಆಗ ಮೂಳೆ ಜೋಡಣೆಯಾಗಿದ್ದರೆ ಅದೃಷ್ಟ ಇಲ್ಲವೆಂದರೆ ಇಲ್ಲ. ಬಸವರಾಜ್‌ ಅವರ ಕೈಯ ಮೂಳೆ ಕೂಡಲೇ ಇಲ್ಲ. ಬದಲಾಗಿ ಕೈ ಒಳಗಿನಿಂದಲೇ ಕೊಳೆಯತೊಡಗಿತು. ಇದರಿಂದಾಗಿ ಅವರ ಬಲಗೈ ಎಡಗೈಗಿಂತ ಸಣ್ಣದು. “ನನಗೆ ಒಮ್ಮೊಮ್ಮೆ ಬಲಗೈ ಎಡಗೈಯಂತೆ ಉಪಯೋಗಕ್ಕೆ ಬರುತ್ತಿಲ್ಲ ಎಂಬ ನೋವು ಕಾಡುತ್ತಿತ್ತು. ಆದರೆ ಇನ್ನೊಂದು ರೀತಿಯಲ್ಲಿ ಯೋಚಿಸಿದಾಗ ದೇವರು ಕೈ ಕಸಿದುಕೊಂಡಿಲ್ಲ, ಆತ ಅದನ್ನು ʼಗೋಲ್ಡನ್‌ ಹ್ಯಾಂಡ್‌ʼ ಆಗಿ ಮಾಡಿದ ಅನಿಸುತ್ತಿದೆ. 200 ಪದಕಗಳು ನಮ್ಮ ಮನೆಯನ್ನು ಅಲಂಕರಿಸಿವೆ. ಹದಿನೈದು ದೇಶ ಸುತ್ತಿದ್ದು ಈ ಕೈ ಸರಿಇಲ್ಲ ಎಂಬ ಕಾರಣಕ್ಕೆ,” ಎಂದು ಹೇಳಿದರು.

ಸಾಮಾನ್ಯರೊಂದಿಗೆ ಸ್ಪರ್ಧಿಸುವ ಅಸಮಾನ್ಯ:

ಬಸವರಾಜ್‌ ಅವರ ಹೆಚ್ಚಿನ ಪದಕ ಗೆದ್ದಿದ್ದು ಸಾಮಾನ್ಯರೊಂದಿಗೆ. ರೋಡ್‌ ಸೈಕ್ಲಿಂಗ್‌ ಆಗಿರಬಹುದು, ವಿಶ್ವವಿದ್ಯಾನಿಲಯ ಮಟ್ಟದ 400 ಮೀ, ಹರ್ಡಲ್ಸ್‌ ಆಗಿರಬಹದುದು ಅವರು ಪದಕ ಗೆದ್ದಿರುವುದು ಸಾಮಾನ್ಯರೊಂದಿಗೆ ಸ್ಪರ್ಧಿಸಿ. ಚಂದರಗಿ ಕ್ರೀಡಾಶಾಲೆಯಲ್ಲಿ ಆರಂಭವಾದ ಬಸವರಾಜ್‌ ಅವರ ಕ್ರೀಡಾ ಬದುಕು ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯವರೆಗೂ ಹಬ್ಬಿತ್ತು. ಮೊದಲು ಅಥ್ಲೆಟಿಕ್ಸ್‌ನಲ್ಲಿ ಯಶಸ್ಸು ಕಂಡು ನಂತರ ಸೈಕ್ಲಿಂಗ್‌ನಲ್ಲಿ ತೊಡಗಿಸಿಕೊಂಡರು. ಸಾಮಾನ್ಯರೊಂದಿಗೆ ಅಥ್ಲೆಟಿಕ್ಸ್‌, ಸೈಕ್ಲಿಂಗ್‌ನಲ್ಲಿ ಚಿನ್ನ ಗೆದ್ದಿರುವ ಬಸವರಾಜ್‌, ಮುಂಬರುವ ಪ್ಯಾರಾ ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅಭ್ಯಾಸಕ್ಕಾಗಿ ಉತ್ತಮ ಗುಣಮಟ್ಟದ ಟ್ರ್ಯಾಕ್‌ ಸೈಕಲ್‌ ಅಗತ್ಯವಿದೆ ಎಂದು ಹೇಳಿದ್ದಾರೆ.

ಗುರುವಿಲ್ಲದೇ ಸೈಕ್ಲಿಂಗ್‌ನಲ್ಲಿ ಸಾಧನೆ!:

ರಾಜ್ಯ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆಯ ಕಾರ್ಯದರ್ಶಿ ಎಸ್‌.ಎಂ. ಕುರ್ಣಿ ಅವರು ಬಸವರಾಜ್‌ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ, “ಬಸವರಾಜ್‌ ವಿಶಿಷ್ಠ ಬಗೆಯ ಕ್ರೀಡಾ ಸಾಧಕ. ಯಾವ ಕ್ರೀಡೆಯಲ್ಲಿ ತೊಡಗಿಕೊಂಡರೂ ಅಲ್ಲೊಂದು ಪದಕ ಗೆಲ್ಲುತ್ತಿದ್ದ. ಸಾಮಾನ್ಯರೊಂದಿಗೂ ಸ್ಪರ್ಧಿಸಿ ಪದಕ ಗೆಲ್ಲುತ್ತಿದ್ದ. ಆತನಿಗೆ ಅಥ್ಲೆಟಿಕ್ಸ್‌ನಲ್ಲಿ ಗುರುಗಳಿರುತ್ತಿದ್ದರು, ಆದರೆ ಸೈಕ್ಲಿಂಗ್‌ನಲ್ಲಿ ಗುರುಗಳಿಲ್ಲ. ಆತನೇ ಕಲಿತು ಮುಂದೆ ಬಂದಿದ್ದಾನೆ,” ಎಂದು ಹೇಳಿದರು.

ಅಥ್ಲೆಟಿಕ್ಸ್‌ ನಂತರ ಸೈಕ್ಲಿಂಗ್:‌ ಚಿಕ್ಕಂದಿನಲ್ಲಿಯೇ ಸೈಕ್ಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಸವರಾಜ್‌ಗೆ ಚಂದರಗಿ ಶಾಲೆಯಲ್ಲಿ ಯಾವುದಾದರೂ ಒಂದು ಕ್ರೀಡೆಯಲ್ಲಿ ತರಬೇತಿ ಪಡೆಯುವ ಅವಕಾಶ ಇದ್ದ ಕಾರಣ ಸೈಕ್ಲಿಂಗ್‌ ತೊರೆದು ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾನ್ಯರು ಮತ್ತು ಪ್ಯಾರಾ ವಿಭಾಗದಲ್ಲಿ ಇನ್ನೂರಕ್ಕೂ ಹೆಚ್ಚು ಪದಕಗಳನ್ನು ಗೆದ್ದ ನಂತರ ಸೈಕ್ಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. 2018ರಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡರು. ಗೋವಾದಲ್ಲಿ ನಡೆದ ಡ್ಯುಯಥ್ಲಾನ್‌ನಲ್ಲಿ ಕಂಚಿನ ಪದಕ ಗೆದ್ದರು. ಕೊಲ್ಹಾಪುರದಲ್ಲಿ ನಡೆದ ಡ್ಯುಯಥ್ಲಾನ್‌ನಲ್ಲಿ ಚಿನ್ನದ ಪದಕ, ಹುಬ್ಬಳ್ಳಿಯಲ್ಲಿ ಬೆಳ್ಳಿ ಹೀಗೆ ಸಾಮಾನ್ಯರು ಮತ್ತು ಪ್ಯಾರಾ ವಿಭಾಗದ ಸೈಕ್ಲಿಂಗ್‌ನಲ್ಲಿ ಪ್ರಭುತ್ವ ಸಾಧಿಸಿದರು.

ಕಾಮನ್‌ವೆಲ್ತ್‌ ಪ್ಯಾರಾ ಗೇಮ್ಸ್‌, ಏಷ್ಯನ್‌ ಪೆಸಿಫಿಕ್‌ ಗೇಮ್ಸ್‌, ಐವಾಸ್‌ ಜೂನಿಯನ್‌, ಐವಾಸ್‌ ವಿಶ್ವ ಗೇಮ್ಸ್‌ ಕಂಚಿನ ಪದಕ. 2010ರಲ್ಲಿ ಮಾವ ಅಪಘಾತದಲ್ಲಿ ತೀರಿಕೊಂಡ ಕಾರಣ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರಲಿಲ್ಲ.

2009ರಲ್ಲಿ ಕ್ರೀಡಾ ಕೋಟಾದಡಿ ಜೆ.ಕೆ. ಸಿಮೆಂಟ್‌ ಕಂಪೆನಿ ಬಸವರಾಜ್‌ಗೆ ಸ್ಟೋರ್‌ಕೀಪರ್‌ ಹುದ್ದೆಯನ್ನು ನೀಡಿ

ಬದುಕಿಗೊಂದು ದಾರಿ ತೋರಿಸಿತು.ಚಂದರಗಿ ಕ್ರೀಡಾ ಶಾಲೆಯ ಆಡಳಿತ ಮಂಡಳಿ ಬಸವರಾಜ್‌ ಅವರಿಗೆ ಸೈಕಲ್‌ನ ಚಕ್ರವನ್ನು ನೀಡಿದೆ, ಸೈಕಲ್‌ನ ಫ್ರೇಮ್‌ ನೀಡಿದ್ದು ಬಾಕಲಕೋಟೆಯ ಬಾಗಲಕೋಟೆಯ ತುಳಸಿಕೆರೆಯ ಬಸವರಾಜ್‌ ಮತ್ತು ಮಲ್ಲಪ್ಪ ಅವರಿಗೆ ಸೇರಿದ್ದು.  ತಮಗೆ ಸಹಾಯ ಮಾಡಿದ ಉಮಾಶಂಕರ್‌ ಚೌಧರಿ, ಕಪಿಲ್‌, ಶಿವಯ್ಯ ಸ್ವಾಮಿ, ಸುರೇಶ್‌ ಕುಮಾರ್‌ ಅವರನ್ನು ಸ್ಮರಿಸಿದರು. ಅಲ್ಲದೆ ಆದಿತ್ಯ ಮೆಹ್ತಾ ಫೌಂಡೇಷನ್ನಿನ ಕೊಡುಗೆಯನ್ನೂ ಸ್ಮರಿಸಿದ್ದಾರೆ.

ಬಸವರಾಜ್‌ ಅವರ ಈ ಸಾಧನೆಗೆ ಕರ್ನಾಟಕ ಅಮೆಚೂರ್‌ ಸೈಕ್ಲಿಂಗ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ಎಸ್.ಎಂ. ಕುರ್ಣಿ ಹಾಗೂ ಅಧ್ಯಕ್ಷರಾದ ಶ್ರೀ ರಾಜು ಬಿರಾದಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಹಲಕಿ ಗ್ರಾಮದ ತಮ್ಮಣ್ಣಪ್ಪ ಹೊರಡ್ಡಿ ಹಾಗೂ ಕಸ್ತೂರಿ ಹೊರಡ್ಡಿಯವರ ಏಕೈಕ ಮಗನಾಗಿರುವ ಬಸವರಾಜ್‌ ಅವರು ಪೂರ್ಣಿಮಾ ಅವರನ್ನು ಮದುವೆಯಾಗಿದ್ದು, ಸಧೀಕ್ಷಾ ಮತ್ತು ಸಮೀಕ್ಷಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. “ಏಷ್ಯನ್‌ ಪ್ಯಾರಾ ಗೇಮ್ಸ್‌ ಮತ್ತು ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಹಂಬಲವಿದೆ. ಅದಕ್ಕಾಗಿ ಉತ್ತಮ ಗುಣಮಟ್ಟದ ಟ್ರ್ಯಾಕ್‌ ಸೈಕಲ್‌ನ ಅಗತ್ಯವಿದೆ. ರೋಡ್‌ ಸೈಕಲ್‌ಗೆ ಯಾವ ಸೈಕಲ್‌ ಆದರೂ ತೊಂದರೆ ಇಲ್ಲ. ಆದರೆ ಟ್ರ್ಯಾಕ್‌ಗೆ ಉತ್ತಮ ಗುಣಮಟ್ಟದ ಸೈಕಲ್‌ ಅಗತ್ಯವಿದೆ. ಯಾರಾರೂ ನೆರವು ನೀಡಿದರೆ ಉತ್ತಮ ಪ್ರದರ್ಶನ ತೋರಿ ಪದಕ ಗೆಲ್ಲಲು ಯತ್ನಿಸುವೆ,” ಎನ್ನುತ್ತಾರೆ ಬಸವರಾಜ್‌.

ಡಾ. ಮೋಹನ್‌ ಆಳ್ವಾ ಅಭಿನಂದನೆ: ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಮುಗಿಸಿರುವ ಬಸವರಾಜ್‌ ಅವರ ಐತಿಹಾಸಿಕ ಸಾಧನೆಗೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್‌ ಆಳ್ವಾ ಅವರು ಅಭಿನಂದನೆ ಸಲ್ಲಿಸಿದ್ದಾರೆ, “ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿ ಏಷ್ಯಾ ಮಟ್ಟದಲ್ಲಿ ಸಾಧನೆ ಮಾಡಿರುವುದು ನಮ್ಮೆಲ್ಲರ ಹೆಮ್ಮೆ,” ಎಂದು ಡಾ. ಆಳ್ವಾ ಅವರು ಹೇಳಿದ್ದಾರೆ. ಪಿಯುಸಿಯಲ್ಲಿದ್ದಾಗ ಬಸವರಾಜ್‌ ರಾಜ್ಯಮಟ್ಟದ 200 ಮೀ ಹರ್ಡಲ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. 400ಮೀ. ಹರ್ಡಲ್ಸ್‌ನಲ್ಲೂ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಎರಡು ಬಾರಿ ಚಿನ್ನ ಗೆದ್ದಿದ್ದರು.

Related Articles