Friday, February 23, 2024

ಶಾಲೆಯ ನೀರಿನ ಕೊರತೆ ನೀಗಿಸಲು ಓಟ ಆರಂಭಿಸಿದ ಶಿವಾನಂದ ಏಷ್ಯಾಕ್ಕೇ ಚಾಂಪಿಯನ್‌ ಆದ ಕತೆ

ಸೋಮಶೇಖರ್‌ ಪಡುಕರೆ, ಬೆಂಗಳೂರು

ನರಗುಂದದ ಬನಹಟ್ಟಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಆ ಪುಟ್ಟ ಬಾಲಕನ ಮನೆ ಇರುವುದು ಊರಿನ ಹೊರ ವಲಯದಲ್ಲಿ. ಶಾಲೆಯಲ್ಲಿ ನೀರು ಇರುತ್ತಿರಲಿಲ್ಲ. ದೂರದ ಹಿರಿಹಳ್ಳ ಕೆರೆಯಿಂದ ನೀರು ತರಬೇಕು, ಶಾಲೆಯಲ್ಲೇ ಮಲಗುತ್ತಿದ್ದರಿಂದ ಆ ಬಾಲಕನೇ ನೀರು ತುಂಬುತ್ತಿದ್ದ. ಹೀಗೆ ಓಡೋಡಿ ನೀರು ತುಂಬುತ್ತಿದ್ದ ಹುಡುಗ ಓಟವನ್ನೇ ತನ್ನ ಬದುಕಾಗಿಸಿಕೊಂಡು ಏಷ್ಯಾ ಮಟ್ಟದಲ್ಲಿ 5,000 ಮೀಟರ್‌ ಓಟದಲ್ಲಿ ಚಿನ್ನ ಗೆದ್ದ, ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು, ಆ ಪುಟ್ಟ ಬಾಲಕ ಬೇರೆ ಯಾರೂ ಅಲ್ಲ, ಇಂದು ಬೆಟ್ಟದಂತೆ ಬೆಳೆದು ರೈಲ್ವೆಯಲ್ಲಿ ನೂರಾರು ಕ್ರೀಡಾಪಟುಗಳಿಗೆ ತರಬೇತಿ ನೀಡಿ, ಬದುಕು ಕಲ್ಪಿಸುತ್ತಿರುವ ನರಗುಂದದ ಬನಹಟ್ಟಿಯ ಶಿವಾನಂದ ಈರಪ್ಪ.

ಮುಂಬರುವ ರೈಲ್ವೆ ಕ್ರೀಡಾಕೂಟಕ್ಕೆ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಓಟಗಾರರನ್ನು ಸಜ್ಜುಗೊಳಿಸುತ್ತಿರುವ ನರಗುಂದದ ಶಿವಾನಂದ ಅವರನ್ನು ಮಾತನಾಡಿಸಿದಾಗ ಅವರ ಬದುಕು ಇಂದಿನ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗುವುದರಲ್ಲಿ ಯಾವುದೇ ಸಂಶವಿಲ್ಲ ಎಂದೆನಿಸಿತು.

ನೀರಿಗಾಗಿ ಆರಂಭವಾದ ಓಟ: ಸುಮಾರು ಎರಡು ಗಂಟೆಗಳ ಕಾಲ ಶಿವಾನಂದ ಅವರೊಂದಿಗೆ ಮಾತನಾಡಿದಾಗ ಒಬ್ಬ ಗ್ರಾಮೀಣ ಕ್ರೀಡಾಪಟುವಿನ ಬದುಕಿನ ಹಿಂದೆ ಎಷ್ಟೆಲ್ಲ ಕಷ್ಟಗಳು ಇರುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ರಾಮದುರ್ಗದ ಹಂಪಿಹೊಳೆಯಲ್ಲಿ ಜನಿಸಿದ ಶಿವಾನಂದ ಬೆಳೆದದ್ದು ನರಗುಂದದಲ್ಲಿ ದತ್ತು ಮಗನಾಗಿ. ಕ್ರೀಡೆಯ ಬಗ್ಗೆ ಯಾವುದೇ ಆಸಕ್ತಿ ಇರದ ಪುಟ್ಟ ಬಾಲಕ ಶಿವಾನಂದನ ಮನೆ ಇರುವುದು ಹಳ್ಳಿಯ ಹೊರವಲಯದಲ್ಲಿ. ಶಾಲೆಗೆ ಬರಬೇಕಾದರೆ ಬೆಳಿಗ್ಗೆ ಬೇಗನೇ ಏಳಬೇಕಾಗಿತ್ತು. ಒಂಟಿಯಾಗಿ ನಡೆದುಕೊಂಡು ಬರುವಾಗ ನಾಯಿಗಳ ಕಾಟ. ಜೊತೆಯಲ್ಲಿ ಹಾದಿಯುದ್ದಕ್ಕೂ ಲಿಂಗಬೇಧ ಮರೆತು ಮಲವಿಸರ್ಜನೆ ಮಾಡುವ ಜನ. ಇದರಿಂದ ಬೇಸತ್ತ ಬಾಲಕ ಗುರುಗಳಲ್ಲಿ “ಶಾಲೆಯಲ್ಲೇ ಒಂದು ಕೊಠಡಿ ಕೊಡಿ, ಇಲ್ಲಿಯೇ ಮಲಗುವೆ,” ಎಂದು ವಿನಂತಿಸಿಕೊಂಡ. ಶಿವಾನಂದನ ಕಷ್ಟವನ್ನು ಅರ್ಥ ಮಾಡಿಕೊಂಡ ಗುರುಗಳು ಇಬ್ಬರು ಮಕ್ಕಳಿಗೆ ಶಾಲೆಯಲ್ಲೇ ಉಳಿಯಲು ಅವಕಾಶ ಮಾಡಿಕೊಟ್ಟರು. ಬೆಳಿಗ್ಗೆ ಎದ್ದು ಶಾಲೆಯನ್ನು ಶುಚಿಗೊಳಿಸುವುದು ಮತ್ತು ಒಂದೆರಡು ಕಿಲೋ ಮೀಟರ್‌ ದೂರದಲ್ಲಿರುವ ಹಿರಿಹಳ್ಳದಿಂದ ನೀರು ತರುವುದು ನಿತ್ಯದ ಕೆಲಸವಾಗಿತ್ತು. ನೀರು ತುಂಬಿಸಿ ಮತ್ತೆ ಕೆರೆ ಕಡೆಗೆ ಹೋಗುವಾಗ ಶಿವಾನಂದ ಓಡಲು ಆರಂಭಿಸಿದ. ಆ ಓಟವೇ ಆತನಿಗೆ ರಾಷ್ಟ್ರೀಯ ಮಟ್ಟದಲ್ಲಿ 26 ಚಿನ್ನದ ಪದಕಗಳನ್ನು ತಂದು ಕೊಟ್ಟಿತು. ಮಾತ್ರವಲ್ಲ ಏಷ್ಯಾದಲ್ಲೂ ಸ್ವರ್ಣ ಪದಕಕ್ಕೆ ಮುತ್ತಿಡುವ ಅವಕಾಶ ಕಲ್ಪಿಸಿತು.

ಅಚ್ಚರಿಯಲ್ಲಿ ಚಿನ್ನ ಗೆದ್ದ!

ಶಾಲೆಯಲ್ಲಿ ಖೋ ಖೋ ಆಟ ಆಡಿಸುತ್ತಿದ್ದರು. ಶಿವಾನಂದನನ್ನು ಮುಟ್ಟಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ರೋಣದಲ್ಲಿ ತಾಲೂಕು ಮಟ್ಟದ ಖೋ ಖೋ ಚಾಂಪಿಯನ್‌ಷಿಪ್‌ ನಡೆದಿತ್ತು. ನರಗುಂದದ ಶಾಲಾ ತಂಡ ಆ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿತ್ತು, ಆದರೆ ಮೊದಲ ಸುತ್ತಿನಲ್ಲೇ ತಂಡ ಸೋತು ಹೊರತಳ್ಳಲ್ಪಟ್ಟಿತು. ದೈಹಿಕ ಶಿಕ್ಷಕರು ಬೇರೆ ದಾರಿ ಕಾಣದೆ ತಲೆಯ ಮೇಲೆ ಕೈಯಿಟ್ಟು ಕುಳಿತರು. ಆಗ ಮಿಂಚಿನ ವೇಗದಲ್ಲಿ ಓಡುತ್ತಿದ್ದ ಶಿವಾನಂದನನ್ನು 800 ಮತ್ತು 400 ಮೀಟರ್‌ ಓಟದಲ್ಲಿ ಸ್ಪರ್ಧಿಸುವ ಯೋಚನೆ ಮಾಡಿದರು. ಶಿವಾನಂದ ಕೂಡ ಅತ್ಯಂತ ಆತ್ಮವಿಶ್ವಾಸದಲ್ಲೇ ಒಪ್ಪಿಕೊಂಡ. ಮಾತ್ರವಲ್ಲ 800 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದು ಶಾಲೆಗೆ ಕೀರ್ತಿ ತಂದ. ದೈಹಿಕ ಶಿಕ್ಷಕರಿಗೆ ಎಲ್ಲಿಲ್ಲದ ಸಂಭ್ರಮ. ನಂತರ ರಾಣೆ ಬೆನ್ನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ 3000 ಮತ್ತು 1500 ಮೀಟರ್‌ ಓಟಗಳಲ್ಲಿ ಶಿವಾನಂದ ಚಿನ್ನದ ಪದಕ ಗೆದ್ದು ಚಾಂಪಿಯನ್‌ ಪಟ್ಟ ತಮ್ಮದಾಗಿಸಿಕೊಂಡ. ಅಭ್ಯಾಸವನ್ನು ಮುಂದುವರಿಸಿದ ಶಿವಾನಂದ್‌ಗೆ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದಲ್ಲೂ ಪ್ರಶಸ್ತಿ ದಕ್ಕಿತು. ರೇಡಿಯೋದಲ್ಲಿ ಶಿವಾನಂದನ ಹೆಸರು ಕೇಳಿ ಬಂದಾಗ ನರಗುಂದದ ಬನಹಟ್ಟಿಯಲ್ಲಿ ಎಲ್ಲಿಲ್ಲದ ಸಂಭ್ರಮ. ಸನ್ಮಾನಗಳ ಜೊತೆಯಲ್ಲಿ ನೋಟಿನ ಹಾರವೂ ಕೊರಳನ್ನು ಅಲಂಕರಿಸಿತು.

ದತ್ತು ಮಗುವಿಗೆ ಹೆತ್ತ ತಾಯಿಯ ನೆನಪು!

ನರಗುಂದದಲ್ಲಿ ಹತ್ತನೇ ತರಗತಿ ಉತ್ತೀರ್ಣನಾದ ಶಿವಾನಂದಗೆ ತನ್ನ ಹೆತ್ತ ತಾಯಿಯ ನೆನಪು ಕಾಡತೊಡಗಿತು. ತಾಯಿಯ ನೈಜ ಪ್ರೀತಿಗಾಗಿ ಶಿವಾನಂದ ಪ್ರಥಮ ಪಿಯುಸಿಗಾಗಿ ತನ್ನ ಹುಟ್ಟೂರಾದ ರಾಮದುರ್ಗದ ಹಂಪಿಹೊಳೆಗೆ ಹಿಂದಿರುಗಿದರು. ಸಿಎಸ್‌ ಬೆಂಬಳಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದರೂ, ತಾನು ಕ್ರೀಡೆಯಲ್ಲಿ ಸಾಧನೆ ಮಾಡಿದ್ದೇನೆ ಎಂದು ಶಿವಾನಂದ ಯಾರಲ್ಲಿಯೂ ಹೇಳಿಕೊಂಡಿಲ್ಲ. ಅಲ್ಲಿ ಕ್ರೀಡೆಗೂ ಪ್ರೋತ್ಸಾಹವಿರಲಿಲ್ಲ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹ ಸಿಗುತ್ತದೆ ಎಂದು ಯಾರೋ ಹೇಳಿದ ಕಾರಣ ದ್ವಿತೀಯ ಪಿಯುಸಿಗೆ ಧಾರವಾಡದಲ್ಲಿ ಸೇರಿಕೊಂಡರು.

 

ಪೊಲೀಸ್‌ ಹುದ್ದೆಗೆ ಆಯ್ಕೆಯಾದದ್ದು ಗೊತ್ತೇ ಇರಲಿಲ್ಲ!

ಶಿವಾನಂದ ಅವರ ತಂದೆಯವರು ನಡೆಸುತ್ತಿದ್ದ ಹೊಟೇಲ್‌ ಮುಚ್ಚಿದ ಕಾರಣ ಅದು ಇವರ ಪಾಲಿನ ಹಾಸ್ಟೆಲ್‌ ಆಗಿತ್ತು. ಕಾಲೇಜಿನಲ್ಲಿ ಹಾಸ್ಟೆಲ್‌ಗೆ ಅರ್ಜಿ ಹಾಕಿದರೂ ಅರ್ಜಿಯನ್ನು ತಪ್ಪಾಗಿ ತುಂಬಿಸಿದ್ದ ಕಾರಣ ಅವಕಾಶ ಸಿಗಲಿಲ್ಲ. ಶಿವಾನಂದ ಅವರ ಜೊತೆಯಲ್ಲಿ ಇನ್ನೊಬ್ಬ ಗೆಳೆಯನೂ ಹೊಟೇಲ್‌ನಲ್ಲಿ ತಂಗಿದ್ದ. ಆತ ಪೊಲೀಸ್‌ ಪೇದೆ ಹುದ್ದೆಗೆ ಅರ್ಜಿ ಹಾಕಿದ್ದ, ಹಾಗೆ ಅರ್ಜಿ ಹಾಕುವಾಗ ಶಿವಾನಂದನ ಹೆಸರಿನಲ್ಲೂ ಒಂದು ಅರ್ಜಿ ಸಲ್ಲಿಸಿದ್ದ. ಈ ವಿಷಯ ಶಿವಾನಂದಗೆ ಗೊತ್ತೇ ಇರಲಿಲ್ಲ. ಕೆಲಸ ಬೇಕೆಂದು ಅರ್ಜಿ ಹಾಕಿದ ಗೆಳೆಯನಿಗೆ ಹುದ್ದೆ ಸಿಗಲಿಲ್ಲ, ಆದರೆ ಶಿವಾನಂದ ಪೊಲೀಸ್‌ ಪೇದೆ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಿ ಪಿಎಸ್‌ಐ ಹುದ್ದೆಗೆ ಸೇರಬೇಕೆಂಬ ಹಂಬಲದಲ್ಲಿ ಶಿವಾನಂದ್‌ ಅವರು ಪೇದೆ ಹುದ್ದೆಗೆ ಸೇರಲು ನಿರಾಕರಿಸಿದರು. ಆದರೆ ಶಿಕ್ಷಕರೊಬ್ಬರು ನೀಡಿದ ಸಲಹೆ ಮೇರೆಗೆ ಪೇದೆ ಹುದ್ದೆಗೆ ಸೇರಲು ಒಪ್ಪಿದರು. ಆದರೆ ಗುಲ್ಬರ್ಗದಲ್ಲಿ ಕೆಲಸ ಮಾಡಬೇಕಾಗಿ ಬಂದ ಕಾರಣ ಶಿವಾನಂದ ಸೇರಿದಂತೆ ನಾಲ್ವರು ಪೇದೆಗಳು ಕೆಲಸದಲ್ಲಿ ಮುಂದುವರಿಯಲು ನಿರಾಕರಿಸಿದರು. ಬೆಂಗಳೂರಿಗೆ ಹೋಗಿ ಮೇಲಾಧಿಕಾರಿಗಳಿಗೆ ವಿನಂತಿ ಮಾಡಿಕೊಂಡಾಗ “ಈಗಿನ ಕಾಲದಲ್ಲಿ ಕೆಲಸ ಸಿಗುವುದೇ ಕಷ್ಟ, ಹೋಗಿ ಕೆಲಸ ಮಾಡಿ,” ಎಂದು ಗದರಿಸಿದರು. ನಾಲ್ವರೂ ಒಮ್ಮತದ ತೀರ್ಮಾನ ಕೈಗೊಂಡು ಪೊಲೀಸ್‌ ಕೆಲಸ ತೊರೆಯಲು ತೀರ್ಮಾನಿಸಿ ಮನೆ ಸೇರಿದರು. ಆದರೆ ನಾಲ್ವರಲ್ಲಿ ಮೂವರು ಮನೆಯವರು ತಿಳಿ ಹೇಳಿದ ನಂತರ ಶಿವಾನಂದ್‌ ಅವರ ಗಮನಕ್ಕೆ ತಾರದೆ ಗುಲ್ಬರ್ಗಕ್ಕೆ ಬಂದು ಕೆಲಸ ಸೇರಿದರು. ಶಿವಾನಂದ್ ಮನೆಯವರ ಸಲಹೆಯಂತೆ ಕಾಲೇಜು ಶಿಕ್ಷಣ ಮುಂದುವರಿಸಲು ಧಾರವಾಡಕ್ಕೆ ತೆರಳಿದರು. ಇವರ ಜೊತೆಯಲ್ಲಿ ಕೆಲಸ ಸೇರಲು ನಿರಾಕರಿಸಿ ಮನೆ ಸೇರಿದ ಇತರ ಮೂವರು ಮನೆಯವರ ವಿರೋಧಕ್ಕೆ ಮಣಿದು ನೇರವಾಗಿ ಗುಲ್ಬರ್ಗಕ್ಕೆ ಹೋಗಿ ಕೆಲಸ ಸೇರಿಕೊಂಡರು. ಧಾರವಾಡಕ್ಕೆ ಕಾಲೇಜು ಸೇರಲು ಹೊರಟಿದ್ದ ಶಿವಾನಂದ್‌ ಕೂಡ ಬಸ್‌ ನಿಲ್ದಾಣದಲ್ಲಿ ಮನಸ್ಸು ಬದಲಾಯಿಸಿ ಗುಲ್ಬರ್ಗಕ್ಕೆ ಹೋಗಿ ಕೆಲಸ ಸೇರಿಕೊಂಡರು.

ಪೊಲೀಸ್‌ ಇಲಾಖೆ ತೊರೆದು ರೈಲ್ವೆಗೆ:

ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಶಿವಾನಂದ್‌ ಅವರಿಗೆ ಬೆಂಗಳೂರು ಕೇಂದ್ರ ಕಚೇರಿಯಿಂದ ಪೊಲೀಸ್‌ ಕ್ರೀಡಾಕೂಟಕ್ಕೆ ಆಯ್ಕೆ ಟ್ರಯಲ್ಸ್‌ಗೆ ಕರೆ ಬಂದಿತು. ಇಲ್ಲಿ ಯಾರು ಉತ್ತಮ ಪ್ರದರ್ಶನ ತೋರುತ್ತಾರೋ ಅವರು ಬೆಂಗಳೂರಿನಲ್ಲೇ ಉಳಿಯುತ್ತಾರೆ, ಉಳಿದವರು ತಮ್ಮ ಮೂಲ ಕೇಂದ್ರಕ್ಕೆ ಹೋಗಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಬೆಂಗಳೂರಿನಲ್ಲೇ ಉಳಿಯಬೇಕು, ಇದಕ್ಕಾಗಿ ಉತ್ತಮ ಪ್ರದರ್ಶನ ತೋರಬೇಕೆಂದು ಛಲ ತೊಟ್ಟ ಶಿವಾನಂದ್‌ ಕಠಿಣ ಅಭ್ಯಾಸ ನಡೆಸಿದರು. ಬೇರೆಯವರಿಗೆ ಅವಕಾಶ ನೀಡಬೇಕೆಂದು ಬಯಸಿದ ಪೊಲೀಸ್‌ ಅಧಿಕಾರಿಯೊಬ್ಬರು ಶಿವಾನಂದ್‌ಗೆ ಕಿರುಕುಳ ನೀಡಲಾರಂಭಿಸಿದರು. ಆದರೆ ಶಿವಾನಂದ್‌ ಇದಕ್ಕೆ ಬಗ್ಗಲಿಲ್ಲ. 1500 ಮತ್ತು 5000 ಮೀ. ಓಟದಲ್ಲಿ ಚಿನ್ನ ಗೆದ್ದರು. ಪೊಲೀಸ್‌ ಅಧಿಕಾರಿಯ ಕಿರುಕುಳ ಮಾತ್ರ ಮುಂದುವರಿದಿತ್ತು. ಒಂದು ದಿನ ಚೆನ್ನೈನಲ್ಲಿ ರೈಲ್ವೆ ಇಲಾಖೆಗೆ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡ ಶಿವಾನಂದ್‌ ಪ್ರಥಮ ಸ್ಥಾನದೊಂದಿಗೆ ಆಯ್ಕೆಯಾಗಿ ಪೊಲೀಸ್‌ ಇಲಾಖೆ ತೊರೆದು ರೈಲ್ವೆ ಇಲಾಖೆಯನ್ನು ಸೇರಿಕೊಂಡರು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ರೈಲ್ವೆಗೆ ಹಲವಾರು ಪದಕಗಳನ್ನು ತಂದುಕೊಟ್ಟ ಶಿವಾನಂದ 2002ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 5000 ಮೀಟರ್‌ ಓಟದಲ್ಲಿ ಚಿನ್ನ ಗೆದ್ದಾಗ ದೇಶವೇ ಹೆಮ್ಮೆ ಪಟ್ಟತಿ. ರಾಷ್ಟ್ರೀಯ ಮಟ್ಟದಲ್ಲಿ ಗೆದ್ದ 26 ಚಿನ್ನದ ಪದಕಗಳು ಶಿವಾನಂದ ಅವರ ಮನೆಯನ್ನು ಅಲಂಕರಿಸಿದೆ,  ವಿಶ್ವ ಕ್ರಾಸ್‌ಕಂಟ್ರಿ ರೇಸ್‌ನಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿದ ಕೀರ್ತಿ ಶಿವಾನಂದ ಅವರಿಗೆ ಸಲ್ಲುತ್ತದೆ. 1997 ರಲ್ಲಿ ಇಟಲಿ, 1998ರಲ್ಲಿ ಮೊರೆಕ್ಕೋ ಹಾಗೂ 1999ರಲ್ಲಿ ಬೆಲ್‌ಪಾಸ್ಟ್‌ನಲ್ಲಿ ನಡೆದ ವಿಶ್ವಕ್ರಾಸ್‌ ಕಂಟ್ರಿ ರೇಸ್‌ನಲ್ಲಿ ಶಿವಾನಂದ ಅವರು ಭಾರತವನ್ನು ಪ್ರತಿನಿಧಿಸಿದ್ದರು. 2010ರಲ್ಲಿ ಕರ್ನಾಟಕ ರಾಜ್ಯ ಸರಕಾರ ಶಿವಾನಂದ ಅವರ ಕ್ರೀಡಾ ಸಾಧನೆಯನ್ನು ಗಮನಿಸಿ ರಾಜ್ಯೋತ್ಸವ, ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಶಾಲೆಯಲ್ಲಿ ನೀರಿನ ಕೊರತೆಯನ್ನು ನೀಗಿಸಲು ಓಟ ಆರಂಭಿಸಿದ ಶಿವಾನಂದ ಏಷ್ಯಾದಲ್ಲಿ ಪದಕ ಗೆದ್ದು ಇಂದು ಕ್ರೀಡಾಪಟುಗಳ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿ ನಿಂತಿದ್ದಾರೆ. ನಿತ್ಯವೂ ಬೆಳಿಗ್ಗೆ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ರೇಲ್ವೆಯ ಕ್ರೀಡಾಪಟುಗಳಿಗೆ ತರಬೇತಿ ನೀಡುವುದರ ಜೊತೆಯಲ್ಲಿ ಬದುಕಿನ ಪಾಠ ಹೇಳುತ್ತಿದ್ದಾರೆ. ನುರಿತ ಎನ್‌ಐಎಸ್‌ ಕೋಚ್‌ ಆಗಿರುವ ಶಿವಾನಂದ ಅವರ ಯಶಸ್ಸಿನ ಹಿಂದೆ ಅವರ ಪತ್ನಿಯ ತ್ಯಾಗವಿದೆ, ಮಕ್ಕಳಾದ ರಾಹುಲ್‌ ಗೌಡ ಪಾಟೀಲ್‌ ಮತ್ತು ರತನ್‌ ಗೌಡ ಪಾಟೀಲ್‌ ಅವರ ಬೆಂಬಲಿವೆ. ಬದುಕಿನ ಕಷ್ಟಗಳೆಂಬ ಗುಡ್ಡಗಾಡು ಓಟದಲ್ಲಿ ಗುರಿ ತಲುಪಿದ ಶಿವಾನಂದ ಅವರ ಬದುಕು ರಾಜ್ಯದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾದರಿಯಾಗಲಿ.

Related Articles