ಒಂಟಿಗಾಲಿನಲ್ಲೇ ಪದಕ ಗೆದ್ದ ಮಾನಸಿ

0
323

ಸ್ಪೋರ್ಟ್ಸ್ ಮೇಲ್ ವರದಿ

ಆಕೆ ಎಂಜಿನಿಯರ್, ಆದರೂ ತಂದೆಯಿಂದ ಕಲಿತ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೇರಬೇಕೆಂದು ಕನಸು ಕಂಡವಳು. ಕನಸು ನನಸೂ ಆಯಿತು. ಆದರೆ ಸಾಮಾನ್ಯ ಬ್ಯಾಡ್ಮಿಂಟನ್ ತಾರೆಯಾಗಿ ಅಲ್ಲ, ಬದಲಾಗಿ ಪ್ಯಾರಾ ಬ್ಯಾಡ್ಮಿಂಟನ್ ತಾರೆಯಾಗಿ. ಇದು ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿಯ ದುರಂತ ಕತೆ.

ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಮಾನಸಿ ಜೋಶಿ ಏಳು ವರ್ಷಗಳ ಹಿಂದೆ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವಾಗ ಲಾರಿ ಬಡಿದು ಎಡಗಾಲನ್ನು ಕಳೆದುಕೊಳ್ಳುವಂತಾಯಿತು. ಆದರೆ ಇಲ್ಲಿಗೇ ತನ್ನ ಬದುಕು ಕೊನೆಗೊಂಡಿತು ಎಂದು ಅವರು ಬ್ಯಾಡ್ಮಿಂಟನ್ ರ್ಯಾಕೆಟ್ ಅನ್ನು ಬದಿಗೆ ಎಸೆಯಲಿಲ್ಲ. ಅತ್ಯಂತ ಆತ್ಮವಿಶ್ವಾಸದಿಂದ ಅಂಗಣಕ್ಕಿಳಿದು. ಪುನಃ ಕೆಳ ಹಂತದ ಸ್ಪರ್ಧೆ  ಪಾಲ್ಗೊಂಡು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಈಗ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ.
ಕಾಲು ಕಳೆದುಕೊಂಡ ನಂತರ ಮಾನಸಿ ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ೨೦೧೫ರ ವಿಶ್ವ ಚಾಂಪಿಯನ್‌ಷಿಪ್ ಮಿಶ್ರ ಡಬಲ್ಸ್‌ನಲ್ಲಿ ಬೆಳ್ಳಿ ಹಾಗೂ ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು, ಅಲ್ಲದೆ ಸ್ಪೇನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.
ಗುಜರಾತ್‌ನ ಅಹಮದಾಬಾದ್ ನಿವಾಸಿಯಾಗಿರುವ ಮಾನಸಿ, ಈಗಗಾಲೇ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ. ಆದರೆ ಭಾರತೀಯ ಪ್ಯಾರಾಲಿಂಪಿಕ್ಸ್ ಸಂಸ್ಥೆ ಇನ್ನೂ ಖಚಿತಪಡಿಸಿಲ್ಲ.
ಕೃತಕ ಕಾಲಿನಲ್ಲಿ ಅಭ್ಯಾಸ 
 ಅಪಘಾತದಲ್ಲಿ ಕಾಲು ಕಳೆದುಕೊಂಡ ನಂತರ ಬದುಕು ಮುಂದೇನು ಯೋಚಿಸುತ್ತಿರುವಾಗ ಮಾನಸಿಗೆ ನೆರವಾದದ್ದು ಕೃತಕ ಕಾಲು. ಆಸ್ಪತ್ರೆಯಿಂದ ಮರಳಿದ ಕೆಲವು ದಿನಗಳಲ್ಲೇ ಕೃತಕ ಕಾಲಿನೊಂದಿಗೆ ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರು. ಇದರ ಜೊತೆಯಲ್ಲಿ ಖ್ಯಾತ ಬ್ಯಾಡ್ಮಿಂಟನ್ ಕೋಚ್ ಪುಲ್ಲೆಲಾ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅವಕಾಶ ಸಿಕ್ಕಿತು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಮತ್ತಷ್ಟು ನೆರವಾಯಿತು.