ಬೆಂಗಳೂರು: ಕ್ರಿಕೆಟ್ ಆಟಗಾರರು ಉತ್ತಮ ಪ್ರದರ್ಶನ ತೋರಿ ಪ್ರಸಿದ್ಧಿಯಾಗುವುದಿದೆ, ಆದರೆ ಕ್ರಿಕೆಟ್ ಅಭಿಮಾನಿಗಳು ಪ್ರಸಿದ್ಧಿಯಾಗುವುದು ಬಹಳ ವಿರಳ. ಸಚಿನ್ ತೆಂಡೂಲ್ಕರ್ ಅಭಿಮಾನಿ ಸುಧೀರ್ ಕುಮಾರ್ ಬಹಳ ದಶಕಗಳಿಂದಲೂ ಜನಪ್ರಿಯ. ಸಚಿನ್ ನಿವೃತ್ತಿಯ ನಂತರವೂ ಅವರ ಅಭಿಮಾನದ ಯಾತ್ರೆ ಮುಂದುವರಿದಿದೆ. ಶಿಖರ್ ಧವನ್ ಅಭಿಮಾನಿ ಶಂಕರ್ ಗೀತಾ ಅವರ ಬಗ್ಗೆಯೂ ಕ್ರಿಕೆಟ್ ಜಗತ್ತಿಗೆ ಪರಿಚಯವಿದೆ. ಇನ್ನೂ ಅನೇಕ ಅಭಿಮಾನಿಗಳಿದ್ದಾರೆ. ಇವರೆಲ್ಲ ಒಬ್ಬ ಆಟಗಾರನನ್ನು ಹಿಂಬಾಲಿಸಿ ಪ್ರಸಿದ್ಧಿ ಪಡೆದವರು, ಆದರೆ ಒಂದು ತಂಡದ ಅಭಿಮಾನಿಯಾಗಿ ಸೋಲು ಗೆಲುವಿನ ನಡುವೆಯೂ ಪ್ರೋತ್ಸಾಹ ನೀಡುತ್ತ, ಕ್ರಿಕೆಟ್ ಮಾತ್ರವಲ್ಲದೆ ಇತರ ಕ್ರೀಡೆಗಳನ್ನೂ ಹುರುದುಂಬಿಸುತ್ತ ಕನ್ನಡಿಗರ ಮನೆ ಮಾತಾಗಿದ್ದಾರೆ ಬೆಂಗಳೂರಿನ ಸುಗುಮಾರ್ ದೇವರಾಜ್. World famous Royal Challengers Bengaluru fan Sugumar Devaraj.
ಬಣ್ಣದ ಗರಿಯಿಂದ ಶ್ರಂಗಾರಗೊಂಡ ಕಿರೀಟವನ್ನು ಹೊತ್ತು, ಮುಖಕ್ಕೆ ಆರ್‌ಸಿಬಿಯ ಕೆಂಪು ವರ್ಣವನ್ನು ಲೇಪಿಸಿಕೊಂಡು ಸುಕುಮಾರ್ ಅಂಗಣಕ್ಕಿಳಿದರೆ, ನೆರೆದ ಪ್ರೇಕ್ಷಕರಿಗೆ ಹೊಸ ಉಲ್ಲಾಸ. ಆಡುವ ಆಟಗಾರನಿಗೂ ರೋಮಾಂಚನ. ವಿರಾಟ್ ಕೊಹ್ಲಿ ಬೌಂಡರಿ ಅಥವಾ ಸಿಕ್ಸರ್ ಸಿಡಿಸಿದರೆ ಕ್ಯಾಮರಾಮನ್ ಮೊದಲು ಚೆಂಡು ತಲುಪಿದ ಸ್ಥಳ ತೋರಿಸಿದರೆ ನಂತರ ಸೆರೆಹಿಡಿಯುವುದೇ ಸುಗುಮಾರ್ ಅವರನ್ನು.
ಮೊದಲು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಗುಮಾರ್ ಈಗ ಸಂಪೂರ್ಣವಾಗಿ ತಮ್ಮನ್ನು ಕ್ರೀಡಾ ಪ್ರೋತ್ಸಾಹಕ್ಕೆ ತೊಡಗಿಸಿಕೊಂಡಿದ್ದಾರೆ. ಕೆರ್ರಿ ಇಂಡೆವ್ ಲಾಜಿಸ್ಟಿಕ್ಸ್ ಪ್ರೈ.ಲಿ. Kerry Indev Logistics Pvt. Ltd. ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಗುಮಾರ್ ಅವರ ಜನಪ್ರಿಯತೆ ಹಾಗೂ ಕ್ರೀಡಾ ಪ್ರೋತ್ಸಾಹವನ್ನು ಕಂಡು ಕಂಪೆನಿಯ ನಿರ್ದೇಶಕರಾದ ಡಾ. ಕ್ಸೇವಿಯರ್ ಬ್ರಿಟ್ಟೋ Dr Xavier Britto ಅವರು ಸುಗುಮಾರ್ ಅವರನ್ನು ತಮ್ಮ ಕಂಪೆನಿಯ ರಾಯಭಾರಿಯನ್ನಾಗಿ ನೇಮಿಸಿದರು. ಅದು ಕೇವಲ ಕ್ರೀಡೆಗಾಗಿ. ಇದರಿಂದಾಗಿ ಸುಗುಮಾರ್ ಅವರಿಗೆ ಎಲ್ಲೇ ಪಂದ್ಯ ನಡೆದರೂ ಪಾಲ್ಗೊಳ್ಳಲು ಸುಲಭವಾಯಿತು.
ಗೆಳೆಯ ಹರೀಶ್ ಪೈ ನೀಡಿದ ಉಡುಗೊರೆ:
ಸುಗುಮಾರ್ ಪಂದ್ಯದ ವೇಳೆ ತಲೆಯಲ್ಲಿ ಧರಿಸುವ ರೆಡ್ ಇಂಡಿಯನ್ ಅಥವಾ ರೆಡ್‌ಗೇರ್ ಕಿರೀಟವನ್ನು ಪ್ರತಿ ವರ್ಷ ಉಡುಗೊರೆಯಾಗಿ ನೀಡುತ್ತಿರುವುದು ಅಮೆರಿಕದಲ್ಲಿ ನೆಲೆಸಿರುವ ಹರೀಶ್ ಪೈ. ಇದುವರೆಗೂ ಏಳು ರೆಡ್‌ಗೇರ್‌ಗಳನ್ನು ಹರೀಶ್ ಕ್ರಿಕೆಟ್ ಅಭಿಮಾನಿ ಸುಗುಮಾರ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಬೆಂಗಳೂರಿನ ಕೋಡಿಹಳ್ಳಿಯಲ್ಲಿ ನೆಲೆಸಿರುವ ಸುಗುಮಾರ್ ಐಪಿಎಲ್ ಅರಂಭವಾದಾಗಿನಿಂದ ಇದುವರೆಗೂ ಆರ್‌ಸಿಬಿಯ ಯಾವುದೇ ಪಂದ್ಯವನ್ನೂ ತಪ್ಪಿಸಿಕೊಂಡಿಲ್ಲ. ದುಬೈಯಲ್ಲೂ ನಡೆದರೂ ಅಲ್ಲಿಗೆ ಹೋಗಿ ಆರ್‌ಸಿಬಿ ತಂಡವನ್ನು ಹುರಿದುಂಬಿಸಿದ್ದಾರೆ. ಜಗತ್ತಿನ ಹೆಚ್ಚಿನ ಎಲ್ಲ ಕ್ರಿಕೆಟ್ ಪಂದ್ಯಗಳಲ್ಲಿ ಈ ವಿಶೇಷ ಉಡುಗೆ ತೊಟ್ಟು ಭಾರತ ತಂಡವನ್ನೂ ಪ್ರೋತ್ಸಾಹಿಸಿದ್ದಾರೆ.
ಕೇವಲ ಕ್ರಿಕೆಟ್ ಮಾತ್ರವಲ್ಲ: ಸುಗುಮಾರ್ ಅವರು ಪ್ರೋತ್ಸಾಹ ನೀಡುತ್ತಿರುವುದು ಕೇವಲ ಕ್ರಿಕೆಟ್ ಮಾತ್ರವಲ್ಲ, ಫುಟ್ಬಾಲ್, ಕಬಡ್ಡಿ, ಮ್ಯಾರಥಾನ್ ಕ್ರೀಡೆಯಲ್ಲಿಯೂ ರೆಡ್‌ಗೇರ್ ಧರಿಸಿ ಕ್ರೀಡಾಪಟುಗಳನ್ನು ಹುರಿದುಂಬಿಸಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡದ ಪಂದ್ಯಗಳು ನಡೆಯುವಾಗ ಅಲ್ಲಿಗೆ ಹೋಗಿ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ಸುಗುಮಾರ್ ಅವರ ಈ ಕಾರ್ಯವನ್ನು ಗಮನಿಸಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ 2019ರಲ್ಲಿ Global Sportsman Award ನೀಡಲಾಗಿದೆ. ಅಲ್ಲದೆ ಇಂಗ್ಲೆಂಡ್‌ನ ಪಾರ್ಲಿಮೆಂಟ್‌ನಿಂದ ಸುಗುಮಾರ್‌ಗೆ ಪ್ರಶಂಸೆಯ ಪತ್ರವೂ ಲಭಿಸಿದೆ. ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಸ್ಟೀವ್ ವಾ, ಅವರು ಬರೆದ Spirit of Cricket In India ಕೃತಿಯಲ್ಲಿ ಸುಗುಮಾರ್ ಅವರ ಬಗ್ಗೆ ಎರಡು ಪುಟಗಳ ಲೇಖನ ಇದೆ.
ಕ್ಸೇವಿಯರ್ ಬ್ರಿಟ್ಟೋ ನನ್ನ ಪಾಲಿನ ತಂದೆ:
ಪಂದ್ಯಗಳು ನಡೆದಾಗ ಆರ್‌ಸಿಬಿ ಆಡಳಿತ ಮಂಡಳಿ ಎಲ್ಲ ಕಡೆಯಲ್ಲೂ ಪ್ರವೇಶವಿರುವ ಒಂದು ಐಡಿ ಕಾರ್ಡ್ ನೀಡುತ್ತದೆ ಹಾಗೂ ಮನೆಯವರಿಗೆ ಪಂದ್ಯ ನೋಡಲು ಎರಡು ಪಾಸ್ ನೀಡುತ್ತದೆ. ಮತ್ತೆಲ್ಲ ವೆಚ್ಚವನ್ನು ಭರಿಸುವುದು ನನ್ನ ಪಾಲಿನ ದೇವರಾಗಿರುವ ಡಾ. ಕ್ಸೇವಿಯರ್ ಬ್ರಿಟ್ಟೋ ಅವರು ಎನ್ನುತ್ತಾರೆ ಸುಗುಮಾರ್. “ನನಗೆ ಹೆತ್ತವರಿಲ್ಲ. ಪತ್ನಿ ಸುಮಾ ನನಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾಳೆ, ಚಿಕ್ಕ ಮಗಳಿದ್ದಾಳೆ. Kerry Indev Logistics Pvt. Ltd. ನನ್ನ ಪಾಲಿನ ದೇವಾಲಯ, Dr Xavier Britto ಅವರು ನನ್ನ ಪಾಲಿನ ದೇವರು. ಅವರ ಪ್ರೋತ್ಸಾಹ ಇಲ್ಲದೇ ಇರುತ್ತಿದ್ದರೆ ನಾನಿಂದು ಈ ಹಂತ ತಲುಪಲು ಸಾಧ್ಯವಾಗುತ್ತಿರಲಿಲ್ಲ,” ಎನ್ನುತ್ತಾರೆ ಸುಗುಮಾರ್.
ಕೆಂಪು ಬಣ್ಣದ ಮೇಲೆ ಕಣ್ಣೀರು:
“ಆರ್‌ಸಿಬಿ ಗೆಲ್ಲಲಿ ಸೋಲಲಿ ನನ್ನ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಸೋತರೆ ಅದು ಕಣ್ಣೀರು, ಗೆದ್ದರೆ ಆನಂದಭಾಷ್ಪ. ಮುಖದಲ್ಲಿರುವ ಕೆಂಪು ಬಣ್ಣದ ಮೇಲೆ ಕಣ್ಣೀರು ಹರಿದದ್ದು ನನಗೆ ಮಾತ್ರ ಅರಿವಾಗುತ್ತದೆ. ತಂಡದಲ್ಲಿ ಕನ್ನಡಿಗರು ಆಡುತ್ತಿದ್ದರೆ ಮತ್ತಷ್ಟು ಸಂಭ್ರಮ. ಇಲ್ಲದಾಗ ಬೇಸರವಾಗುತ್ತದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮಾಧ್ಯಮದವರು ಕೇಳುತ್ತಾರೆ. ಆದರೆ ನಾನು ಅದಕ್ಕೆ ಉತ್ತರ ನೀಡುವಷ್ಟು ಶಕ್ತನಲ್ಲ. ನಾನು ಆರ್‌ಸಿಬಿ ಆಡಳಿತ ಮಂಡಳಿಯ ನಿಲುವನ್ನು ಗೌರವಿಸಬೇಕು. ಅಲ್ಲಿ ಒಂದು ತಂಡವೇ ಇರುತ್ತದೆ. ನಾನೊಬ್ಬ ಮೂಖ ಪ್ರೇಕ್ಷಕ ಅಷ್ಟೆ, ನಾಳೆ ಇದೆಯಲ್ಲ ಎಂದು ಸುಮ್ಮನಾಗುತ್ತೇನೆ,” ಎನ್ನುತ್ತಾರೆ ಸುಗುಮಾರ್.