Sunday, May 26, 2024

ಫೆಡರೇಷನ್ ಕಪ್:  ಚಿನ್ನ ಗೆದ್ದ ರಾಜ್ಯದ ಪಾವನ ನಾಗರಾಜ್‌

ಬೆಂಗಳೂರು: ತಂದೆಯೂ ಚಿನ್ನ, ತಾಯಿಯೂ ಸ್ವರ್ಣ, ಮಗಳು ಬಂಗಾರ…….ಲಖನೌದ ಸರೊಜಿನಿ ನಗರದ ಭಾರತೀಯ ಕ್ರೀಡಾಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ನಡೆಯುತ್ತಿರುವ 20 ವರ್ಷ ವಯೋಮಿತಿಯ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪಾವನ ನಾಗರಾಜ್‌ Pavana Nagaraj ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Pavana Nagaraj won the gold medal at Junior Federation Cup Athletics Championship.

6.01 ಮೀಟರ್‌ ದೂರಕ್ಕೆ ಜಿಗಿಯುವ ಮೂಲಕ ಪಾವನ ಚಿನ್ನ ಗೆದ್ದಿರುವುದು ಮಾತ್ರವಲ್ಲದೆ ಏಷ್ಯನ್‌ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿರುತ್ತಾರೆ.

ಒಲಿಂಪಿಯನ್‌ ಸಹನಾ ಕುಮಾರಿ ಹಾಗೂ ನಾಗರಾಜ್‌ ಅವರ ಪುತ್ರಿಯಾಗಿರುವ ಪಾವನ ಹೆಪ್ಟಾಥ್ಲಾನ್‌ನಲ್ಲಿ ಈಗಾಗಲೇ ಹಲವು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆದ್ದು ಸಾಧನೆ ಮಾಡಿರುತ್ತಾರೆ. ಸಹನಾ ಕುಮಾರಿ ಈಗ ಭಾರತೀಯ ಕ್ರೀಡಾಪ್ರಾಧಿಕಾರದಲ್ಲಿ ಅಥ್ಲೆಟಿಕ್ಸ್‌ ತರಬೇತುದಾರರಾಗಿ ಕಾರ್ಯನಿವರ್ವಹಿಸುತ್ತಿದ್ದರೆ ನಾಗರಾಜ್‌ ಅವರು ರೇಲ್ವೆಯಲ್ಲಿ ಅಥ್ಲೆಟಿಕ್ಸ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಜೊತೆಯಲ್ಲಿ ಯುವ ಅಥ್ಲೀಟ್‌ಗಳಿಗೆ ತರಬೇತಿ ನೀಡುತ್ತಿದ್ದಾರೆ,

ಪಾವನ ನಾಗರಾಜ್‌ ಸದ್ಯ  ಮುಂಬೈಯಲ್ಲಿರು ರಿಲೆಯನ್ಸ್‌ ಫೌಂಡೇಷನ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ಅಮೆರಿಕದ ಖ್ಯಾತ ತರಬೇತುದಾರ ಜೇಮ್ಸ್‌ ಹಿಲೇರಿ ಅವರು ತರಬೇತಿ ನೀಡುತ್ತಿದ್ದಾರೆ, ಪಾವನ ಹೆತ್ತವರಂತೆ ಅಥ್ಲೆಟಿಕ್ಸ್‌ನಲ್ಲಿ ಚಿಕ್ಕಂದಿನಿಂದಲೂ ಸಾಧನೆ ಮಾಡುತ್ತಿದ್ದು ಹೆಪ್ಟಾಥ್ಲಾನ್‌ನಲ್ಲಿ 14 ವರ್ಷ ವಯೋಮಿತಿಯಲ್ಲಿ ದಾಖಲೆ ಬರೆದಿರುತ್ತಾರೆ,  16 ವರ್ಷ ವಯೋಮಿತಿಯಲ್ಲಿ ಬರೆದ ದಾಖಲೆ ಈಗ ಮುರಿಯಲ್ಪಟಿದೆ. ಅದೇ ರೀತಿ 18 ವರ್ಷ ವಯೋಮಿತಿಯ ಹೆಪ್ಟಾಥ್ಲಾನ್‌ನಲ್ಲೂ ಚಿನ್ನದ ಸಾಧನೆ ಮಾಡಿದ್ದಾರೆ.

ಸಾಗಬೇಕಾದ ದಾರಿ ಇನ್ನೂ ಇದೆ:

ಮಗಳ ಚಿನ್ನದ ಸಾಧನೆಯ ಬಗ್ಗೆ ಖುಷಿ ವ್ಯಕ್ತಪಡಿಸಿರುವ ನಾಗರಾಜ್‌ “ಪಾವನ ಹೆಪ್ಟಾಥ್ಲಾನ್‌ನಲ್ಲಿ ಪಳಗಿದ್ದಾಳೆ, ಈ ವಿಭಾಗದ ಸ್ಪರ್ಧೆ ನಾಳೆ ನಡೆಯಲಿದೆ. ಆಕೆ ಚಿನ್ನ ಗೆಲ್ಲುತ್ತಾಳೆಂಬ ಆತ್ಮವಿಶ್ವಾಸವಿದ್ದಿತ್ತು. ಲಾಂಜ್‌ಜಂಪ್‌ನಲ್ಲಿ ಏಷ್ಯನ್‌ ಸ್ಪರ್ಧೆಗೆ ಅರ್ಹತೆ ಪಡೆದಿರುವುದು ಖುಷಿ ಕೊಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಕಠಿಣ ಶ್ರಮ ವಹಿಸುತ್ತಿದ್ದಾಳೆ. ನಾಳೆಯೂ ಯಶಸ್ಸು ಸಿಗಲಿ ಎಂಬುದು ಹಾರೈಕೆ,” ಎಂದು ಹೇಳಿದ್ದಾರೆ.

Related Articles