ಬೆಳ್ಳಿಗೆ ತೃಪ್ತಿಪಟ್ಟ ಭಾರತ ವನಿತೆಯರು

0
188
ಏಜೆನ್ಸೀಸ್ ಜಕಾರ್ತ

ಏಷ್ಯನ್ ಗೇಮ್ಸ್‌ನಲ್ಲಿ ೩೬ ವರ್ಷಗಳ ನಂತರ ಚಿನ್ನ ಗೆದ್ದು ಟೋಕಿಯೋ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಬೇಕೆಂಬ  ಭಾರತ ವನಿತೆಯರ ಹಾಕಿ ತಂಡದ ಗುರಿ ಕೊನೆಗೂ ಇಡೇರಲಿಲ್ಲ.

 

ಶುಕ್ರವಾರ ನಡೆದ ಜಪಾನ್ ವಿರುದ್ಧದ  ಫೈನಲ್ ಪಂದ್ಯದಲ್ಲಿ  ಭಾರತ ೧-೨ ಗೋಲುಗಳ ಅಂತರದಲ್ಲಿ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟಿತು. ಭಾರತದ ಪರ ನೇಹಾ ಗೋಯಲ್ ೨೧ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಒಯಿಕುವಾ ಶಿರೋರಿ ೧೧ನೇ ನಿಮಿಷದಲ್ಲಿ ಗೋಲ ಗಳಿಸಿ ಜಪಾನ್‌ಗೆ ಮುನ್ನಡೆ ಕಲ್ಪಿಸಿದರು. ನಂತರ ೪೪ನೇ ನಿಮಿಷದಲ್ಲಿ ಮೊಟೊಮಿ ಕವಾಮುರಾ ಗಳಿಸಿದ ಗೋಲು ಜಪಾನ್‌ಗೆ ಚಿನ್ನ ತಂದುಕೊಟ್ಟಿತು.
ಸೈಲಿಂಗ್‌ನಲ್ಲಿ ಭಾರತ ೧೩ನೇ ದಿನದಲ್ಲಿ ಮೂರು ಕಂಚಿನ ಪದಕ ಗೆದ್ದಿದೆ. ವರ್ಷಾ ಗೌತಮ್ ಹಾಗೂ ಮುಂಬಯಿಯಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಶ್ವೇತಾ ಶೆರ್ವೇಗಾರ್ ಕಂಚಿನ ಪದಕ ಗೆದ್ದರು. ನಂತರ ಹರ್ಷಿತಾ ತೋಮಾರ್ ವೈಯಕ್ತಿಕ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿ ಕಂಚು ಗೆದ್ದರು. ಪುರುಷರ ವಿಭಾಗದಲ್ಲಿ ಚೆನ್ನೈನಲ್ಲಿ ನೆಲೆಸಿರುವ ಕೊಡಗು ಮೂಲದ ಗಣಪತಿ ಚೆಂಗಪ್ಪ ಹಾಗೂ ವರುಣ್ ಥಾಕರ್ ಜೋಡಿ ಮೂರನೇ ಕಂಚಿನ ಪದಕ ಗೆದ್ದಿತು.
ಭಾರತ ಪುರುಷರ ಸ್ಕ್ವಾಷ್ ತಂಡ ಸೆಮಿ ಫೈನಲ್‌ಗೆ ತೃಪ್ತಿಪಟ್ಟು ಕಂಚಿನ ಪದಾಕ ಗಳಿಸಿತು. ವನಿತೆಯರ ವಿಭಾಗದಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ ೨-೦ ಅಂತರದಲ್ಲಿ ಗೆದ್ದು  ಫೈನಲ್ ಪ್ರವೇಶಿಸಿ ಚಿನ್ನದ ಮೇಲೆ ಗುರಿ ಇಟ್ಟಿದೆ.
ಬಾಕ್ಸಿಂಗ್‌ನಲ್ಲಿ ಅಮಿತ್ ಪಂಘಲ್ ೪೯ ಕೆಜಿ ವಿಭಾಗದಲ್ಲಿ ಫೈನಲ್ ತಲುಪಿ ಭಾರತಕ್ಕೆ ಮತ್ತೊಂದು ಬೆಳ್ಳಿ ಅಥವಾ ಚಿನ್ನದ ಪದಕವನ್ನು ಖಚಿತಪಡಿಸಿದ್ದಾರೆ. ವಿಕಾಸ್ ಕೃಷ್ಣ ಕಂಚಿಗೆ ನಿರಾಸೆ ಪಡಬೇಕಾಯಿತು. ಗಾಯಗೊಂಡಿರುವ ವಿಕಾಸ್ ಮುಂದಿನ ಹಂತದಲ್ಲಿ ಸ್ಪರ್ಧಿಸಲು ಅನರ್ಹರು ಎಂದು ಘೋಷಿಸಿದ ಕಾರಣ ಕೇವಲ ಕಂಚು ಅವರ ಪಾಲಾಯಿತು. ಮೂರು ಮೀಟರ್ ಸ್ಪ್ರಿಂಗ್ ಬೋರ್ಡ್‌ನಲ್ಲಿ ರಮಾನಂದ ಶರ್ಮ ಫೈನಲ್ ತಲುಪಿದ್ದಾರೆ.