Thursday, September 12, 2024

ತೇಜಿಂದರ್ ಪಾಲ್ ಗೆ ಚಿನ್ನ, ಹೈಜಂಪ್ ಫೈನಲ್‌ಗೆ ಕನ್ನಡಿಗ ಚೇತನ್

ಸ್ಪೋರ್ಟ್ಸ್ ಮೇಲ್ ವರದಿ

ಶಾಟ್ ಪುಟ್ ನಲ್ಲಿ ತೇಜಿಂದರ್ ಪಾಲ್ ಸಿಂಗ್ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ೨೦.೭೫  ಮೀ. ದೂರಕ್ಕೆ ಗುಂಡನ್ನು ಎಸೆಯುವ ಮೂಲಕ ಸಿಂಗ್ ನೂತನ ದಾಖಾಲೆ ಬರೆದರು. ಮೊದಲ ಯತ್ನದಲ್ಲಿ ೧೯.೯೬ ಮೀ. ನಂತರ ೧೯.೯೬ ಮೀ. ಬಳಿಕ ೨೦.೦೦ ಮೀ. ಹಾಗೂ ಕೊನೆಯಲ್ಲಿ ೨೦.೭೫ ಮೀ ದೂರಕ್ಕೆ ಎಸೆದು ದಾಖಲೆಯೊಂದಿಗೆ ಚಿನ್ನ ಗೆದ್ದರು.

ಹೊಸಕೋಟೆಯ ಕೃಷಿಕ ಬಾಲಸುಬ್ರಹ್ಮಣ್ಯ ಅವರ ಮಗ ಚೆತನ್ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಹೈಜಂಪ್‌ನಲ್ಲಿ ಫೈನಲ್  ತಲುಪಿ ಸಾಧನೆ ಮಾಡಿದ್ದಾರೆ. ಎರಡನೇ ಪ್ರಯತ್ನದಲ್ಲಿ ೨.೧೫ ಮೀ. ಎತ್ತರಕ್ಕೆ ಜಿಗಿಯುವುೂಲಕ ಬಹಳ ವರ್ಷಗಳ ನಂತರ ಭಾರತದ ಸ್ಪರ್ಧಿಯೊಬ್ಬರು   ಹೈಜಂಪ್‌ನಲ್ಲಿ ಫೈನಲ್‌ಗೆ ತಲುಪಿದಂತಾಗಿದೆ.

ವೈಯಕ್ತಿಕ ಉತ್ತಮ ಹಾಗೂ ಋತುವಿನ ಉತ್ತಮ ಸಾಧನೆಯನ್ನು ತೋರಿದರೆ ಕನಿಷ್ಠ ಕಂಚಿನ ಪದಕ ಗೆಲ್ಲಬಹುದು. ೨.೨೫ ಮೀ. ಚೇತನ್ ಅವರ ಋತುವಿನ ಉತ್ತಮ ಜಿಗಿತವಾಗಿದೆ. ಜಕಾರ್ತದಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಚೇತನ್, ‘೨.೧೬ ಮೀ. ಫೈನಲ್ ಅರ್ಹತೆಯ ಗುರಿಯಾಗಿತ್ತು. ನಂತರ ೨.೧೫ ಮೀ. ಎಂದು ತೀರ್ಮಾನಿಸಲಾಯಿತು. ಎರಡು ಗುಂಪುಗಳಲ್ಲಿ ಸುಮಾರು ೧೩ ಸ್ಪರ್ಧಿಗಳು ಈಗ ಫೈನಲ್ ತಲುಪಿದ್ದಾರೆ. ಅವರಲ್ಲಿ ಉತ್ತಮ ನಾಲ್ಕರಲ್ಲಿ ನಾನಿದ್ದೇನೆ. ೨.೨೫ ಮೀ. ಜಿಗಿದರೆ ಪದಕ ಖಚಿತ ಎನ್ನಬಹುದು. ಆ ಪ್ರಯತ್ನವನ್ನು ಮಾಡುವೆ. ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕೆಂಬುದು ನನ್ನ ಗುರಿ,‘ ಎಂದರು.

ವನಿತೆಯರ ೧೦೦ ಮೀ. ಓಟದಲ್ಲಿ ೧೧.೩೨ ಸೆಕೆಂಡುಗಳಲ್ಲಿ ಗುರಿ ತಲುಪಿದ ದೂತಿ ಚಾಂದ್ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಲಾಂಗ್‌ಜಂಪ್‌ನಲ್ಲೂ ಭಾತದ ಶ್ರೀಶಂಕರ್ ಹಾಗೂ  ೪೦೦ ಮೀ. ಓಟದಲ್ಲಿ ಹಿಮಾ ದಾಸ್ ಹಾಗೂ ಮೊಹಮ್ಮದ್ ಫೈನಲ್ ತಲುಪಿದ್ದಾರೆ. ಲಾಂಗ್‌ಜಂಪ್‌ನಲ್ಲಿ ಶ್ರೀಶಂಕರ್ ೭.೮೩ ದೂರಕ್ಕೆ ಜಿಗಿದು ಫೈನಲ್ ಪ್ರವೇಶಿಸಿದ್ದಾರೆ.

ಸ್ಕ್ವಾಷ್‌ನಲ್ಲಿ ಮೂರು ಕಂಚು

ದೀಪಿಕಾ ಪಳ್ಳಿಕಲ್, ಜೋತ್ಸ್ನಾ ಚಿನ್ನಪ್ಪ ಹಾಗೂ ಸೌರವ್ ಘೋಶಾಲ್ ಸೆಫೈನಲ್ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ನೀಡಿದ್ದಾರೆ.
ಮಲೇಷ್ಯಾದ ನಿಕೋಲಾಸ್ ಡೇವಿಡ್ ಅವರ ವಿರುದ್ಧ ನಡೆದ ಪಂದ್ಯದಲ್ಲಿ ದೀಪಿಕಾ ಸೋಲನುಭವಿಸಿದರೆ, ಜೋತ್ಸ್ನಾ ಮಲೇಷ್ಯಾದ ಶಿವಾಂಸಗರಿ ಸುಬ್ರಹ್ಮಣಿಯಂ ವಿರುದ್ಧ ಪರಾಭವಗೊಂಡರು. ಅಗ್ರ ಶ್ರೇಯಾಂಕಿತ ಘೋಶಾಲ್ ಹಾಂಕಾಂಗ್ ಚೀನಾದ  ಚುಂಗ್‌ಮಿಂಗ್ ಅವ್ ವಿರುದ್ಧ ಪರಾಭವಗೊಂಡರು.

Related Articles