ನೀರಜ್‌ಗೆ ಚಿನ್ನ, ನೀನಾಗೆ ಬೆಳ್ಳಿ
ಏಜೆನ್ಸೀಸ್ ಜಕಾರ್ತ
ಏಷ್ಯನ್ ಚಾಂಪಿಯನ್ ನೀರಜ್ ಚೋಪ್ರಾ ಏಷ್ಯನ್ ಕ್ರೀಡಾಕೂಟದ ೯ನೇ ದಿನದಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಗೌರವ ತಂದಿದ್ದಾರೆ. ಮೂರನೇ ಎಸೆತದಲ್ಲಿ ೮೮.೦೬ ಮೀ. ದೂರಕ್ಕೆ ಎಸೆದ ನೀರಜ್ ಚಿನ್ನಕ್ಕೆ ಮುತ್ತಿಟ್ಟರು.
ವನಿತೆಯರ ಲಾಂಗ್‌ಜಂಪ್‌ನಲ್ಲಿ ನೀನಾ ವರಾಕಿಲ್, ೬.೫೧ ಮೀ. ದೂರಕ್ಕೆ ಜಿಗಿದು ಬೆಳ್ಳಿ ಗೆದ್ದರು. ವನಿತೆಯರ ೩೦೦೦ ಮೀ. ಸ್ಟೀಪಲ್‌ಚೇಸ್‌ನಲ್ಲಿ ಸುಧಾ ಸಿಂಗ್ ೯ ನಿಮಿಷ ೪೦.೦೩ ಸೆಕೆಂಡಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಪುರುಷರ ೪೦೦ ಮೀ. ಹರ್ಡಲ್ಸ್‌ನಲ್ಲಿ ಧಾರುಣ್ ಅಯ್ಯಸ್ವಾಮಿ ೪೮.೯೬ ಸೆಕೆಂಡುಗಳಲ್ಲಿ ಗುರಿ ತಲುಪಿ ಋತುವಿನ ಉತ್ತಮ ಸಧನೆಯೊಂದಿಗೆ ಬೆಳ್ಳಿ ಗೆದ್ದರು.

ದಿನದ ಖಾತೆ ತೆರೆದ ಸೈನಾ
ವನಿತೆಯರ ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್ ಏಷ್ಯನ್ ಗೇಮ್ಸ್‌ನ ಐತಿಹಾಸಿಕ ಕಂಚಿನ ಪದಕ ಗೆದ್ದರು. ವಿಶ್ವದ ನಂ.೧ ಆಟಗಾರ್ತಿ ಚೈನೀಸ್ ತೈಪೆಯ ತಾಯ್ ತ್ಸು ಯಿಂಗ್ ವಿರುದ್ಧದ ಪಂದ್ಯದಲ್ಲಿ ಸೈನಾ ೧೭-೨೧, ೧೪-೨೧ ಅಂತರದಲ್ಲಿ ನೇರ ಗೇಮ್‌ನಿಂದ ಸೋತರು. ೧೯೮೨ರಲ್ಲಿ ಸಯ್ಯದ್ ಮೋದಿ ಅವರ ನಂತರ ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವನಿತೆಯರ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿರುವ ಪಿ.ವಿ. ಸಿಂಧೂ ಚಿನ್ನ ಅಥವಾ ಬೆಳ್ಳಿಯ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. ಪುರುಷರ ಟೇಬಲ್ ಟೆನಿಸ್ ತಂಡ ಜಪಾನ್ ವಿರುದ್ಧ ೩-೧ ಅಂತರದಲ್ಲಿ ಗೆದ್ದು ಸೆಮಿೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.

ಚೇತನ್‌ಗೆ ನಿರಾಸೆ
ಹೈಜಂಪ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಕನ್ನಡಿಗ ಚೇತನ್ ಬಾಲಸುಬ್ರಹ್ಮಣ್ಯ ಕೇವಲ ೨.೨೦ ಮೀ. ಎತ್ತರಕ್ಕೆ ಜಿಗಿಯುವಲ್ಲಿ ಮಾತ್ರ ಸಫಲರಾಗಿ ೮ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಒಂದು ವೇಳೆ ಅವರ ಋತುವಿನ ವೈಯಕ್ತಿಕ ಸಾಧನೆ ದಾಖಲಾಗುತ್ತಿದ್ದಲ್ಲಿ ಚೇತನ್ ಪದಕ ಗೆಲ್ಲುವುದು ಖಚಿತವಾಗಿತ್ತು. ೯ನೇ ದಿನದಂತ್ಯಕ್ಕೆ ಭಾರತ ೮ ಚಿನ್ನ, ೧೩ ಬೆಳ್ಳಿ ಹಾಗೂ ೨೦ ಕಂಚಿನ ಪದಕಗಳೊಂದಿಗೆ ಒಟ್ಟು ೪೧ ಪದಕಗಳ ಸಾಧನೆ ಮಾಡಿ ಅಂಕಪಟ್ಟಿಯಲ್ಲಿ ೯ನೇ ಸ್ಥಾನದಲ್ಲಿದೆ.