Saturday, July 27, 2024

ಮಯಾಂಕ್ ಅಗರ್ವಾಲ್ ಶತಕ, ಇಂಡಿಯಾ ಬಿ ತಂಡಕ್ಕೆ ಜಯ

ಸ್ಪೋರ್ಟ್ಸ್ ಮೇಲ್ ವರದಿ

ಆಲೂರಿನಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ಭಾರತ ಬಿ ನಡುವಿನ ಚತುಷ್ಕೋನ ಸರಣಿ ಕ್ರಿಕೆಟ್ ಪಂದ್ಯದಲ್ಲಿಕನ್ನಡಿಗ  ಮಯಾಂಕ್ ಅಗರ್ವಾಲ್ ಅವರ ಶತಕದ ನೆರವಿನಿಂದ ಇಂಡಿಯಾ ಬಿ ತಂಡ ಇಂಡಿಯಾ ಎ ವಿರುದ್ಧ ೭ ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಎ ತಂಡ ೪೯ ಓವರ್‌ಗಳಲ್ಲಿ ೨೧೭ ರನ್‌ಗೆ ಆಲೌಟ್ ಆಯಿತು. ಶ್ರೇಯಸ್ ಅಯ್ಯರ್ (೨೦), ಅಂಬಾಟಿ  ರಾಯುಡು (೪೮) ಸಂಜು ಸ್ಯಾಮ್ಸನ್ (೩೨) ಹಾಗೂ ಕೆ. ಗೌತಮ್ (೩೫) ಸಾಧಾರಣ  ಮೊತ್ತಕ್ಕೆ ನೆರವಾದರು. ಕನ್ನಡಿಗ ಪ್ರಸಿದ್ಧ್ ಕೃಷ್ಣ  ೫೦ ರನ್‌ಗೆ ೪ ವಿಕೆಟ್ ಗಳಿಸಿ ಇಂಡಿಯಾ ಎ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
೨೧೮ ರನ್ ಜಯದ ಗುರಿ ಹೊತ್ತ ಇಂಡಿಯಾ ಬಿ ತಂಡದ ಪರ ಮಯಾಂಕ್ ಅಗರ್ವಾಲ್ ೧೨೪ ರನ್ ಗಳಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು. ೧೧೪ ಎಸೆತಗಳನ್ನು ಎದುರಿಸಿದ ಮಯಾಂಕ್ ೧೪ ಬೌಂಡರಿ ಹಾಗೂ ೩ ಸಿಕ್ಸರ್ ನೆರವಿನಿಂದ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದರು. ಇಶಾನ್ ಕಿಶನ್ (೨೫) ಹಾಗೂ ಶುಭ್ಮನ್ ಗಿಲ್ (೪೨) ಅವರ ಬ್ಯಾಟಿಂಗ್ ನೆರವಿನಿಂದ ೪೧.೧ ಓವರ್‌ಗಳಲ್ಲಿ ಕೇವಲ ೩ವಿಕೆಟ್ ಕಳೆದುಕೊಂಡ ಇಂಡಿಯಾ ಬಿ ಜಯದ ಗುರಿ ತಲುಪಿತು. ಮನೀಶ್ ಪಾಂಡೆ ಅಜೇಯ ೨೧ ರನ್ ಗಳಿಸಿದರು. ಇಂಡಿಯಾ ಎ ಪರ ಖಲೀಲ್ ಅಹಮ್ಮದ್ ೩೩ ರನ್‌ಗೆ ೨ ವಿಕೆಟ್ ಗಳಿಸಿದರು.

ಆಸೀಸ್ ಎ ತಂಡಕ್ಕೆ ಜಯ

ಆಸ್ಟ್ರೇಲಿಯಾ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡ ೩೨ ರನ್‌ಗಳ ಅಂತರದಲ್ಲಿ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಟ್ರಾವಿಸ್ ಹೆಡ್ (೧೧೦) ಅವರ ಶತಕ ಹಾಗೂ ಮಾರ್ನಸ್ ಲ್ಯಾಬುಶಾಗ್ನೆ (೬೫) ಅವರ ಅರ್ಧ  ಶತಕದ ನೆರವಿನಿಂದ ೫೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೩೨೨ ರನ್ ಗಳಿಸಿತು. ದಕ್ಷಿಣ ಆಫ್ರಿಕಾದ ಪರ ಸಿಸಾಂಡ ಮಾಗಲಾ ೫೯ರನ್‌ಗೆ ೨ ವಿಕೆಟ್ ಗಳಿಸಿದರು.
೩೨೩ ರನ್ ಜಯದ ಗುರಿ ಹೊತ್ತ ದಕ್ಷಿಣ ಆಫ್ರಿಕಾ ಎ ತಂಡ, ಟ್ರಾವಿಸ್ ಹೆಡ್ (೨೫ಕ್ಕೆ ೨) ಹಾಗೂ ಮಿಚೆಲ್ ಸ್ವೆಪ್ಸನ್ (೪೦ಕ್ಕೆ ೩) ಅವರ ಬೌಲಿಂಗ್ ದಾಳಿಗೆ ಸಿಲುಕಿ ೪೮.೪ ಓವರ್‌ಗಳಲ್ಲಿ ೨೯೦ ರನ್‌ಗೆ ಆಲೌಟ್ ಆಯಿತು. ಖಾಯೆಲ್ಹೆಲ್ ಜೊಂಡೋ (೧೧೭) ಶತಕ ಸಿಡಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

Related Articles