ಫೈನಲ್‌ಗೆ ವಿಜಯ ಬ್ಯಾಂಕ್ ಲಗ್ಗೆ

0
247
ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಈಗಲ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮಾರಕ ೫ನೇ ಅಖಿಲ ಭಾರತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ವಿಜಯ ಬ್ಯಾಂಕ್ ಇಂಡಿಯನ್ ನೇವಿ ವಿರುದ್ಧ ೭೭-೭೫ ಅಂತರದಲ್ಲಿ ರೋಚಕ ಜಯ ಗಳಿಸಿ  ಫೈನಲ್ ಪ್ರವೇಶಿಸಿದೆ.

ಅಂತಾರಾಷ್ಟ್ರೀಯ ಆಟಗಾರರಾದ ಅರವಿಂದ್ ಅರ್ಮುಗಮ್, ಅನಿಲ್ ಕುಮಾರ್ ಹಾಗೂ ರಾಜೇಶ್ ಉಪ್ಪಾರ್ ವಿಜಯ ಬ್ಯಾಂಕ್ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.  ಮೊದಲ ಕ್ವಾರ್ಟರ್‌ನಲ್ಲಿ ವಿಜಯ ಬ್ಯಾಂಕ್ ೨೪-೧೫ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಎರಡನೇ ಕ್ವಾರ್ಟರ್‌ನಲ್ಲೂ ವಿಜಯ ಬ್ಯಾಂಕ್ ೧೬-೨೪ ಅಂತರದಲ್ಲಿ ಮೇಲುಗೈ ಸಾಧಿಸಿತು. ಮೂರನೇ ಕ್ವಾರ್ಟನಲ್ಲಿ ೧೯-೧೨ರಿಂದ ಮುನ್ನಡೆ ಕಂಡ ವಿಜಯ ಬ್ಯಾಂಕ್‌ಗೆ ಅಂತಿಮ ಕ್ವಾರ್ಟರ್‌ನಲ್ಲಿ ನೇವಿ ಪಡೆ ಉತ್ತಮ ರೀತಿಯಲ್ಲಿ ಪೈಪೋಟಿ ನೀಡಿತು. ನೇವಿ ೨೫ ಅಂಕ ಗಳಿಸಿದರೆ ವಿಜಯ ಬ್ಯಾಂಕ್ ಕೇವಲ ೧೭ ಅಂಕ ಗಳಿಸಿತು. ಮಹಿಪಾಲ್ ಸಿಂಗ್ ೨೮ ಅಂಕ ಗಳಿಸಿ ತಂಡದ ಜಯಕ್ಕೆ ಉತ್ತಮ ರೀತಿಯಲ್ಲಿ ಹೋರಾಡಿದರೂ ಅಂತಿಮವಾಗಿ ೨ ಅಂಕಗಳಿಂದ ಸೋಲಿಗೆ ಶರಣಾಗಬೇಕಾಯಿತು.
ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಇಂಡಿಯನ್ ಕಸ್ಟಮ್ಸ್ ತಂಡ ತೆಲಂಗಾಣ ರಾಜ್ಯ ತಂಡದ ವಿರುದ್ಧ  ೭೬-೩೯ ಅಂತರದಲ್ಲಿ ಗೆದ್ದಿತ್ತು.