Thursday, December 12, 2024

ಕ್ಯಾನ್ಸರ್ ಗೆದ್ದವರು ಕಂಚು ಗೆದ್ದರು

ಸ್ಪೋರ್ಟ್ಸ್ ಮೇಲ್ ವರದಿ 

 ಭಾರತದ ಬ್ರಿಡ್ಜ್ ತಂಡ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದಿದೆ. ಕಂಚು ಗೆದ್ದ ತಂಡದಲ್ಲಿ ಕ್ಯಾನ್ಸರ್ ಗೆದ್ದ ಸ್ಪರ್ಧಿಯೊಬ್ಬರಿರುವುದು ಸ್ಫೂರ್ತಿಯ ಸಂಗತಿ. ಮುಂಬೈಯ ನಿವೃತ್ತ ಶಿಕ್ಷಕ  ೬೪ ವರ್ಷದ ಫಿನ್ಟಾನ್ ಲೂಯಿಸ್  ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ನಂತರ ವೈದ್ಯರು ಫಿನ್ಟಾನ್ ಅವರಿಗೆ ಸಮಯ ಕಳೆಯಲು ನಿಮಗೆ ಆಸಕ್ತಿ ಇರುವ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ನೀಡಿದ್ದರು. ೧೦ ವರ್ಷಗಳ ಹಿಂದೆ ಬ್ರಿಡ್ಜ್ ಆಟದಲ್ಲಿ ತೊಡಗಿಕೊಂಡಿದ್ದ ಫಿನ್ಟಾನ್ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವವರೆಗೂ ಪರಿಣತಿ ಪಡೆದರು. ಭಾರತ ತಂಡ ಈ ವಿಭಾಗದಲ್ಲಿ ಎರಡು ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ. ಈ ತಂಡದಲ್ಲಿ ಎಲ್ಲರೂ ಹೆಚ್ಚು ವಯಸ್ಸಾದವರೇ ಆದರೂ ಸ್ಫೂರ್ತಿಯ ಚಿಲುಮೆಗಳೇ ಇದ್ದಾರೆ.  ಮಾಜಿ ಪೆಟ್ರೋಲಿಯಂ ಸಚಿವ ಮುರಳಿ ದಿಯೋರಾ ಅವರ ಪತ್ನಿ ಪ್ರೇಮಾ ದಿಯೋರಾ ಕೂಡ ತಂಡದಲ್ಲಿದ್ದಾರೆ. ಈ ತಂಡದಲ್ಲಿ ಕಡಿಮೆ ವಯಸ್ಸಾದವರೆಂದರೆ ಕೇವಲ ೫೦ ವರ್ಷದವರು!.
೮ನೇ ದಿನದ ಈ ಹೊತ್ತಿಗೆ  ಭಾರತ ೭ ಚಿನ್ನ, ೧೦ ಬೆಳ್ಳಿ ಹಾಗೂ ೧೯ ಕಂಚಿನ ಪದಕಗಳೊಂದಿಗೆ ಒಟ್ಟು ೩೬ ಪದಗಳನ್ನು ಗೆದ್ದು ಸಾಧನೆ ಮಾಡಿದೆ.
ವನಿತೆಯರ ೪೦೦ ಮೀ. ಓಟದಲ್ಲಿ ಹಿಮಾದಾಸ್ ಹಾಗೂ ಪುರುಷರ ೪೦೦ ಮೀ. ಓಟದಲ್ಲಿ ಮಹಮ್ಮದ್ ಅನಾಸ್ ಬೆಳ್ಳಿ ಪದಕ ಗೆದಿದ್ದಾರೆ.  ೧೦೦ ಮೀ. ಓಟದಲ್ಲಿ ದೂತಿ ಚಾಂದ್ ೧೧.೩೨ ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಇಕ್ವೆಸ್ಟ್ರಿಯನ್‌ನಲ್ಲಿ ಭಾರತ ಎರಡು ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ೩೬ ವರ್ಷಗಳ ನಂತರ  ಈ ವಿಭಾಗದಲ್ಲಿ ಪದಕದ ಸಾಧನೆ ಮಾಡಿದೆ.
ಬ್ಯಾಡ್ಮಿಂಟನ್‌ನಲ್ಲಿ ಸೈನಾ ಹಾಗೂ ಸಿಂಧೂ  ಸೆಮಿಫೈನಲ್  ತಲಪುವ ಮೂಲಕ ಭಾರತ ೨ ಪದಕ ಗೆಲ್ಲುವುದನ್ನು ಖಚಿತಪಡಿಸಿದೆ. ಪುರುಷರ ಹಾಕಿಯಲ್ಲಿ ಭಾರತ ತಂಡ ಕೊರಿಯಾ ವಿರುದ್ಧ  ೫-೩ ಗೋಲುಗಳಿಂದ ಜಯ ಗಳಿಸಿ ಸೆಮಿ ಫೈನಲ್ ಸ್ಥಾನ ಪಡೆದಿದೆ. ಆರ್ಚರಿಯಲ್ಲಿ ಮಹಿಳಾ ತಂಡ ಫೈನಲ್ ತಲುಪಿದೆ.  ೪೦೦ ಮೀ. ಹರ್ಡಲ್ಸ್‌ನಲ್ಲಿ ಸಂತೋಷ್ ಕುಮಾರ್ ಹಾಗೂ ದಾರುಣ್ ಅಯ್ಯಸಾಮಿ ಫೈನಲ್‌ಪ್ರವೇಶಿಸಿದ್ದಾರೆ.

ಕಂಚು ವಂಚಿತ ಗೋವಿಂದನ್ 

೧೦೦೦೦ ಮೀ. ಓಟದಲ್ಲಿ  ಭಾರತದ ಗೋವಿಂದನ್ ಲಕ್ಷ್ಮಣನ್ ಕಂಚಿನ ಪದಕ ಗೆದಿದ್ದರು. ಆದರೆ ಟ್ರ್ಯಾಕ್‌ನಲ್ಲಿ ಓಡುವಾಗ ಫೌಲ್ ಆದ ಕಾರಣ ಅವರ ಕಂಚಿನ ಪದಕವನ್ನು ಹಿಂಪಡೆಯಲಾಯಿತು. ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಈ ಕ್ರಮವನ್ನು  ಪ್ರತಿಭಟಿಸಿದೆ, ವಿಚಾರಣೆ ನಡೆಯುತ್ತಿದೆ. ಟಿವಿಯಲ್ಲಿ ಗೋವಿಂದನ್ ಪ್ರಮಾದ ಮಾಡಿರುವುದು ಸ್ಪಷ್ಟವಾಗಿದೆ.

Related Articles