Friday, April 19, 2024

ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆ ಬರೆದ ಭಾರತ

ಏಜೆನ್ಸೀಸ್ ಜಕಾರ್ತ

ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ  ಭಾರತ ಅತಿ ಹೆಚ್ಚು ಪದಕ ಗೆದ್ದು ದಾಖಲೆ ಬರೆದಿದೆ. 2010ರಲ್ಲಿ  ಭಾರತ 65 ಪದಕಗಳನ್ನು ಗೆದ್ದಿತ್ತು, ಆದರೆ ಜಕಾರ್ತದಲ್ಲಿ ಕೊನೆಯ ದಿನದ ವೇಳೆ 69 ಪದಕಗಳನ್ನು ಗೆದ್ದು ಇದುವರೆಗಿನ ದಾಖಲೆಯನ್ನು ಮುರಿದಿದೆ.

 

14ನೇ ದಿನದಲ್ಲಿ ಭಾರತ ಬಾಕ್ಸಿಂಗ್ ಮತ್ತು ಬ್ರಿಡ್ಜ್‌ನಲ್ಲಿ ಚಿನ್ನ ಗೆದ್ದರೆ, ಮಹಿಳಾ ಸ್ಕ್ವಾಷ್‌ನಲ್ಲಿ ಬೆಳ್ಳಿ ಹಾಗೂ ಪುರುಷರ ಹಾಕಿಯಲ್ಲಿ ಕಂಚಿನ ಪದಕ ಗೆದ್ದಿದೆ. ಅಂತಿಮವಾಗಿ  15 ಚಿನ್ನ, 24 ಬೆಳ್ಳಿ ಹಾಗೂ  30 ಕಂಚಿನೊಂದಿಗೆ ಒಟ್ಟು 69 ಪದಕಗಳ ಸಾಧನೆ ಮಾಡಿದೆ.
ಅಮಿತ್ ಪಂಘಾಲ್ ಉಜ್ಬೆಕಿಸ್ತಾನದ ಹಸನೋಬಿ ದಸ್ಮಾಸ್ತೋವ್ ವಿರುದ್ಧ 3-2 ಅಂತರದಲ್ಲಿ ಜಯ ಗಳಿಸಿ ಚಿನ್ನಕ್ಕೆ ಮುತ್ತಿಟ್ಟರು. 2016ರ ರಿಯೋ ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಜಯ ಗಳಿಸಿದ ಅಮಿತ್ ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಬಾಕ್ಸರ್ ಎನಿಸಿಕೊಂಡರು.
ಪುರುಷರ ಬ್ರಿಡ್ಜ್‌ನ ಟೀಮ್ ವಿಭಾಗದಲ್ಲಿ ಭಾರತದ ಪ್ರಣವ್ ಬರ್ದಾನ್ ಹಾಗೂ ಶಿಬಂತ್ ಸರ್ಕಾರ್ 384 ಅಂಕಗಳೊಂದಿಗೆ ಅಗ್ರ ಸ್ಥಾನಿಯಾಗಿ ಚಿನ್ನ ಗೆದ್ದರು. ಬರ್ದಾನ್‌ಗೆ 60 ವರ್ಷ, ಸರ್ಕಾರ್‌ಗೆ 58 ವರ್ಷ ವಯಸ್ಸು.
ವನಿತೆಯರ ಸ್ಕ್ವಾಷ್ ಫೈನಲ್‌ನಲ್ಲಿ ಭಾರತ ಹಾಂಕಾಂಗ್ ವಿರುದ್ಧ 0-3 ಅಂತರದಲ್ಲಿ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟಿತು. ದೀಪಿಕಾ ಪಳ್ಳಿಕಲ್, ಜೋತ್ಸ್ನಾ ಚಿನ್ನಪ್ಪ, ಸುನೈನಾ ಕುರುವಿಲ್ಲಾ ಹಾಗೂ ತನ್ವಿ ಕಣ್ಣನ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಭಾರತ ಅಂತಿಮವಾಗಿ ಕಂಚಿನ ಪದಕ ಗೆದ್ದುಕೊಂಡು ಗೌರವ ಕಾಯ್ದುಕೊಂಡಿತು. ಭಾರತದ ಪರ ಆಕಾಶ್‌ದೀಪ್ ಸಿಂಗ್(3ನೇ ನಿಮಿಷ) ಹಾಗೂ ಹರ್ಮನ್‌ಪ್ರೀತ್ ಸಿಂಗ್ (50ನೇ ನಿಮಿಷ) ಜಯದ ಗೋಲು ಗಳಿಸಿದರು. ಪಾಕಿಸ್ತಾನದ ಪರ ಆತಿಕ್ ಅಹಮ್ಮದ್ (52ನೇ ನಿಮಿಷ) ಏಕೈಕ ಗೋಲು ಗಳಿಸಿದರು.

Related Articles