ದಾರುಣ್‌ಗೆ ಬೆಳ್ಳಿ, ಆಳ್ವಾಸ್‌ನಲ್ಲಿ ಸಂಭ್ರಮ

0
255
ಸ್ಪೋರ್ಟ್ಸ್ ಮೇಲ್ ವರದಿ 

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಆಳ್ವಾಸ್ ಮೂರನೇ ಬಿಎಚ್‌ಆರ್‌ಡಿ ವಿದ್ಯಾರ್ಥಿ ಧಾರುಣ್ ಅಯ್ಯಸ್ವಾಮಿ ೪೦೦ ಮೀಟರ್ ಹರ್ಡಲ್ಸ್‌ನಲ್ಲಿ  ೪೮.೯೬ ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಸಾಧನೆ ಮಾಡಿರುತ್ತಾರೆ. ಇದು ರಾಷ್ಟ್ರೀಯ ದಾಖಲೆಯೂ ಆಗಿದೆ.

ಪ್ರಸ್ತುತ ಆಳ್ವಾಸ್‌ನ ವಿದ್ಯಾರ್ಥಿಯಾಗಿರುವ ಧಾರುಣ್  ೨೦೧೬ರ ರಿಯೋ ಒಲಿಂಪಿಕ್ಸ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುತ್ತಾರೆ. ಕಳೆದ ಮೂರು ವರ್ಷಗಳಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ ಅವರು ಧಾರುಣ್‌ಗೆ ಅಗತ್ಯವಿರುವ ಕ್ರೀಡಾ ಪ್ರೋತ್ಸಾಹ ಹಾಗೂ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಧಾರುಣ್ ಕಳೆದ ಮೂರು ವರ್ಷಗಳಲ್ಲಿ  ೪೦೦ ಮೀ. ಹರ್ಡಲ್ಸ್‌ನಲ್ಲಿ  ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಅಖಿಲ ಭಾರತ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬಾರಿ ಚಿನ್ನ ಹಾಗೂ ಕೂಟ ದಾಖಲೆ ಮಾಡಿರುತ್ತಾರೆ. ಅವರ  ಈ ಸಾಧನೆಗೆ ಮಂಗಳೂರು ವಿಶ್ವವಿದ್ಯಾಲಯ ೧ ಲಕ್ಷ ರೂ. ಬಹುಮಾನ ನೀಡಿ ಗೌರವಿಸಿದೆ. ಧಾರುಣ್  ಅವರ ಸಾಧನೆಗೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ, ಸಂತಸ ವ್ಯಕ್ತಪಡಿಸಿದ್ದು, ಚಾಂಪಿಯನ್ ಅಥ್ಲೀಟ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
೨೦೧೮-೧೯ನೇ ಸಾಲಿನ ೭೯ನೇ ರಾಷ್ಟ್ರಮಟ್ಟದ ಅಂತರ್ ವಿವಿ  ಅಥ್ಲೆಟಿಕ್ಸ್ ಕ್ರೀಡಾಕೂಟ ಮಂಗಳೂರು ವಿವಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಮೂಡಬಿದಿರೆಯ ಜನತೆ ಪರವಾಗಿ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದಿರುವ ಧಾರುಣ್ ಅವರನ್ನು ಅಭಿನಂದಿಸಲಾಗುವುದು ಎಂದು ಡಾ. ಮೋಹನ್ ಆಳ್ವಾ ತಿಳಿಸಿದ್ದಾರೆ.