Friday, June 14, 2024

ವಾಲಿಬಾಲ್‌ನ ನವೀನ ಮಿಂಚು ನವೀನ್ ಕಾಂಚನ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಕೇವಲ ನಾಲ್ಕು ವರ್ಷಗಳ ಆಟ, ಅದರಲ್ಲೇ ಬದುಕು ಕಟ್ಟಿಕೊಂಡ ಸಂಭ್ರಮ, ಎಲ್ಲೇ ಆಡಿದರೂ ಮಿಂಚುವ ಪ್ರತಿಭೆ, ಆಟದಲ್ಲಿ ಅಬ್ಬರವಿದ್ದರೂ ಸರಳ ಸ್ವಭಾವ, ಸಾಗಿ ಬಂದ ಹಾದಿಯಲ್ಲಿ ನೆರವಾದವರ ಸ್ಮರಿಸುವ ಗುಣ, ಕ್ರೀಡೆಯಲ್ಲಿ ತೋರಿದ ಸಾಧನೆಗೆ ಭಾರತದ ಸೇನೆಯಲ್ಲಿ ಉದ್ಯೋಗ, ಈ ಪ್ರತಿಭಾವಂತ ಆಟಗಾರ ಬೇರೆ ಯಾರೂ ಇಲ್ಲ, ಕುಂದಾಪುರದ ಬಸ್ರೂರು ಶಾರದಾ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ, ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರರ ನವೀನ್ ಕಾಂಚನ್.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್ ಕುಮಾರ್ ಶೆಟ್ಟಿ ಅವರ ಆಯ್ಕೆ ಎಂದಿಗೂ ತಪ್ಪಾಗುವುದಿಲ್ಲ. ತಮ್ಮ ಶಿಷ್ಯವೃಂದದಲ್ಲಿ ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಿ, ಅವರಿಗೆ ಪ್ರೋತ್ಸಾಹ ನೀಡುವುದರಲ್ಲಿ ಸೂರಜ್ ಶೆಟ್ಟಿ ಅವರ ಪಾತ್ರ ಪ್ರಮುಖವಾದುದು, ಅಂಥ ಪ್ರತಿಭಾವಂತ ದೈಹಿಕ ಶಿಕ್ಷಕನ ಗರಡಿಯಲ್ಲಿ ಪಳಗಿದ ನವೀನ್ ಕಾಂಚನ್ ಎಲ್ಲಿಯೂ ತಪ್ಪಿನ ಹೆಜ್ಜೆಯನ್ನಿಟ್ಟಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕುಂದಾಪುರ ತಾಲೂಕಿನ ವಂಡ್ಸೆ ನಿವಾಸಿ ನವೀನ್ ಕಾಂಚನ್ ಅತ್ಯಂತ ಬಡ ಕುಟುಂಬದಿಂದ ಬಂದ ಪ್ರತಿಭಾವಂತ ಆಟಗಾರ. ಗ್ರಾಮೀಣ ಪ್ರತಿದೇಶದ  ಈ ಪ್ರತಿಭೆಯ ಆಟವನ್ನು ನೋಡಿ ಹಲವಾರು ಕ್ಲಬ್‌ಗಳು ತಮ್ಮ ತಂಡದ ಪರವಾಗಿ ಆಡಲು ಆಹ್ವಾನಿಸಿವೆ. ತಮಗೆ ಆಹ್ವಾನಿ ನೀಡಿದ ಕ್ಲಬ್‌ಗಳ ಪರ ಆಡಿರುವ ನವೀನ್ ಆ ಕ್ಲಬ್‌ನ ಜಯದಲ್ಲಿ ಪ್ರಮುಖ ಪಾತ್ರವಹಿಸಿರುವುದು ಗಮನಾರ್ಹ. ಬೆಂಗಳೂರಿನ ಬಿಎಸ್‌ಎನ್‌ಎಲ್, ಬಳ್ಳಾರಿಯ ಜೆಎಸ್‌ಡಬ್ಲ್ಯು ಜಿಂದಾಲ್ ಹಾಗೂ ಆರ್ಮಿಗಾಗಿ ಆಡಿದ್ದಾರೆ. ದುಬೈ ಹಾಗೂ ಕುವೈತ್‌ನಲ್ಲೂ ಅಂತಾರಾಷ್ಟ್ರೀಯ ಆಹ್ವಾನಿತ ಪಂದ್ಯಗಳನ್ನಾಡಿದ್ದಾರೆ. ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪಂದ್ಯಗಳಲ್ಲೂ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುತ್ತಾರೆ. ಕರ್ನಾಟಕ, ಕೇರಳ, ಪುಣೆ ಹಾಗೂ ಮುಂಬೈಯಲ್ಲಿ ನಡೆದ ಅನೇಕ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ಗಳಲ್ಲಿ ವಿವಿಧ ತಂಡಗಳಲ್ಲಿ  ಆಡಿ ಉತ್ತಮ ಆಲ್ರೌಂಡರ್ ಪ್ರಶಸ್ತಿ ಗಳಿಸಿರುತ್ತಾರೆ. ನವೀನ್ ಕಾಂಚಿನ್ ಕೈಗೆ ಸರ್ವ್ ಮಾಡುವ ಅವಕಾಶ ಸಿಕ್ಕಿತೆಂದರೆ ತಂಡಕ್ಕೆ ಏಕಕಾಲದಲ್ಲಿ ನಾಲ್ಕೈದು ಅಂಕ ಸಿಗುವುದು ಖಚಿತ. ಅವರ ಸರ್ವ್ ನಿಯಂತ್ರಿಸು ಎದುರಾಳಿ ತಂಡದಲ್ಲಿ ಹರಸಾಹಸಪಡುವುದು ಸಾಮಾನ್ಯವಾಗಿರುತ್ತದೆ. ಕರ್ನಾಟಕ ವಾಲಿಬಾಲ್ ಲೀಗ್‌ನಲ್ಲಿ ಅತಿಥಿ ಆಟಗಾರನಾಗಿ ಆಡಿದ್ದ ನವೀನ್ ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದ ತಂಡದ ಸದಸ್ಯರಾಗಿದ್ದರು.
ಒಂದು ದಿನ ಆರ್ಮಿ ತಂಡದ ಪರ ಆಡುತ್ತಿರುವ ನವೀನ್ ಅವರ ಆಟವನ್ನು ಗಮನಿಸಿದ ಅಲ್ಲಿಯ ಕ್ರೀಡಾ ಅಧಿಕಾರಿ ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿದರು. ಪರಿಣಾಮ ನವೀನ್ ಕಾಂಚನ್ ಈಗ ಭಾರತದ ಸೇನೆಗೆ ಸ್ಪೋರ್ಟ್ಸ್ ಕೋಟಾದಡಿ ಸೇರಿಕೊಂಡಿದ್ದಾರೆ. ನವೀನ್ ಅವರ ತಂದೆ ಮುಂಬೈಯಲ್ಲಿ ಹೊಟೇಲ್ ಉದ್ಯೋಗಿ, ತಾಯಿ ರತ್ನ ಅವರಿಗೆ ಮನೆವಾರ್ತೆ. ಇಬ್ಬರು ಸಹೋದರರು ನವೀನ್ ಅವರ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
‘ವಾಲಿಬಾಲ್ ನನ್ನ ಬದುಕಿಗೆ ಹೊಸ ರೂಪು ನೀಡುತ್ತದೆ ಎಂದು ಊಹಿಸಿರಲಿಲ್ಲ. ಸಾಮಾನ್ಯರಂತೆ ನಿತ್ಯವೂ ವಾಲಿಬಾಲ್‌ನಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಗುರುಗಳಾದ ಸೂರಜ್ ಶೆಟ್ಟಿ ಅವರು ಉತ್ತಮ ರೀತಿಯಲ್ಲಿ ತರಬೇತಿ ನೀಡಿದರು. ಕೇವಲ ನಾಲ್ಕು ವರ್ಷಗಳಲ್ಲಿ ನನ್ನ ವಾಲಿಬಾಲ್ ಆಟವನ್ನು ಎಲ್ಲರೂ ಗಮನಿಸುವಂತೆ ಮಾಡಿರುವ ಗುರುಗಳಿಗೆ ನಾನು ಸದಾ ಚಿರಋಣಿ. ಕಾಲೇಜಿನ ಪ್ರಾಂಶುಪಾಲರು ಹಾಗೂ ಇತರ ಉಪನ್ಯಾಸಕ ವೃಂದವೂ ನನ್ನ ಯಶಸ್ಸಿನ ಹಾದಿಯಲ್ಲಿ ಶ್ರಮಿಸಿದೆ. ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಬೇಕು ಎಂಬ ಹಂಬಲವಿದೆ, ಅದಕ್ಕಾಗಿ ನಿರಂತರ ಶ್ರಮ ವಹಿಸುತ್ತಿರುವೆ. ನನ್ನೂರಿಗೆ, ಕಲಿತ ಕಾಲೇಜಿಗೆ ಕೀರ್ತಿ ತರಬೇಕೆಂಬುದು ಹಂಬಲ,‘ ಎಂದು ನವೀನ್ ಕಾಂಚನ್ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದರು.
ತನ್ನ ವಾಲಿಬಾಲ್ ಆಟದ ಯಶಸ್ಸಿಗೆ ಕಾರಣರಾದ ಕುಂದಾಪುರದ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಮೊಹಮ್ಮದ್ ಸಮೀರ್ ಹಾಗೂ ಸುನಿಲ್ ಕುಮಾರ್ ಅವರನ್ನೂ ನವೀನ್ ಕಾಂಚನ್ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

Related Articles