Saturday, February 24, 2024

ವಾಲಿಬಾಲ್‌ಗೆ ಜೀವ ತುಂಬುವ “ಲಕ್ಕಿ ಕೋಚ್‌ʼʼ ಲಕ್ಷ್ಮೀನಾರಾಯಣ

ಸೋಮಶೇಖರ್‌ ಪಡುಕರೆ, sportsmail

ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಹೊಸ ಲೀಗ್‌, ಪ್ರೈಮ್‌ ವಾಲಿಬಾಲ್‌ ಲೀಗ್‌ ಸ್ಥಾಪನೆಯಾಗಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ, ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಇರುವಂತೆಯೇ ನೂತನ ವಾಲಿಬಾಲ್‌ ಲೀಗ್‌ನಲ್ಲಿ ಕನ್ನಡಿಗರ ನೆಚ್ಚಿನ ತಂಡ ಬೆಂಗಳೂರು ಟಾರ್ಪೆಡೊಸ್‌ ಸಜ್ಜಾಗಿದೆ. ಆ ತಂಡದಲ್ಲಿದ್ದಾರೆ ಭಾರತ ಕಂಡ ಶ್ರೇಷ್ಠ ಆಟಗಾರ, ಕರ್ನಾಟಕದ ಲಕ್ಕಿ ಕೋಚ್‌ ಲಕ್ಷ್ಮೀನಾರಾಯಣ.

ಬೆಂಗಳೂರು ಟಾರ್ಪೆಡೊಸ್‌ ತಂಡದಲ್ಲಿ ಭಾರತ ತಂಡದ ಮಾಜಿ ಆಟಗಾರ, ಕರ್ನಾಟಕಕ್ಕೆ ಐತಿಹಾಸಿಕ ರಾಷ್ಟ್ರೀಯ ಚಾಂಪಿಯನ್ಷಿಪ್‌ ತಂದುಕೊಟ್ಟ ಲಕ್ಕಿ ಕೋಚ್‌  ಕೆ. ಆರ್‌. ಲಕ್ಷ್ಮೀನಾರಾಯಣ ಅವರು ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಬೇಸ್‌ಲೈನ್‌ ವೆಂಚರ್ಸ್‌ ನಡೆಸುವ ಈ ಪ್ರತಿಷ್ಠಿತ ವಾಲಿಬಾಲ್‌ ಲೀಗ್‌ ಯಾವ ರೀತಿಯಲ್ಲಿ ದೇಶದ ವಾಲಿಬಾಲ್‌ಗೆ ಮತ್ತು ಆಟಗಾರರಿಗೆ ನೆರವಾಗಲಿದೆ ಎಂಬುದನ್ನು ಕೋಚ್‌ ಲಕ್ಷ್ಮೀನಾರಾಯಣ ಅವರು www.sportsmail.net ಜತೆ ಹಂಚಿಕೊಂಡಿದ್ದಾರೆ.

ದೇಶದ ವಾಲಿಬಾಲ್‌ಗೆ ಹೊಸ ಜೀವ ತುಂಬಲಿದೆ:

 

“ರಾಷ್ಟ್ರೀಯ ವಾಲಿಬಾಲ್‌ ಫೆಡರೇಷನ್‌ನಲ್ಲಿ ಎರಡು ಭಾಗವಾಗಿದೆ. ಅದು ಪ್ರತಿಷ್ಠೆಯ ವಿಷಯವಾಗಿ ವಾಲಿಬಾಲ್‌ ಚಟುವಟಿಕೆಗಳು ನಡೆಯುತ್ತಿಲ್ಲ. ಇದರ ಪರಿಣಾಮ ರಾಜ್ಯಗಳ ವಾಲಿಬಾಲ್‌ ಸಂಸ್ಥೆಗಳ ಮೇಲೂ ಬೀರಿದೆ. ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಯಾವುದೇ ವಾಲಿಬಾಲ್‌ ಚಟುವಟಿಗಳು ನಡೆಯುತ್ತಿಲ್ಲ. ನಡೆದರೂ ಅದು ಅಮಾನ್ಯ ಎಂದು ಹೇಳಲಾಗುತ್ತಿದೆ. ಇದು ಆಟಗಾರರಲ್ಲಿ ಸಾಕಷ್ಟು ನಿರಾಸೆಯನ್ನುಂಟು ಮಾಡಿದೆ. ಇಂಥ ಸಂದರ್ಭದಲ್ಲಿ ವೃತ್ತಿಪರ ಲೀಗ್‌, ಪ್ರೈಮ್‌ ವಾಲಿಬಾಲ್‌ ಲೀಗ್‌ ಆರಂಭಗೊಂಡಿರುವುದು ವಾಲಿಬಾಲ್‌ಗೆ ಹೊಸ ಜೀವ ಬಂದಂತಾಗಿದೆ. ಆಟಗಾರರಿಗೆ ಉತ್ತಮ ರೀತಿಯಲ್ಲಿ ಸಂಭಾವನೆ ಸಿಕ್ಕಿದೆ. ಆಟಗಾರರು ತಮ್ಮ ಫಿಟ್ನೆಸ್‌ ಕಾಯ್ದುಕೊಳ್ಳುವುದು, ಅವರ ದೈನಂದಿನ ವೆಚ್ಚಗಳಿಗೆ ಕಷ್ಟಪಡುತ್ತಿದ್ದರು, ಈ ರೀತಿಯ ಲೀಗ್‌ಗಳು ನಡೆಯುವುದರಿಂದ ವಾಲಿಬಾಲ್‌ನಲ್ಲಿ ತೊಡಗಿಸಿಕೊಂಡಿರುವ ಅನೇಕರ ಬದುಕಿಗೆ ಒಂದು ಆಧಾರವಾದಂತಾಗುತ್ತದೆ. ಕ್ರೀಡಾ ಉದ್ದಿಮೆಗೂ ಉತ್ತೇಜನ ನೀಡಿದಂತಾಗುತ್ತದೆ. ವಿಭಿನ್ನ ರೀತಿಯ ಆಟಗಾರರು, ವಿದೇಶಿ ಆಟಗಾರರೊಂದಿಗೆ ಆಡುವುದರಿಂದ ನಮ್ಮ ದೇಶದ ಆಟಗಾರರ ಆಟವೂ ಉತ್ತಮಗೊಳ್ಳುತ್ತದೆ,” ಎಂದು ಲಕ್ಷ್ಮೀನಾರಾಯಣ ಹೇಳಿದರು.

ಅನೇಕ ಆಟಗಾರರಿಗೆ ಉದ್ಯೋಗವೇ ಇಲ್ಲ:

“ದೇಶದಲ್ಲಿ ಅನೇಕ ಪ್ರತಿಭಾವಂತ ಆಟಗಾರರಿದ್ದಾರೆ, ಅವರಲ್ಲಿ ಬೆರಳೆಣಿಕೆಯ ಆಟಗಾರರು ಮಾತ್ರ ಉದ್ಯೋಗದಲ್ಲಿದ್ದಾರೆ. ಉಳಿದ ಪ್ರತಿಭಾವಂತ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಅವಕಾಶ ಸಿಗುತ್ತಿಲ್ಲ, ಇದಕ್ಕೆ ಫೆಡರೇಷನ್‌ನಲ್ಲಿ ನಡೆಯುತ್ತಿರುವ ಗೊಂದಲಗಳೇ ಕಾರಣವಾಗಿದೆ. ವಾಲಿಬಾಲ್‌ನಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿದ ಹೆತ್ತವರಿಗೂ ಕೂಡ ನೋವಾಗುತ್ತದೆ. ಪ್ರೈಮ್‌ ವಾಲಿಬಾಲ್‌ ಲೀಗ್‌ ಬಂದಿರುವುದರಿಂದ ಒಂದಿಷ್ಟು ಪ್ರತಿಭಾವಂತ ಆಟಗಾರರಿಗೆ ತಮ್ಮ ಬದುಕನ್ನು ರೂಪಿಸಿಕೊಂಡು ಮನೆಯವರಿಗೆ ನೆರವಾಗಲು ಸಾಧ್ಯವಾಗುತ್ತದೆ. ಅವರು ನೆಮ್ಮದಿಯಿಂದ ಆಡಲು ನೆರವಾಗುತ್ತದೆ, ಅಲ್ಲದೆ ಅನೇಕ ಯುವ ಆಟಗಾರರು ವಾಲಿಬಾಲ್‌ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ,” ಎಂದರು.

ವಿದೇಶಿ ಆಟಗಾರರೊಂದಿಗೆ ಆಡುವಾಗ:

ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಏಳು ತಂಡಗಳಿದ್ದು, ಅದರಲ್ಲಿ ಪ್ರತಿಯೊಂದು ತಂಡದಲ್ಲೂ ಇಬ್ಬರು ವಿದೇಶಿ ಆಟಗಾರರು ಇರುತ್ತಾರೆ. ಈ ವಿದೇಶಿ ಆಟಗಾರರು ಪಾಲ್ಗೊಳ್ಳುವುದರಿಂದ ನಮ್ಮ ಆಟಗಾರರಿಗೆ ಹಲವು ರೀತಿಯಲ್ಲಿ ನೆರವಾಗುತ್ತದೆ, “ಮೊದಲೆಲ್ಲ ವಿದೇಶಿ ತಂಡಗಳೊಂದಿಗೆ ಟೆಸ್ಟ್‌ ಪಂದ್ಯಗಳು ನಡೆಯುತ್ತಿದ್ದವು. ಆದರೆ ಅದು ಈಗ ನಡೆಯುತ್ತಿಲ್ಲ. ಇದರಿಂದಾಗಿ ಭಾರತದ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವಾಗ ಸಂಕಷ್ಟ ಎದುರಿಸಬೇಕಾಗುತ್ತದೆ. ವಿದೇಶದ ತಂಡಗಳು ವಾಲಿಬಾಲ್‌ನಲ್ಲಿ ನಮಗಿಂತ ಸುಮಾರು ಹದಿನೈದು ವರುಷ ಮುಂದೆ ಸಾಗಿವೆ. ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಒಟ್ಟು 14 ವಿದೇಶಿ ಆಟಗಾರರಿದ್ದಾರೆ. ಈ ಆಟಗಾರರು ಪಾಲ್ಗೊಳ್ಳುವುದರಿಂದ ನಮ್ಮ ದೇಶದ ಆಟಗಾರರಿಗೆ ಅವರೊಂದಿಗೆ ಆಡಿ ಹೊಸ ಅನುಭವ ಪಡೆದು, ಆತ್ಮವಿಶ್ವಾಸ ಹೆಚ್ಚಿಸಿಕೊಂಡು ತಮ್ಮ ಆಟದಲ್ಲಿ ಸುಧಾರಣೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅವರು ಹೊಸ ರಣತಂತ್ರವನ್ನು ರೂಪಿಸಿ ಆಡಬಹುದು,” ಎಂದು ಲಕ್ಷ್ಮೀನಾರಾಯಣ ಹೇಳಿದರು.

ವಾಲಿಬಾಲ್‌ ಫೆಡರೇಷನ್‌ ಏನು ಮಾಡಬೇಕು?

ಭಾರತೀಯ ವಾಲಿಬಾಲ್‌ ಫೆಡರೇಷನ್‌ನಲ್ಲಿ ಹುಟ್ಟಿಕೊಂಡಿರುವ ಗೊಂದಲ ಇದೇ ರೀತಿಯಲ್ಲಿ ಮುಂದುವರಿದರೆ ದೇಶದಲ್ಲಿರುವ ಆಟಗಾರರ ಮೇಲೆ ಕೆಟ್ಟ ಪರಿಣಾಮ ಬೀರುವುದು ಸಹಜ. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು.  ವಾಲಿಬಾಲ್‌ ಆಟಗಾರನಾಗಿ, ಕೋಚ್‌ ಆಗಿ, ಸಂಸ್ಥೆಯಲ್ಲಿ ಜವಾಬ್ದಾರಿ ಹುದ್ದೆಯಲ್ಲಿರುವ ಲಕ್ಷ್ಮೀನಾರಾಯಣ ಅವರು ನೀಡುವ ಸಲಹೆ ಈ ರೀತಿ ಇದೆ. “ಫೆಡರೇಷನ್‌ನಲ್ಲಿ ನಡೆಯುತ್ತಿರುವ ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅದಕ್ಕೊಂದು ಕೊನೆ ಇರಲೇಬೇಕು, ಆದರೆ ಆ ಸಮಯಕ್ಕಾಗಿ ಕಾಯುವಂತಿಲ್ಲ. ನಮ್ಮ ದೇಶದ ವಾಲಿಬಾಲ್‌ ಸ್ಥಿತಿಯನ್ನೂ ಗಮನದಲ್ಲಿಟ್ಟಕೊಳ್ಳಬೇಕಾಗಿದೆ. ಯಾರು ವಿವಾದ ಹುಟ್ಟುಹಾಕಿದ್ದಾರೋ ಅವರೆಲ್ಲರೂ ಒಂದೆಡೆ ಕುಳಿತು ತಾವೇನು ಮಾಡುತ್ತಿದ್ದೇವೆ ಎಂಬುದನ್ನು ಪರಾಮರ್ಷಿಸಬೇಕು, ಎರಡೂ ಬಣದವರೂ ವಾಲಿಬಾಲ್‌ ಆಟಗಾರರನ್ನು ಗಮನದಲ್ಲಿರಿಸಿಕೊಂಡು, ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ವಾಲಿಬಾಲ್‌ಗಾಗಿ ಒಂದಾಗಿ, ಮಾತುಕತೆ ನಡೆಸಬೇಕು.

 

ಈ ವಿವಾದ ಭಾರತ ಸರಕಾರದ ಕ್ರೀಡಾ ಇಲಾಖೆಗೂ ಗೊತ್ತಿದೆ, ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಗಮನದಲ್ಲೂ ಇದೆ, ಅಂತಾರಾಷ್ಟ್ರೀಯ ವಾಲಿಬಾಲ್‌ ಸಂಸ್ಥೆಯ ಅಂಗಳವನ್ನೂ ತಲುಪಿದೆ, ಆದ್ದರಿಂದ ಕೇಂದ್ರ ಸರಕಾರ ಆಟಗಾರರ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಎರಡೂ ಬಣವನ್ನು ಕರೆಸಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು,” ಲಕ್ಷ್ಮೀನಾರಾಯಣ ಅವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ.

ಕರ್ನಾಟಕ ವಾಲಿ ಲೀಗ್:

ಕರ್ನಾಟಕ ರಾಜ್ಯ ವಾಲಿಬಾಲ್‌ನಲ್ಲಿ ಅತ್ಯಂತ ಶ್ರೀಮಂತ ರಾಜ್ಯ ಎಂದು ಹೇಳಬಹುದು. ಏಕೆಂದರೆ ಪ್ರತಿಯೊಂದು ಜಿಲ್ಲೆಯಲ್ಲೂ ವಾಲಿಬಾಲ್‌ ತಂಡಗಳಿವೆ, ಬೆಂಗಳೂರಿನಲ್ಲೇ ಎ ಡಿವಿಜನ್‌ ಆಡಲು 10-15 ತಂಡಗಳು ಸಜ್ಜಾಗುತ್ತಿದ್ದವು. ಇಲ್ಲಿನ ಟಾಪ್‌ 8 ತಂಡಗಳನ್ನು ಆಯ್ಕೆ ಮಾಡಿ ಫೆಡರೇಷನ್‌ ಕಪ್‌ ಟೂರ್ನಿ ನಡೆಯುತ್ತಿತ್ತು. ಬೆಂಗಳೂರಿನ ಒಂದೊಂದು ವಿಭಾಗದಲ್ಲೇ ವರ್ಷಕ್ಕೆ ಕನಿಷ್ಠ 18 ಟೂರ್ನಿಗಳು ನಡೆಯುತ್ತಿದ್ದವು. ಕರ್ನಾಟಕ ರಾಜ್ಯ ವಾಲಿಬಾಲ್‌ ಸಂಸ್ಥೆ ಕರ್ನಾಟಕ ವಾಲಿ ಲೀಗ್‌ ಎಂಬ ಲೀಗ್‌ ಆರಂಭಿಸಿ ಯಶಸ್ಸು ಕಂಡಿತ್ತು, ಅದರ ಯಶಸ್ಸಿನ ಬಗ್ಗೆ ಲಕ್ಷ್ಮೀನಾರಾಯಣ ಅವರು ಬೆಳಕು ಚೆಲ್ಲಿದ್ದಾರೆ.

“ಕೆಲ ವರ್ಷಗಳ ಹಿಂದೆ ಕರ್ನಾಟಕ ವಾಲಿಬಾಲ್‌ ಸಂಸ್ಥೆ ಕರ್ನಾಟಕ ವಾಲಿ ಲೀಗ್‌ ಆರಂಭಿಸಿತ್ತು. ಅದರಲ್ಲಿ ನಾಲ್ಕು ಹಂತಗಳಿದ್ದವು. ಕೋಲಾರ ಜಿಲ್ಲಾ ಕಾರ್ಯದರ್ಶಿಯಾಗಿದ್ದ ನನಗೆ ಅಲ್ಲಿ ಯಶಸ್ವಿಯಾಗಿ ವಾಲಿ ಲೀಗ್‌ ಆಯೋಜಿಸಿದ ಹೆಮ್ಮೆ ಇದೆ. ನಾಲ್ಕು ಲೆಗ್‌ ವಾಲಿಲೀಗ್‌ನಲ್ಲಿ ಮೂರು ಲೆಗ್‌ ಅನ್ನು ಕೋಲಾರದಲ್ಲೇ ಆಯೋಜಿಸಿದೆವು. ಮುಳಬಾಗಿಲು, ಬಂಗಾರ ಪೇಟೆ ಮತ್ತು ಶ್ರೀನಿವಾಸಪುರದಲ್ಲಿ ಆಯೋಜಿಸಿದ್ದೆವು. ನಾಲ್ಕನೇ ಲೆಗ್‌ ಅನ್ನು ಶಿವಮೊಗ್ಗದಲ್ಲಿ ಆಯೋಜಿಸಿದ್ದೆವು. ಒಂದು ಲಕ್ಷ ರೂ. ನಗದು ಬಹುಮಾನ ನೀಡಿದ್ದೆವು. ಪ್ರತಿಯೊಂದು ಮ್ಯಾಚಲ್ಲೂ ಗೆದ್ದವರಿಗೆ 5,000 ಸೋತವರಿಗೆ 3,000 ರೂ. ನಗದು ಬಹುಮಾನ ನೀಡಿದ್ದೆವು. ಸೋತವರೂ ಬರಿಗೈಯಲ್ಲಿ ಹೋಗಬಾರದು ಎಂಬುದು ನಮ್ಮ ನಿಲುವಾಗಿತ್ತು. ಆದರೆ ಈಗ ಎಲ್ಲವೂ ನಿಂತು ಹೋಗಿದೆ. ಕರ್ನಾಟಕ ವಾಲಿಬಾಲ್‌ ಸಂಸ್ಥೆಯನ್ನು ಅಮಾನತುಮಾಡಲಾಗಿದೆ. ಇವೆಲ್ಲ ಆಟಗಾರರಿಗೆ ತೊಂದರೆಯನ್ನುಂಟು ಮಾಡುವ ಸಂಗತಿಗಳು. ಇನ್ನಾದರೂ ಈ ಗೊಂದಲಗಳಿಗೆ ತೆರೆ ಬಿದ್ದು, ವಾಲಿಬಾಲ್‌ ಕ್ರೀಡೆ ರಾಜ್ಯ ಮತ್ತು ದೇಶದಲ್ಲಿ ಮತ್ತೆ ಸಂಭ್ರಮಿಸಲಿ. ಪ್ರೈಮ್‌ ವಾಲಿಬಾಲ್‌ ಲೀಗ್‌ ನಲ್ಲಿ ನಮ್ಮ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ತಂಡಗಳನ್ನು ಸೇರಲಿ ಎಂಬುದೇ ಹಾರೈಕೆ,” ಎಂದರು.

ಲಕ್ಷ್ಮೀನಾರಾಯಣ ಯಾಕೆ ʼಲಕ್ಕಿ ಕೋಚ್‌ʼ? :

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗುಡಿಪಳ್ಳಿ ಗ್ರಾಮದ ಲಕ್ಷ್ಮೀನಾರಾಯಣ ಅವರು ವಾಲಿಬಾಲ್‌ನಲ್ಲಿ ನಡೆದು ಬಂದ ಹಾದಿ ಅದ್ಭುತವಾದುದು. ಕ್ರೀಡಾ ಹಾಸ್ಟೆಲ್‌ ಮೂಲಕ ತಾಲೂಕು ಮಟ್ಟ, ರಾಜ್ಯ ಜೂನಿಯರ್‌, ಸೀನಿಯರ್‌, ರಾಜ್ಯ ಮಟ್ಟ, ವಿಶ್ವವಿದ್ಯಾಲಯ, ಅಂತರ್‌ ವಿಶ್ವವಿದ್ಯಾಲಯ, ರಾಷ್ಟ್ರಮಟ್ಟದಲ್ಲಿ ಮಿಂಚಿದರು.

ಕಾಲೇಜಿಗೆ ಸೇರುತ್ತಲೇ ಮೊದಲಿಗೆ ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುವ ಅವಕಾಶ. ಆ ವರ್ಷ ಮೊದಲ ಬಾರಿಗೆ ಬೆಂಗಳೂರು ವಿವಿ ದಕ್ಷಿಣ ವಲಯ ರನ್ನರ್‌ ಅಪ್‌ ಸ್ಥಾನ ಗಳಿಸಿ, ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯದಲ್ಲಿ ಆಡುವ ಅವಕಾಶ. ಮೊದಲ ಬಾರಿಗೆ ಬೆಂಗಳೂರು ವಿವಿ ಅಖಿಲ ಭಾರತ ಅಂತರ್‌ ವಿವಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ನಂತರ ಯೂತ್‌ ನ್ಯಾಷನಲ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶ, ಅಲ್ಲಿಯೂ ಕರ್ನಾಟಕ ಎರಡನೇ ಬಾರಿ ಚಾಂಪಿಯನ್‌, ನಂತರ ಸೀನಿಯರ್ ನ್ಯಾಷನಲ್ಸ್‌ನಲ್ಲಿ ರಾಜ್ಯ ತಂಡದ ಪರ ಆಡುವ ಅವಕಾಶ. ರಾಜ್ಯ ತಂಡದ ನಾಯಕರಾಗಿಯೂ ಆಯ್ಕೆ. ಮೂರು ನ್ಯಾಷನಲ್‌ ಗೇಮ್ಸ್‌ ಆಡುವ ಅವಕಾಶ. ನಂತರ ಅಂಚೆ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿದ ಕಾರಣ ಪೋಸ್ಟಲ್‌ ತಂಡವನ್ನು ಪ್ರತಿನಿಧಿಸುವ ಅವಕಾಶ. 17 ವರ್ಷಗಳ ಕಾಲ ಪೋಸ್ಟಲ್‌ ತಂಡದಲ್ಲಿ ಆಡಿದ ಅನುಭವ, ಹಲವು ಚಾಂಪಿಯನ್‌ ಪಟ್ಟ ಗೆದ್ದ ಖುಷಿ, ಅಪಾರ ಅನುಭವವಿದ್ದ ಕಾರಣ ಕೋಚ್‌ ಆಗುವ ಅವಕಾಶ. ಪೋಸ್ಟಲ್‌ ತಂಡಕ್ಕೆ ಕೋಚ್.‌ 2014ರಲ್ಲಿ ಕರ್ನಾಟಕ ತಂಡ ಯೂಥ್‌ ನ್ಯಾಷನಲ್ಸ್‌ನಲ್ಲಿ ಭಾಗವಹಿಸುವಾಗ ರಾಜ್ಯ ತಂಡದ ಪ್ರಧಾನ ಕೋಚ್.‌ ಆ ವರ್ಷ ಕರ್ನಾಟಕಕ್ಕೆ ರನ್ನರ್‌ ಅಪ್‌ ಗೌರವ. ನಂತರ ಕ್ಯಾಲಿಕಟ್‌ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡದ ಪ್ರಧಾನ ಕೋಚ್.‌ 2019ರಲ್ಲಿ ಕರ್ನಾಟಕ ವಾಲಿಬಾಲ್‌ ಇತಿಹಾಸದಲ್ಲೇ ಮರೆಯಲಾಗದ ದಿನ. ಲಕ್ಷ್ಮೀನಾರಾಯಣ ಅವರ ತರಬೇತಿಯಲ್ಲಿ ಪಳಗಿದ ಕರ್ನಾಟಕ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ಕರ್ನಾಟಕ ರಾಜ್ಯದ ಉದಯ (ಅಲ್ಲಿಯ ತನಕ ಮೈಸೂರು ರಾಜ್ಯವಾಗಿತ್ತು)ವಾದ ನಂತರ ಮೊದಲ ಬಾರಿಗೆ ಕರ್ನಾಟಕ ತಂಡ ರಾಷ್ಟ್ರೀಯ ವಾಲಿಬಾಲ್‌ ಚಾಂಪಿಯನ್ಷಿಪ್‌ ಗೆದ್ದು ಇತಿಹಾಸ ನಿರ್ಮಿಸಿತು. ಪ್ರೋ ವಾಲಿಬಾಲ್‌ ಲೀಗ್‌ನಲ್ಲಿ ಲಕ್ಷ್ಮೀನಾರಾಯಣ ಅವರು ಯು ಮುಂಬಾ ತಂಡದ ಸಹಾಯಕ ಕೋಚ್‌ ಮತ್ತು ಸಲಹೆಗಾರರಾಗಿದ್ದರು.  ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಪಟ್ಟ ಗೆದ್ದ ಕರ್ನಾಟಕ ತಂಡದ ಲಕ್ಕಿ ಕೋಚ್‌ ಎಂದು ಯು ಮುಂಬಾ ತಂಡದ ಆಡಳಿತ ಮಂಡಳಿ ಲಕ್ಷ್ಮೀನಾರಾಯಣ ಅವರಿಗೆ ಆಹ್ವಾನ ನೀಡಿತ್ತು. ಕೇವಲ ಪ್ರತಿಭೆಯನ್ನೇ ನಂಬಿಕೊಂಡು, ಪ್ರಭಾವಗಳಿಗೆ ಒತ್ತುಕೊಡದ ಲಕ್ಷ್ಮೀನಾರಾಯಣ ಅವರಿಗೆ ನಿಜವಾಗಿಯೂ ಅರ್ಜುನ ಪ್ರಶಸ್ತಿಯ ಗೌರವ ಸಿಗಬೇಕಿತ್ತು. ಇವರೊಂದಿಗೆ ಭಾರತ ತಂಡದಲ್ಲಿ ಆಡಿದ ಮೂವರು ಆಟಗಾರರಿಗೆ ಅರ್ಜುನ ಪ್ರಶಸ್ತಿ ಲಭಿಸಿತ್ತು. ಈಗ ಅವರು ಅರ್ಜುನ ಪ್ರಶಸ್ತಿ ಗೆಲ್ಲುವ ಆಟಗಾರರನ್ನು ಸಿದ್ಧಗೊಳಿಸುತ್ತಿದ್ದಾರೆ. ಅದೇ ಖುಷಿಪಡುವ ಸಂಗತಿ.

Related Articles