Thursday, October 10, 2024

ಜ.3: ಬೆಂಗಳೂರು ಟಾರ್ಪೆಡೊಸ್‌ ವಾಲಿಬಾಲ್‌ ಅಕಾಡೆಮಿಗೆ ಚಾಲನೆ

sportsmail

ದೇಶದಲ್ಲಿ ಹೊಸದಾಗಿ ಆರಂಭಗೊಳ್ಳಲಿರುವ ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಸ್ಪರ್ಧಿಸಲಿರುವ ಬೆಂಗಳೂರು ಟಾರ್ಪೆಡೊಸ್‌ ತಂಡದ ಮಾಲೀಕರು 2022 ಜನವರಿ 3 ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಭವಿಷ್ಯದ ವಾಲಿಬಾಲ್ ಆಟಗಾರರನ್ನು ಸಜ್ಜುಗೊಳಿಸುವ ಸಲುವಾಗಿ ಪ್ರಾಥಮಿಕ ಹಂತದಲ್ಲಿ ತರಬೇತಿ ನೀಡಲು ಬೆಂಗಳೂರು ಟಾರ್ಪೆಡೊಸ್‌ ವಾಲಿಬಾಲ್‌ ಆಕಾಡೆಮಿಗೆ ಚಾಲನೆ ನೀಡಲಿದ್ದಾರೆ.

ಮಲ್ಲೇಶ್ವರದಲ್ಲಿರುವ ಯಂಗಸ್ಟರ್ಸ್‌ ಕಬಡ್ಡಿ ಕ್ಲಬ್ ಅಂಗಣದಲ್ಲಿ, ಆ ಸಂಸ್ಥೆಯ ಅಧ್ಯಕ್ಷ ನಿವೃತ್ತ ಎಸಿಪಿ ಬಿ.ಕೆ. ಶಿವರಾಮ್‌ ಅವರ ನೆರವಿನೊಂದಿಗೆ ಸುಸಜ್ಜಿತ ಅಕಾಡೆಮಿ ಸ್ಥಾಪನೆಯಾಗಲಿದೆ. ಸದ್ಯ ಬೆಂಗಳೂರಿನ ಯುವ ಆಟಗಾರರಿಗೆ ಸೀಮಿತವಾಗಿರುವ ಈ ಅಕಾಡೆಮಿಯಲ್ಲಿ ಸುಮಾರು 30 ಯುವ ಆಟಗಾರರಿಗೆ ನಾಲ್ಕು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಬಂದ 150 ಆಸಕ್ತರಲ್ಲಿ ಮೂವತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರು ಟಾರ್ಪೆಡೊಸ್‌ ತಂಡದ ಕೋಚ್‌ ಲಕ್ಷ್ಮೀನಾರಾಯಣ ಅವರು ತಂಡದ ಮಾಲೀಕರಾದ ಅಂಕಿತ್‌ ನರೊಗಿ ಅವರೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಈ ಉತ್ತಮ ಅಕಾಡೆಮಿಯೊಂದು ಹುಟ್ಟಿಕೊಳ್ಳಲು ಕಾರಣವಾಯಿತು. ಬೆಂಗಳೂರು ಎಂದು ಹೆಸರಿಟ್ಟು ಕೇವಲ ಲೀಗ್‌ಗೆ ಸೀಮಿತವಾಗಿರದೆ ಈ ರಾಜ್ಯದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಜವಾಬ್ದಾರಿಯನ್ನೂ ತಂಡದ ಮಾಲೀಕರಾದ ಅಂಕಿತ್‌ ನಗೋರಿ ಹೊಂದಿದ್ದಾರೆ.‌

ಆಯ್ಕೆಗೊಂಡ ಮಕ್ಕಳಲ್ಲಿ 10 ಬಾಲಕಿಯರು ಮತ್ತು 20 ಬಾಲಕರು ಸೇರಿದ್ದಾರೆ. ಇಬ್ಬರು ಕೋಚ್‌ಗಳು ಇಲ್ಲಿ ಕಾರ್ಯನಿರ್ವಹಿಸಲಿದ್ದು, ಒಬ್ಬರು ಟ್ರೈನರ್‌ ಮತ್ತು ಒಬ್ಬರು ನ್ಯೂಟ್ರಿಷನ್‌ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಕಾಡೆಮಿಗೆ ಅಗತ್ಯ ಇರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಬೆಂಗಳೂರು ಟಾರ್ಪೆಡೊಸ್‌ ವಹಿಸಲಿದೆ. ಉದ್ಘಾಟನಾ ಸಮಾರಂಭದಲ್ಲಿ ಬಿ.ಕೆ. ಶಿವರಾಮ್‌ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇತರ ಜಿಲ್ಲೆಗಳಿಗೂ ವಿಸ್ತರಣೆ:

ಸದ್ಯ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿರುವ ಈ ಅಕಾಡೆಮಿ ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲಿದೆ. ಉತ್ತಮ ವಾಲಿಬಾಲ್‌ ತಂಡವನ್ನು ಹೊಂದಿರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಅವರಿಗೆ ವಾಲಿಬಾಲ್‌ ಕ್ರೀಡೆಯಿಂದ ಬದುಕನ್ನು ಹೇಗೆ ರೂಪಿಸಿಕೊಳ್ಳಬಹುದು ಎಂದು ತಿಳಿಸಿ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಿದ್ದೇವೆ ಎಂದು ಅಕಾಡೆಮಿಯ ಮುಖ್ಯ ಸಲಹೆಗಾರ ಲಕ್ಷ್ಮೀನಾರಾಯಣ ಅವರು ತಿಳಿದ್ದಾರೆ.

“ಬೆಂಗಳೂರಿನಲ್ಲಿ ವಾಲಿಬಾಲ್‌ ಕ್ರೀಡೆಯನ್ನು ಅಭಿವೃದ್ಧಿಪಡಿಸಲು ನಮಗೆ ಸಿಕ್ಕಿರುವ ಅವಕಾಶ ಖುಷಿಕೊಟ್ಟಿದೆ, ಕರ್ನಾಟಕದಾದ್ಯಂತ ನಾವು ಈ ರೀತಿಯ ಸೌಲಭ್ಯವನ್ನು ಕಲ್ಪಿಸಲು ಉತ್ಸುಕರಾಗಿದ್ದೇವೆ, ಪ್ರಾಥಮಿಕ ಹಂತದಲ್ಲಿ ನಾವು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಿದ್ದೇವೆ. ಇದರಿಂದ ರಾಜ್ಯ ಮತ್ತು ರಾಷ್ಟ್ರಕ್ಕೆ ನಾವು ಉತ್ತಮ ಆಟಗಾರರನ್ನು ನೀಡಬಹುದಾಗಿದೆ,” ಎಂದು ಬೆಂಗಳೂರು ಟಾರ್ಪೆಡೊಸ್‌ ತಂಡದ ಮಾಲೀಕರಾದ ಅಂಕಿತ್‌ ನಗೋರಿ ಹೇಳಿದ್ದಾರೆ.

“ಕ್ರೀಡೆಯಲ್ಲಿ ಭವ್ಯ ಇತಿಹಾಸವನ್ನು ಹೊಂದಿರುವ ಬೆಂಗಳೂರಿನಲ್ಲಿ ಕಬಡ್ಡಿ, ಕ್ರಿಕೆಟ್‌, ಫುಟ್ಬಾಲ್‌ ಮತ್ತು ಬ್ಯಾಡ್ಮಿಂಟನ್‌ ಕಳೆದ ಹಲವು ದಶಕಗಳಿಂದ ಶ್ರೀಮಂತಗೊಂಡಿದೆ. ನಾವು ಬೆಂಗಳೂರಿನಲ್ಲಿ ವಾಲಿಬಾಲ್‌ ಕ್ರೀಡೆಗೆ ಪ್ರಾಥಮಿಕ ಹಂತದಲ್ಲಿ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉಚಿತವಾಗಿ ತರಬೇತಿ ನೀಡಲಿದ್ದೇವೆ,” ಎಂದು ಅಂಕಿತ್‌ ನಗೋರಿ ಹೇಳಿದರು.

Related Articles