Friday, October 4, 2024

5ರಂದು ಶಾರದಾ ಪ್ರೀಮಿಯರ್‌ ಲೀಗ್‌ ವಾಲಿಬಾಲ್

sportsmail            

ಕ್ರೀಡೆಯ ಮೂಲಕ ಅಸಂಖ್ಯ ವಿದ್ಯಾರ್ಥಿಗಳ ಬದುಕು ರೂಪಿಸಿದ, ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಕುಂದಾಪುರದ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಇದೇ 5ರಂದು ಶಾರದಾ ಪ್ರೀಮಿಯರ್‌ ಲೀಗ್-‌2021 ವಾಲಿಬಾಲ್‌ ಪಂದ್ಯ ನಡೆಯಲಿದೆ.

ಶ್ರೀ ಶಾರದಾ ಕಾಲೇಜು ಹಾಗೂ ಹಳೆ ವಿದ್ಯಾರ್ಥಿ ಸಂಘ ಶಾರದಾ ಕಾಲೇಜು ಜಂಟಿಯಾಗಿ ಈ ಚಾಂಪಿಯನ್ಷಿಪ್‌ ಆಯೋಜಿಸಿದೆ.

ಇಲ್ಲಿ ಸ್ಪರ್ಧಿಸಲು ಶಾರದಾ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ.

ಎಲ್ಲಾ ಕ್ರೀಡೆಗಳಿಗೂ ಶ್ರೀ ಶಾರದಾ ಕಾಲೇಜು ಪ್ರಸಿದ್ಧಿ ಪಡೆದಿದೆ. ಆದರೆ ವಾಲಿಬಾಲ್‌ ಕ್ರೀಡೆ ಇಲ್ಲಿಯ ಬ್ರಾಂಡ್‌ ಎಂದರೆ ತಪ್ಪಾಗಲಾರದು. ರಾಜ್ಯ ಮತ್ತು ದೇಶದ ವಿವಿಧ ತಂಡಗಳಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದೇ ಇದಕ್ಕೆ ನಿದರ್ಶನ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್‌ ಕುಮಾರ್‌ ಶೆಟ್ಟಿ ಅವರು ಪ್ರಾಂಶುಪಾಲರು ಮತ್ತು ಇತರ ಉಪನ್ಯಾಸಕರ ನೆರವಿನೊಂದಿಗೆ ಉತ್ತಮ ಕ್ರೀಡಾ ತಂಡಗಳನ್ನು ಕಟ್ಟಿ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹ.

ಭಾನುವಾರ ಬೆಳಿಗ್ಗೆ 9:30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾರದಾ ಕಾಲೇಜು ಟ್ರಸ್ಟ್‌ (ರಿ.) ಬಸ್ರೂರು ಇದರ ಸಂಚಾಲಕರಾದ ಬಿ. ಅಪ್ಪಣ್ಣ ಹೆಗ್ಡೆ ಅವರು ವಹಿಸಲಿದ್ದಾರೆ.

ಎಂಫಿನೋಲ್‌ ಇಂಟರ್‌ಕನೆಕ್ಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಇದರ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮ್ಯಾನೇಜರ್‌ ರಂಜಿತ್‌ ಶೆಟ್ಟಿ ಕಾಳಾವರ ಲೀಗ್‌ಗೆ ಚಾಲನೆ ನೀಡುವರು. ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್‌ ಸಂತೆಕಟ್ಟೆ ಮತ್ತು ಶ್ರೀ ಶಾರದಾ ಕಾಲೇಜು ಬಸ್ರೂರು ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್‌ ಜಿ. ಕೆಳಾಮನೆ ಇವರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಶಾರದಾ ಕಾಲೇಜು ಟ್ರಸ್ಟ್‌ (ರಿ) ಬಸ್ರೂರು ಇದರ ಅಧ್ಯಕ್ಷರಾದ ಕೆ. ಜಯಕರ ಶೆಟ್ಟಿ ಅಧ್ಯಕ್ಷರಾಗಿ ಪಾಲ್ಗೊಳ್ಳುವರು. ಅತಿಥಿಗಳಾಗಿ ಶ್ರೀ ಶಾರದಾ ಕಾಲೇಜು ಬಸ್ರೂರು ಇದರ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಮೋಹನದಾಸ್‌ ಶ್ಯಾನುಬಾಗ್‌, ಬಾರ್ಕೂರು ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್‌ ಆಚಾರ್‌, ಶ್ರೀ ಶಾರದಾ ಕಾಲೇಜು ಬಸ್ರೂರು, ಇದರ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನರೇಶ್‌ ಬಿ. ಪಾಲ್ಗೊಳ್ಳುವರು.

ಶಾರದಾ ಪ್ರೀಮಿಯರ್‌ ಲೀಗ್‌ನ ಯಶಸ್ಸಿಗಾಗಿ ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ, ಬೋಧಕ ಮತ್ತು ಬೋಧಕೇತರ ವರ್ಗ ಶ್ರಮಿಸಲಿದೆ.

Related Articles