Friday, March 29, 2024

ಕ್ಯಾಪ್ಟನ್ ಅಂದರೆ ಬರೇ ನಾಯಕನಲ್ಲ, ವಿನಯ್ ಕುಮಾರ್ ಹಾಗಿರಬೇಕು!

ಸೋಮಶೇಖರ್ ಪಡುಕರೆ ಬೆಂಗಳೂರು

ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ ಹಲವಾರು ಮುಂದಾಳುಗಳನ್ನು ಕಂಡಿರಬಹುದು, ಆದರೆ ನಾಯಕನ ವಿಚಾರ ಬಂದಾಗ ನಮ್ಮ ಕಣ್ಣ ಮುಂದೆ ನಿಲ್ಲುವುದು ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಆರ್. ವಿನಯ್ ಕುಮಾರ್.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿ ಯಾವುದೋ ಒತ್ತಡಕ್ಕೆ ಸಿಲುಕಿ ತನ್ನ ನಿರ್ಧಾರಗಳನ್ನು ಕೈಗೊಳ್ಳುತ್ತಿದೆಯೋ ಅಥವಾ ಸೋತರೂ ಚಿಂತೆ ಇಲ್ಲ ಪ್ರಯೋಗಶೀಲತೆಯನ್ನು ಮುಂದುವರಿಸುವ ಎಂಬ ತೀರ್ಮಾನಕ್ಕೆ ಕಟ್ಟುಬಿದಿದ್ದೆಯೋ ಎಂಬುದು ಸ್ಪಷ್ಟವಾಗುತ್ತಿಲ್ಲ. ಆರ್. ವಿನಯ್ ಕುಮಾರ್ ತಾನೇಕೆ ಸಮರ್ಥ ನಾಯಕ ಎಂಬುದನ್ನು ರಾಜಸ್ಥಾನ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾಬೀತುಪಡಿಸಿದ್ದಾರೆ.


ಎರಡು ಬಾರಿ ರಣಜಿ ಚಾಂಪಿಯನ್ ಪಟ್ಟ ಗೆದ್ದುಕೊಟ್ಟ ಅನುಭವಿ ಆಟಗಾರ ವಿನಯ್ ಕುಮಾರ್ ಅವರನ್ನು ಇದಕ್ಕಿದ್ದಂತೆ ನಾಯಕತ್ವದಿಂದ ಹೊರಗಿಟ್ಟು, ಮನೀಶ್ ಪಾಂಡೆಗೆ ನೀಡಲಾಯಿತು. ಪಾಂಡೆ ಉತ್ತಮ ಆಟಗಾರ. ಒಂದೆರಡು ಪಂದ್ಯಗಳಿಗೆ ಗಾಯದ ಸಮಸ್ಯೆಯ ಕಾರಣ ವಿನಯ್ ಅವರ ಜವಾಬ್ದಾರಿಯನ್ನು ಶ್ರೇಯಸ್ ಗೋಪಾಲ್‌ಗೆ ನೀಡಲಾಯಿತು. ಬದಲಾವಣೆ ಎಂಬುದು ಜಗದ ನಿಯಮ ಆದರೆ ಕೆಎಸ್‌ಸಿಎ ಆಯ್ಕೆ ಸಮಿತಿಯು ಕೈಗೊಳ್ಳುವ ತೀರ್ಮಾನ ಅದು ಜಗದ ನಿಯಮದಂತೆ ಕಾಣುತ್ತಿಲ್ಲ.
ವಿನಯ್ ಕುಮಾರ್ ನಾಯಕರಾಗಿ 59 ಪಂದ್ಯಗಳಲ್ಲಿ ಕರ್ನಾಟಕವನ್ನು ಮುನ್ನಡೆಸಿದ್ದಾರೆ. 27 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಅವರನ್ನು ಈ ಋತುವಿನ ಎಲ್ಲ ಪಂದ್ಯಗಳಿಗೂ ನಾಯಕರನ್ನಾಗಿ ಮುಂದವರಿಸಬಹುದಾಗಿತ್ತು. ಆದರೆ ಆಯ್ಕೆ ಸಮಿತಿ ಯುವಕರಿಗೆ ಅವಕಾಶ ನೀಡಬೇಕು, ಜವಾಬ್ದಾರಿಯನ್ನು ಹೊಸಬರು ವಹಿಸಿಕೊಳ್ಳಬೇಕು ಎಂಬ ಕಾರಣವೊಡ್ಡಿ ವಿನಯ್ ಅವರನ್ನು ನಾಯಕತ್ವದಿಂದ ಇಳಿಸಿದೆ. ಆದರೆ ತಂಡದ ಪ್ರದರ್ಶನ ಮಾತ್ರ ಆಯ್ಕೆ ಸಮಿತಿಯ ನಿರೀಕ್ಷೆಯಂತೆ ಇರಲಿಲ್ಲ.
ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ಥಾನ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜ್ಯ ತಂಡ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಕಾಣುವ ಅಪಾಯದಲ್ಲಿತ್ತು. ರಾಜಸ್ಥಾನದ 224 ರನ್‌ಗೆ ಉತ್ತರವಾಗಿ ಕರ್ನಾಟಕ ಒಂದು ಹಂತದಲ್ಲಿ 166 ರನ್‌ಗೆ 9 ವಿಕೆಟ್ ಕಳೆದುಕೊಂಡಿತ್ತು. ಆದರೆ ವಿನಯ್ ಕುಮಾರ್ ಹಾಗೂ ರೋನಿತ್ ಮೋರೆ ಕೊನೆಯ ವಿಕೆಟ್ ಜತೆಯಾಟದಲ್ಲಿ 97 ರನ್ ಗಳಿಸಿ ಕರ್ನಾಟಕಕ್ಕೆ 39 ರನ್ ಮುನ್ನಡೆ ತಂದಿಟ್ಟರು. ಕರ್ನಾಟಕ 263 ರನ್ ಗೆ ಅಲ್ ಔಟ್ ಆಗಿತ್ತು. ಇದು ನಾಯಕನ ಜವಾಬ್ದಾರಿ. 144 ಎಸೆತಗಳನ್ನೆದುರಿಸಿದ ವಿನಯ್ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 83 ರನ್ ಗಳಿಸಿ ತಂಡಕ್ಕೆ ನೆರವಾದರು. ಬೌಲರ್ ರೋನಿತ್ ಮೋರೆ ಅವರನ್ನು ಒಬ್ಬ ಅನುಭವಿ ಆಟಗಾರ ಅಂಥ ಸ್ಥಿತಿಯಲ್ಲಿ ಬಳಸಿಕೊಂಡಿದ್ದು ಕ್ರಿಕೆಟ್ ಅಂಗಣದಲ್ಲಿ ಕಂಡು ಬಂದ ಅಚ್ಚರಿ. ಮೋರೆ 56 ಎಸೆತಗಳನ್ನೆದುರಿಸಿ ಗಳಿಸಿರುವ 10 ರನ್ ನಿಜವಾಗಿಯೂ ಶತಕದಷ್ಟೇ ಮೌಲ್ಯಯುತವಾದದ್ದು.
ವಿನಯ್ ಕುಮಾರ್ ಅವರ ಬದ್ಧತೆ ದೇಶೀಯ ಕ್ರಿಕೆಟ್‌ನಲ್ಲಿ ಕಾಣಸಿಗುವುದು ಅಪೂರ್ವ. ನಾಯಕತ್ವ ಕಳೆದುಕೊಂಡರೂ ಅವರ ಆಟದಲ್ಲಿ ಆ ಬೇಸರ ಕಾಣಲಿಲ್ಲ. ಕಳೆದ ಮೂರು ಪಂದ್ಯಗಳಲ್ಲಿ ಸತತ ಅರ್ಧ ಶತಕ ಗಳಿಸುತ್ತಿದ್ದಾರೆ. ಅದರಲ್ಲಿ ಎರಡು ಬಾರಿ ಅಜೇಯ ಹಾಗೂ ಶತಕದ ಅಂಚು ತಲುಪಿದ್ದಾರೆ.
ದೋಣಿಯನ್ನು ಯಾರೂ ನಡೆಸಬಹುದು, ಆದರೆ ದಡ ಸೇರುವಾಗ ಚುಕ್ಕಾಣಿಯ ಅನುಭವ ಗೊತ್ತಿರಲೇಬೇಕು. ಅಂಥ ಸಮರ್ಥ ನಾಯಕ ವಿನಯ್. ಈ ಬಾರಿಯ ರಣಜಿ ಪಂದ್ಯಗಳನ್ನಾಡುತ್ತಿರುವ ತಂಡಗಳನ್ನು ಗಮನಿಸಿದಾಗ ಕರ್ನಾಟಕ ಮಾಡಿದಷ್ಟು ಆಟಗಾರರ ಬದಲಾವಣೆಯನ್ನು ಬೇರೆ ಯಾವುದೇ ತಂಡ ಮಾಡಿರಲಿಲ್ಲ. ಸೋಲು ಗೆಲುವು ಆಟದಲ್ಲಿ ಇದ್ದದ್ದೇ. ಆದರೆ ಯುವಕರಿಗೆ ಅವಕಾಶ ಎಂದು ಹೇಳಿ, ತಂಡದಲ್ಲಿ ನಿರಂತರ ಪ್ರಯೋಗ ಮಾಡುವುದು ಇಂಥ ಪರಿಸ್ಥಿತಿಯಲ್ಲಿ ಉತ್ತಮವಾದುದಲ್ಲ.
ನಾಯಕನಾದವನಿಗೆ ತಂಡದ ಆಟಗಾರರೊಂದಿಗೆ ಹೊಂದಾಣಿಕೆ ಅಗತ್ಯವಿರುತ್ತದೆ. ತಾನೊಬ್ಬ ಆಡಿಕೊಂಡು ಹೋದರೆ ಸಾಲದು. ಸಮಗ್ರವಾಗಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಇರಬೇಕು. ಅನುಭವವೆಂದರೆ ಕೇವಲ ವಯಸ್ಸಲ್ಲ, ಅಲ್ಲಿ ಪರಿಣತಿ ಇರಬೇಕು. ಪ್ರತಿಯೊಬ್ಬ ಆಟಗಾರನ ಶಕ್ತಿ ಸಾಮರ್ಥ್ಯವನ್ನು ಅರಿತಿರಬೇಕು. ವಿನಯ್ ಅವರಲ್ಲಿ ಅಂಥ ಶಕ್ತಿ, ಅನುಭವ ಇದೆ. ಕರ್ನಾಟಕ ಹಾಗೂ ರಾಜಸ್ಥಾನ ನಡುವಿನ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸುವವರು ರೋಹನ್ ಗವಾಸ್ಕರ್ ಅವರು ವಿನಯ್ ಬಗ್ಗೆ ಹೇಳಿದ ಮಾತುಗಳು, ಅವರ ಬಗ್ಗೆ ನೀಡಿದ ಅಂಕಿ ಅಂಶಗಳನ್ನು ಗಮನಿಸಿದಾಗ ದಾವಣಗೆರೆ ಎಕ್ಸ್‌ಪ್ರೆಸ್ ನಿಜವಾದ ನಾಯಕ ಎಂಬುದು ಸ್ಪಷ್ಟವಾಗುತ್ತದೆ.

Related Articles