Friday, October 4, 2024

ಕಾಲು ಕಳೆದುಕೊಂಡ ಕುಸ್ತಿ ಪಟು ಜಾವೆಲಿನ್‌ಲ್ಲಿ ವಿಶ್ವದಾಖಲೆ ಬರೆದ!

ಕುಸ್ತಿಪಟು ಆಗಬೇಕೆಂದು ಕನಸು ಕಂಡ ಆ ಯುವಕ ಒಂದು ಕಾಲು ಕಳೆದುಕೊಂಡರೂ ಇಂದು ಜಗತ್ತು ಆತನನ್ನು ಹುಬ್ಬೇರಿಸಿ ನೋಡುತ್ತಿದೆ. ಜಾವೆಲಿನ್‌ ಎಸೆತದಲ್ಲಿ ಐದು ಬಾರಿ ವಿಶ್ವದಾಖಲೆ ಬರೆದ ವಿಶೇ಼ಷ ಚೇತನ ಸುಮಿತ್‌ ಅಂತಿಲ್‌ ಈ ಬಾರಿಯ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ Sumit Antil at Asian Para Games Hangzhou ಭಾರತದ ಪರ ಚಿನ್ನ ಗೆಲ್ಲುವ ಫೇವರಿಟ್‌.

ಸೋನಿಪತ್‌ ಎಂದರೆ ಅದು ಕುಸ್ತಿಯ ಕಣಜ. ಹದಿನಾರರ ಹರೆಯದ ಸುಮಿತ್‌ ಸಂಜೆ ಅಭ್ಯಾಸ ಮುಗಿಸಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿರುವಾಗ ಲಾರಿ ಡಿಕ್ಕಿಯಾಗಿ ಒಂದು ಕಾಲನ್ನು ಕಳೆದುಕೊಳ್ಳಬೇಕಾಯಿತು. ಇಲ್ಲಿಗೆ ತನ್ನ ಬದುಕೇ ಮುಗಿಯಿತು ಅಂದುಕೊಂಡ ಸುಮಿತ್‌ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಎಲ್ಲರೂ ಮಲಗಿದ ನಂತರ ಒಂಟಿಯಾಗಿ ಮನೆಯ ಹತ್ತಿರದಲ್ಲಿ ತಿರುಗಾಡುತ್ತಿದ್ದ, ಗೆಳೆಯರಿಂದ ದೂರ ಇರಲು ಯತ್ನಿಸಿದ. ಖಿನ್ನತೆಗೆ ಒಳಗಾದ, ಬದುಕೇ ಬೇಡ ಅನಿಸುವ ಹಂತ ತಲುಪಿದ. ಆದರೆ ತನಗೆ ತಾನೇ ಸಮಾಧಾನ ಮಾಡಿಕೊಂಡು ವಾಸ್ತವಕ್ಕೆ ಹೊಂದಿಕೊಂಡ.

ಡೆಲ್ಲಿ ವಿಶ್ವವಿದ್ಯಾನಿಲಯದಲ್ಲಿ ಬಿಕಾಂ ಓದಲು ಬಂದಾಗ ಪ್ಯಾರಾಲಿಂಪಿಕ್ಸ್‌ ಗೇಮ್ಸ್‌ ಬಗ್ಗೆ ತಿಳಿದುಕೊಂಡ. ಸುಮಿತ್‌ಗೆ ಕಾಲಿಲ್ಲ ಎಂಬುದು ಕಾಲೇಜಿನಲ್ಲಿ ಅನೇಕರಿಗೆ ಗೊತ್ತೇ ಇರಲಿಲ್ಲ. ಜಾವೆಲಿನ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಏಷ್ಯನ್‌ ಪ್ಯಾರಾ ಗೇಮ್ಸ್‌ಗೆ ಆಯ್ಕೆಯಾದ ನಂತರ ಎಲ್ಲರಿಗೂ ಗೊತ್ತಾಯಿತು ಸುಮಿತ್‌ಗೆ ಒಂದು ಕಾಲಿಲ್ಲ ಎಂದು. ಎಫ್‌64 ವಿಭಾಗದಲ್ಲಿ ಜಾವೆಲಿನ್‌ ಎಸೆಯುತ್ತಿದ್ದ ಸುಮಿತ್‌ ಅಂತಿಲ್‌ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದರು. ನಂತರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 66.95, 68.08, 68.55 ಹೀಗೆ ತನ್ನದೇ ವಿಶ್ವದಾಖಲೆಯನ್ನು ಒಂದೇ ಕೂಟದಲ್ಲಿ ಮುರಿದು ಚಿನ್ನ ಗೆದ್ದಿರುವುದು ವಿಶೇಷ.

ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸುಮಿತ್‌ ಮತ್ತೆ ತನ್ನ ದಾಖಲೆಯನ್ನು ತಾನೇ ಮುರಿದು ಚಿನ್ನ ಗೆದ್ದರು. ಪ್ಯಾರಾಲಿಂಪಿಕ್ಸ್‌ ನಂತರ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 70.17 ಮೀ. ದೂರಕ್ಕೆ ಎಸೆದು ಹೊಸ ದಾಖಲೆ ಬರೆದಿದ್ದರು. ಆದರೆ ಪ್ಯಾರಿಸ್‌ನಲ್ಲಿ 70.83 ಮೀ. ದೂರಕ್ಕೆ ಎಸೆದು ತನ್ನದೆ ಎಲ್ಲ ದಾಖಲೆಗಳನ್ನು ಮುರಿದು ಪ್ಯಾರಾ ಜಾವೆಲಿನ್‌ ಜಗತ್ತಿಗೆ ಸಾಮ್ರಾಟರೆನಿಸಿದರು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದ ನೀರಜ್‌ ಚೋಪ್ರಾ ಅವರೊಂದಿಗೂ ಸ್ಪರ್ಧಿಸಿದ್ದ ಸುಮಿತ್‌ಗೆ 70ರ ಗುರಿ ತಲುಪಲು ಸಾಧ್ಯವಾಗಲಿಲ್ಲ.ಚೀನಾದ ಹಾಂಗ್‌ಜೌನಲ್ಲಿ ಇದೇ ತಿಂಗಳ 22 ರಿಂದ 28 ರ ವರೆಗೆ ಏಷ್ಯನ್‌ ಪ್ಯಾರಾ ಗೇಮ್ಸ್‌ ನಡೆಯಲಿದೆ ಈಗಾಗಲೇ ಚೀನಾ ತಲುಪಿರುವ ಸುಮಿತ್‌ ಅಂತಿಲ್‌ ಈ ಬಾರಿ ಚಿನ್ನ ಗೆಲ್ಲುವುದು ಮಾತ್ರವಲ್ಲ ಮತ್ತೊಮ್ಮೆ ತನ್ನ ದಾಖಲೆಯನ್ನು ತಾನೇ ಮುರಿಯುವ ಸಾಧ್ಯತೆ ಇದೆ.

Related Articles