Saturday, July 27, 2024

Asian Para Games 2023: ಈ ದೇವರ ಮಕ್ಕಳಿಗೆ ನಿಮ್ಮ ಹಾರೈಕೆ ಇರಲಿ!

ಹೊಸದಿಲ್ಲಿ: ಇದೇ ತಿಂಗಳ 22 ರಿಂದ 28ರ ವರೆಗೆ ಚೀನಾದ ಹಾಂಗ್‌ಜೌನಲ್ಲಿ ನಡೆಯಲಿರುವ ಏಷ್ಯನ್‌ ಪ್ಯಾರಾ ಗೇಮ್ಸ್‌ Asian Para Games ನಲ್ಲಿ ಭಾರತ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸ್ಪರ್ಧಿಗಳನ್ನು (309) ಕಳುಹಿಸುತ್ತಿದೆ.

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಇದೇ ಮೊದಲ ಬಾರಿಗೆ 107 ಪದಕಗಳನ್ನು ಗಳಿಸಿ ಇತಿಹಾಸ ನಿರ್ಮಿಸಿತ್ತು. ಅದೇ ರೀತಿ ಪ್ಯಾರಾಲಿಂಪಿಕ್ಸ್‌ನಲ್ಲೂ ಭಾರತ ಅತಿ ಹೆಚ್ಚು ಪದಕ ಗೆಲ್ಲಲಿ ಎಂಬುದು ಭಾರತೀಯರ ಹಾರೈಕೆ.

ಕೆನಾಯಿಂಗ್‌, ಬ್ಲೈಂಡ್‌ ಫುಟ್ಬಾಲ್‌, ಲಾನ್‌ ಬೌಲ್ಸ್‌, ರೋಯಿಂಗ್‌ ಮತ್ತು ಟೆಕ್ವಾಂಡೋ ಸೇರಿದಂತೆ ಭಾರತ ಒಟ್ಟು 17 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದೆ.

309 ಸ್ಪರ್ಧಿಗಳಲ್ಲಿ 196 ಪುರುಷರು ಹಾಗೂ 113 ಮಹಿಳಾ ಸ್ಪರ್ಧಿಗಳು ಸೇರಿದ್ದಾರೆ. 2020ರ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಅವನಿ ಲೆಖಾರ ಮತ್ತು ಸುಮಿತ್‌ ಅಂತಿಲ್‌ ಪದಕ ಗೆಲ್ಲುವ ಫೇವರಿಟ್‌ಗಳಲ್ಲಿ ಪ್ರಮುಖರು. ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 70.83 ಮೀ. ದೂರಕ್ಕೆ ಜಾವೆಲಿನ್‌ ಎಸೆದು ತನ್ನದೇ ವಿಶ್ವದಾಖಲೆ ಮುರಿದಿರುವ ಸುಮಿತ್‌ ಅಂತಿಲ್‌ ಅವರಿಗೆ ವಿಶ್ವದಲ್ಲಿ ಸರಿಸಾಟಿ ಯಾರೂ ಇಲ್ಲದಂತಾಗಿದೆ.2018ರ ಜಕಾರ್ತಾ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಭಾರತ 15 ಚಿನ್ನ, 24 ಬೆಳ್ಳಿ ಹಾಗೂ 33 ಕಂಚಿನ ಪದಕಗಳೊಂದಿಗೆ ಒಟ್ಟು 72 ಪದಕ ಗೆದ್ದಿತ್ತು.

ಶುಕ್ರವಾರ ದೆಹಲಿಯಲ್ಲಿ ಭಾರತ ತಂಡವನ್ನು ಬೀಳ್ಕೊಡುವ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯ ಅಧ್ಯಕ್ಷೆ ದೀಪಾ ಮಲಿಕ್‌, ಭಾರತ ತಂಡದ ಕೋಚ್‌ ಕರ್ನಾಟಕದ ಸತ್ಯನಾರಾಯಣ ಮೊದಲಾದ ಗಣ್ಯರು ಹಾಜರಿದ್ದರು. “ಪ್ಯಾರಾ ಅಥ್ಲೀಟ್‌ಗಳಿಗೆ ಸರಕಾರ ಕುಟುಂಬದಂತೆ ಹಿಂದೆ ನಿಂತು ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ,” ಎಂದು ಕ್ರೀಡಾ ಸಚಿವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

Related Articles