Thursday, April 25, 2024

ಕೈಯೊಂದು…ಪುನೀತ್‌ ಗೆದ್ದ ಪದಕ ನೂರೊಂದು

ಸೋಮಶೇಖರ್‌ ಪಡುಕರೆ sportsmail

ಹುಟ್ಟಿನಿಂದ ಒಂದೇ ಕೈ ಇದ್ದರೂ, ಸಾಮಾನ್ಯರೊಂದಿಗೆ ಈಜಿ, ಯಶಸ್ಸು ಕಂಡು, ನಂತರ ಪ್ಯಾರಾ ಈಜಿನಲ್ಲಿ  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ರಾಷ್ಟ್ರಪತಿಗಳಿಂದ ವರ್ಷದ ಶ್ರೇಷ್ಠ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪುನೀತ್‌ ನಂದಕುಮಾರ್‌ ಕನ್ನಡಿಗರ ಹೆಮ್ಮೆ.

 

ಭಾರತ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ನಂದಕುಮಾರ್‌ ಅವರ ಕಿರಿಯ ಮಗ ಪುನೀತ್‌ ಅವರಿಗೆ ಈಜಿನ ಬಗ್ಗೆ ಆಸಕ್ತಿ ಹುಟ್ಟಿದ್ದು, ಬೆಂಗಳೂರಿನ ವಿಜಯ ನಗರದಲ್ಲಿರುವ ವಿಜಯನಗರ ಈಜುಕೊಳದಲ್ಲಿ. ಕೇವಲ ಹವ್ಯಾಸಕ್ಕಾಗಿ ಆರಂಭಿಸಿದ ಈಜು ಪುನೀತ್‌ ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿತು. ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿರುವ ಪುನೀತ್‌  ಶಾಲಾ ಕಾಲೇಜುಗಳಲ್ಲಿ ಸಾಮಾನ್ಯರೊಂದಿಗೆ ಸ್ಪರ್ಧಿಸಿ ಐದು, ಆರನೇ ಸ್ಥಾನ ಗಳಿಸುತ್ತಿದ್ದ, ಆ ಸ್ಥಾನಗಳಲ್ಲೇ ತನ್ನ ಪಾಲಿನ ಚಿನ್ನ ಎಂದು ನಂಬಿದ್ದ, ಆದರೆ ಯಾವಾಗ ಅಂತಾರಾಷ್ಟ್ರೀಯ ಈಜುಗಾರ ಶರತ್‌ ಗಾಯಕ್ವಾಡ್‌ ಅವರ ಪರಿಚಯವಾಯಿತೋ ಅಲ್ಲಿಂದ ಪುನಿತ್‌ ಅವರ ಕ್ರೀಡಾಬದುಕಿನ ಹೆಜ್ಜೆಯೂ ಹೊಸ ತಿರುವನ್ನು ಕಂಡಿತು.

ಅಂತಾರಾಷ್ಟ್ರೀಯ ಪದಕ:

ರಾಷ್ಟ್ರೀಯ ಚಾಂಪಿಯನ್ಷಿಪ್‌ಗಳಲ್ಲಿ ಮಿಂಚಿ ಪುನೀತ್‌ ನಂತರ ಎಂಟು ಅಂತಾರಾಷ್ಟ್ರೀಯ ಚಾಂಪಿಯನ್ಷಿಪ್‌ಗಳಲ್ಲಿ ಸ್ಪರ್ಧಿಸಿ 13 ಪದಕಗಳನ್ನು ತನ್ನ ಸಾಧನೆಯ ಪಟ್ಟಿಗೆ ಸೇರಿಸಿಕೊಂಡಿದ್ದಾರೆ. 7 ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್ಷಿಪ್‌ಗಳಲ್ಲಿ ಪಾಲ್ಗೊಂಡು 28 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

2019ರಲ್ಲಿ ಶಾರ್ಜಾದಲ್ಲಿ ನಡೆದ ಐವಾಸ್‌ ಕ್ರೀಡಾ ಕೂಟದಲ್ಲಿ 2 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಸಾಧನೆ ಮಾಡಿದ್ದಾರೆ. ಜಕಾರ್ಥಾದಲ್ಲಿ ನಡೆದ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕದಿಂದ ವಂಚಿತರಾಗಿರುವ ಪುನೀತ್‌ ಮುಂದಿನ ಚೀನಾದಲ್ಲಿ ನಡೆಯಲಿರುವ ಮುಂದಿನ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ, ಅದಕ್ಕಾಗಿ ಅಂತಾರಾಷ್ಟ್ರೀಯ ಈಜುಗಾರ ಶರತ್‌ ಗಾಯಕ್ವಾಡ್‌ ಅವರ ಜೀ ಸ್ವಿಮ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

 

ಪೊಲೆಂಡ್‌ನಲ್ಲಿ ನಡೆದ ವಿಂಟರ್‌ ಪಾಲಿಶ್‌ ಈಜು ಕೂಟದಲ್ಲಿ ಪುನೀತ್‌ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು. ದಕ್ಷಿಣ ಕೊರಿಯಾದಲ್ಲಿ ನಡೆದ ಚಾಂಪಿಯನ್ಷಿಪ್‌ನಲ್ಲಿ ಎರಡು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು. ರಾಜ್ಯಮಟ್ಟದಲ್ಲಿಯೂ ಹಲವಾರು ಪದಕಗಳನ್ನು ಗೆದ್ದಿರುವ ಪುನೀತ್‌ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಪದಕ ಗೆದ್ದು, ಪ್ಯಾರೀಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಮಹದಾಸೆ ಹೊಂದಿದ್ದಾರೆ.

ರಾಜ್ಯ ಸರಕಾರದಿಂದ ಪ್ರಶಸ್ತಿ:

ಪುನೀತ್‌ ಅವರ ಸಾಧನೆಯನ್ನು ಗುರುತಿಸಿರುವ ರಾಜ್ಯ ಸರಕಾರ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಅದೇ ರೀತಿ ಕೆಂಪೇಗೌಡ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕರ್ನಾಟಕ ಭೂಷಣ ಪ್ರಶಸ್ತಿಯೂ ಪುನೀತ್‌ ಅವರನ್ನು ಅರಸಿಕೊಂಡು ಬಂತು.

ರಾಷ್ಟ್ರಪತಿಗಳಿಂದ ಗೌರವ:

ಪ್ಯಾರಾ ಈಜಿನಲ್ಲಿ ಇದುವರೆಗೂ ಮಾಡಿರುವ ಸಾಧನೆಗೆ ಕೇಂದ್ರ ಸರಕಾರವು 2021ನೇ ಸಾಲಿನ ಶ್ರೇಷ್ಠ ಪ್ಯಾರಾ ಕ್ರೀಡಾಪಟು ಪ್ರಶಸ್ತಿ ನೀಡಿ ಗೌರವಿಸಿದೆ. ಡಿಸೆಂಬರ್‌ 3ರಂದು ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವರು ಪುನೀತ್‌ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು.

ಸ್ಫೂರ್ತಿಯ ಸೆಲೆ:

ಪುನೀತ್‌ ಅವರ ಕ್ರೀಡಾ ಸಾಧನೆ ಆಸಕ್ತರಲ್ಲೂ ಶಕ್ತಿ ತುಂಬುವಂಥದ್ದು, ಇದರಿಂದಾಗಿ ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬುವ ಉದ್ದೇಶದಿಂದ ಅವರನ್ನುದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Related Articles