ಭಾರತ ಹಾಕಿ ತಂಡಕ್ಕೆ ಗ್ರಹಾಂ ರೀಡ್ ಕೋಚ್
ಸ್ಪೋರ್ಟ್ಸ್ ಮೇಲ್ ವರದಿ
‘ಭಾರತ ಪುರುಷರ ಹಾಕಿ ತಂಡಕ್ಕೆ ಆಸ್ಟ್ರೇಲಿಯಾದ ಗ್ರಹಾಂ ರೀಡ್ ಅವರನ್ನು ಪ್ರಧಾನ ಕೋಚ್ ಆಗಿ ಹಾಕಿ ಇಂಡಿಯಾ ನೇಮಿಸಿದೆ. 54 ವರ್ಷ ಹರೆಯದ ಮಾಜಿ ಒಲಿಂಪಿಯನ್ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾ ಹಾಕಿ ತಂಡದಲ್ಲಿ ಮಿಡ್‌ಫೀಲ್ಡರ್ ಹಾಗೂ ಡಿಫೆಂಡರ್ ಆಗಿದ್ದ ರೀಡ್, 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು. 1984 ಮತ್ತು 1985ರಲ್ಲಿ ಸತತ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದಲ್ಲೂ ಆಡಿದ್ದರು. 130 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ರೀಡ್, 2009ರಲ್ಲಿ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಆಗುವ ಮೂಲಕ ತರಬೇತಿ ಕ್ಷೇತ್ರಕ್ಕೆ ಕಾಲಿಟ್ಟರು. ಈ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರಧಾನ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದ ರೀಡ್ ಅವರ ತರಬೇತಿಯಲ್ಲಿ ತಂಡ 2012ರಲ್ಲಿ ಸತತ ಐದನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅವರ ತರಬೇತಿಯಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವದ ನಂ.1 ತಂಡವಾಗಿಯೂ ಮೂಡಿ ಬಂದಿತ್ತು. ಅದೇ ರೀತಿ ಆಸ್ಟ್ರೇಲಿಯಾ ತಂಡ ವಿಶ್ವ ಲೀಗ್ ಫೈನಲ್‌ನಲ್ಲೂ ಜಯ ಗಳಿಸಿತ್ತು. 2017 ರಲ್ಲಿ ಆಮ್‌ಸ್ಟರ್‌ಡ್ಯಾಮ್ ಕ್ಲಬ್‌ನ ಕೋಚ್ ಆಗಿ ಕೆಲಸ ಮಾಡಿದ್ದ ರೀಡ್, ನಂತರ ನೆದರ್ಲೆಂಡ್ಸ್ ತಂಡದ ಕೋಚ್ ಆಗಿದ್ದರು. ಇವರ ತರಬೇತಿಯಲ್ಲಿ ನೆದರ್ಲೆಂಡ್ಸ್ 2018ರ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿತ್ತು.
‘‘ಭಾರತ ಹಾಕಿ ತಂಡದ ಕೋಚ್ ಆಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಇದು ನನ್ನ ಪಾಲಿನ ಗೌರವ, ಹಾಕಿ ಇತಿಹಾಸವನ್ನು ಗಮನಿಸಿದಾಗ ‘ಭಾರತ ತಂಡಕ್ಕೆ ಹೋಲಿಕೆಯಾಗುವ ತಂಡವೇ ಇಲ್ಲ. ಎದುರಾಳಿ ತಂಡದಲ್ಲಿದ್ದರೂ ‘ಭಾರತ ತಂಡದ ಆಟವನ್ನು ನೋಡಿ ಖುಷಿ ಪಟ್ಟಿದ್ದೇನೆ,‘ ಎಂದು ರೀಡ್ ಹೇಳಿದ್ದಾರೆ.