Friday, April 19, 2024

ಕರ್ನಾಟಕದ ದಾನೇಶ್ವರಿ ವೇಗದ ಓಟಗಾರ್ತಿ

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕದ ಎ.ಟಿ. ದಾನೇಶ್ವರಿ ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 100 ಹಾಗೂ 200 ಮೀ. ಓಟದಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡಾಕೂಟದ ಆರನೇ ದಿನದಲ್ಲಿ ಕರ್ನಾಟಕ 19 ಚಿನ್ನ, 20 ಬೆಳ್ಳಿ ಹಾಗೂ 11 ಕಂಚಿನ ಪದಕಗಳೊಂದಿಗೆ ಒಟ್ಟು 50 ಪದಕಗಳ ಸಾಧನೆ ಮಾಡಿ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

21 ವರ್ಷದೊಳಗಿನವರ ವಿಭಾಗದ 100 ಮೀ. ಓಟದಲ್ಲಿ ಚಿನ್ನ ಗೆದ್ದು ವೇಗದ ಓಟಗಾರ್ತಿ ಎಂದೆನಿಸಿದ ದಾನೇಶ್ವರಿ 200 ಮೀ. ಓಟದಲ್ಲಿ 24.58 ಸೆಕೆಂಡುಗಳಲ್ಲಿ ಗುರಿ ತಲುಪಿ ಡಬಲ್ ಚಿನ್ನದ ಸಾಧನೆ ಮಾಡಿದರು.
21ವರ್ಷದೊಳಗಿನ ಬಾಲಕಿಯರ ಹೈಜಂಪ್‌ನಲ್ಲಿ ಕುತೂಹಲದ ಫಲಿತಾಂಶ ಕಂಡು ಬಂತು. ಕರ್ನಾಟಕದ ಅಭಿನಯ ಶೆಟ್ಟಿ, ಎಸ್.ಬಿ ಸುಪ್ರಿಯಾ ಹಾಗೂ ಹರಿಯಾಣದ ರುಬೀನಾ 1.79 ಮೀ. ಎತ್ತರಕ್ಕೆ ಜಿಗಿದು ಸಮಬಲ ಸಾಧಿಸಿದರು. ಆದರೆ ಸುಪ್ರಿಯಾ ಎರಡು ಬಾರಿ ಮೊದಲ ಯತ್ನದಲ್ಲೇ ಯಶಸ್ಸು ಕಂಡ ಕಾರಣ ಚಿನ್ನಕ್ಕೆ ಕೊರಳೊಡ್ಡಿದರು.
21 ವರ್ಷ ವಯೋಮಿತಿಯ ಬಾಲಕಿಯರ ವೇಟ್‌ಲಿಫ್ಟಿಂಗ್‌ನಲ್ಲಿ ಕರ್ನಾಟಕದ ಅಕ್ಷತಾ ಹಾಗೂ ಲಾವಣ್ಯ ರೈ ಕರ್ನಾಟಕಕ್ಕೆ ಅನುಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ತಂದುಕೊಟ್ಟರು. ಅಕ್ಷತಾ 176 ಕೆಜಿ ಭಾರವೆತ್ತಿ ಚಿನ್ನ ತಮ್ಮದಾಗಿಸಿಕೊಂಡರು. ಲಾವಣ್ಯ 174 ಕೆಜಿ ಭಾರವೆತ್ತಿದರು.
ಈಜಿನಲ್ಲಿ 200 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ ಹಾಗೂ ಶಿವ ಶ್ರೀಧರ್ ಅನುಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯನ್ನು ತಮ್ಮದಾಗಿಸಿಕೊಂಡರು. 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲೂ ರಾಜ್ಯದ ಚಂದ್ರು ಪಿ ಬೆಳ್ಳಿ ಗೆದ್ದರು. 800 ಮೀ. ಫ್ರೀಸ್ಟೈಲ್ನಲ್ಲಿ ಕರ್ನಾಟಕದ ಸಂಜಯ್ ಜಯಕೃಷ್ಣನ್ ಬೆಳ್ಳಿಯ ಸಾಧನೆ ಮಾಡಿದರು.
17 ವರ್ಷ ವಯೋಮಿತಿಯ ಬಾಲಕಿಯರ 200 ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ  ಕರ್ನಾಟಕದ ಸುವನಾ ಭಾಸ್ಕರ್ ಹಾಗೂ ನೀನಾ ವೆಂಕಟೇಶ್ ಅನುಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದರು. 400 ಮೀ. ಮೆಡ್ಲೆ ರಿಲೇಯಲ್ಲಿಯೂ ರಾಜ್ಯ ತಂಡ ಚಿನ್ನ ಗೆದ್ದಿತು.

Related Articles