ಕಷ್ಟಗಳ ಭಾರವೆತ್ತಿ ಕಾಮನ್‌ವೆಲ್ತ್‌ಗೆ ಬನ್ನೂರಿನ ಉಷಾ
ಸೋಮಶೇಖರ್ ಪಡುಕರೆ, ಬೆಂಗಳೂರು
ಕ್ರೀಡಾಪಟುಗಳು ಸಾಧನೆ ಮಾಡಿದ ನಂತರ ಬಹುಮಾನ ಪ್ರಕಟಿಸುತ್ತಾರೆ, ಸಾಧಕರ ಫೋಟೋ ಹಾಕಿ ತಮ್ಮ ರುಂಡಗಳಿಂದ ಕೂಡಿದ ಬ್ಯಾನರ್ ಕಟ್ಟುತ್ತಾರೆ, ಜೊತೆಯಲ್ಲಿ ನಿಂತು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ, ಗಣ್ಯರು ಮನೆಗೇ ಬಂದು ಶುಭ ಕೋರುತ್ತಾರೆ….ಆದರೆ ಸಾಧಕರು ಆ ಹಂತ ತಲಪುವ ಹಾದಿಯಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಇವರು ಮೌನವಾಗಿರುತ್ತಾರೆ. ಹೀಗೆ ಉಳ್ಳವರ ಮೌನದ ನಡುವೆ, ಕಷ್ಟಗಳ ಭಾರವೆತ್ತಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದ ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಅರಕಲಗೂಡು ತಾಲೂಕಿನ ಬನ್ನೂರು ಗ್ರಾಮದ ಕೃಷಿಕರೊಬ್ಬರ ಮಗಳ ಕತೆ ಇದು.
ಸಿಂಗಾಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 95 ಕೆಜಿ ಸ್ನ್ಯಾಚ್, 114 ಕೆಜಿ ಕ್ಲೀನ್ ಮತ್ತು ಜೆರ್ಕ್ ಭಾರವೆತ್ತಿದ ಬನ್ನೂರಿನ ಉಷಾ ಬಿ.ಎನ್. ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಪುಟ್ಟ ಹಳ್ಳಿಯಿಂದ ಬಂದ ಉಷಾ ಅವರ ಸಾಧನೆ ಸುದ್ದಿಯಾಗಲೇ ಇಲ್ಲ.
ಸೋಮವಾರ sportsmail ಜತೆ ಮಾತನಾಡಿದ ಉಷಾ, “ನನ್ನ ವೇಟ್‌ಲಿಫ್ಟಿಂಗ್ ವೆಚ್ಚಕ್ಕಾಗಿ ಬ್ಯಾಂಕಿನಲ್ಲಿ 3 ಲಕ್ಷ ರೂ. ವೈಯಕ್ತಿಕ ಸಾಲ ತೆಗೆದುಕೊಂಡೆ. ಸಿಂಗಾಪುರದಲ್ಲಿ ಭಾಗವಹಿಸಿದೆ, ಪದಕ ಗೆದ್ದು ಕಾಮನ್‌ವೆಲ್ತ್‌ಗೆ ಆಯ್ಕೆಯಾದ ನಂತರ ನಮ್ಮ ಖರ್ಚನ್ನು ನೋಡಿಕೊಳ್ಳುತ್ತಾರೆ. ಆದರೆ ಅಲ್ಲಿಯ ವರೆಗೆ ನಾವು ಪಡುವ ಕಷ್ಟಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಉಳ್ಳವರ ಮನೆ ಹಾದಿ ತುಳಿದು ಸಾಕಾಯಿತು. ಬರುವ 25 ಸಾವಿರ ರೂ. ಸಂಬಳದಲ್ಲಿ 15 ಸಾವಿರ ಸಾಲದ ಕಂತಿಗೆ ಹೋದರೆ ಮನೆ ಮತ್ತು ನನ್ನ ಖರ್ಚು ನಿಭಾಯಿಸುವುದು ಹೇಗೆ? ಉಳ್ಳವರು ಭರವಸೆ ನೀಡಿ, ಅಗತ್ಯ ಬಿದ್ದಾಗ ಕರೆ ಮಾಡಿದರೆ ಅವರು ಬಹಳ ಬ್ಯುಸಿಯಾಗಿದ್ದಾರೆ ಎಂಬ ಪ್ರತಿಕ್ರಿಯೆ ಬರುತ್ತದೆ,” ಎಂದು ಬಹಳ ಬೇಸರದಿಂದ ನುಡಿದರು.
ಹಾಸನ ಜಿಲ್ಲೆಯಿಂದ ಈ ಬಾರಿ ಕಾಮನ್‌ವೆಲ್ತ್ ಕ್ರೀಡಾ ಕೂಟಕ್ಕೆ ಇಬ್ಬರು ಕ್ರೀಡಾಪಟುಗಳು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಬೇಲೂರಿನ ಮನು ಡಿ.ಪಿ. ಜಾವೆಲಿನ್ ಎಸೆತದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಇನ್ನೋರ್ವ ಕ್ರೀಡಾ ಸಾಧಕ.
ಡಿಸ್ಕಸ್, ಶಾಟ್‌ಪಟ್‌ನಿಂದ ವೇಟ್‌ಲಿಫ್ಟ್‌ರ್:
ಅರಕಲಗೂಡು ತಾಲೂಕಿನ ಕೃಷಿಕ ದಂಪತಿ ನಟೇಶ್ ಕುಮಾರ್ ಹಾಗೂ ವನಜಾಕ್ಷಿಯವರ ಪುತ್ರಿಯಾಗಿರುವ ಉಷಾ ಆರಂಭದಲ್ಲಿ ಶಾಟ್‌ಪಟ್ ಹಾಗೂ ಡಿಸ್ಕಸ್ ಎಸೆತದಲ್ಲಿ ರಾಜ್ಯ ಮಟ್ಟದಲ್ಲಿ ಪದಕ ಗೆದ್ದವರು. ನಂತರ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿದರು. ಆದರೆ ಅಲ್ಲಿ ಪ್ರವೇಶಾತಿ ಸಿಗುವುದರೊಳಗೆ ಡಿಸ್ಕಸ್ ಮತ್ತು ಶಾಟ್‌ಪಟ್‌ನ ಕೋಟಾ ಮುಗಿದಿತ್ತು. ಇದರಿಂದಾಗಿ ಒಂದು ವರ್ಷ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಬಳಿಕ ವೇಟ್‌ಲಿಫ್ಟಿಂಗ್ ಕೋಚ್ ಪ್ರಮೋದ್ ಕುಮಾರ್ ಅವರು ಉಷಾಗೆ ವೇಟ್‌ಲಿಫ್ಟಿಂಗ್‌ನಲ್ಲಿ ಪಾಲ್ಗೊಳ್ಳವುಂತೆ ಸಲಹೆ ನೀಡಿದರು. ಅದರಂತೆ ಉಷಾ ವೇಟ್‌ಲಿಫ್ಟಿಂಗ್ ಮತ್ತು ಪವರ್‌ಲಿಫ್ಟಿಂಗ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಸಾಧನೆ ಮಾಡಿದರು.
ಬಳಿಕ ರಾಷ್ಟ್ರಮಟ್ಟದಲ್ಲಿ 2 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಸಾಧನೆ ಮಾಡಿ ರೇಲ್ವೆಯಲ್ಲಿ ಉದ್ಯೋಗ ಗಳಿಸಿದರು. ರೇಲ್ವೆ ಕ್ರೀಡಾ ಉತ್ತೇಜನ ಮಂಡಳಿಯಲ್ಲೂ ಉತ್ತಮ ಸಾಧನೆ ಮಾಡಿರುವ ಉಷಾ ಅವರಿಗೆ ಕಾಮನ್‌ವೆಲ್ತ್‌ನಲ್ಲಿ ಪದಕ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿದೆ.
“ಯಾರಲ್ಲೂ ನೆರವು ಕೇಳಬೇಡ”
ಉಷಾ ಅವರ ತಂದೆಗೂ ಒಳ್ಳವರ ಮನೆ ಬಾಗಿಲಲ್ಲಿ ನಿಂತು ಸಾಕಾಯಿತು. ಬಣ್ಣದ ಮಾತಿನ ಆಶ್ವಾಸನೆಗಳು ಸಿಕ್ಕೀತೇ ಹೊರತು ನೆರವು ಸಿಗಲಿಲ್ಲ. ಇದರಿಂದ ಬೇಸರಗೊಂಡ ಕೃಷಿಕ ನಟೇಶ್, ಯಾರಲ್ಲಿಯೂ ನೆರವು ಕೇಳುವುದು ಬೇಡ, ಹೊಲ ಮಾರಿಯಾದರೂ ಮಗಳ ಕ್ರೀಡಾ ಯಶಸ್ಸಿಗೆ ನೆರವು ನೀಡುವುದಾಗಿ ಆತ್ಮವಿಶ್ವಾಸ ಮೂಡಿಸಿದರು.
“ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತೆಗೆ ಸಾಕಷ್ಟು ಹಣ ಬೇಕಾಗುತ್ತದೆ. ನ್ಯೂಟ್ರಿಷನ್‌ಗೆ ಹೆಚ್ಚು ವೆಚ್ಚವಾಗುತ್ತದೆ. ಕಂಡವರಲ್ಲಿ ಕೈ ಚಾಚುವುದರಿಂದ ಬೇಸತ್ತ ಅಪ್ಪ, 1 ಒಂದು ಲಕ್ಷ ರೂ. ಸಾಲ ಮಾಡಿ ನೀಡಿದ್ದಾರೆ. ಸರಕಾರ ಆಯ್ಕೆಯಾದ ನಂತರ ವೆಚ್ಚ ನೋಡಿಕೊಳ್ಳುತ್ತದೆ, ಅದೂ ಕ್ಯಾಂಪ್‌ಗೆ ಸೇರಿದ ನಂತರ. ಖೇಲೋ ಇಂಡಿಯಾ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ ಮುಗಿದ ನಂತರ ಇಂಗ್ಲೆಂಡ್‌ಗೆ ಇದೇ ತಿಂಗಳ 24ರಂದು ಪ್ರಯಾಣ,” ಎಂದು ಉಷಾ ಹೇಳಿದರು.