Thursday, April 25, 2024

ಕಾಮನ್‌ವೆಲ್ತ್‌ ಗೇಮ್ಸ್‌ಗೆ ಬಾಗಲಕೋಟೆಯ ಸೈಕ್ಲಿಸ್ಟ್‌ ಕೆಂಗಲಗುತ್ತಿ ವೆಂಕಪ್ಪ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಕ್ರೀಡಾ ಹಾಸ್ಟೆಲ್‌ನಲ್ಲಿ ಬೆಳಗಿದ ಪ್ರತಿಭೆ ಬಾಗಲಕೋಟೆಯ ತುಳಸಿಗೆರೆಯ ಕೆಂಗಲಗುತ್ತಿ ವೆಂಕಪ್ಪ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಸೈಕ್ಲಿಸ್ಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಷ್ಯನ್‌ ಜೂನಿಯರ್‌ ಹಾಗೂ ಸೀನಿಯರ್‌ ಟ್ರ್ಯಾಕ್‌ ಸೈಕ್ಲಿಂಗ್‌ನಲ್ಲಿ ಪದಕ ಗೆದ್ದಿರುವ ಏಕಲವ್ಯ ಪ್ರಶಸ್ತಿ ವಿಜೇತ ವೆಂಕಪ್ಪ ಕಳೆದ 12 ವರ್ಷಗಳಿಂದ ಸೈಕ್ಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಮೊದಲ ಬಾರಿಗೆ ಟ್ರ್ಯಾಕ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಬರ್ಮಿಂಗ್‌ಹ್ಯಾಮ್‌ಗೆ ಪ್ರಯಾಣ ಬೆಳೆಸುವ ಮುನ್ನ sportsmail ಜತೆ ಮಾತನಾಡಿದ ಕೆಂಗಲಗುತ್ತಿ ವೆಂಕಪ್ಪ, “ನಿರಂತರ ಶ್ರಮ ಫಲ ಕೊಟ್ಟಿದೆ, ಚಿಕ್ಕಂದಿನಲ್ಲಿ ನನಗೆ ಸೈಕ್ಲಿಂಗ್‌ನಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದ ಕ್ರೀಡಾ ಇಲಾಖೆಯ ಸೈಕ್ಲಿಂಗ್‌ ಕೋಚ್‌ ಅನಿತಾ ನಿಂಬರ್ಗಿ ಅವರಿಗೆ ನಾನು ಚಿರಋಣಿಯಾಗಿದ್ದೇನೆ. ಆರಂಭದಲ್ಲಿ ನನಗೆ ಸೈಕಲ್‌ ನೀಡಿ ಯಶಸ್ಸಿಗೆ ಕಾರಣರಾದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ನಾನು ಸದಾ ಸ್ಮರಿಸುವೆ. ರೈಲ್ವೆ ಹಾಗೂ ಭಾರತೀಯ ಸೈಕ್ಲಿಂಗ್‌ ಫೆಡರೇಷನ್‌ ನನ್ನ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ,” ಎಂದು ಹೇಳಿದರು.

ಜೂನಿಯರ್‌ ವಿಭಾಗದಲ್ಲಿ ಯಶಸ್ಸು: ಬಾಗಲಕೋಟೆ ಸೈಕ್ಲಿಂಗ್‌ ಕಣಜ ಇದ್ದಂತೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದವರಲ್ಲಿ ಇಲ್ಲಿನ ಸೈಕ್ಲಿಸ್ಟ್‌ಗಳದ್ದೇ ಸಿಂಹಪಾಲು. ವೆಂಕಪ್ಪ ಅವರು, 2019ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಜೂನಿಯರ್‌ ಏಷ್ಯನ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು. ಅವರ ಈ ಸಾಧನೆಗಾಗಿ ಕರ್ನಾಟಕ ಸರಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ರೈಲ್ವೆಯಲ್ಲಿ ಉದ್ಯೋಗವೂ ಸಿಕ್ಕಿತು. 2015ರಿಂದ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದ ವೆಂಕಪ್ಪ, ಕಳೆದ ವಾರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಸೈಕ್ಲಿಂಗ್‌ ವೆಲೋಡ್ರೋಮ್‌ನಲ್ಲಿ ನಡೆದ ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಅವರ ಈ ಯಶಸ್ಸು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ನೀಡಿತು.

ಕೃಷಿಕರಾದ ಶಿವಪ್ಪ ಹಾಗೂ ಬಾಗವ್ವ ದಂಪತಿಯ ಮಗನಾಗಿರುವ ವೆಂಕಪ್ಪ ಅವರು ಭಾರತದಲ್ಲಿ ಈಗ ಕ್ರೀಡೆಗೆ ಸಿಗುತ್ತಿರುವ ಪ್ರೋತ್ಸಾಹದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ, “ಆರಂಭದಲ್ಲಿ ನಮಗೆ ಉತ್ತಮ ಸೈಕಲ್‌ ಹೊಂದಲು ಬಹಳ ಕಷ್ಟವಾಗುತ್ತಿತ್ತು. ಆದರೆ ಇರುವ ಮೂಲಭೂತ ಸೌಕರ್ಯದಲ್ಲೇ ನಾವು ಮಾಡಿರುವ ಯಶಸ್ಸು ಕಂಡು ಕೇಂದ್ರ ಕ್ರೀಡಾ ಇಲಾಖೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ. ಇದರಿಂದಾಗಿ ಏಷ್ಯಾ ಮಟ್ಟದಲ್ಲಿ ಭಾರತದ ಸೈಕ್ಲಿಸ್ಟ್‌ಗಳು ಉತ್ತಮ ಪ್ರದರ್ಶನ ತೋರುವಂತಾಯಿತು. ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಉತ್ತಮ ಹೋರಾಟ ನೀಡುತ್ತೇನೆಂಬ ಆತ್ಮವಿಶ್ವಾಸವಿದೆ,” ಎಂದರು.

ಕರ್ನಾಟಕ ಸೈಕ್ಲಿಂಗ್‌ ಸಂಸ್ಥೆ ಅಭಿನಂದನೆ: ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಬಾಕಲಕೋಟೆಯ ಕೆಂಗಲಗುತ್ತಿ ವೆಂಕಪ್ಪ ಅವರ ಯಶಸ್ಸಿಗೆ ರಾಜ್ಯ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆಯ ಕಾರ್ಯದರ್ಶಿ. ಎಚ್‌.ಎಂ. ಕುರ್ಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ, “ನಿರಂತರ ಶ್ರಮದಿಂದ ಯಶಸ್ಸು ಸಿಗುತ್ತದೆ ಎಂಬುದಕ್ಕೆ ವೆಂಕಪ್ಪ ಉತ್ತಮ ಉದಾಹರಣೆ. ಕರ್ನಾಟಕದಿಂದ ಏಕೈಕ ಸೈಕ್ಲಿಸ್ಟ್‌ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂಬ ಆತ್ಮವಿಶ್ವಾಸವಿದೆ,” ಎಂದು ಕುರ್ಣಿ ಹೇಳಿದರು.

Related Articles