Sunday, September 8, 2024

ರಾಜ್ಯ ಜೂನಿಯರ್ ನೆಟ್‌ಬಾಲ್ : ಮೈಸೂರು ಜಿಲ್ಲೆ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ 

ಮೈಸೂರು ಜಿಲ್ಲಾ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ 52 ಅಂಕ ಗಳಿಸಿದ  ಆತಿಥೇಯ ಮೈಸೂರು ಜಿಲ್ಲಾ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಹುಣಸೂರು ತಾಲೂಕಿನ ಗಾವಡೆಗೆರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಅಂಗಣದಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಸೂಪರ್ ಲೀಗ್ ಪಂದ್ಯಗಳಲ್ಲಿ ಮೈಸೂರು, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿದವು. ಎಲ್ಲ ಪಂದ್ಯಗಳ ಅಂಕಗಳ ಲೆಕ್ಕಾಚಾರದಲ್ಲಿ ಮೈಸೂರು 52 ಅಂಕ ಗಳಿಸಿ ಮೇಲುಗೈ ಸಾಧಿಸಿತು. 51 ಅಂಕ ಗಳಿಸಿದ ಹಾಸನ ಜಿಲ್ಲಾ ತಂಡ ಎರಡನೇ ಸ್ಥಾನಿಯಾಯಿತು. ಬೆಂಗಳೂರು ಗ್ರಾಮಾಂತರ ತಂಡ 48 ಅಂಕ ಗಳಿಸಿ ಮೂರನೇ ಸ್ಥಾನಿಯಾಯಿತು. ಸೂಪರ್ ಲೀಗ್‌ನ ಎಲ್ಲ ಪಂದ್ಯಗಳಲ್ಲಿ ಸೋತ ಉಡುಪಿ ಜಿಲ್ಲೆ ನಾಲ್ಕನೇ ಸ್ಥಾನ ಗಳಿಸಿತು.
ಸೂಪರ್ ಲೀಗ್ ಸುತ್ತಿಗೆ ಮೈಸೂರು, ಬೆಂಗಳೂರು ಗ್ರಾಮಾಂತರ, ಉಡುಪಿ ಹಾಗೂ ಹಾಸನ ತಂಡಗಳು ಅರ್ಹತೆ ಪಡೆದಿದ್ದವು. ಸೂಪರ್ ಲೀಗ್ ಸುತ್ತಿನ ಮೊದಲ ಪಂದ್ಯದಲ್ಲಿ ಮೈಸೂರು ಜಿಲ್ಲಾ ತಂಡ ಹಾಸನದ ವಿರುದ್ಧ 18-17 ಅಂಕಗಳ ಅಂತರದಲ್ಲಿ ಜಯ ಗಳಿಸಿತು. ಬೆಂಗಳೂರು ಗ್ರಾಮಾಂತರ ತಂಡ ಉಡುಪಿ ಜಿಲ್ಲಾ ತಂಡದ ವಿರುದ್ಧ 20-14 ಅಂತರದಲ್ಲಿ ಗೆದ್ದಿತು. ಮೈಸೂರು ಜಿಲ್ಲಾ ತಂಡ ಉಡುಪಿ ವಿರುದ್ಧ 20-19 ಅಂತರದಲ್ಲಿ ಯಶಸ್ಸು ಕಂಡಿತು. ಮೊದಲ ಪಂದ್ಯದಲ್ಲಿ ಸೋತಿದ್ದ ಹಾಸನ ಜಿಲ್ಲಾ ತಂಡ 13=11 ಅಂತರದಲ್ಲಿ ಬೆಂಗಳೂರು ಗ್ರಾಮಾಂತರ ತಂಡಕ್ಕೆ ಸೋಲುಣಿಸಿತು. ಬೆಂಗಳೂರು ಗ್ರಾಮಾಂತರ ತಂಡ ಮೈಸೂರು ಜಿಲ್ಲಾ ತಂಡಕ್ಕೆ 17-14 ಅಂತರದಲ್ಲಿ ಸೋಲುಣಿಸಿತು. ಕೊನೆಯ ಲೀಗ್ ಪಂದ್ಯದಲ್ಲಿ ಹಾಸನ ಜಿಲ್ಲಾ ತಂಡ ಉಡುಪಿ ವಿರುದ್ಧ 21-10 ಅಂತರದಲ್ಲಿ ಗೆದ್ದಿತು.
12 ತಂಡಗಳು ಪಾಲ್ಗೊಂಡಿದ್ದ ಚಾಂಪಿಯನ್‌ಷಿಪ್ ಲೀಗ್, ನಾಕೌಟ್ ಹಾಗೂ ಸೂಪರ್ ಲೀಗ್ ಮಾದರಿಯಲ್ಲಿ ನಡೆಯಿತು.

Related Articles