Thursday, September 12, 2024

ಬಾಸ್ಕೆಟ್‌ಬಾಲ್: ಸೆಮಿಫೈನಲ್‌ಗೆ ವಿಜಯ ಬ್ಯಾಂಕ್

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ ವಿಜಯ ಬ್ಯಾಂಕ್ ಆಯೋಜಿಸಿರುವ ೫ನೇ ಆವೃತ್ತಿಯ ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಅಖಿಲ ಭಾರತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ವಿಜಯ ಬ್ಯಾಂಕ್ ಹಾಗೂ ಆದಾಯ ತೆರಿಗೆ ತಂಡಗಳು ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿವೆ.

ಬೀಗಲ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಬಿ ಗುಂಪಿನ ಪಂದ್ಯದಲ್ಲಿ ವಿಜಯ ಬ್ಯಾಂಕ್ ಹಾಗೂ ಚೆನ್ನೈನ ಆದಾಯ ತೆರಿಗೆ ವಿಭಾಗ ೨-೦ ಅಂತರದಲ್ಲಿ ಗೆದ್ದು ಮೇಲುಗೈ ಸಾಧಿಸಿವೆ. ಶುಕ್ರವಾರ   ಈ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ಕಸ್ಟಮ್ಸ್ ವಿರುದ್ಧ ಆದಾಯ ತೆರಿಗೆಗೆ ಜಯ

ಎರಡನೇ ದಿನದ ಮೊದಲ ಪಂದ್ಯದಲ್ಲಿ ಆದಾಯ ತೆರಿಗೆ ತಂಡ ಕಸ್ಟಮ್ಸ್  ವಿರುದ್ಧ ೯೦-೬೧ ಅಂತರದಲ್ಲಿ ಜಯ  ಗಳಿಸಿದೆ. ಭಾರತ ತಂಡದ ಮಾಜಿ ಆಟಗಾರ ಅಖಿಲನ್ ಪಾರಿ ಅವರ ನಾಯಕತ್ವದ ಆದಾಯ ತೆರಿಗೆ ತಂಡ ಅದ್ಭುತ ಆಟ ಪ್ರದರ್ಶಿಸಿ ಆರಂಭಿಕ ಹಂತದಲ್ಲೇ ಮುನ್ನಡೆ ಕಾಯ್ದುಕೊಂಡಿತು. ಪ್ರಥಮ ಕ್ವಾರ್ಟರ್‌ನಲ್ಲಿ ತಂಡ ೧೯-೧೩ ಅಂತರದಲ್ಲಿ ಮೇಲುಗೈ ಸಾಧಿಸಿತು. ದ್ವಿತೀಯ ಕ್ವಾರ್ಟರ್‌ನ ಆರಂಭದ ಎರಡು ನಿಮಿಷಗಳಲ್ಲಿ ೧೦ ಅಂಕಗಳನ್ನು ಗಳಿಸಿ ಪ್ರಭುತ್ವ ಸಾಧಿಸಿತ್ತು. ಒಟ್ಟು ೪೮-೩೬ ಅಂತರದಲ್ಲಿ ಎರಡನೇ ಕ್ವಾರ್ಟರ್‌ನಲ್ಲೂ ಮೇಲುಗೈ ಸಾಧಿಸಿತು. ಮೂರು ಹಾಗೂ ನಾಲ್ಕನೇ ಕ್ವಾರ್ಟರ್‌ಗಳಲ್ಲಿ ಆದಾಯ ತೆರಿಗೆಯನ್ನು ಹಿಂದಿಕ್ಕುವಲ್ಲಿ ವಿಫಲವಾದ ಕಸ್ಟಮ್ಸ್ ತಂಡ ೬೧-೯೦ ಅಂತರದಲ್ಲಿ ಸೋಲನು ಭವಿಸಿತು.
ದಿನದ ಎರಡನೇ ಪಂದ್ಯದಲ್ಲಿ ವಿಜಯ ಬ್ಯಾಂಕ್ ತಂಡ ತೆಲಂಗಾಣ ತಂಡದ ವಿರುದ್ಧ ೧೦೨-೬೦ ಅಂತರದಲ್ಲಿ ಗೆದ್ದು ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಜಯ ಗಳಿಸಿತು. ಗಾರ್ಡ್ ಅನಿಲ್ ಕುಮಾರ್ ಅವರ ಮಿಂಚಿನ ಆಟದಿಂದ ವಿಜಯ ಬ್ಯಾಂಕ್ ತಂಡ ಪ್ರಭುತ್ವ ಸಾಧಿಸಿದರೂ ಮೊದಲ ಕ್ವಾರ್ಟರ್‌ನಲ್ಲಿ  ವಿಶು ಪಳನಿ ಅವರ ಆಟದಿಂದ ತೆಲಂಗಾಣ ಅಂಕದಲ್ಲಿ ಮೇಲುಗೈ ಸಾಧಿಸಿತು. ಆದರೆ ಕೊನೆ ಕ್ಷಣದಲ್ಲಿ ಆಟದಲ್ಲಿ ಹಿಡಿತ ಸಾಧಿಸಿದ ವಿಜಯ ಬ್ಯಾಂಕ್ ೬ ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತು. ಎರಡನೇ ಕ್ವಾರ್ಟರ್‌ನಲ್ಲೂ ವಿಜಯ ಬ್ಯಾಂಕ್ ೬೫-೩೩ ಅಂತರದಲ್ಲಿ ಮುನ್ನಡೆ ಕಂಡಿತು. ಅಂತಿಮವಾಗಿ ವಿಜಯ ಬ್ಯಾಂಕ್ ಅನಿಲ್ ಕುಮಾರ್ (೧೯ ಅಂಕ) ಹಾಗೂ ಹರೀಶ್ (೧೯ ಅಂಕ) ಅವರ ಅದ್ಬುತ ಆಟದ ನೆರವಿನಿಂದ ೩೦-೨೪, ೩೫-೦೯, ೨೬-೧೪, ೧೧-೧೩ ಅಂತರದಲ್ಲಿ ಗೆದ್ದು ಮುನ್ನಡೆಯಿತು.
ಆರಂಭಿಕ ದಿನದ ತಡರಾತ್ರಿ ನಡೆದ ಪಂದ್ಯದಲ್ಲಿ ಇಂಡಿಯನ್ ನೇವಿ ತಂಡ ಚೆನ್ನೈನ  ಐಸಿಎ್ ವಿರುದ್ಧ  ೮೯-೫೧ ಅಂತರದಲ್ಲಿ ಜಯ ಗಳಿಸಿತು.  ಎರಡನೇ ಪಂದ್ಯದಲ್ಲಿ ಚೆನ್ನೈನ  ಆದಾಯ ತೆರಿಗೆ ತಂಡ ತೆಲಂಗಾಣ ವಿರುದ್ಧ ೮೯-೬೭ ಅಂತರದಲ್ಲಿ ಜಯ ಗಳಿಸಿತು.

Related Articles