Tuesday, January 14, 2025

ಕ್ರಿಕೆಟ್‌ ಟೂರ್ನಿಯ ಮೂಲಕ ಯುಡಿಸಿಎ ಪ್ರತಿಭಾನ್ವೇಷಣೆ

ಮಣಿಪಾಲ: ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಬ್ರಹ್ಮಾವರ, ಕಾರ್ಕಳ, ಬೈಂದೂರು  ಹಾಗೂ ಹೆಬ್ರಿ ತಾಲೂಕಿನ ಯುವ ಕ್ರಿಕೆಟಿಗರಿಗಾಗಿ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯು (ಯುಡಿಸಿಎ) ನಡೆಸಿದ ಪ್ರತಿಭಾನ್ವೇಷಣೆಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಸುಮಾರು 350ಕ್ಕೂ ಹೆಚ್ಚು ಯುವ ಆಟಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿವಿಧ ವಯೋಮಿತಿಯಲ್ಲಿ ತಂಡಗಳನ್ನು ರೂಪಿಸಿ ಪಂದ್ಯಗಳನ್ನು ನಡೆಸಲು ಜಿಲ್ಲಾ ಕ್ರಿಕೆಟ್‌ ಸಂಸ್ಥೆ ತೀರ್ಮಾನಿಸಿದೆ. Udupi District Cricket Association started Talent Hun program by organizing cricket tourney for different age group.

ಭಾನುವಾರ ಮಣಿಪಾಲದ ಎಂಐಟಿಯಲ್ಲಿ ನಡೆದ ಪ್ರತಿಭಾನ್ವೇಷಣೆಯ ಮೊದಲ ಹಂತದ ಕಾರ್ಯಕ್ರಮದಲ್ಲಿ 14, 16, 19 ಹಾಗೂ 23 ವರ್ಷ ವಯೋಮಿತಿಯ ಆಟಗಾರರ ಸಾಮರ್ಥಗಳನ್ನು ಪರಿಶೀಲಿಸಲಾಯಿತು. ಆಟಗಾರರ ವಯಸ್ಸಿಗೆ ಅನುಗುಣವಾಗಿ ತಂಡಗಳನ್ನು ರೂಪಿಸಿ ಪಂದ್ಯಗಳನ್ನು ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಕ್ರಿಕೆಟ್‌‌ ಸಂಶ್ಥೆಯ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್‌ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಈಗಾಗಲೇ 19 ವರ್ಷ ವಯೋಮಿತಿಯ ಪಂದ್ಯಗಳು ಬ್ರಹ್ಮಾವರದ ಎಸ್‌ಎಂ ಎಸ್‌ ಕಾಲೇಜಿನ ಅಂಗಣದಲ್ಲಿ ನಡೆದಿದ್ದು, ಉಳಿದ ಪಂದ್ಯಗಳನ್ನು ಕಾರ್ಕಳ ಅಥವಾ ಮಣಿಪಾಲದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಶ್ಥೆಯ ಗೌರವ ಅಧ್ಯಕ್ಷರು, ಮಾಹೆಯ ಪ್ರೋ ಚಾನ್ಸೆಲರ್‌ ಡಾ. ಎಚ್‌. ಎಸ್‌. ಬಲ್ಲಾಳ್‌ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದು, ಮುಂದಿನ ಪಂದ್ಯಗಳನ್ನು ನಿಟ್ಟೆಯಲ್ಲಿರುವ ಬಿ.ಸಿ ಆಳ್ವಾ ಕ್ರೀಡಾಂಗಣದಲ್ಲಿ ನಡೆಸಲು ಆ ಕುರಿತು ನಿಟ್ಟೆ ಡೀಮ್ಡ್‌ ವಿಶ್ವವಿದ್ಯಾನಿಲಯದ ಚಾನ್ಸೆಲರ್‌ ವಿನರ್‌ ಹೆಗ್ಡೆ ಮತ್ತು ಪ್ರೋ ಚಾನ್ಸೆಲರ್‌ ವಿಶಾಲ್‌ ಹೆಗ್ಡೆ ಅವರೊಂದಿಗೆ ಸಂಸ್ಥೆಯು ಮಾತುಕತೆ ನಡೆಸಲಿದೆ.

ಪ್ರತಿಭೆಗಳಿಗೆ ಅವಕಾಶ ನೀಡುವುದು ನಮ್ಮ ಗುರಿ: ಭಾನುವಾರ ಮಣಿಪಾದಲ್ಲಿ ನಡೆದ ಮೊದಲ ಹಂತದ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಹಾಗೂ  ಉಡುಪಿಯ ಪ್ರಸಾದ್‌ ನೇತ್ರಾಲಯದ ಮುಖ್ಯಸ್ಥರಾದ ಡಾ. ಕೃಷ್ಣ ಪ್ರಸಾದ್‌. ಅವರು ಮಾತನಾಡಿ, “ಉಡುಪಿಯಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಅವರಿಗೆ ವೇದಿಕೆ ಕಲ್ಪಿಸುವುದು ನಮ್ಮ ಸಂಸ್ಥೆ ಉದ್ದೇಶವಾಗಿದೆ. ಪ್ರತ್ಯೇಕ ವಲಯದ ಬಗ್ಗೆ ಈಗಾಗಲೇ ಮಾತುಕತೆ ಆರಂಭಿಸಿದ್ದೇವೆ. ಜಿಲ್ಲೆಯ ಯುವ ಆಟಗಾರ ಅಭಿಲಾ಼ಷ್‌ ಶೆಟ್ಟಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಈಗಾಗಲೇ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕಿರಿಯರ ಲೀಗ್‌ ಪಂದ್ಯಗಳಲ್ಲೂ ನಮ್ಮ ಜಿಲ್ಲೆಯ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರ ಸಾಧನೆಗಳು ಕಿರಿಯ ಆಟಗಾರರಿಗೆ ಸ್ಫೂರ್ತಿಯಾಗಿದೆ. ಉತ್ತಮ ತರಬೇತುದಾರರಿಂದ ಕೂಡಿದ ಅಕಾಡೆಮಿಗಳು ಇಲ್ಲಿ ಇರುವುದರಿಂದ ಪ್ರತಿಭೆಗಳಿಗೆ ಉತ್ತಮ ರೀತಿಯ ತರಬೇತಿ ಸಿಗುತ್ತಿದೆ. ಜಿಲ್ಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಗಮನಕ್ಕೆ ತರಲಾಗಿದ್ದು, ಇಲ್ಲಿಯ ಜನಪ್ರತಿನಿಧಿಗಳು ಆ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದಾರೆ. ಸದ್ಯಕ್ಕೆ ನಮ್ಮ ಗೌರವ ಅಧ್ಯಕ್ಷರಾಗ ಡಾ. ಎಚ್‌.ಎಸ್‌ ಬಲ್ಲಾಳ್‌ ಅವರಿಂದ ನಮಗೆ ಅಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಅವಕಾಶ ಸಿಕ್ಕಿದೆ,” ಎಂದು ಹೇಳಿದರು.

“ಅಂತಾರಾಷ್ಟ್ರೀಯ ಮಾಜಿ ಆಟಗಾರ ದಯಾನಂದ ಬಂಗೇರ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ನಾಯಕ ವಿಜಯ ಆಳ್ವಾ, ಹಿರಿಯ ವಿಶ್ವಕಪ್‌ ಆಡಿರುವ ಉದಯ್‌ ಕುಮಾರ್‌ ವೈ ಸೇರಿದಂತೆ ಸಂಸ್ಥೆಯ ಹಲವು ಹಿರಿಯ ಪ್ರತಿಭಾವಂತರು ಜಿಲ್ಲೆಯಲ್ಲಿ ಕ್ರಿಕೆಟ್‌ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ಇನ್ನೂ ಹೆಚ್ಚಿನ ಆಟಗಾರರು ರಾಜ್ಯ ಮಾತ್ರವಲ್ಲ ದೇಶವನ್ನೂ ಪ್ರತಿನಿಧಿಸುತ್ತಾರೆಂಬ ನಂಬಿಕೆ ಇದೆ,” ಎಂದರು. ಪ್ರತಿಭಾನ್ವೇಷಣೆಯ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಕ್ರಿಕೆಟ್‌ ಸಂಶ್ಥೆಯ ಪದಾಧಿಕಾರಿಗಳಾದ ಪ್ರಭಾಕರ್‌ ಶೆಟ್ಟಿ, ದಯಾನಂದ್‌ ಬಂಗೇರ, ಉದಯ್‌ ಕುಮಾರ್‌ ವೈ, ವಿಜಯ್‌ ಆಳ್ವಾ, ಸದಾನಂದ ಶಿರ್ವ, ರಾಜೇಶ್‌ ಆಚಾರ್ಯ, ಮೊಹಮ್ಮದ್‌ ಇಬ್ರಾಹಿಂ, ಜನಾರ್ದನ್‌ ಹಾಗೂ ನಿತಿನ್‌ ಸಾರಂಗ್‌ ಅವರು ಕಾರ್ಯನಿರ್ವಹಿಸಿದರು.

ಬಾಲಕಿಯರ ಆಯ್ಕೆ ಪ್ರಕ್ರಿಯೆಯಲ್ಲಿ ಕುಮಾರಿ ವರ್ಷಿತಾ ಶೆಟ್ಟಿ ಹಾಗೂ ಕುಮಾರಿ ಜೊಮೊಲ್‌ ನೆರವಾದರು. ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ರೆಬ್‌ ಟ್ರೆವರ್‌ ಡಿಯಾಸ್‌ ಅವರು ಯುವ ಕ್ರಿಕೆಟಿಗರಿಗೆ ಪ್ರತಿಭಾನ್ವೇಷಣೆಯ ಉದ್ದೇಶ ಹಾಗೂ ಮುಂದಿನ ಪಂದ್ಯಗಳ ಬಗ್ಗೆ ಮಾಹಿತಿ ನೀಡಿದರು.

Related Articles