ಮಣಿಪಾಲ: ಸಾಕಷ್ಟು ಪ್ರತಿಭೆಗಳಿಂದ ಕೂಡಿರುವ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಇಲ್ಲಿನ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಮತ್ತು ಜಿಲ್ಲೆಯಲ್ಲಿ ಕ್ರಿಕೆಟ್ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉಡುಪಿ ಜಿಲ್ಲೆಯನ್ನು ಪ್ರತ್ಯೇಕ ವಲಯವನ್ನಾಗಿ ಮಾಡುವಂತೆ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಮನವಿ ಮಾಡಿಕೊಂಡಿದ್ದಾರೆ. Udupi District Cricket Association demands KSCA separate Zone for Udupi District
ಅವರು ಭಾನುವಾರ ಮಣಿಪಾಲದ ಎಂಐಟಿ ಅಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ ವಿವಿಧ ವಯೋಮಿತಿಯ ಪ್ರತಿಭಾನ್ವೇಷಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಉಡುಪಿ ವಲಯ ಈಗ ಮಂಗಳೂರು ವಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಇದರಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡಗು ಕೂಡ ಸೇರಿದೆ. ಮಂಗಳೂರು ವಲಯವನ್ನು ಪ್ರತಿನಿಧಿಸುವಾಗ ಅನೇಕ ಪ್ರತಿಭಾವಂತ ಕ್ರಿಕೆಟಿಗರಿಗೆ ಸಹಜವಾಗಿಯೇ ಅವಕಾಶ ಸಿಗುವುದಿಲ್ಲ. ಅವರಿಗೆ ಲೀಗ್‌ಗಳಲ್ಲಿ ಆಡುವ ಅವಕಾಶ ಸಿಗುವುದು ಕಷ್ಟವಾಗುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡು ಉಡುಪಿಯನ್ನು ಪ್ರತ್ಯೇಕ ವಲಯ ಮಾಡುವ ಬೇಡಿಕೆ ನಮ್ಮದಾಗಿದೆ. ಇದರಿಂದ ಜಿಲ್ಲೆಯ ಹೆಚ್ಚಿನ ಆಟಗಾರರಿಗೆ ಅವಕಾಶ ನೀಡಿದಂತಾಗುತ್ತದೆ,” ಎಂದು ಡಾ. ಕೃಷ್ಣ ಪ್ರಸಾದ್ ಹೇಳಿದರು.
“ಇಲ್ಲಿ ಅಪಾರ ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ. ಪ್ರತಿಯೊಂದು ಶಾಲೆಯಲ್ಲಿಯೂ ವಿವಿಧ ವಯೋಮಾನದ ಆಟಗಾರರು ಇದ್ದಾರೆ. ಅವರೆಲ್ಲರಿಗೂ ಅವಕಾಶ ಕಲ್ಪಿಸುವುದು ಕಷ್ಟವಾಗುತ್ತಿದೆ. ಪ್ರತ್ಯೇಕ ವಲಯವನ್ನಾಗಿ ಮಾಡುವುದರಿಂದ ರಾಜ್ಯ ಮಟ್ಟಕ್ಕೆ ಹೆಚ್ಚಿನ ಆಟಗಾರರನ್ನು ನೀಡಲು ಸಾಧ್ಯವಾಗುತ್ತದೆ. ವಿವಿಧ ವಯೋಮಿತಿಯ ಲೀಗ್ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ. ಈ ಹಿಂದಿನ ಆಡಳಿತ ಮಂಡಳಿಯೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ. ಪ್ರಸಕ್ತ ಕೆಎಸ್‌ಸಿಎ ಅಧ್ಯಕ್ಷರಾಗಿರುವ ಶ್ರೀ ರಘುರಾಮ್ ಭಟ್ ಮತ್ತು ಮಾಜಿ ಕಾರ್ಯದರ್ಶಿ ಬೃಜೇಶ್ ಪಟೇಲ್ ಅವರೊಂದಿಗೆ ಮಾತುಕತೆ ನಡೆಸಲಿದ್ದೇವೆ,” ಎಂದರು.
ಕ್ರೀಡಾಂಗಣಕ್ಕೆ ಸ್ಥಳ ಪರಿಶೀಲನೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಪ್ರತಿಯೊಂದು ಜಿಲ್ಲೆಯಲ್ಲಿಯೂ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವನ್ನು ನಿರ್ಮಿಸುವ ಗುರಿಹೊಂದಿದೆ. ಈಗಾಗಲೇ ತುಮಕೂರಿನಲ್ಲಿ ಆ ಕೆಲಸ ಆರಂಭಗೊಂಡಿದೆ. ಉಡುಪಿಯಲ್ಲಿ ಪಂದ್ಯಗಳನ್ನು ನಡೆಸಲು ನಾವು ಮಣಿಪಾಲ, ಎಸ್‌ಎಂಎಸ್ ಕಾಲೇಜು ಹಾಗೂ ನಿಟ್ಟೆಯ ಬಿ.ಸಿ. ಆಳ್ವ ಕ್ರೀಡಾಂಗಣದ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಪಂದ್ಯಗಳು ನಡೆಯದೆ ಇರುವಾಗ ನಮ್ಮ ಪಂದ್ಯಗಳನ್ನು ಆಯೋಜಿಸಬೇಕಾಗುತ್ತದೆ. ನಮ್ಮದೇ ಆದ ಕ್ರೀಡಾಂಗಣವಿದ್ದರೆ ಸಮಸ್ಯೆ ಎದುರಾಗುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರಿ ಅಥವಾ ಖಾಸಗಿ ಭೂಮಿಯನ್ನು ಗುರುತಿಸಿ ರಾಜ್ಯ ಕ್ರಿಕೆಟ್ ಸಂಸ್ಥೆಗೆ ತಿಳಿಸಲಾಗುವುದು. ಈಗಾಗಲೇ ಕೆಲವು ಸ್ಥಳಗಳನನು ನೋಡಿರುತ್ತೇವೆ. ಸದ್ಯದಲ್ಲಿಯೇ ಅದಕ್ಕೊಂದು ಅಂತಿಮ ರೂಪು ನೀಡಲಾಗುವುದು,ʼ ಎಂದು ಡಾ. ಕೃಷ್ಣ ಪ್ರಸಾದ್ ಈ ಸಂದರ್ಭದಲ್ಲಿ ತಿಳಿಸಿದರು.
“ಉಡುಪಿಯಲ್ಲಿ ಸಾಕಷ್ಟು ಕ್ರಿಕೆಟ್ ಅಕಾಡೆಮಿಗಳಿವೆ. ಉತ್ತಮ ಗುಣಮಟ್ಟದ ತರಬೇತುದಾರರಿದ್ದಾರೆ. ಆಟಕ್ಕೇ ಪೂರಕವಾದ ವಾತಾವರಣವಿರುತ್ತದೆ. ಮಳೆಗಾಲದಲ್ಲಿ ಅಭ್ಯಾಸ ಮಾಡಲು ಒಳಾಂಗಣ ಕ್ರೀಡಾಂಗಣದ ಅಗತ್ಯವಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಾವು ಪ್ರತೇಕ ವಲಯನ್ನಾಗಿ ರೂಪಿಸುವಂತೆ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಂತಾರಾಷ್ಟ್ರೀಯ ಆಟಗಾರ ದಯಾನಂದ ಬಂಗೇರ ಅವರು, “ನಾವು 70ರ ದಶಕಲ್ಲಿ ಆಡುವಾಗ ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೋ ಅದೇ ಸಮಸ್ಯೆಗಳನ್ನು ಈಗಿನ ಮಕ್ಕಳು ಎದುರಿಸುತ್ತಿದ್ದಾರೆ. ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನೀಡಲು ಇದು ಸೂಕ್ತಕಾಲ. ಉಡುಪಿ ಜಿಲ್ಲೆಯ ಮಕ್ಕಳ ಕೂಡ ರಾಜ್ಯ ಕ್ರಿಕೆಟ್ ಸಂಸ್ಥೆಯ ನಡೆಸುವ ಲೀಗ್ ಪಂದ್ಯಗಳಲ್ಲಿ ಆಡಬೇಕು. ಇಲ್ಲಿ ಉತ್ತಮ ಪ್ರತಿಭಾವಂತ ಯುವ ಆಟಗಾರರಿದ್ದಾರೆ. ಅವರಿಗೆ ವೇದಿಕೆ ಕಲ್ಪಿಸಬೇಕಾದ ಅಗತ್ಯವಿದೆ,” ಎಂದರು.
ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ರೆನ್ ಟ್ರೆವರ್ ಡಿಯಾಸ್ ಮಾತನಾಡಿ, “ನಾವು ನಡೆಸಿದ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್ ಪ್ರತಿಭೆಗಳಿದ್ದಾರೆ. ಅವರಿಗೆ ಸೂಕ್ತ ವೇದಿಕೆ ಸಿಗಬೇಕಾಗಿದೆ. ಉಡುಪಿ ಜಿಲ್ಲೆಯನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ವಲಯವನ್ನಾಗಿ ಘೋಷಿಸಿ ಬೆಂಬಲಿಸಿದರೆ ಇಲ್ಲಿಯ ಪ್ರತಿಭೆಗಳಿಗೆ ಇನ್ನಷ್ಟು ಅವಕಾಶ ಸಿಕ್ಕಂತಾಗುತ್ತದೆ,” ಎಂದರು.
ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಅವರು ಮಾತನಾಡಿ, “ಜಿಲ್ಲೆಯ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಪ್ರಮಾಣದಲ್ಲಿ ಅವಕಾಶ ಸಿಗಬೇಕಾದರೆ ನಮ್ಮ ಜಿಲ್ಲೆಯನ್ನು ವಲಯವನ್ನಾಗಿ ಘೋಷಿಸಬೇಕಾದ ಅನಿನಾರ್ಯತೆ ಇದೆ,ʼ ಎಂದರು.
ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಟೂರ್ನಮೆಂಟ್ ವಿಭಾಗದ ಜಂಟಿ ಕಾರ್ಯದರ್ಶಿ ವಿಜಯ್ ಆಳ್ವಾ ಈ ಸಂದರ್ಭದಲ್ಲಿ ಯುವ ಕ್ರಿಕೆಟಿಗರಿಗೆ ಕ್ರೀಡೆಯ ಜೊತೆಯಲ್ಲಿ ಓದಿನ ಕಡೆಗೂ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು.