ಸಾಲಿಗ್ರಾಮ ಪಾರಂಪಳ್ಳಿಯಲ್ಲಿ ಕಯಾಕ್ ಕ್ರಾಂತಿ
sportsmail:
ಒಲಿಂಪಿಕ್ಸ್ ಕ್ರೀಡೆಯಾಗಿರುವ ಕಯಾಕಿಂಗ್ ಈಗ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪಾರಂಪಳ್ಳಿ ಪಡುಕರೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರವಾಸಿಗರ ಮನತಣಿಸುತ್ತಿದ್ದ ಈ ಕ್ರೀಡೆ ಈಗ ಇಲ್ಲಿನ ವಿದ್ಯಾರ್ಥಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ Zone51 ಕಯಾಕ್ ಕೇಂದ್ರ ಪ್ರಥ್ವಿ ಎಕೋ ಕ್ಲಬ್ ಜತೆ ಸೇರಿ ಕೋಡಿ ಕನ್ಯಾನದ ಸೋಮ ಬಂಗೇರ ಸ್ಮಾರಕ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಯಾಕ್ ಮತ್ತು ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಪಾರಂಪಳ್ಳಿ ಹಿನ್ನೀರಿನಲ್ಲಿ ಅಪಾರ ಪ್ರಮಾಣದಲ್ಲಿ ಸರಕಾರ ಬೆಳೆಸಿರುವ ಕಾಂಡ್ಲಾ ವನ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿ ವನದ ನಡುವೆ ಕಯಾಕ್ ಮಾಡುವುದೇ ಒಂದು ಅದ್ಭುತ ಅನುಭವ. ಚೆನ್ನೈ, ಕೇರಳ, ಹೊನ್ನಾವರ ಮತ್ತು ಕಾರವಾರ ಹೊರತುಪಡಿಸಿದರೆ ಉಡುಪಿಯ ಪಾರಂಪಳ್ಳಿ ಮ್ಯಾಂಗ್ರೋನ್ ಕಾಡಿಗೆ ಪ್ರಸಿದ್ಧಿ ಪಡೆದಿದೆ. ವಾರಾಂತ್ಯದ ದಿನಗಳಲ್ಲಿ ಇಲ್ಲಿ ಕಯಾಕ್ ಮಾಡಲು ದೂರದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.
ಬದುಕು ಕಟ್ಟಿಕೊಂಡ ವಿನಯ್
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸ್ಥಳೀಯ ಯುವಕ ವಿನಯ್ ಬಂಗೇರ ಕೊರೋನಾ ಸಮಯದಲ್ಲಿ ಊರಿಗೆ ಬಂದು ನಂತರ ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಮನಸ್ಸು ಮಾಡಿದರು. ಮೊದಲು ಒಂದೆರಡು ಕಯಾಕ್ ಖರೀದಿಸಿ ಮಲ್ಪೆಯಲ್ಲಿ ಪ್ರವಾಸಿಗರಿಗೆ ನೆರವಾಗುತ್ತಿದ್ದರು. ನಂತರ ಪಾರಂಪಳ್ಳಿಯ ಹಿನ್ನೀರಿನಲ್ಲಿ ಮ್ಯಾಂಗ್ರೋವ್ ಕಾಡಿನ ನಡುವೆ ಕಯಾಕ್‌ನಲ್ಲಿ ಪ್ರವಾಸಿಗರನ್ನು ಕೊಂಡೊಯ್ದು ಹೊಸ ಅನುಭವ ನೀಡಿದರು. ಈಗ ಕಯಾಕ್ ಅವರ ಬದುಕಿನ ದೋಣಿಯಾಗಿದೆ. ರಾಜ್ಯದ ಬೇರೆ ಬೇರೆ ನಗರಗಳಲ್ಲಿ ವಿನಯ್ ಬಂಗೇರ ಅವರ ಕಯಾಕಿಂಗ್ ಪ್ರವಾಸ ಮನೆ ಮಾತಾಗಿದೆ.
ಜೋನ್ 51(Zone 51 Kodi Kanyana):
ಕಣ್ಮನ ತಣಿಸುವ ಕಡಲು, ಸೂರ್ಯಾಸ್ಥಕ್ಕೆ ನೀಲ ಕಡಲ ಮೇಲೆ ಬಂಗಾರದ ಕಿರಣ, ಬೆಳ್ಳಿ ಬಳಿದಂತೆ ಹಾಸಿರುವ ಮರಳು, ಕುಳಿತಲ್ಲಿಂದಲೇ ಇವೆಲ್ಲವನ್ನೂ ಕಾಣುವ ಸೌಭಾಗ್ಯ… ಅಲ್ಲೊಂದು ಪುಟ್ಟ ಮನೆ, ಬೇಕಾದ ಸಮುದ್ರದ ಖಾದ್ಯಗಳು… ಅದೇ ವಿನಯ್ ನಿರ್ಮಿಸಿದ ಜೋನ್ 51. ಅದು ಕರಾವಳಿಯ ಸಾಂಪ್ರದಾಯಿಕ ಹಂಚಿನ ಮನೆ. ಆದರೆ ಅಗತ್ಯವಿರುವ ಎಲ್ಲ ಸೌಲಭ್ಯಗಳೂ ಸಿಗುತ್ತದೆ. ಮನೆಯಲ್ಲಿ ಮಲಗಲು ಆಸಕ್ತಿ ಇಲ್ಲ ನಾವು ಸಮುದ್ರವನ್ನು ನೋಡುತ್ತ ಹೊರಗಡೆಯೇ ಮಲಗುತ್ತೇವೆ ಎಂದೆನಿಸಿದರೆ ಅಲ್ಲಿಯೇ ಟೆಂಟ್‌ಹೌಸಿನ ಸೌಲಭ್ಯ. ಬೆಳಿಗ್ಗೆ ಸೂರ್ಯೋದಯಕ್ಕೆ ಕಾಂಡ್ಲಾವನದಲ್ಲಿ ಕಯಾಕಿಂಗ್. ವಾರಾಂತ್ಯದ ದಿನಗಳನ್ನು ಕಳೆಯಲು, ಏಕಾಂತತೆಗೆ ಹೆಚ್ಚಿನ ಆದ್ಯತೆ ನೀಡುವವರಿಗೆ ಇದು ಕಣ್ಣೆದುರಿಗಿನ ಪುಟ್ಟ ಸ್ವರ್ಗ.
ಸರ್ಫಿಂಗ್:, ಸ್ಕ್ಯೂಬಾ ಡೈವಿಂಗ್, ಬಾಡಿ ಬೋರ್ಡಿಂಗ್:
ಪ್ರವಾಸಿಗರಿಗೆ ಸಮುದ್ರದಲ್ಲಿ ಸರ್ಫಿಂಗ್ ಮಾಡಬೇಕೆಂಬ ಹಂಬಲವಿದ್ದರೆ ವಿನಯ್ ತಂಡವು ಸರ್ಫಿಂಗ್ ವ್ಯವಸ್ಥೆಯನ್ನೂ ಹೊಂದಿದೆ. ಜಗತ್ತಿನ ಪ್ರತಿಯೊಂದು ಬೀಚ್‌ನಲ್ಲೂ ಸರ್ಫಿಂಗ್ ಬಹಳ ಆಕರ್ಷಣೆಯಾಗಿರುತ್ತದೆ. ಮಂಗಳೂರು, ಮಲ್ಪೆ, ಗೋವಾ ಬೀಚ್‌ಗಳಲ್ಲಿ ಸರ್ಫಿಂಗ್ ಮಾಡುವುದು ಸಾಮಾನ್ಯ. ವಿನಯ್ ಬಂಗೇರ ಅವರು ಅತಿಥಿಗಳಿಗೆ ಸರ್ಫಿಂಗ್ ಸೌಲಭ್ಯವನ್ನೂ ಒದಗಿಸಲಿದ್ದಾರೆ.
ಸಮುದ್ರದಲ್ಲಿ ಡೈವ್ ಮಾಡಿ ಅಲ್ಲಿಯ ಸೊಬಗನ್ನು ವೀಕ್ಷೀಸುವ ಕುತೂಹಲವಿದ್ದರೆ ಸ್ಕೂಬಾ ಡೈವಿಂಗ್ ಸೌಲಭ್ಯವನ್ನೂ ಕಲ್ಪಿಸಲಿದ್ದಾರೆ. ಅಲೆಯೊಂದಿಗೇ ದಡಸೇರುವ ರೋಮಾಂನ ಕ್ಷಣಗಳಿಗೆ ಸಾಕ್ಷಿಯಾಗಬೇಕಾದರೆ ಬಾಡಿ ಬೋರ್ಡಿಂಗ್ ವ್ಯವಸ್ಥೆಯನ್ನೂ ವಿನಯ್ ಕಲ್ಪಿಸಲಿದ್ದಾರೆ.
ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ:
“ಇಂದು ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರದ ಮೇಲೆ ಸಾಕಷ್ಟು ಹಾನಿ ಮಾಡಲಾಗುತ್ತಿದೆ. ಆದರೆ ನಮ್ಮ ಮುಖ್ಯ ಉದ್ದೇಶ ಪರಿಸರಕ್ಕೆ ಹಾನಿ ಮಾಡದೆ ಕೇವಲ ಅದರ ಸೌಂದರ್ಯವನ್ನು ಸವಿಯುವುದು, ಆದಷ್ಟು ಪರಿಸರ ರಕ್ಷಣೆಯ ಕಡೆಗೆ ಗಮನ ಹರಿಸುವುದು. ಕಯಾಕ್ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವುದಾಗಿದೆ. ಕಯಾಕಿಂಗ್ ಮಾಡುವಾಗಲಾಗಲಿ ಅಥವಾ ಸಮುದ್ರದಲ್ಲಿ ಸರ್ಫಿಂಗ್ ಮಾಡುವಾಗಲಾಗಲಿ ಯಾವುದೇ ಕಸ ಎಸೆಯದಂತೆ ನೋಡಿಕೊಳ್ಳುವುದು ನಮ್ಮ ಮೊದಲ ಆದ್ಯತೆ. ಪ್ರವಾಸಿಗರ ಸುರಕ್ಷತೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ. ಜೋನ್ 51ಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕಿದೆ. ಒಮ್ಮೆ ಬಂದವರು ಮತ್ತೆ ಮತ್ತೆ ಬರುತ್ತಿರುವುದು ಇದಕ್ಕೆ ಸಾಕ್ಷಿ,” ಎನ್ನುತ್ತಾರೆ ವಿನಯ್ ಬಂಗೇರ.ಪ್ರವಾಸೋದ್ಯಮ ಮತ್ತು ಪರಿಸರ ಸಂರಕ್ಷಣೆಯ ಜತೆಯಲ್ಲಿ ಕರಾವಳಿಗೆ ಒಲಿಂಪಿಕ್ಸ್ ಕ್ರೀಡೆಯ ಪರಿಚಯವಾಗುತ್ತಿರುವುದು ಖುಷಿಯ ಸಂಗತಿ.
ಸಾಹಸ ಕ್ರೀಡಾಪಟುಗಳಿಗೆ ಪ್ರೋತ್ಸಾಹ:
ಇತ್ತೀಚಿಗೆ ಕರ್ನಾಟಕ ರಾಜ್ಯ ಕ್ರೀಡಾ ಇಲಾಖೆಯಿಂದ ʼಶಿಖರ್ ಸೆ ಸಾಗರ್ʼ ಹೆಸರಿನಲ್ಲಿ ರಾಜ್ಯದ ಆರು ಮಂದಿ ಸಾಹಸಿ ಯುವತಿಯರು ಕಾರವಾರದಿಂದ ಮಂಗಳೂರು ತನಕ ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡಿದ್ದರು. ಆಗ ವಿನಯ್ ಬಂಗೇರ ಅವರು ತಮ್ಮ ಜೋನ್ 51ನಲ್ಲಿ ಸಾಹಸಿಗರಿಗೆ ಉಳಿದುಕೊಳ್ಳಲು ಅವಕಾಶ ಮಾಡಿದ್ದು, ಅವರಿಗೆ ಆಹಾರ ಸೌಲಭ್ಯವನ್ನು ಕಲ್ಪಿಸಿದ್ದು ಕ್ರೀಡಾ ಇಲಾಖೆಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ತರಬೇತುದಾರರು ವಿನಯ್ ಅವರ ಕ್ರೀಡಾಸ್ಫೂರ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದ್ಭುತ ಅನುಭವ:

ಗ್ರಾಮೀಣ ಪ್ರದೇಶದಲ್ಲಿ, ಅದ್ಭುತ ನಿಸರ್ಗದ ಮಡಿಲಲ್ಲಿ ಕಯಾಕಿಂಗ್ ಕ್ರೀಡೆಯನ್ನು ಪ್ರವಾಸೋದ್ಯಮದ ಜತೆಯಲ್ಲಿ ಅಭಿವೃದ್ಧಿಪಡಿಸುತ್ತಿರುವುದು ಉತ್ತಮ ಕೆಲಸ. ಒಂದೆಡೆ ಸಾಗರ, ಇನ್ನೊಂದೆಡೆ ನದಿಯ ಹಿನ್ನೀರು, ಮುಂದೆ ಸಾಗಿದರೆ ಸಮುದ್ರವನ್ನು ಸೇರುವ ನದಿ. ಸೂರ್ಯೋದಯಕ್ಕೆ ಕಯಾಕಿಂಗ್, ಸೂರ್ಯಾಸ್ಥಕ್ಕೆ ಸರ್ಫಿಂಗ್, ಬಾಡಿ ಬೋರ್ಡಿಂಗ್ ಈ ಎಲ್ಲವೂ ಒಂದೇ ಸ್ಥಳದಲ್ಲಿ ಸಿಗುವುದು ಬಹಳ ಅಪರೂಪ. ಇದೊಂದು ಅದ್ಭುತ ಅನುಭವ.
ಶಬ್ಬೀರ್, ಸಾಹಸ ಕ್ರೀಡಾ ತರಬೇತುದಾರ, ಜೆತ್ನಾ, ಕರ್ನಾಟಕ ಸರಕಾರ