Thursday, October 10, 2024

ಬೆಂಗಳೂರು ಟಾರ್ಪೆಡೊಸ್‌ ಜಯದ ಆರಂಭ

Sportsmail

ಸೋಲಿನ ಅಂಚಿಗೆ ಸಿಲುಕಿದ್ದ ಬೆಂಗಳೂರು ಟಾರ್ಪೆಡೊಸ್‌ ತಂಡ ರಂಜಿತ್‌ ಸಿಂಗ್‌ ಹಾಗೂ ಪಂಕಜ್‌ ಶರ್ಮಾ ಅವರ ಅದ್ಭುತ ಆಟದ ನೆರವಿನಿಂದ ಪ್ರೈಮ್‌ ವಾಲಿಬಾಲ್‌ ಲೀಗ್‌ನ ತನ್ನ ಮೊದಲ ಹಾಗೂ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್‌ ವಿರುದ್ಧ 3-2 ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ.

ಹೈದರಾಬಾದ್‌ನ ಗಾಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಎರಡು ಸೆಟ್‌ಗಳಲ್ಲಿ ಹಿನ್ನಡೆ ಕಂಡಿದ್ದ ಬೆಂಗಳೂರು ಟಾರ್ಪೆಡೊಸ್‌ ನಂತರ ದಿಟ್ಟ ಹೋರಾಟ ನೀಡಿ 14-15, 12-15, 15-13, 15-9, 15-14 ಅಂತರದಲ್ಲಿ ಜಯ ಗಳಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿತು.

 

ಕೊಚ್ಚಿಯ ತಂಡದ ನಾಯಕ ಕನ್ನಡಿಗ ಕಾರ್ತಿಕ್‌, ಪ್ರಮುಖ ಆಟಗಾರ ರೈಸನ್‌, ಕೋಚ್‌ ಕನ್ನಡಿಗ ಕುಮಾರ್‌ ಹಾಗೂ ಬೆಂಗಳೂರು ತಂಡದ ಕೋಚ್‌ ಲಕ್ಷ್ಮೀನಾರಾಯಣ ಅವರಿಂದ ಕೂಡಿದ ಇತ್ತಂಡಗಳ ಹೋರಾಟ ಸಾಕಷ್ಟು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಆದರೆ ಬೆಂಗಳೂರು ಟಾರ್ಪೆಡೊಸ್‌ ಕೊನೆಯ ಕ್ಷಣದಲ್ಲಿ ಮಿಂಚಿ ಜಯ ತನ್ನದಾಗಿಸಿಕೊಂಡಿತು. ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ ರಂಜಿತ್‌ ಸಿಂಗ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಲವ್‌ಮೀತ್‌ ಕಠಾರಿಯಾ ಅವರ ಅದ್ಭುತ ಬ್ಲಾಕ್‌ ನೆರವಿನಿಂದ ಬೆಂಗಳೂರು ಮೊದಲ ಸೆಟ್‌ನಲ್ಲಿ 5-3 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ನಂತರ ರೋಹಿತ್‌ ಅವರ ಬ್ಲಾಕ್‌ ನೆರವಿನಿಂದ 9-5ರಲ್ಲಿ ಮುನ್ನಡೆಯಿತು. ಆದರೆ ಕೊಚ್ಚಿ ತಂಡದ ನಾಯಕ, ಕನ್ನಡಿಗ ಕಾರ್ತಿಕ್‌ ಮತ್ತು ಕಾಲ್ಟನ್‌ ಕೊವೆಲ್‌ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಪುಟಿದೆದ್ದ ಕೊಚ್ಚಿ 15-14 ಅಂತರದಲ್ಲಿ ಸೆಟ್‌ ತನ್ನದಾಗಿಸಿಕೊಂಡಿತು.

ಎರಡನೇ ಸೆಟ್‌ನಲ್ಲಿ ಎರಡೂ ತಂಡಗಳು ಕತ್ತುಕತ್ತಿನ ಹೋರಾಟ ನೀಡಿದವು. ಒಂದು ಹಂತದಲ್ಲಿ ಪಂದ್ಯ 10-10ರಲ್ಲಿ ಸಮಬಲಗೊಂಡಿತ್ತು. ಕೊವೆಲ್‌ ಅವರ ಎರಡು ಅದ್ಭುತ ಸೈಕ್ಸ್‌ ನೆರವಿನಿಂದ ಕೊಚ್ಚಿ ಸತತ ಎರಡು ಸೂಪರ್‌ ಪಾಯಿಂಟ್‌ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಂತಿಮವಾಗಿ ಕಾರ್ತಿಕ್‌ ಪಡೆ 15-12 ಅಂತರದಲ್ಲಿ ಪಂದ್ಯ ಗೆದ್ದುಕೊಂಡು 2-0 ಮುನ್ನಡೆ ಕಂಡಿತು.

ಮೂರನೇ ಸೆಟ್‌ನಲ್ಲಿ ಜಯ ಗಳಿಸಿ ಪಂದ್ಯವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಹಂಬಲದಲ್ಲಿದ್ದ ಕೊಚ್ಚಿಯ ಲೆಕ್ಕಾಚಾರವನ್ನು ಬೆಂಗಳೂರು ತಲೆಕೆಳಗೆ ಮಾಡಿತು. ಎರಿನ್‌ ವರ್ಗೀಸ್‌ ಅವರ ಸ್ಪೈಕ್‌ನಿಂದ ಕೊಚ್ಚಿ 6-4ರಲ್ಲಿ ಮುನ್ನಡೆ ಕಂಡುಕೊಂಡರೂ ಸತತ ಎರಡು ಸೂಪರ್‌ ಪಾಯಿಂಟ್‌ ಗಳಿಸಿದ ಬೆಂಗಳೂರು 9-8 ರಲ್ಲಿ ಮೇಲುಗೈ ಸಾಧಿಸಿತು. ಇಲ್ಲಿಂದ ಕೊಚ್ಚಿಗೆ ತೆರುಗೇಟು ನೀಡಲಾಗಲಿಲ್ಲ. 15-13 ಅಂತರದಲ್ಲಿ ಬೆಂಗಳೂರು ಮೂರನೇ ಸೆಟ್‌ ತನ್ನದಾಗಿಸಿಕೊಂಡಿತು.

ನಾಲ್ಕನೇ ಸೆಟ್‌ನಲ್ಲಿ ಬೆಂಗಳೂರು 7-5 ಅಂತರದಲ್ಲಿ ಪಂದ್ಯದ ಮೇಲೆ ಆರಂಭದಲ್ಲಿ ಹಿಡಿತ ಸಾಧಿಸಿತ್ತು. ಬ್ಲೂ ಸ್ಪೈಕರ್ಸ್‌ ಉತ್ತಮ ರೀತಿಯಲ್ಲಿ ಪೈಪೋಟಿ ನೀಡಿ ಸೆಟ್‌ ವಶಪಡಿಸಿಕೊಳ್ಳಲು ಯತ್ನಿಸಿತು. ರೋಹಿತ್‌ ಅವರ ಅದ್ಭುತ ಬ್ಲಾಕ್ ನೆರವಿನಿಂದ ಬೆಂಗಳೂರು 13-8 ಅಂತರದಲ್ಲಿ ಮೇಲುಗೈ ಸಾಧಿಸಿತು. ಆದರೆ ಬ್ಲಾಕ್‌ ಮುಂದುವರಿಸಿದ ರಂಜಿತ್‌ ತಂಡಕ್ಕೆ ನಾಲ್ಕನೇ ಸೆಟ್‌ನಲ್ಲಿ ಜಯ ತಂದುಕೊಟ್ಟರು. ಇದರೊಂದಿಗೆ ಪಂದ್ಯ 2-2ರಲ್ಲಿ ಸಮಬಲಗೊಂಡಿತು.

ನಾಯಕ ಕಾರ್ತಿಕ್‌ ಅವರ ಅದ್ಭುತ ಸ್ಪೈಕ್‌ ನೆರವಿನಿಂದ ಐದನೇ ಸೆಟ್‌ನ ಆರಂಭದಲ್ಲಿ ಕೊಚ್ಚಿ 5-1 ಅಂತರದಲ್ಲಿ ಮುನ್ನಡೆದಿತ್ತು. ಟಾರ್ಪೆಡೊಸ್‌ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿತು, ಆದರೆ ಎರಿನ್‌ ವರ್ಗೀಸ್‌ ಅವರ ಸ್ಪೈಕ್‌ ನೆರವಿನಿಂದ ಬ್ಲೂ ಸ್ಪೈಕರ್ಸ್‌ 10-8 ಅಂತರದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿ ಸುರಕ್ಷಿತವಾಗಿತ್ತು. ಆದರೆ ಬೆಂಗಳೂರು ತಂಡ ಸೂಪರ್‌ ಪಾಯಿಂಟ್‌ ಗಳಿಸುವುದರೊಂದಿಗೆ ಪಂದ್ಯ 13-13ರಲ್ಲಿ ಸಮಬಲಗೊಂಡಿತು. ಆ ನಂತರ ಇತ್ತಂಡಗಳು ತಲಾ ಒಂದು ಅಂಕ ಗಳಿಸಿದವು, ಅಂತಿಮವಾಗಿ ಬೆಂಗಳೂತು ತಂಡ ಅದ್ಭುತ ಸ್ಪೈಕ್‌ ನೆರವಿನಿಂದ 15-14 ಅಂತರದಲ್ಲಿ ಸೆಟ್‌ ಗೆದ್ದು, ಪಂದ್ಯ ತನ್ನದಾಗಿಸಿಕೊಂಡಿತು.

 

Related Articles