ಮಂಗಳೂರು: ಭಾರತೀಯ ಸರ್ಫಿಂಗ್ ಫೆಡರೇಷನ್ Surfing Federation of India ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಣಂಬೂರ್ ಬೀಚ್‌ನಲ್ಲಿ ಜೂನ್ 1 ರಿಂದ 3 ರವರೆಗೆ ರಾಷ್ಟ್ರೀಯ ಮುಕ್ತ ಸರ್ಫಿಂಗ್ ಚಾಂಪಿಯನ್‌ಷಿಪ್ Indian Open Surfing Championship ನಡೆಯಲಿದೆ.
ಮೂರು ದಿನಗಳ ಕಾಲ ನಡೆಯಲಿರುವ ಚಾಂಪಿಯನ್‌ಷಿಪ್‌ನಲ್ಲಿ ಸಂಜೀವ್ ಕುಮಾರ್, ನಿತೀಶ್ವರನ್, ಸೂರ್ಯ ಪಿ, ರುಬಾನ್ ಡಿ, ಶ್ರೀಕಾಂತ್ ಡಿ, ಸತೀಶ್ ಸರ್ವನನ್, ಮಣಿಕಂಠನ್ ದೇಶಪ್ಪನ್ ಹಾಗೂ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
“ಭಾರತದ ಕರಾವಳಿಯು ಸರ್ಫಿಂಗ್ ಕ್ರೀಡೆಯನ್ನು ಜನಪ್ರಿಯಗೊಳಿಸಲು ಸೂಕ್ತವಾಗಿದೆ. ಸರ್ಫಿಂಗ್ ಕ್ರೀಡೆಯಿಂದ ಕೇವಲ ವೈಯಕ್ತಿಕ ಆರೋಗ್ಯದ ಲಾಭ ಮಾತ್ರವಲ್ಲ, ಬದಲಾಗಿ ಸ್ಥಳೀಯ ಸಮಾಜದ ಆರ್ಥಿಕ ಅಭಿವೃದ್ಧಿಗೂ ನೆರವಾಗಲಿದೆ. ಸರ್ಫ್ ತರಬೇತಿ ಕೇಂದ್ರಗಳು ಹಾಗೂ ಸಲಕರಣೆಗಳ ಬಾಡಿಗೆ ಮೂಲಕ ಈ ಕ್ರೀಡೆ ಸ್ಥಳೀಯ ವ್ಯವಹಾಗಳಿಗೂ ನೆರವಾಗಲಿದೆ,” ಎಂದು ಟೂರ್ನಿಯ ಪ್ರಧಾನ ಪಾಲುದಾರರಾದ ಜೈ ಹಿಂದ್ ಗ್ರೂಪ್‌ನ ಆಡಳಿತ ನಿರ್ದೇಶಕ ದಿವ್ಯ ಕುಮಾರ್ ಜೈನ್ ಹೇಳಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸರ್ಫಿಂಗ್ ಕ್ರೀಡೆಯು ಪದಾರ್ಪಣೆಗೊಳ್ಳಲಿದೆ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲು ಭಾರತ ಇದೇ ಮೊದಲ ಬಾರಿ ಸ್ಲಾವೆಡಾರ್ ನಲ್ಲಿ ನಡೆಯಲಿರುವ ಐಎಸ್‌ಎ ವಿಶ್ವ ಸರ್ಫಿಂಗ್ ಗೇಮ್ಸ್‌ನಲ್ಲಿ ನಾಲ್ವರು ಸ್ಪರ್ಧಿಗಳನ್ನು ಕಳುಹಿಸಲಿದೆ.
ಮಂಗಳೂರಿನಲ್ಲಿ ನಡೆಯಲಿರುವ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಸ್ಥಾನ ಪಡೆಯುವ ನಾಲ್ವರು ಸ್ಪರ್ಧಿಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ. ಇಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರಿದ್ದಲ್ಲಿ ಇತರ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದ್ದಾರೆ.