Saturday, July 27, 2024

ಅಥ್ಲೆಟಿಕ್ಸ್ ನಲ್ಲಿ ಸದ್ದಿಲ್ಲದೆ ಕ್ರಾಂತಿ ಮಾಡಿದ ಉಡುಪಿಯ ಜಾಹೀರ್ ಅಬ್ಬಾಸ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

 

ಕಳೆದ ಹತ್ತು ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಉಡುಪಿ ಜಿಲ್ಲೆ ತನ್ನದೇ ಆದ ದಾಖಲೆಯನ್ನು ನಿರ್ಮಿಸುತ್ತಿದೆ.

ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪದಕಗಳು ಉಡುಪಿಯ ಮಡಿಲು ಸೇರುತ್ತಿದೆ, ಒಬ್ಬ ಅಥ್ಲೀಟ್ ಇತ್ತೀಚೆಗೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೆ, ನಾಲ್ವರು ಅಥ್ಲೀಟ್ ಗಳು ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಗೆ ಆಯ್ಕೆಯಾಗಿದ್ದಾರೆ, ಒಬ್ಬ ಅಥ್ಲೀಟ್ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲುಆಯ್ಕೆಯಾಗಿದ್ದಾರೆ….ಇದೆಲ್ಲ ಸಾಧ್ಯವಾದದ್ದು ಉಡುಪಿಯ ಅಜ್ಜರಕಾಡಿನಲ್ಲಿರುವ ಉಡುಪಿ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅಕಾಡೆಮಿಯ ಕೋಚ್ ಉಡುಪಿಯ ಜಾಹೀರ್ ಅಬ್ಬಾಸ್ ಅವರ ಪರಿಶ್ರಮದ ಫಲದಿಂದ.

ರಾಷ್ಟ್ರೀಯ ಮಟ್ಟದಲ್ಲಿ 16 ಪದಕಗಳನ್ನು ಗೆದ್ದು ಈಗ ರೇಲ್ವೆಯಲ್ಲಿ ಉದ್ಯೋಗಿಯಾಗಿರುವ ಮನೀಶ್ ಪೂಜಾರಿ, ಖೇಲೋ ಇಂಡಿಯಾದಲ್ಲಿ ಚಿನ್ನದ ಸಾಧನೆ ಮಾಡಿ, ಉಸೇನ್ ಬೋಲ್ಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಆಯ್ಕೆಯಾಗಿರುವ ಅಭಿನ್ ದೇವಾಡಿಗ, ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಗೆ ಆಯ್ಕೆಯಾಗಿರುವ ಹಸನ್, ರೋಹಿತ್ ಮತ್ತು ಅಮರ್ ವಾಡ್ಕರ್ ಅವರು ಜಾಹೀರ್ ಅಬ್ಬಾಸ್ ಅವರ ತರಬೇತಿಯಲ್ಲಿ ಪಳಗಿದವರು. ಆಫ್ರೀದ್, ಅಂಕಿತಾ ಹಾಗೂ ಅನುಜ್ ಕೂಡಾ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಉಡುಪಿಗೆ ಕೀರ್ತಿ ತಂದವರು.

ರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೂ 30ಕ್ಕೂ ಹೆಚ್ಚು ಪದಗಳ ಸಾಧನೆಯನ್ನು ಈ ಅಕಾಡೆಮಿಯ ಕ್ರೀಡಾಪಟುಗಳು ಮಾಡಿದ್ದಾರೆ. ಎಂಟು ಕ್ರೀಡಾಪಟುಗಳು ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.

ಬೇರೆ ರಾಜ್ಯಗಳ ಅತಥ್ಲೀಟ್ ಗಳೂ ಜಾಹೀರ್ ಅಬ್ಬಾಸ್ ಅವರಲ್ಲಿ ತರಬೇತಿ ಪಡೆಯುತ್ತಾರೆ. ಆದರೆ ಇವರು ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವಂತಿಲ್ಲ ಎಂಬ ಷರತ್ತಿನ ಮೇಲೆ ತರಬೇತಿ ನೀಡಲಾಗುತ್ತಿದೆ ಎಂದು ಅಬ್ಬಾಸ್ ತಿಳಿಸಿದ್ದಾರೆ, ರಾಜ್ಯದ ಇತರ ಜಿಲ್ಲೆಗಳಿಂದಲೂ ಜಾಹೀರ್ ಅಬ್ಬಾಸ್ ಅವರಲ್ಲಿ ತರಬೇತಿಗಾಗಿ ಕ್ರೀಡಾಪಟುಗಳು ಆಗಮಿಸುತ್ತಾರೆ, ಬೆಳಗಾವಿ, ಬಿಪಾಪುರ ಹಾಗೂ ಚಿಕ್ಕೋಡಿಯ ಅಥ್ಲೀಟ್ ಗಳೂ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಜಮೈಕಾಕ್ಕೆ ಅಭಿನ್ ದೇವಾಡಿಗ!

ಇತ್ತೀಚೆಗೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ನಲ್ಲಿ ಚಿನ್ನದ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿರುವ ಅಭಿನ್ ದೇವಾಡಿಗ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಗೈಲ್) ಪ್ರಾಯೋಜಕತ್ವದಲ್ಲಿ ಒಂದು ತಿಂಗಳ ಕಾಲ ಜಗತ್ತಿನ ವೇಗದ ಓಟಗಾರ, ಒಲಿಂಪಿಕ್ಸ್ ನಲ್ಲಿ ದಾಖಲೆಯ ಚಿನ್ನ ಗೆದ್ದಿರುವ ಉಸೇನ್ ಬೋಲ್ಟ್ ಅವರಿಗೆ ತರಬೇತಿ ನೀಡಿದ ಗ್ಲೆನ್ ಮಿಲ್ಸ್ ಅವರು ಭಾರತದ ಯುವ ಓಟಗಾರರಿಗೆ ತರಬೇತಿ ನೀಡಲಿದ್ದಾರೆ, ಭಾರತದ ತಂಡದಲ್ಲಿ ಅಭಿನ್ ದೇವಾಡಿಗ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ, ಇದು ಉಡುಪಿಗೆ ಸಂದ ಗೌರವ ಎನ್ನುತ್ತಾರೆ ಕೋಚ್ ಜಾಹೀರ್ ಅಬ್ಬಾಸ್. ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಅಭಿನ್ 200 ಮೀ, ಓಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು, ಅದೇ ರೀತಿ ರಿಲಾಯನ್ಸ್ ಸ್ಪೋರ್ಟ್ಸ್ ಫೌಡೇಶನ್ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರೋಹಿತ್ 100 ಮೀಟರ್ ಓಟದಲ್ಲಿ ಕಂಚು ಹಾಗೂ 200 ಮೀ. ಆಟದಲ್ಲಿ ಚಿನ್ನದ ಸಾಧನೆ ಮಾಡಿ ಉಡುಪಿಗೆ ಕೀರ್ತಿ ತಂದಿದ್ದಾರೆ,

ಅಹಮದಾಬಾದ್ ನಲ್ಲಿ ಅಥ್ಲೆಟಿಕ್ಸ್ ತರಬೇತಿಗಾಗಿ ಆರು ತಿಂಗಳ ಅವಧಿಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರು ಜಾಹೀರ್ ಅವರಲ್ಲಿ ಈಗ ಸುಮಾರು 40ಕ್ಕೂ ಹೆಚ್ಚು ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ,

ಬಡ ಮಕ್ಕಳಿಗೆ ಉಚಿತ ತರಬೇತಿ

ತರಬೇತಿ ನೀಡುವುದನ್ನೇ ತನ್ನ ಉಸಿರಾಗಿಸಿಕೊಂಡಿರುವ ಜಾಹೀರ್ ಅಬ್ಬಾಸ್ ತರಬೇತಿಯ ವೇಳೆ ಕ್ರೀಡಾಪಟುಗಳಿಗೆ ಫಿಟ್ನೆಸ್, ಆಹಾರ ಪದ್ಧತಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಡೋಪಿಂಗ್ ನಿಂದಾಗುವ ಅನಾಹುತಗಳ ಬಗ್ಗೆ ಕ್ರೀಡಾಪಟುಗಳಲ್ಲಿ ಅರಿವು ಮೂಡಿಸುತ್ತಿರುವುದು ಗಮನಾರ್ಹ ಅಂಶ. ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲವಿದೆ, ಆದರೆ ಅನೇಕ ಮಕ್ಕಳಿಗೆ ಆರ್ಥಿಕ ಸಮಸ್ಯೆ ಕಾಡುವುದು ಸಹಜ. ಅಂಥ ಕ್ರೀಡಾಪಟುಗಳಿಗೆ ಜಾಹೀರ್ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.

‘’ಕ್ರೀಡೆಯನ್ನು ಕೇವಲ ಪದಕ ಗೆಲ್ಲುವ ಉದ್ದೇಶಕ್ಕಾಗಿ ಆಯ್ಕೆ ಮಾಡಿಕೊಳ್ಳುವುದು ಸೂಕ್ತವಲ್ಲ, ಓದಿನ ಜತೆಯಲ್ಲಿ ಉತ್ತಮ ಆರೋಗ್ಯ ಇದ್ದರೆ ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡಬಹುದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದವರಿಗೆ ಶೈಕ್ಷಣಿಕವಾಗಿ ನೆರವು ಸಿಗುತ್ತದೆ, ಉದ್ಯೋಗಕ್ಕೂ ನೆರವಾಗುತ್ತದೆ,’’ ಎನ್ನುತ್ತಾರೆ ಜಾಹೀರ್ ಅಬ್ಬಾಸ್.

Related Articles