Tuesday, March 19, 2024

ಮಂಗಳಮುಖಿಯರಿಗೆ ಒಲಿಂಪಿಕ್ಸ್ ನಲ್ಲಿ ಮಂಗಳವಾಗಲಿ!!

ಸೋಮಶೇಖರ್ ಪಡುಕರೆ, ಬೆಂಗಳೂರು

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಪದ್ಮಶ್ರೀ ಮಂಜಮ್ಮ ಜೋಗತಿ ಬದುಕಿನ ಕತೆ, ಅವರ ಸಾಹಸ ಹಾದಿ ಇವನ್ನೆಲ್ಲ ಕಂಡ ನಮಗೆ ಮಂಗಳಮುಖಿಯೊಬ್ಬರು ಜಾಗತಿಕ ಮಟ್ಟದಲ್ಲಿ ಮಿಂಚಿದರೆ ಖುಷಿಯೇ.

ಮಂಗಳಮುಖಿಯರಲ್ಲಿ ಅನೇಕರು ಶಿಕ್ಷಣ ಪಡೆದು ಸಮಾಜದ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಸತ್ಯಾಶ್ರೀ ಶರ್ಮಿಳಾ ಮೊದಲ ವಕೀಲರು, ಮಾನಾಬಿ ಭಂಡೋಪಾಧ್ಯಾಯ ಮೊದಲ ಕಾಲೇಜು ಪ್ರಾಂಶುಪಾಲರು, ಜ್ಯೋತಿ ಮಂಡಲ್ ಮೊದಲ ನ್ಯಾಯಾಧೀಶರು, ಪ್ರತಿಕಾ ಯಾಶಿನಿ ಮೊದಲ ಪೊಲೀಸ್ ಅಧಿಕಾರಿ, ಮಮ್ತಾಜಿ ವಿಧಾನ ಸಭೆಗೆ ಪಂಜಾಬ್ ನಲ್ಲಿ ಸ್ಪರ್ಧಿಸಿದ್ದ ಮೊದಲ ಮಂಗಳಮುಖಿ, ಶಬ್ನಂ ಮೌಸಿ ಭಾರತದ ಮೊದಲ ಮಂಗಳಮುಖಿ ಶಾಸಕರು, ಮೊದಲ ಬಾರಿಗೆ ನೌಕಾಪಡೆ ಸೇರಿದ ಶಬಿ ಹೀಗೆ ಸಾಧನೆಗಳ ಪಟ್ಟಿ ಬೆಳೆಯುತ್ತದೆ….ಇವರ ನೆನಪಾಗಲು ಮುಖ್ಯ ಕಾರಣ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೂವರು ಮಂಗಳಮುಖಿಯರು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಈ ಕಾರಣಕ್ಕೆ ಒಲಿಂಪಿಕ್ಸ್ ಎಂದರೆ ಬರೇ ಪದಕವಲ್ಲ ಅದು ಸಮಾನತೆ ಕಲ್ಪಿಸುವ, ಎಲ್ಲರನ್ನೂ ಗೌರವಿಸುವ ವೇದಿಕೆ.

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) 2005 ರಿಂದ ಮಂಗಳಮುಖಿಯರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸ್ಪರ್ಧಿಸಿತು. ಅಲ್ಲಿಂದ ಮಂಗಳಮುಖಿಯರು ವಿವಿಧ ಕ್ರೀಡೆಗಳಲ್ಲಿ ಅಭ್ಯಾಸ ನಡೆಸಲಾರಂಭಿಸಿದರು. ಭಾರತದಲ್ಲಿ 2017ರಲ್ಲಿ ತಿರುವನಂತಪುರದಲ್ಲಿ ಮಂಗಳಮುಖಿಯರಿಗಾಗಿಯೇ ಕ್ರೀಡಾಕೂಟ ನಡೆಯಿತು. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಸಲಿಂಗಿ ದೂತಿ ಚಾಂದ್ ಹೊರತಾಗಿ ಮಂಗಳಮುಖಿಯರು ಕ್ರೀಡೆಯಲ್ಲಿ ಜಾಗತಿಕ ಮಟ್ಟದಲ್ಲಿ ಮಿಂಚಿದ್ದಿಲ್ಲ. ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಮೂವರು ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ಇತಿಹಾಸ ಬರೆದಿದ್ದಾರೆ.

ಕೆನಡಾದ ಕ್ವಿನ್ನ್:

ಕೆನಡಾ ಮತ್ತು ಜಪಾನ್ ನಡುವೆ ಪಪ್ಪೊರೊದಲ್ಲಿ ನಡೆದ ಮಹಿಳಾ ಫುಟ್ಬಾಲ್ ಪಂದ್ಯದ 1-1ರಲ್ಲಿ ಸಮಬಲಗೊಂಡಿತು. ಆದರೆ ಆ ಪಂದ್ಯದಲ್ಲಿ ಮಂಗಳಮುಖಿಯೊಬ್ಬರು ಆಡುವ ಮೂಲಕ ಕ್ರೀಡಾ ಜಗನ್ನಿನಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಕೆನಡಾ ತಂಡದ ಮಿಡ್ ಫೀಲ್ಡರ್ ಕ್ವಿನ್ ಮಂಗಳಮುಖಿಯಾಗಿ ಮಹಿಳಾ ತಂಡದೊಂದಿಗೆ ಆಡಿದರು. ರೆಬೆಕಾ ಕ್ಯಾಥರಿನ್ ಕ್ವಿನ್ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ.  ತಂದೆ ಕೆನಡಾದ ರಗ್ಬಿ ಆಟಗಾರ, ತಾಯಿ ಬಾಸ್ಕೆಟ್ ಬಾಲ್ ಆಟಗಾರ್ತಿ. ರಿಯೋ ಒಲಿಂಪಿಕ್ಸ್ ನಲ್ಲಿ  ಕಂಚಿನ ಪದಕ ಗೆದ್ದ ಕೆನಡಾ ತಂಡದ ಸದಸ್ಯೆ ಆಗಿದ್ದ ಕ್ವಿನ್ನ್ 2020ರಲ್ಲಿ ತಾನು ಮಂಗಳಮುಖಿ ಎಂಬುದನ್ನು ಬಹಿರಂಗಪಡಿಸಿದರು, ಈಗ ಒಲಿಂಪಿಕ್ಸ್ ನಲ್ಲಿ ಕೆನಡಾ ತಂಡ ಆಡುತ್ತಿದ್ದ ಸೆಮಿಫೈನಲ್ ತಲುಪಿದೆ. “ನನಗೀಗ ತಂಡದೊಂದಿಗೆ ಸರದಿಯಲ್ಲಿ ನಿಲ್ಲಲು ಹೆಮ್ಮೆ ಅನಿಸುತ್ತಿದೆ. ಈ ಜಗತ್ತಿಗೆ ಹೆದರಿ ಅನೇಕ ಒಲಿಂಪಿಯನ್ನರು ಸತ್ಯವನ್ನು ಮುಚ್ಚಿಟ್ಟಿರುವ ವಿಷಯ ತಿಳಿದು ಬೇಸರ ಆಗುತ್ತಿದೆ,” ಎಂದು ಕ್ವಿನ್ನ್ ಹೇಳಿದ್ದಾರೆ.

ಕ್ವಿನ್ನ್ ಅವರು 2020ರಲ್ಲಿ  ತಾನೊಬ್ಬ ಮಂಗಳಮುಖಿ ಎಂದು ಘೋಷಿಸಿದ್ದರು.

FILE PHOTO: Weightlifting – Gold Coast 2018 Commonwealth Games – Women’s +90kg – Final – Carrara Sports Arena 1 – Gold Coast, Australia – April 9, 2018. Laurel Hubbard of New Zealand competes. REUTERS/Paul Childs/File Photo

ಪರೀಕ್ಷೆಯ ನಂತರ ಸ್ಪರ್ಧೆ:

ಮಂಗಳಮುಖಿಯರು ನೇರವಾಗಿ ಮಹಿಳಾ ವಿಭಾಗದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಸ್ಪರ್ಧೆಗೆ ಮುನ್ನ 12 ತಿಂಗಳು ಮುನ್ನ ಅಥ್ಲೀಟ್ ಗಳು ತಮ್ಮ ಲೈಂಗಿಕ ಹಾರ್ಮೋನು (testosterone) ಕಡಿಮೆ ಪ್ರಮಾಣದಲ್ಲಿರುವುದನ್ನು ಸಾಬೀತುಪಡಿಸಬೇಕು.

ಲಾರೆಲ್ ಹಬ್ಬಾರ್ಡ್

 ಹತ್ತು ವರ್ಷಗಳ ಹಿಂದೆ ಪುರುಷರ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಸ್ಪರ್ಧಿಸುತ್ತಿದ್ದ ನ್ಯೂಜಿಲೆಂಡ್ ನ ಮಹಿಳಾ ವೇಟ್ ಲಿಫ್ಟರ್ ಲಾರೆಲ್ ಹಬ್ಬಾರ್ಡ್ ಟೋಕಿಯೋದಲ್ಲಿ ಮಹಿಳಾ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಸ್ಪರ್ಧಿಸಿ ಇತಿಹಾಸ ನಿರ್ಮಿಸಿದರು. 43 ವರ್ಷದ ಹಬ್ಬಾರ್ಡ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದ ಅತ್ಯಂತ ಹಿರಿಯ ವೇಟ್ ಲಿಫ್ಟರ್ ಎನಿಸಿದ್ದಾರೆ. ಹಬ್ಬಾರ್ಡ್ ಅವರು ಒಲಿಂಪಿಕ್ಸ್ ಗೆ ಆಯ್ಕೆಯಾಗಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ನ್ಯೂಜಿಲೆಂಡ್ ಸರ್ಕಾರ ಮಾನವ ಹಕ್ಕುಗಳ ನಿಯಮ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ನಿಯಮಗಳನ್ನು ಅನುಸರಿಸಿ ಹಬ್ಬಾರ್ಡ್ ಅವರನ್ನು ಟೋಕಿಯೋಗೆ ಕಳುಹಿಸಿತ್ತು. ಆಗಸ್ಟ್ 2ರಂದು ಹಬ್ಬಾರ್ಡ್ 87ಕೆಜಿ ಹೆಚ್ಚಿನ ಭಾರ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಚೆಲ್ಸಿ ವೂಫ್:

“ಪದಕ ಗೆದ್ದರೆ ಪೋಡಿಯಂನಲ್ಲೇ ಅಮೆರಿಕದ ಧ್ವಜವನ್ನು ಸುಟ್ಟು ಹಾಕುವೆ” ಎಂದು ಫೇಸ್ಬುಕ್ ನಲ್ಲಿ ಹೇಳಿಕೆ ನೀಡಿ ಆ ನಂತರ ಅದನ್ನು ತೆಗೆದು ಹಾಕಿದರೂ ಸಾಕಷ್ಟು ಟೀಕೆಗೆ ಗುರಿಯಾಗಿರುವ ಬಿಎಂಎಕ್ಸ್ ಫ್ರೀಸ್ಟೈಲ್ ತಂಡದಲ್ಲಿದ್ದ ಚೆಲ್ಸಿ ವೂಫ್ ಅಮೆರಿಕದಿಂದ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಮಂಗಳಮುಖಿ. ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು ಮಂಗಳಮುಖಿಯರು ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಅವರು ತಳೆದಿದ್ದ ನಿಲುವೇ ಕಾರಣವಾಗಿತ್ತು.

ವಿಶ್ವ ಚಾಂಪಿಯನ್ಷಿಪ್ ನಲ್ಲಿ ಐದನೇ ಸ್ಥಾನ ಗಳಿಸುವ ಮೂಲಕ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಹನ್ನಾ ರಾಬರ್ಟ್ ಮತ್ತು ಪೆರ್ರಿಸ್ ಬೆನೆಗಸ್ ಸ್ಪರ್ಧಿಸಲು ಅಸಾಧ್ಯವಾದಲ್ಲಿ ಮಾತ್ರ ವೂಫ್ ಸ್ಪರ್ಧೆಗಿಳಿಯಲಿದ್ದಾರೆ.

Related Articles