Friday, October 4, 2024

ಪುರುಷರು ಸಂಭ್ರಮಿಸುತ್ತಿದ್ದಾರೆ, ಮಹಿಳೆಯರು ಅಳುತ್ತಿದ್ದಾರೆ: ಇದು ಆಫ್ಘಾನ್‌ ಕ್ರೀಡೆ

 

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅಫಘಾನಿಸ್ತಾನ ತಂಡ ಉತ್ತಮ ಪ್ರದರ್ಶನ ತೋರಿ ಕ್ರಿಕೆಟ್‌ ಜಗತ್ತಿನ ಪ್ರೀತಿಗೆ ಪಾತ್ರವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ತಾಲಿಬಾನ್‌ ಆಡಳಿತದಲ್ಲಿರುವ ಅಫಘಾನಿಸ್ತಾನದ ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇಲ್ಲಿನ ಅನೇಕ ಕ್ರೀಡಾಪಟುಗಳು ದೇಶವನ್ನು ಬತೊರೆದು ಬೇರೆ ದೇಶಗಳಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (IOC) ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ICC) ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. IOC should think about women sports in Afghanistan.

2021ರಲ್ಲಿ ಅಫಘಾನಿಸ್ತಾನವನ್ನು ತಾಲಿಬಾನ್‌ ಪಡೆ ವಶಪಡಿಸಿಕೊಂಡ ನಂತರ ಅಲ್ಲಿನ ಮಹಿಳಾ ಕ್ರೀಡಾಪಟುಗಳನ್ನು ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಲಾಗಿತ್ತು. ಇದಕ್ಕೂ ಮುನ್ನ ಅಫಘಾನಿಸ್ತಾನದ ಪುರುಷರ ಕ್ರಿಕೆಟ್‌ ತಂಡಕ್ಕೆ ಐಸಿಸಿ ಸದಸ್ಯತ್ವ ಹಾಗೂ ಟೆಸ್ಟ್‌ ಆಡುವ ಮಾನ್ಯತೆ ಸಿಕ್ಕಿತ್ತು. ಇದರಿಂದಾಗಿ ಆ ದೇಶದಲ್ಲಿ ಮಹಿಳೆಯರಿಗೂ ಕ್ರಿಕೆಟ್‌ ಆಡಲು ಅವಕಾಶ ಕಲ್ಪಿಸಲು ಅಲ್ಲಿಯ ಸರಕಾರ ತೀರ್ಮಾನಿಸಿತ್ತು. ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿ 80 ಮಹಿಳಾ ಕ್ರಿಕೆಟಿಗರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಿರುವುದಲ್ಲದೆ, ಸ್ಥಳೀಯವಾಗಿ ಟೂರ್ನಿಗಳನ್ನು ಆಯೊಜಸಿತ್ತು. ಆದರೆ ತಾಲಿಬಾನ್‌ ಅಡಳಿತ ಬಂದಾಗಿನಿಂದ ಅಲ್ಲಿ ಮಹಿಳೆಯರು ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುವಂತಿಲ್ಲ.

ತಾಲಿಬಾನ್‌ ಆಡಳಿತ ಬರುತ್ತಿದ್ದಂತೆ ಅಲ್ಲಿಯ ಮಹಿಳಾ ಕ್ರೀಡಾಪಟುಗಳಿಗೆ ಜೀವ ಬೆದರಿಕೆ ಬರತೊಡಗಿತು. ಇದರಿಂದಾಗಿ ಅನೇಕ ಕ್ರೀಡಾಪಟುಗಳು ತಾಯ್ನಾಡನ್ನು ತೊರೆದು ಪಾಕಿಸ್ತಾನ, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ನೆಲೆಸಿದ್ದಾರೆ. ತಾಲಿಬಾನಿನ ಈ ನೀತಿಯಿಂದಾಗಿಯೇ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಅಫಘಾನಿಸ್ತಾನ ಪುರುಷರ ಕ್ರಿಕೆಟ್‌ ತಂಡದ ವಿರುದ್ಧ ದ್ವಿಪಕ್ಷೀಯ ಸರಣಿ ಆಡಲು ಒಪ್ಪಿಕೊಂಡಿಲ್ಲ, ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಅಫಘಾನಿಸ್ತಾನವನ್ನು ತೊರೆದು ಬಂದ ಮಹಿಳಾ ಕ್ರಿಕೆಟಿಗರ ಜೊತೆ ಸಮಾಲೋಚನೆ ನಡೆಸಿ ತನ್ನ ತೀರ್ಮಾನವನ್ನು ಸ್ಪಷ್ಟಪಡಿಸಿತ್ತು. ಮಹಿಳೆ ಹಾಗೂ ಪುರುಷರನ್ನು ಸಮಾನವಾಗಿ ಕಾಣದವರೊಂದಿಗೆ ಯಾವ ಕ್ರೀಡಾ ಸಂಬಂಧವೆಂಬುದು ಆಸೀಸ್‌ನ ನಿಲುವಾಗಿತ್ತು. ಅಫಘಾನಿಸ್ತಾನದ ಮಹಿಳಾ ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಉದ್ದೇಶದಿಂದಲೇ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಯುಎಇಯಲ್ಲಿ ಅಫಘಾನಿಸ್ತಾನದ ವಿರುದ್ಧ ಸರಣಿಯಾಡಲು ನಿರಾಕರಿಸಿತ್ತು,

ಇತ್ತೀಚಿಗೆ ಚೀನಾದ ಹಾಂಗ್ಜೌನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಅಫಘಾನಿಸ್ತಾನದ 83 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅದರಲ್ಲಿ 15 ಮಂದಿ ಮಹಿಳಾ ಕ್ರೀಡಾಪಟುಗಳು. ಅವರು ಅಫಘಾನಿಸ್ತಾನದಿಂದ ಬಂದವರಲ್ಲ. ಬೇರೆ ದೇಶಗಳಿಗೆ ಗಡಿಪಾರಾದವರು, ತಾಲಿಬಾನಿಗಳಿಗೆ ಹೆದರಿ ದೇಶಬಿಟ್ಟವರು. ಇದರಿಂದಾಗಿ ಅಫಘಾನಿಸ್ತಾನದ ಹೆದರಲ್ಲಿ ಎರಡು ಪ್ರತ್ಯೇಕ ಪಥ ಸಂಚಲನೆ ನಡೆದಿತ್ತು. ಮಹಿಳಾ ಕ್ರೀಡಾಪಟುಗಳು ಅಫಘಾನಿಸ್ತಾನದ ಧ್ವಜ ಹಿಡಿದು ಪಥ ಸಂಚಲನ ಮಾಡುಲು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲಿ ಹಾಜರಿದ್ದ ಎಲ್ಲ ಮಹಿಳಾ ಕ್ರೀಡಾಪಟುಗಳಿಗೂ ಅಫಘಾನಿಸ್ತಾನಕ್ಕೆ ಕ್ರೀಡೆಯ ಮೂಲಕ ಕೀರ್ತಿ ತರಬೇಕೆಂಬ ಹಂಬಲವಿದೆ, ಆದರೆ ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳದಂತೆ ಮಾಡಿದ ತಾಲೀಬಾನ್‌ ಆಡಳಿತದಲ್ಲಿ ಇರುವ ತನಕ ಆ ದೇಶದ ಧ್ವಜವನ್ನು ಹಿಡಿಯುವುದಿಲ್ಲ ಎಂಬ ಛಲ. ಎಲ್ಲಕ್ಕಿಂತ ಮುಖ್ಯವಾಗಿ ದೇಶವನ್ನು ತೊರೆದ ನೂರಾರು ಕ್ರೀಡಾಪಟುಗಳಿಗೆ ಆತಂಕವಿದೆ. ಕೆಲವರು ಹೆಸರು ಹೇಳಿಕೊಂಡರೆ ಇನ್ನು ಕೆಲವರು ಹೆಸರು ಬಹಿರಂಗಗೊಳಿಸಲು ಹೆದರುತ್ತಿದ್ದಾರೆ. ನಮ್ಮಿಂದಾಗಿ ಅಫಘಾನಿಸ್ತಾನದಲ್ಲಿ ನೆಲೆಸಿರುವ ತಮ್ಮ ಕುಟುಂಬದವರಿಗೆ ಕಷ್ಟ ಆಗಬಾರೆಂಬುದು ಅವರ ಕಾಳಜಿ.

ಕ್ರೀಡೆಯ ಮೂಲಕ ಜಗತ್ತು ಒಂದಾಗಬೇಕೆಂಬುದೇ ಒಲಿಂಪಿಕ್ಸ್‌ನ ದ್ಯೇಯ, ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡಾಕೂಟಗಳು ಪದಕಗಳನ್ನು ಗೆಲ್ಲುವುದಕ್ಕಾಗಿಯೇ ಹೊರತು ಪ್ರಭುತ್ವ ಸಾಧಿಸಲು ಎಂಬುದು ಸುಳ್ಳು, ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ತಾಲಿಬಾನಿಗಳ ಮೂಲಭೂತವಾದವನ್ನು ಹತ್ತಿಕ್ಕಿ ಅಲ್ಲಿಯ ಮಹಿಳೆಯರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಾಗಬೇಕು, ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಗೆ ಇತರ ರಾಷ್ಟ್ರಗಳು ಒತ್ತಡ ಹೇರಬೇಕು. ಒಬ್ಬ ಮಹಿಳಾ ಕ್ರೀಡಾಪಟು ಎಲ್ಲೋ ಅವಿತು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಮಾನವ ಜಗತ್ತಿಗೇ ಕಳಂಕ,

Related Articles