Saturday, February 24, 2024

ಡಾ. ಕುಮಾರನ್ ಸಂಪತ್; ಓಟವೇ ಇವರ ಸಂಪತ್ತು

ಸೋಮಶೇಖರ್ ಪಡುಕರೆ, ಬೆಂಗಳೂರು

 

If you want to run, run a mile. If you want to experience a different life, run a marathon.

Emil Zatopek

ಅಕ್ಟೋಬರ್ 10ರಂದು ಅಮೆರಿಕದ ಚಿಕಾಗೋದಲ್ಲಿ ನಡೆಯಲಿರುವ ಜಗತ್ತಿನ ಪ್ರಮುಖ ಮ್ಯಾರಥಾನ್ ಗಳಲ್ಲಿ ಒಂದಾದ ಚಿಕಾಗೋ ಮ್ಯಾರಥಾನ್ ಗೆ ಬೆಂಗಳೂರಿನ ಡಾ. ಕುಮಾರನ್ ಸಂಪತ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಬ್ಯಾಂಕರ್ ಆಗಿರುವ ಸಂಪತ್ ಚಿಕ್ಕಂದಿನಿಂದಲೂ ಓಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಶಾಲಾ, ಕಾಲೇಜು ದಿನಗಳಲ್ಲಿ ಕ್ರಿಕೆಟ್ ಮತ್ತು ಓಟದಲ್ಲಿ ಮಿಂಚಿರುವ ಸಂಪತ್, ಕ್ರಿಕೆಟ್ ತೊರೆದರೂ ಓಟವನ್ನು ನಿತ್ಯದ ಚಟುವಟಿಕೆಯಾಗಿಸಿಕೊಂಡಿದ್ದಾರೆ.

2021ನೇ ಸಾಲಿನ ಪ್ರತಿಷ್ಠಿತ ಉದ್ಯೋಗ ಭಾರತಿ ಪ್ರಶಸ್ತಿಗೆ ಭಾಜನರಾಗಿರುವ ಡಾ. ಕುಮಾರನ್ ಸಂಪತ್ (Managing Director & CEO of AEGMA Capital) ಈಗಾಗಲೇ ಹಲವಾರು ಮ್ಯಾರಥಾನ್ ಗಳಲ್ಲಿ ಪಾಲ್ಗೊಂಡು ಯಶಸ್ವಿ ಓಟಗಾರರೆನಿಸಿದ್ದು, ತಮ್ಮ ನಿತ್ಯದ ಬದುಕು ಸದಾ ಚಟುವಟಿಕೆಯಿಂದ ಕೂಡಿರಲು ಓಟ ಅಥವಾ ಮ್ಯಾರಥಾನ್ ಕಾರಣ ಎನ್ನುತ್ತಾರೆ.

ಚಿಕಾಗೊ ಮ್ಯಾರಥಾನ್ 2018ರಲ್ಲಿ ಚಿಕಾಗೊ ನಗರಕ್ಕೆ 2,813 ಕೋಟಿ ರೂ. ಆದಾಯವನ್ನು ತಂದುಕೊಟ್ಟ ಪ್ರತಿಷ್ಠಿತ ಮ್ಯಾರಥಾನ್. ಅಷ್ಟೇ ಅಪಾಯಕಾರಿಯೂ ಹೌದು. ಇದುವರೆಗೂ ಆರು ಮಂದಿ ಓಟಗಾರರು ಇಲ್ಲಿ ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ. “ಇಂಥ ಪ್ರತಿಷ್ಠಿತ ಮ್ಯಾರಥಾನ್ ನಲ್ಲಿ ಒಬ್ಬ ಕನ್ನಡಿಗನಾಗಿ ಭಾರತವನ್ನು ಪ್ರತಿನಿಧಿಸಲು ನನಗೆ ಹೆಮ್ಮೆ ಅನಿಸುತ್ತಿದೆ,” ಎನ್ನುತ್ತಾರೆ ಡಾ. ಕುಮಾರನ್.ಸಂಪತ್

ಕ್ರಿಕೆಟ್ ನಲ್ಲಿ ವಿಶ್ವದಾಖಲೆ!!!

ಡಾ. ಕುಮಾರನ್ ಅವರ ಓಟದ ಬದುಕಿನ ಬಗ್ಗೆ ಅರಿತುಕೊಳ್ಳುವುದಕ್ಕೆ ಮುನ್ನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅವರು ನಿರ್ಮಿಸಿದ ವಿಶ್ವದಾಖಲೆಯೊಂದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಇದೊಂದು ಅಪೂರ್ವ ದಾಖಲೆಯಾದ ಕಾರಣ ಅದನ್ನು ವಿಶ್ವದಾಖಲೆ ಎಂದೇ ಕರೆಯಬೇಕಾಗುತ್ತದೆ. ಒಂದೇ ಓವರ್ ನಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಗಳಿಸಿದ ಲಸಿತ್ ಮಾಲಿಂಗ, ರಶೀದ್ ಖಾನ್ ಬಗ್ಗೆ ಗೊತ್ತೇ ಇದೆ. ಅದರಲ್ಲಿ ಕ್ಲೀನ್ ಬೌಲ್ಡ್ , ಎಲ್ಬಿಡಬ್ಲ್ಯು, ಕ್ಯಾಚ್ ಎಲ್ಲ ಸೇರಿರಬಹುದು. ಆದರೆ ನಾಲ್ಕು ಎಸೆತಗಳಲ್ಲಿ ನಾಲ್ಕೂ ಕ್ಲೀನ್ ಬೌಲ್ಡ್ ಮಾಡಿದ ದಾಖಲೆ ಇದುವರೆಗೂ ಕಂಡು ಬಂದಿಲ್ಲ. 1998 ಜುಲೈ 4 ರಂದು ನಡೆದ ಕೆಎಸ್ಸಿಎ ದಿ ಹಿಂದೂ ಟ್ರೋಫಿ ಸೂಪರ್ ಡಿವಿಜನ್ ಪಂದ್ಯ. ಅದು ಬಿಇಎಲ್ ಮತ್ತು ಎಸ್ ಬಿಎಂ ನಡೆವೆ ನಡೆದಿತ್ತು. ಕುಮಾರನ್ ಸಂಪತ್ ಆವಾಗ ಬಿಇಎಲ್ ಪರ ಆಡುತ್ತಿದ್ದರು. ಎಸ್ಬಿಎಂ ನಲ್ಲಿ ರಾಜ್ಯದ ಪ್ರಮುಖ ಆಟಗಾರರಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಬಿಇಎಲ್ 30 ಓವರ್ ಗಳಲ್ಲಿ 170 ರನ್ ಗಳಿಸಿತ್ತು. ಕುಮಾರನ್ 31 ರನ್ ಗೆ ನಾಲ್ಕು ವಿಕೆಟ್ ಗಳಿಸಿದರೂ ಬಿಇಎಲ್ ಸೋಲನುಭವಿಸಿತ್ತು. ಆದರೆ ಆ ನಾಲ್ಕು ಎಸೆತಗಳಲ್ಲಿ ಗಳಿಸಿದ ನಾಲ್ಕು ಕ್ಲೀನ್ ಬೌಲ್ಡ್ ವಿಕೆಟ್ ಸಾಧನೆ ಇಂದಿಗೂ ಅಳಿಸಲಾಗದ ದಾಖಲೆಯಾಗಿ ಉಳಿದಿದೆ. ಓಟಗಳ ನಡುವೆ ಕುಮಾರನ್ ಆ ಸವಿ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಓಟವೇ ಬದುಕಿಗೆ ಸ್ಫೂರ್ತಿಯಾದಾಗ!:

ಮ್ಯಾರಥಾನ್ ಅಂದರೆ ನಿರಂತರ ಓಟ. ಅದು ಕೇವಲ ದೈಹಿಕ ಆರೋಗ್ಯಕ್ಕಾಗಿ ಮಾತ್ರವಲ್ಲ, ಮನಸ್ಸಿನ ಆರೋಗ್ಯ ಮತ್ತು ವ್ಯವಹಾರದಲ್ಲಿ ಧನಾತ್ಮಕ ಚಿಂತನೆಗಳಿಗೆ ನೆರವಾಗುತ್ತದೆ, ಮಾತ್ರವಲ್ಲ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವಲ್ಲಿಯೂ ನೆರವಾಗುತ್ತದೆ,” ಎನ್ನುತ್ತಾರೆ ಡಾ. ಕುಮಾರನ್ ಸಂಪತ್.  ಎನ್ಇಬಿ ಸ್ಪೋರ್ಟ್ಸ್ 2017-18ರಲ್ಲಿ ಅಮೆಚೂರ್ ಓಟಗಾರರಿಗಾಗಿ ಆಯೋಜಿಸಿದ್ದ “ನ್ಯಾಷನಲ್ ಮ್ಯಾರಥಾನ್ ಸರ್ಕಿಟ್ (National Marathon Circuit) ಅನ್ನು ಪೂರ್ಣಗೊಳಿಸಿದ ಹೆಮ್ಮೆ ಕುಮಾರನ್ ಅವರದ್ದು. 2018ರಲ್ಲಿ ಪ್ರೊಕ್ಯಾಮ್ ಆಯೋಜಿಸಿದ್ದ ಮೊದಲ ಗ್ರ್ಯಾಂಡ್ ಸ್ಲಾಮ್ ಸ್ಪರ್ಧೆ ಪ್ರೊಕ್ಯಾಮ್ ಸ್ಲ್ಯಾಮ್ 2018-19 ಪೂರ್ಣಗೊಳಿಸುವಲ್ಲಿ ಕುಮಾರನ್ ಯಶಸ್ವಿಯಾದರು.

2019ರಲ್ಲಿ 12 ಗಂಟೆಗಳ ಅಲ್ಟ್ರಾ ಮ್ಯಾರಥಾನ್ ಸ್ಟೇಡಿಯಂ ರನ್ ಕೂಡ ಪೂರ್ಣಗೊಳಿಸಿದರು. ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಮ್ಯಾರಥಾನ್ ಗಳಲ್ಲಿ ಒಂದೆನಿಸಿರುವ ಲಡಾಕ್ ಅಂತಾರಾಷ್ಟ್ರೀಯ ಮ್ಯಾರಥಾನ್ ನಲ್ಲೂ ಪಾಲ್ಗೊಂಡ ಕೀರ್ತಿ ಡಾ. ಕುಮಾರನ್ ಗೆ ಸಲ್ಲುತ್ತದೆ.

ಒಬ್ಬ ಅಥ್ಲೀಟ್, ಕ್ರಿಕೆಟಿಗ, ಮ್ಯಾರಥಾನ್ ಓಟಗಾರ ಮತ್ತು ಯಶಸ್ವಿ ಉದ್ಯಮಿಯಾಗಿರುವ ಡಾ. ಕುಮಾರನ್ ಸಂಪತ್ ಚಿಕಾಗೊ ಮ್ಯಾರಥಾನ್ ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯರಲ್ಲಿ ಒಬ್ಬರು ಎನ್ನಲು ಕನ್ನಡಿಗಾರಾದ ನಮಗೆಲ್ಲ ಹೆಮ್ಮೆ.

ಸ್ಫೂರ್ತಿಯ ಸೆಲೆ:

ಹಲವಾರು ವರ್ಷಗಳಿಂದ ಮುಂಬೈಯಲ್ಲಿ ಮ್ಯಾರಥಾನ್ ನಡೆಯುತ್ತಿದೆ. ಇದು ಜಗತ್ತಿನ ಶ್ರೇಷ್ಠ ಮ್ಯಾರಥಾನ್ ಗಳಲ್ಲಿ ಒಂದು. ಟಾಟಾ ಕಂಪೆನಿಯು ಪ್ರಾಯೋಜಕತ್ವ ನೀಡಲಾರಂಭಿಸಿದಾಗಿನಿಂದ ಅದರ ಮೌಲ್ಯ ಮತ್ತಷ್ಟು ಹೆಚ್ಚಿದೆ. 2019ರಲ್ಲಿ ಮುಂಬೈ ಮ್ಯಾರಥಾನ್ ಯಾರು ಪೂರ್ಣಗೊಳಿಸುತ್ತಾರೋ ಅವರಿಗೆ ಎರಡು ಪದಕಗಳನ್ನು ನೀಡಲಾಗುತ್ತದೆ. ಪೂರ್ಣಗೊಳಿಸಿದ ಓಟಗಾರ ಆತನ ಬದುಕಿನಲ್ಲಿ ಯಾರು ಹೆಚ್ಚು ಸ್ಫೂರ್ತಿ ನೀಡಿರುತ್ತಾರೋ ಅವರಿಗೆ ಆ  ಎರಡನೇ ಪದಕವನ್ನು ತೊಡಿಸಬಹುದು. 2019ರ ರ ಪದಕವನ್ನು ತನ್ನ ಹೆತ್ತವರಿಗೆ ನೀಡಿದ ಕುಮಾರನ್, 2020ರ ಪದಕವನ್ನು ತನ್ನ ಪತ್ನಿಗೆ ಅರ್ಪಿಸಿದರು. ಈ ಕಾರಣಕ್ಕಾಗಿಯೇ ಮ್ಯಾರಥಾನ್ ಅಂದರೆ ಬರೇ ಓಟವಲ್ಲ, ಅದು ಬದುಕಿನ ಪಾಠ.

Related Articles