Saturday, July 27, 2024

ಒಲಿಂಪಿಕ್ಸ್‌ ಆತಿಥ್ಯ: ರಾಜಕಾರಣಿಗಳಿಗೆ ಹಬ್ಬ, ದೇಶಕ್ಕೆ ಹಗ್ಗ!

ಒಲಿಂಪಿಕ್ಸ್‌ ಆತಿಥ್ಯ ವಹಿಸುವುದು ಯಾವುದೋ ರಾಜಕೀಯ ಪಕ್ಷದ ರ್‍ಯಾಲಿ ನಡೆಸಿದಂತಲ್ಲ. ಜಪಾನ್‌ ಟೋಕಿಯೋ ಒಲಿಂಪಿಕ್ಸ್‌ಗೆ ಮಾಡಿದ ವೆಚ್ಚದ ಆಧಾರದ ಮೇಲೆ ಹೇಳುವುದಾದರೆ  2036ರಲ್ಲಿ Indian Ready to host 2036 Olympics ಆತಿಥ್ಯ ವಹಿಸಲು ಆಸಕ್ತಿ ತೋರಿರುವ ಭಾರತ ಒಲಿಂಪಿಕ್ಸ್‌ಗೆ ಕನಿಷ್ಠ 50 ಶತಕೋಟಿ ಡಾಲರ್‌ ಅಂದರೆ ಅಂದಾಜು 4 ಲಕ್ಷ ಕೋಟಿ ಹಣ ವ್ಯಯ ಮಾಡಬೇಕಾಗುತ್ತದೆ.

ಮುಂಬಯಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (IOC)ಯ 141ನೇ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2036ರ ಒಲಿಂಪಿಕ್ಸ್‌ ಆತಿಥ್ಯವನ್ನು ವಹಿಸಲು ಭಾರತ ಆಸಕ್ತಿ ವಹಿಸಿದೆ ಎಂದಿದ್ದಾರೆ. ಈ ಸಭೆ ಯಾರನ್ನು ಖುಷಿ ಪಡಿಸಲು ಮುಂಬೈಯಲ್ಲಿ ನಡೆಯುತ್ತಿದೆ ಎಂಬುದೇ ಅಚ್ಚರಿಯ ಸಂಗತಿ.

ಉದ್ಯಮಿ ಮುಕೇಶ್‌ ಅಂಬಾನಿಯವರ ಪತ್ನಿ ನೀತಾ ಅಂಬಾನಿಯವರು ಐಒಸಿ ಅಧ್ಯಕ್ಷ ಥಾಮಸ್‌ ಬ್ಯಾಚ್‌ ಅವರಿಗೆ ಔತಣ ಕೂಟ ಏರ್ಪಡಿಸುವುದು ಅದರಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳುವುದು ಖುಷಿಯ ಸಂಗತಿ. ಭಾರತ ಒಲಿಂಪಿಕ್ಸ್‌ ಆತಿಥ್ಯ ವಹಿಸುವಾಗ ಮೊನ್ನೆ ಊಟ ಮಾಡಿದವರಲ್ಲಿ ಮತ್ತು ಸಭೆಯಲ್ಲಿ ಪಾಲ್ಗೊಂಡವರಲ್ಲಿ ಎಷ್ಟು ಜನ ಬದುಕಿರುತ್ತಾರೆ ಎಂಬುದು ಬೇರೆ ಸಂಗತಿ.

ಅಭಿವೃದ್ಧಿ ಹೊಂದಿದ ದೇಶ ಜಪಾನ್‌ 2020ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ವೆಚ್ಚ ಮಾಡಿದ್ದು 35 ಶತಕೋಟಿ ಡಾಲರ್‌. ಅಂದರೆ 2.91 ಲಕ್ಷ ಕೋಟಿ ರೂ. ಭಾರತವೂ ಇದಕ್ಕಿಂತ ಹೆಚ್ಚು ಹಣವನ್ನು ವ್ಯಯ ಮಾಡಬಹುದು. ಆದರೆ ಭಾರತದಂಥ ರಾಷ್ಟ್ರಕ್ಕೆ ಇದು ಎಷ್ಟು ಮುಖ್ಯ ಮತ್ತು ಎಷ್ಟು ಲಾಭವನ್ನು ತರಬಹುದು ಎಂಬುದನ್ನೂ ಅರ್ಥಶಾಸ್ತ್ರಜ್ಞರು ಗಮನಿಸಬೇಕಾಗುತ್ತದೆ. ಜಪಾನ್‌ನಲ್ಲಿ ಮೂಲಭೂತ ಸೌಖರ್ಯಗಳು ಉತ್ತಮವಾಗಿರುವಷ್ಟು ಭಾರತದಲ್ಲಿಲ್ಲ. ನೂರಾರು ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ಅಂಗಣಲ್ಲಿ ಪ್ರೇಕ್ಷಕರೇ ಇಲ್ಲದಾಗ ಈ ಕ್ರೀಡಾಕೂಟದ ನಷ್ಟ ಭರಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಲಾಭದಲ್ಲಿ ಅರ್ಧದಷ್ಟು ಭಾಗವನ್ನು ಅಂತಾಆರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ ಬಾಚಿಕೊಳ್ಳುತ್ತದೆ.

ಜಾಗತಿಕ ಮಟ್ಟದ ಕ್ರೀಡಾಕೂಟಗಳನ್ನು ನಡೆಸುವುದರಿಂದ ಜನಪ್ರತಿನಿಧಿಗಳಿಗೆ ಲಾಭವಾಗುವುದು ಸಹಜ. ಖರೀದಿ, ಟೆಂಡರ್‌ ಮೊದಲಾದ ವ್ಯವಹಾರ ಹುಲುಸಾಗಿ ನಡೆಯುತ್ತದೆ. ಈ ಬಗ್ಗೆ ಹೆಚ್ಚಿನ ಅನುಭವವನ್ನು ಮಾಜಿ ಕೇಂದ್ರ ಸಚಿನ ಸುರೇಶ್‌ ಕಲ್ಮಾಡಿ ಅವರಿಂದ ಪಡೆದುಕೊಳ್ಳಬಹುದು. ಅವರ ಹಾದಿಯಲ್ಲೇ ನಡೆದರೆ ಅನೇಕರು ಭಾರತಕ್ಕೆ ಒಲಿಂಪಿಕ್ಸ್‌ ಆತಿಥ್ಯ ಬೇಕು ಎನ್ನುವುದು ಸಹಜ. ಒಲಿಂಪಿಕ್ಸ್‌ ಆತಿಥ್ಯಕ್ಕೆ ಲಂಚ ಕೊಟ್ಟು ಪಡೆಯುವ ಕಾಲ ಬಂದಿರುವುದರಿಂದ ಮುಂಬೈಯಲ್ಲಿ ನಡೆಯುವ ಐಒಸಿ ಸಮ್ಮೇಳನವನ್ನು ಹುಬ್ಬೇರಿಸಿ ನೋಡಬೇಕಾಗಿಲ್ಲ.

ಕ್ರೀಡಾಕೂಟ ಮುಗಿದ ನಂತರ ಅಲ್ಲಿ ಮೂಲಭೂತ ಸೌಕರ್ಯಗಳು ಯಾವ ರೀತಿಯಲ್ಲಿ ಮರುಬಳಕೆ ಆಗುತ್ತಿದೆ ಎಂಬುದನ್ನೂ ಗಮನಿಸಬೇಕು. ಜನರ ತೆರಿಗೆ ಮತ್ತು ಬ್ಯಾಂಕ್‌ ಸಾಲ ಮಾಡಿ ನಿರ್ಮಿಸಿದ ಕ್ರೀಡಾಂಗಣಗಳು ಮತ್ತೆ ಬಳಕೆಯಾಗದೇ ಇರುವ ಉದಾಹರಣೆಗಳೇ ಹೆಚ್ಚಿವೆ. ಸದ್ಯ ಭಾರತದಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ನವೀಕರಣಗೊಳಿಸಲು ದಿಲ್ಲಿಯ ಜವಹರಲಾಲ್‌ ನೆಹರು ಕ್ರೀಡಾಂಗಣಕ್ಕೆ 960 ಕೋಟಿ ವ್ಯಯ ಮಾಡಲಾಯಿತು. ಆ ಬಳಿಕ ಪ್ರತಿ ವರ್ಷ ನಿರ್ವಹಣೆ ಹಾಗೂ ರಿಪೇರಿ ಅಂತ ನೂರಾರು ಕೋಟಿ ರೂ. ವ್ಯಯವಾಗುತ್ತಿದೆ. ಹಾಗಾದರೆ ಒಲಿಂಪಿಕ್ಸ್‌ ಆತಿಥ್ಯ ವಹಿಸಿದ ರಾಷ್ಟ್ರಗಳು ಕ್ರೀಡಾಂಗಣಗಳ ನಿರ್ವಹಣೆಗೆ ಎಷ್ಟು ಹಣ ವ್ಯಯ ಮಾಡುತ್ತಿರಬಹುದು? ಎಷ್ಟು ರಾಷ್ಟ್ರಗಳು ಒಲಿಂಪಿಕ್ಸ್‌ ಆತಿಥ್ಯದಿಂದ ಲಾಭ ಪಡೆದಿವೆ? ಎಷ್ಟು ರಾಷ್ಟ್ರಗಳು ದಿವಾಳಿಯಾ ಘೋಷಿಸಿವೆ ಎಂಬೆಲ್ಲ ಅಂಶಗಳನ್ನು ಗಮನಿಸಬೇಕಾಗುವುದು ಅಗತ್ಯ.

ಭಾರತ ಒಲಿಂಪಿಕ್ಸ್‌ ಆತಿಥ್ಯ ವಹಿಸಬೇಕು. ಆದರೆ ಯಾವ ಸಂದರ್ಭದಲ್ಲಿ ಎನ್ನುವುದು ಮುಖ್ಯ.

Related Articles