Thursday, March 28, 2024

ಟೆನಿಸ್‌ಬಾಲ್ ಕ್ರಿಕೆಟ್‌ಗೆ ಜೀವ ತುಂಬಿದ ಮೈಸೂರಿನ ಲಕ್ಷ್ಮೀಪುರಂ ಕ್ರಿಕೆಟ್ ಕ್ಲಬ್

ಸೋಮಶೇಖರ್ ಪಡುಕರೆ, ಬೆಂಗಳೂರು

ಆ ಕ್ಲಬ್‌ನಲ್ಲಿ ಆಡಿದವರು ರಾಜ್ಯದ ಪರ ರಣಜಿ ಪಂದ್ಯವನ್ನಾಡಿದ್ದಾರೆ, ಆ ಕ್ಲಬ್ ರಾಜ್ಯಕ್ಕೆ 17 ಮಂದಿ ಅಂಪೈರ್‌ಗಳನ್ನು ನೀಡಿದೆ, ಸುಮಾರು 250ಕ್ಕೂ ಹೆಚ್ಚು ಆಟಗಾರರು  ಆ ಕ್ಲಬ್ನಲ್ಲಿ ವಿವಿಧ ವರ್ಷಗಳಲ್ಲಿ ಆಡಿದ್ದಾರೆ. ಅನೇಕರು ಸ್ಕೋರರ್ ಆಗಿದ್ದಾರೆ, ಇಲ್ಲಿ ಆಡುತ್ತಲೇ ಶಿಕ್ಷಣದಲ್ಲೂ ಉನ್ನತ ಹುದ್ದೆಗೇರಿ ದೇಶ ವಿದೇಶಗಳಲ್ಲಿ ದುಡಿಯುತ್ತಿದ್ದಾರೆ.

ಆಟದಿಂದ ದೂರ ಸರಿದರೂ ವ್ಯಾಟ್ಸ್‌ಅಪ್‌ನಲ್ಲಿ ಗುಂಪು ಮಾಡಿಕೊಂಡ ಆಗಿನ ಆಟಗಾರರು ಈಗಲೂ ಕ್ರಿಕೆಟ್ ಬಗ್ಗೆ ಚರ್ಚಿಸುತ್ತಿದ್ದಾರೆ. ಆ ಕ್ಲಬ್ ಬೇರೆಯಾವುದೂ ಅಲ್ಲ. ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದ ಮೈಸೂರಿನ ಲಕ್ಷ್ಮೀಪುರಂ ಕ್ರಿಕೆಟ್ ಕ್ಲಬ್.
ಈಗ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯ ಹುಟ್ಟಿಕೊಂಡ ಲಕ್ಷ್ಮೀಪುರಂ ಅಂಗಣದಲ್ಲಿ 1975ರಲ್ಲಿ ಹುಟ್ಟಿಕೊಂಡ ಲಕ್ಷ್ಮೀಪುರಂ ಟೆನಿಸ್ ಬಾಲ್ ಕ್ರಿಕೆಟ್ ಕ್ಲಬ್ ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಿತು. ಈಗ 43 ವರ್ಷಗಳನ್ನು ಪೂರೈಸಿರುವ ಕ್ಲಬ್‌ಗೆ ಹೊಸ ಹುಟ್ಟು ನೀಡಲು ಮಾಜಿ ಆಟಗಾರರು ಯತ್ನಿಸುತ್ತಿದ್ದಾರೆ.
200ಕ್ಕೂ ಹೆಚ್ಚು ಟ್ರೋಫಿ 
ಭಾರತ ಕ್ರಿಕೆಟ್ ತಂಡದಲ್ಲಿರುವ ಪ್ರತಿಯೊಬ್ಬ ಕ್ರಿಕೆಟಿನ ಬದುಕಿನ ಆರಂಭದ ದಿನಗಳನ್ನು ಗಮನಿಸಿದಾಗ ಅವರ ಕ್ರಿಕೆಟ್‌ಗೆ ಮೂಲವೇ ಟೆನಿಸ್ ಬಾಲ್ ಕ್ರಿಕೆಟ್ ಆಗಿರುತ್ತದೆ. ಈಗಲೂ ಪುಟಿದೇಳುವ ಚೆಂಡಿಗೆ ಹೇಗೆ ಆಡಬೇಕೆಂಬುದನ್ನು ಕಲಿಸಲು ತರಬೇತುದಾರರು ಕೆಲಹೊತ್ತು ಕಾಂಕ್ರೀಟ್ ಪಿಚ್‌ನಲ್ಲಿ ಟೆನಿಸ್ ಬಾಲ್‌ನಿಂದ ತರಬೇತಿ ನೀಡುವುದನ್ನು ಗಮನಿಸಬಹುದು.
80-90ರ ದಶಕದಲ್ಲಿ ಲಕ್ಷ್ಮೀಪುರಂ ಕ್ರಿಕೆಟ್ ಕ್ಲಬ್‌ನ ಸುವರ್ಣಯುಗ. ಪ್ರತಿಯೊಂದು ಟೂರ್ನಿಯಲ್ಲೂ ಯಶಸ್ಸಿನ ಹೆಜ್ಜೆ. ಸುಮಾರು 200ಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದು ಸಂಭ್ರಮಿಸಿದೆ. ಟೆನಿಸ್ ಬಾಲ್ ಕ್ರಿಕೆಟ್‌ನಲ್ಲೂ ಪ್ರತಿಯೊಂದು ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ, ಶಿಸ್ತಿನ ಆಟವನ್ನು ಪ್ರದರ್ಶಿಸಿರುವದು ಈ ಕ್ಲಬ್‌ನ ಗರಿಮೆ.
17 ಅಂಪೈರ್‌ಗಳು
ವಿಶೇಷವೆಂದರೆ ಈ ಕ್ಲಬ್‌ನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಿದವರಲ್ಲಿ 17 ಮಂದಿ ಆಟಗಾರರು ಈಗ ರಾಜ್ಯದ ಉತ್ತಮ ಅಂಪೈರ್ ಎನಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಅಭ್ಯಾಸದ ವೇಳೆ ಅಂಪೈರಿಂಗ್ ಮಾಡುವುದರ ಬಗ್ಗೆಯೂ ತರಬೇತಿ ನೀಡಲಾಗುತ್ತಿತ್ತು. ಎಂಸಿಸಿ ನಿಯಮಗಳನ್ನು ಟೆನಿಸ್‌ಬಾಲ್ ಕ್ರಿಕೆಟ್‌ನಲ್ಲಿ ಜಾರಿಗೆ ತಂದು, ಅದನ್ನು ಅಷ್ಟೇ ಉತ್ತಮ ರೀತಿಯಲ್ಲಿ ಪಾಲಿಸಿದ ಕಾರಣ ಮೈಸೂರಿನಿಂದ 17 ಮಂದಿ ಅಂಪೈರ್‌ಗಳು ರಾಜ್ಯದ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಸುನಿಲ್ ಕುಮಾರ್ ಡಿ.ಎಚ್. ಈ ಕ್ಲಬ್ ಪರ ಆಡಿ ನಂತರ ರಣಜಿ ಕ್ರಿಕೆಟ್‌ನಲ್ಲಿ ಮಿಂಚಿದರು.
ಕ್ಲಬ್‌ನ ಮಾಜಿ ಆಟಗಾರ ಎಂ.ಆರ್. ಸುರೇಶ್ ಈಗ ರಾಜ್ಯ ಕ್ರಿಕೆಟ್‌ನಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್‌ನ ಮಾಜಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡದ ನಿರ್ವಹಣೆಯ ಜತೆಯಲ್ಲಿ ಅಂಪೈರಿಂಗ್ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೆರನಾ ಬ್ಯಾಂಕ್‌ನ ಯು.ಎಚ್. ಗುರುಪ್ರಸಾದ್, ಬೆಮೆಲ್‌ನ ಸಿ.ಜಿ. ಜಗದೀಶ್,  ಬಿಸಿಸಿಐ ಸ್ಕೋರರ್ ಅಶೋಕ್ ಎನ್. ಅರುಣ್ ಕುಮಾರ್, ಮೋಹನ್, ಚಂದ್ರು, ರಾಜಗೋಪಾಲ್, ಎ.ಆರ್. ವೆಂಕಟೇಶ್ ಇವರು ಮೈಸೂರು ವಲಯದ ಪ್ರಮುಖ ಅಂಪೈರ್‌ಗಳು. ಇವರಿಗೆಲ್ಲ ವೇದಿಕೆ ಕಲ್ಪಿಸಿದ್ದು ಲಕ್ಷ್ಮೀಪುರಂ ಕ್ರಿಕೆಟ್ ಕ್ಲಬ್,
ಆ ಕಾಲದ ಸಮಕಾಲಿನ ಕ್ಲಬ್‌ಗಳಾದ ಸಿಸಿಎಂ, ಬ್ಯಾಂಬೂಸ್, ಎಫ್ಸಿಸಿ, ಇಬಿಸಿಸಿ ಹಾಗೂ ಸನ್ನಿ ಕ್ರಿಕೆಟ್ ಕ್ಲಬ್‌ಗಳು ಕೂಡ ಉತ್ತಮ ರೀತಿಯಲ್ಲಿ ಪಂದ್ಯಗಳನ್ನು ಆಯೋಜಿಸುವುದು ಹಾಗೂ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದವು. ಎಸ್. ಮೋಹನ್, ಲೋಕೇಶ್ ಹಾಗೂ ಶ್ರೀಧರ್ ಅವರಂಥ ಆಟಗಾರರೂ ಲಕ್ಷ್ಮೀಪುರಂ ಕ್ಲಬ್‌ನಲ್ಲಿ ಮಿಂಚಿದವರು.
ಲಕ್ಷ್ಮೀಪುರಂ ಕ್ಲಬ್‌ನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಿದ ಅನೇಕ ಆಟಗಾರರು ಎಫ್ಯುಸಿಸಿ, ಎಂಸಿಸಿ, ವೈಎಂಸಿಸಿ ಹಾಗೂ ಎನ್‌ಸಿಸಿ ಯಂತಹ ಕ್ಲಬ್‌ಗಳ ಪರ ಲೀಗ್ ಪಂದ್ಯಗಳನ್ನೂ ಆಡಿದ್ದಾರೆ.
ಮೊದಲ ಹೊನಲು ಬೆಳಕಿನ ಪಂದ್ಯ ಗೆದ್ದ ತಂಡ
ಸಾಮಾನ್ಯವಾಗಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ನಡೆದರೆ ಸ್ಥಳೀಯ ತಂಡಗಳೇ ಪ್ರಭುತ್ವ ಸಾಧಿಸುತ್ತಿದ್ದವು. ಆದರೆ 1990ರಲ್ಲಿ ನಡೆದ ದಕ್ಷಿಣ ಭಾರತದ ಮೊದಲ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯವನ್ನು ಮೈಸೂರಿನ ಲಕ್ಷ್ಮೀಪುರಂ ತಂಡ ಗೆದ್ದುಕೊಂಡು ಹೊಸ ಇತಿಹಾಸ ಬರೆಯಿತು. ದಕ್ಷಿಣ ಕನ್ನಡದಲ್ಲಿ ಪ್ರಶಸ್ತಿಗೆದ್ದ ಬೇರೆ ಜಿಲ್ಲೆಯ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪಡುಬಿದ್ರಿ ಕ್ರಿಕೆಟರ್ಸ್ ತಂಡ ಈ ಐತಿಹಾಸಿಕ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿತ್ತು. 32 ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯದಲ್ಲಿ ಲಕ್ಷ್ಮೀಪುರಂ ತಂಡ ಕೋಲಾರ ವಿರುದ್ಧ ಜಯ ಗಳಿಸಿ 5555 ರೂ. ನಗದು ಬಹುಮಾನ ಹಾಗೂ ಕಲ್ಪತರು ಟ್ರೋಫಿ ಗೆದ್ದುಕೊಂಡಿತು. ನಾಯಕ ಟಿ.ಎನ್ ಶ್ರೀಧರ್ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಪ್ರಸನ್ನ ಅವರಿಂದ ಟ್ರೋಫಿ ಸ್ವೀಕರಿಸಿದರು. ಆ ಕಾಲಕ್ಕೆ 5555 ರೂ. ಬಹುದೊಡ್ಡ ಮೊತ್ತವಾಗಿತ್ತು. ಆಗ ಯುವಜನ ಸೇವಾ ಇಲಾಖೆಯ ಸಚಿವರಾಗಿದ್ದ  ಎಂ. ವೀರಪ್ಪ ಮೊಯ್ಲಿ ಅವರು ಟೂರ್ನಿಗೆ ಚಾಲನೆ ನೀಡಿದ್ದರು.
ಜಯಕರ್ನಾಟಕ, ಪಡುಬಿದ್ರಿ ಫ್ರೆಂಡ್ಸ್, ಕುಂದಾಪುರದ ಚಕ್ರವರ್ತಿ, ಟಾರ್ಪಡೋಸ್, ಪ್ಯಾರಡೈಸ್ ಬನ್ನಂಜೆ ಮೊದಲಾದ ತಂಡಗಳ ವಿರುದ್ಧ ಲಕ್ಷ್ಮೀಪುರಂ ತಂಡ ಟೆನಿಸ್ ಬಾಲ್ ಕ್ರಿಕೆಟ್‌ನ ಹಾದಿಯಲ್ಲಿ ಸ್ಪರ್ಧಿಸಿತ್ತು.
ಮತ್ತೆ ಜೀವ ತುಂಬುವ ಹಂಬಲ
ಇಂಥ ವೈಭವದ ಇತಿಹಾಸ ಹೊಂದಿರುವ ಮೈಸೂರಿನ ಲಕ್ಷ್ಮೀಪುರಂ ಕ್ರಿಕೆಟ್ ಕ್ಲಬ್‌ಗೆ ಮತ್ತೆ ಜೀವ ತುಂಬಬೇಕಾಕಿದೆ. ನೂರಾರು ಕ್ರಿಕೆಟಿಗರಿಗೆ ಬದುಕು ನೀಡಿದ ಈ ಕ್ಲಬ್‌ನಲ್ಲಿ ಆಡಿದ ಅದೆಷ್ಟೋ ಆಟಗಾರರು ಇಂದು ಉತ್ತಮ ಸ್ಥಿತಿಯಲ್ಲಿದ್ದಾರೆ. ಮತ್ತೆ ಟೆನಿಸ್ ಬಾಲ್ ಕ್ರಿಕೆಟ್ ಮೂಲಕ ಹೊಸ ಜೀವ ಪಡೆದರೆ ಈ ಕ್ರಿಕೆಟ್ ಕ್ಲಬ್ ಮೂಲಕ ಮತ್ತಷ್ಟು ಪ್ರತಿಭೆಗಳು ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಐತಿಹಾಸಿಕ ಮೈಸೂರಿನಲ್ಲಿರುವ ಈ ಕ್ಲಬ್ ಮುಂದಿನ ಪೀಳಿಗೆಗೆ ದಾರಿ ತೋರಿಸುವಂತಾಗಬೇಕಾದರೆ ಅದಕ್ಕೆ ಮತ್ತೆ ಜೀವ ತುಂಬುವ ಕೆಲಸ ಆಗಬೇಕಿದೆ. ಮಾಜಿ ಆಟಗಾರ ಅರುಣ್ ಕುಮಾರ್ ಅವರು ಹಿಂದೆ ಆಡಿದ ಆಟಗಾರರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ವ್ಯಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಸುಮಾರು 80 ಸದಸ್ಯರು ನಿತ್ಯವೂ ಕ್ರಿಕೆಟ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸದ್ಯದಲ್ಲೇ ಒಂಡೆದೆ ಸೇರಿ ಕ್ಲಬ್‌ಗೆ ಜೀವ ತುಂಬುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಚಿತ್ರ ಕೃಪೆ : ನಮ್ಮ ಪಡುಬಿದ್ರಿ ಡಾಟ್ ಕಾಮ್ 

Related Articles