Thursday, September 12, 2024

ಎಸ್‌ಜಿಎಫ್ಐ ಟೆನಿಸ್: ಬೆಂಗಳೂರಿಗೆ ಹ್ಯಾಟ್ರಿಕ್ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ಕೂಲ್ ಗೇಮ್ಸ್ ಫೆಡರೇಷನ್ ಆ್ ಇಂಡಿಯಾ (ಎಸ್‌ಜಿಎಫ್ಐ) ಗುಲ್ಬರ್ಗಾದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ತಂಡ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡ ಬೆಂಗಳೂರು ಉತ್ತರ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್‌ನಲ್ಲಿ ನಿನಾದ್ 8-2 ಅಂತರದಲ್ಲಿ ಸಂಜಯ್ ಎಂ, ವಿರುದ್ಧ ಜಯ ಗಳಿಸಿದರು. ಡಬಲ್ಸ್‌ನಲ್ಲಿ ನಿನಾದ್ ರವಿ ಹಾಗೂ ವಿಕ್ರಮ್ ಪಿ. ಅರಬಟ್ಟಿ ಬೆಂಗಳೂರು ಉತ್ತರ ವಲಯದ ಕನ್ಶ್ ಗೌಡ ಹಾಗೂ ಸಂಜಯ್ ಎಂ. ಜೋಡಿಯನ್ನು 8-4 ಅಂತರದಲ್ಲಿ ಮಣಿಸಿತು. ಏಸ್ ಸರ್ವ್ ಹಾಗೂ ಫೊರ್‌ಹ್ಯಾಂಡ್ ಹೊಡೆತಗಳ ಮೂಲಕ ಮಿಂಚಿದ ನಿನಾದ್ ರವಿ ಜಯದ ರೂವಾರಿ ಎನಿಸಿದರು. 2016, 2017 ಹಾಗೂ 2018ರಲ್ಲಿ  ಎಸ್‌ಜಿಎಫ್ಐ ಪ್ರಶಸ್ತಿ ಗೆಲ್ಲುವ ಮೂಲಕ ನಿನಾದ್ ರವಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಬೆಂಗಳೂರು ದಕ್ಷಿಣ ವಲಯದ ಸಿಸ್ಟರ್ ನಿವೇದಿತಾ ಹೈಸ್ಕೂಲ್‌ನ ವಿದ್ಯಾರ್ಥಿಯಾಗಿರುವ ನಿನಾದ್ ರವಿ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಆಟಗಾರ.
17 ವರ್ಷ ವಯೋಮಿತಿಯ ಬಾಲಕರಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಸುರಭಿ ಶ್ರೀನಿವಾಸ 6-4 ಅಂತರದಲ್ಲಿ ಮೊನಿಕಾ ಟಿ ವಿರುದ್ಧ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಡಬಲ್ಸ್‌ನಲ್ಲಿ ಸುರಭಿ ಶ್ರೀನಿವಾಸ ಹಾಗೂ ಸುಶ್ಮಾ ಎಸ್.ಎಂ. ಜೋಡಿ 6-1 ಅಂತರದಲ್ಲಿ  ಮೊನಿಕಾ ಟಿ. ಹಾಗೂ ಭೂಮಿಕಾ ಶೇಟ್ ವಿರುದ್ಧ ಜಯ ಗಳಿಸಿದರು.
14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ವಲಯದ ತನ್ವಿ 8-3 ಅಂತರದಲ್ಲಿ ಬೆಂಗಳೂರು ಉತ್ತರ ವಲಯದ ರಿಯಾ ಗಾಯತ್ರಿ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. ಡಬಲ್ಸ್‌ನಲ್ಲಿ ರಿಯಾ ಗಾಯತ್ರಿ ಹಾಗೂ ವೈಷ್ಣವಿ ಜೋಡಿ ತನ್ವಿ ಹಾಗೂ ಕಾವ್ಯ ವಿರುದ್ಧ ಜಯ ಗಳಿಸಿತು. ರಿವರ್ಸ್ ಸಿಂಗಲ್ಸ್‌ನಲ್ಲಿ  ಬೆಂಗಳೂರು ದಕ್ಷಿಣದ ಕಾವ್ಯ ಬೆಂಗಳೂರು ಉತ್ತರದ ವೈಷ್ಣವಿ ವಿರುದ್ಧ ಜಯ ಗಳಿಸಿದರು.
17 ವರ್ಷ ವಯೋಮಿತಿಯ ರಾಷ್ಟ್ರೀಯ ತಂಡಕ್ಕೆ ನಿನಾದ್ ರವಿ, ಸಂಜಯ್ ಎಂ., ಕನ್ಶ್ ಗೌಡ, ಗೋಕುಲಾನಂದ್ ಎಂ.ಆರ್., ವಿಕ್ರಮ್ ಪಿ. ಅರಬಟ್ಟಿ ಆಯ್ಕೆಯಾಗಿದ್ದಾರೆ.

Related Articles