Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಟೆನಿಸ್‌ ಬಾಲ್ ಕ್ರಿಕೆಟ್‌ನ “ರಾಜಾ” ಸಾಲಿಗ್ರಾಮ

ಉಡುಪಿ: ಕರ್ನಾಟಕದ ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ “ರಾಜಾ ಸಾಲಿಗ್ರಾಮ” ಎಂದೇ ಜನಪ್ರಿಯಗೊಂಡಿರುವ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಾಜೇಶ್‌ ಪೂಜಾರಿ ಇಂಡಿಯನ್‌ ಸ್ಟ್ರೀಟ್‌ ಪ್ರೀಮಿಯರ್‌ ಲೀಗ್‌ನಲ್ಲಿ (ISPL)ನಲ್ಲಿ ಫಾಲ್ಕನ್‌ ರೈಸರ್ಸ್‌‌ ಹೈದರಾಬಾದ್‌ [Falcon Risers Hyderabad] ತಂಡದ ಪರ ಆಡುತ್ತಿದ್ದಾರೆ. ಟೆನಿಸ್‌ ಬಾಲ್‌ ಕ್ರಿಕೆಟನ್ನೇ ಬದುಕಾಗಿಸಿಕೊಂಡಿರುವ ರಾಜಾ ಸಾಲಿಗ್ರಾಮ ದುಬೈನಲ್ಲಿ ಉದ್ಯೋಗದಲ್ಲಿದ್ದರೂ ಭಾರತದಲ್ಲಿ ಪಂದ್ಯಗಳಿರುವಾಗ ಇಲ್ಲಿಗೆ ಬಂದು ಆಡುತ್ತಿರುವುದು ವಿಶೇಷ. The “RAJA” of tennis ball cricket Raja Saligrama playing for Falcon Risers Hyderabad.

ಸೋಮವಾರ ಮುಂಬಯಿಯಿಂದ sportsmail ಜೊತೆ ಮಾತನಾಡಿದ ರಾಜಾ ಸಾಲಿಗ್ರಾಮ, ಉದ್ಯೋಗದಾತರು ಕ್ರಿಕೆಟ್‌ ಆಟದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರಿಂದ ಈ ಪ್ರೀಮಿಯರ್‌ ಲೀಗ್‌ನಲ್ಲಿ ಆಡಲು ಸಾಧ್ಯವಾಯಿತು ಎಂದಿದ್ದಾರೆ.

ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ರಾಜಾ ಸಾಲಿಗ್ರಾಮ ಕಳೆದ 15 ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಮತ್ತು ಗಲ್ಫ್‌ ರಾಷ್ಟ್ರಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಉತ್ತಮ ಆಲ್ರೌಂಡರ್‌ ಆಗಿರುವ ರಾಜಾ ಸಾಲಿಗ್ರಾಮ, ಅದೆಷ್ಟೋ ಬಾರಿ ಸೋಲುವ ಪಂದ್ಯಗಳಲ್ಲಿ ಜಯ ತಂದುಕೊಟ್ಟ ಭರವಸೆಯ ಆಟಗಾರ. ಅಬ್ಬರದ ಹೊಡೆತಗಳಿಗೆ ಖ್ಯಾತಿ ಪಡೆದಿರುವ ರಾಜಾ ಸಾಲಿಗ್ರಾಮ, ಅವರನ್ನು ಫಾಲ್ಕನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಮಾಲೀಕರು ಚೆನ್ನಾಗಿ ಬಲ್ಲವರಾಗಿದ್ದರಿಂದ ಈ ಬಾರಿಯ ಹರಾಜಿನಲ್ಲಿ ಅವರಿಗೆ ಆವಕಾಶ ಸಿಕ್ಕಿತು. ಬೆಂಗಳೂರಿನ ಪ್ರೆಸ್ಟೀಜ್‌ ಗ್ರೂಪ್‌ನ ಮಾಲೀಕರು ಹೈದರಾಬಾದ್‌ ತಂಡದ ಫ್ರಾಂಚೈಸಿ ಮಾಲೀಕರಾಗಿರುತ್ತಾರೆ.

ದುಬೈನಲ್ಲಿ ಉದ್ಯೋಗದಲ್ಲಿದ್ದರೂ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಹೇಗೆ ಅವಕಾಶ ಸಿಕ್ಕಿತು? ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಾ ಸಾಲಿಗ್ರಾಮ, “ಉದ್ಯೋಗದಲ್ಲಿದ್ದರೂ ಎರಡು ತಿಂಗಳ ಕಾಲ ಈ ಲೀಗ್‌ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಇದಕ್ಕೆ ನಮ್ಮ ಮಾಲೀಕರ ಕ್ರಿಕೆಟ್‌ ಪ್ರೀತಿಯೇ ಕಾರಣ. ನನ್ನ ಆಟದ ಬಗ್ಗೆ ಅವರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಪ್ರಮುಖ ಪಂದ್ಯಗಳು ಬಂದಾಗ ವಿಷಯ ತಿಳಿಸಿದರೆ ಕೂಡಲೇ ಅವಕಾಶ ನೀಡುತ್ತಾರೆ.” ಎಂದರು.

ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಕಂಡ ಯಶಸ್ಸಿನ ಬಗ್ಗೆ ಮಾತನಾಡಿದ ರಾಜಾ ಸಾಲಿಗ್ರಾಮ, “ಟೆನಿಸ್‌ ಬಾಲ್‌ ಕ್ರಿಕೆಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತಾಯಿ ಇದ್ದ ಹಾಗೆ. ಈ ಕ್ರೀಡೆಯನ್ನು ಯಾರೂ ಕಡೆಗಣಿಸುವಂತಿಲ್ಲ. ಇಂಡಿಯನ್‌ ಸ್ಟ್ರೀಟ್‌ ಪ್ರೀಮಿಯರ್‌ ಲೀಗ್‌ ಮೂಲಕ ಈ ಕ್ರೀಡೆಗೆ ಉತ್ತಮ ಉತ್ತೇಜನ ಸಿಕ್ಕಿದೆ. ಉತ್ತಮ ಆಟಗಾರರು 17 ಲಕ್ಷದ ವರೆಗೂ ಹರಾಜಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಆಟಗಾರರು ಗಳಿಸುವ ಸಂಭಾವನೆಯಲ್ಲಿ ಏರಿಕೆ ಆಗುತ್ತಿದೆ. ಪಂಚತಾರಾ ಹೊಟೇಲ್‌ನಲ್ಲಿ ಉಳದಿಕೊಳ್ಳುವ ಅವಕಾಶ. ಶಿಸ್ತಿನ ನಿಯಮಗಳು, ಹಣದ ಹೊರತಾಗಿ ಭಾರತ ಕ್ರಿಕೆಟ್‌ ತಂಡದ ಆಟಗಾರರು ಯಾವ ರೀತಿಯ ಸೌಲಭ್ಯಗಳನ್ನು ಪಡೆಯುತ್ತಾರೋ ಅವೆಲ್ಲವನ್ನೂ ಇಲ್ಲಿ ನೀಡುತ್ತಿದ್ದಾರೆ,” ಎಂದರು.

“ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಕೇವಲ ಬ್ಯಾಟಿಂಗ್‌ ಗೊತ್ತಿದ್ದರೆ ಸಾಲದು, ಆಲ್ರೌಂಡರ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇಲ್ಲಿ ಯಶಸ್ಸು ಕಂಡ ಯುವ ಆಟಗಾರರು ಲೆದರ್‌ಬಾಲ್‌ ಕ್ರಿಕೆಟ್‌ನಲ್ಲೂ ಮಿಂಚಬಹುದು. ಜಗತ್ತಿನ ಹೆಚ್ಚಿನ ಆಟಗಾರರ ಬದುಕು ಆರಂಭವಾದುದ್ದೇ ಟೆನಿಸ್‌ಬಾಲ್‌ ಕ್ರಿಕೆಟ್‌ನ ಮೂಲಕ,” ಎಂದು ರಾಜಾ ಸಾಲಿಗ್ರಾಮ ಹೇಳಿದರು.

“ಇದುವರೆಗೂ ನಾವು ಸಿಕ್ಕ ಟೂರ್ನಿಗಳಲ್ಲಿ ಆಡುತ್ತಿದ್ದೆವು. ಅಲ್ಲಿಯೂ ವೃತ್ತಿಪರತೆ ಇದೆ. ISPL ಬಂದಾಗಿನಿಂದ ಟೆನಿಸ್‌ ಬಾಲ್‌ ಕ್ರಿಕೆಟ್‌ಗೆ ಮತ್ತಷ್ಟು ವೃತ್ತಿಪರತೆಯ ರೂಪ ಸಿಕ್ಕಿದೆ. ಯುವ ಆಟಗಾರರು ಧೈರ್ಯ ಮಾಡಿ ಟೆನಿಸ್‌ ಬಾಲ್‌‌ ಕ್ರಿಕೆಟನ್ನು ಆಡಬಹುದು. ಉತ್ತಮ ಪ್ರಚಾರ ಹಾಗೂ ಆಟಕ್ಕೆ ತಕ್ಕುದಾದ ಸಂಭಾವನೆ ಸಿಗುತ್ತಿದೆ. ಒಂದು ಕ್ರೀಡೆ ವೃತ್ತಿಪರತೆಯನ್ನು ಕಂಡಾಗ ಅದು ಅಭಿವೃದ್ಧಿಯತ್ತ ಸಾಗುತ್ತದೆ ಎಂಬುದಕ್ಕೆ ಟೆನಿಸ್‌ ಬಾಲ್‌ ಕ್ರಿಕೆಟ್‌ ಉತ್ತಮ ಉದಾಹರಣೆ,” ಎಂದು ರಾಜಾ ಹೇಳಿದರು.

ರಾಜಾ ಸಾಲಿಗ್ರಾಮ ಅವರು ಆಡುತ್ತಿರುವ ಫಾಲ್ಕನ್‌ ರೈಸರ್ಸ್‌ ಹೈದರಾಬಾದ್‌ ತಂಡ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸಿಂಗಮ್ಸ್‌ ವಿರುದ್ಧ 8 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ Sachin Tendulkar ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಿವರ್ಸ್‌ ಸ್ವಿಂಗ್‌ ಎಸೆತಗಳನ್ನು ಎದುರಿಸಲು ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲೇ ಅಭ್ಯಾಸ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ISPL ಎರಡನೇ ಆವೃತ್ತಿಯ ಆರಂಭದಲ್ಲಿ ಸಚಿನ್‌ ಈ ವಿಷಯವನ್ನು ಬಹಿರಂಗಗೊಳಿಸಿದ್ದರು.

ರಾಜಾ ಸಾಲಿಗ್ರಾಮ ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಖ್ಯಾತಿ ಪಡೆದಿದ್ದರೂ, ಲೆದರ್‌ಬಾಲ್‌ ಕ್ರಿಕೆಟ್‌ನಲ್ಲೂ ಮಿಂಚಿದ ಆಟಗಾರ. ಮಂಗಳೂರು ವಲಯದಲ್ಲಿ ಲೆದರ್‌ ಬಾಲ್‌ ಆಡಿಯೂ ಸೈ ಎನಿಸಿಕೊಂಡಿದ್ದರು. ಕ್ರಿಕೆಟ್‌ನಲ್ಲಿ ಸಾಮರ್ಥ್ಯದ ಜೊತೆಯಲ್ಲಿ ಅದೃಷ್ಟವೂ ಬೇಕು. ರಾಜಾ ಸಾಲಿಗ್ರಾಮ ಅವರಿಗೆ ಕರ್ನಾಟಕದ ಪರ ಆಡುವ ಅದೃಷ್ಟ ಇರಲಿಲ್ಲ. ಆದರೆ ಟೆನಿಸ್‌ ಬಾಲ್‌ ಕ್ರಿಕೆಟ್‌ ಮೂಲಕ ಕ್ರಿಕೆಟ್‌ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ISPL ನಲ್ಲಿ ರಾಜಾ ಸಾಲಿಗ್ರಾಮ ಅವರಿಗೆ ಯಶಸ್ಸು ಸಿಗಲಿ ಎಂಬುದೇ ಹಾರೈಕೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.