Saturday, July 27, 2024

14ರ ವಯಸ್ಸಿನಲ್ಲೇ 41 ಶತಕ ಗಳಿಸಿದ ಶಿವಂ !!

ಸೋಮಶೇಖರ್ ಪಡುಕೆರೆ, ಸ್ಪೋರ್ಟ್ಸ್ ಮೇಲ್ 
ಆ ಪುಟ್ಟ ಬಾಲಕ ಬ್ಯಾಟ್ ಹಿಡಿದು ಅಂಗಣಕ್ಕಿಳಿದರೆ ಅಲ್ಲೊಂದು ಶತಕ ಕಟ್ಟಿಟ್ಟ ಬುತ್ತಿ. ರಾಹುಲ್ ದ್ರಾವಿಡ್, ಸಯ್ಯದ್ ಕಿರ್ಮಾನಿ ಹಾಗೂ ವಿಜಯ್ ಭಾರದ್ವಾಜ್ ಅವರಂತ ಹಿರಿಯ ಆಟಗಾರರು ಈ ಬಾಲಕ ಭಾರತದ ಭವಿಷ್ಯದ ಆಟಗಾರ ಎಂದು ಭವಿಷ್ಯ ನುಡಿದಿದ್ದಾರೆ.
ಆತ ಬೇರೆ ಯಾರೂ ಅಲ್ಲ ದೇಶದ ಪ್ರಸಿದ್ಧ ಕ್ರಿಕೆಟ್ ಅಕಾಡೆಮಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಇಲ್ಲಿ ಅನುಭವಿ ಕೋಚ್ ಇರ್ಫಾನ್ ಸೇಟ್ ಅವರಲ್ಲಿ ತರಬೇತಿ ಪಡೆದು ಹದಿನಾಲ್ಕನೇ ವಯಸ್ಸಿನಲ್ಲೇ  41 ಶತಕಗಳನ್ನು ಸಿಡಿಸಿ ಎಲ್ಲರನ್ನೂ ನಿಬ್ಬೆರಗುಗೊಳಿಸಿರುವ ಕ್ರಿಕೆಟ್ ಪ್ರತಿಭೆ ಶಿವಂ ಎಂ ಬಿ.
ಮೂಲತಃ ನಾಸಿಕ್ ನವರಾಗಿದ್ದರೂ ತಂದೆ ಮದನ್ ಏರ್ ಫೋರ್ಸ್ ನಲ್ಲಿ ಉದ್ಯೋಗಿಯಾಗಿದ್ದ ಕಾರಣ ಈಗ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಬೆಂಗಳೂರಿನ ಸೇಂಟ್ ಜೋಸೆಫ್ ಹೈಸ್ಕೂಲ್ ನಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಶಿವಂ ಆಟ ಆರಂಭಿಸಿದ್ದು ಪ್ಲಾಸ್ಟಿಕ್ ಬ್ಯಾಟ್ ಮತ್ತು ಪ್ಲಾಸ್ಟಿಕ್ ಚೆಂಡಿನಲ್ಲಿ. ಮದನ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡ ನಂತರ ಶಿವಂ ಕ್ರಿಕೆಟ್ ಬದುಕಿಗೆ ಹೊಸ ರೂಪು ಸಿಕ್ಕಿತು. ಆ ಹೊಸ ರೂಪು ನೀಡಿದವರು ಕೆಐಒಸಿ ಯ ಪ್ರಧಾನ ಕೋಚ್ ಇರ್ಫಾನ್ ಸೇಟ್. ಶಿವಂ ಗಳಿಸಿದ 41 ಶತಕಗಳಲ್ಲಿ 5 ದ್ವಿಶತಕ,1 ತ್ರಿಶತಕ ಸೇರಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಐದನೇ ಡಿವಿಜನ್ ನಲ್ಲಿ 350 ರನ್ ಸಿಡಿಸುವ ಮೂಲಕ ಶಿವಂ ಎಲ್ಲರನ್ನೂ ಅಚ್ಚರಿಗೊಳಿಸಿದರು. 2007ರಲ್ಲಿ ಬೆಂಗಳೂರಿಗೆ ಬಂದ ಶಿವಂ ತನ್ನ ಐದನವಯಸ್ಸಿನಲ್ಲಿ ಕೆಐಒಸಿ ಗೆ ಸೇರಿಕೊಂಡು ಅಲ್ಲಿ ಟಂಡನ್ ಅವರಲ್ಲಿ ತರಬೇತಿ ಪಡೆದರು. ಜಾಲಹಳ್ಳಿಯಲ್ಲಿ ಮನೆ ಇದ್ದ ಕಾರಣ ಸರಿಯಾದ ಸಮಯಕ್ಕೆ ತರಬೇತಿಗೆ ಹಾಜರಾಗಲು ಆಗುತ್ತಿರಲಿಲ್ಲ, ಆಗ ಮದನ್ ಅವರು ಮಗನಿಗಾಗಿ ಸಂಜಯ್ ನಗರದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಮಗನ ಕ್ರಿಕೆಟ್ ಭವಿಷ್ಯಕ್ಕೆ ನೆರವಾದರು.
ಸದ್ಯ ವಿವೇಕ್ ನಗರ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿರುವ ಶಿವಂ 14, 16 ಹಾಗೂ 19 ವಯೋಮಿತಿಯ ತಂಡಗಳಲ್ಲಿ ಆಡಿ ಶತಕ ಗಳಿಸಿರುವುದು ಅದ್ಭುತ ಸಾಧನೆಯೇ ಸರಿ. 16 ವರ್ಷ ವಯೋಮಿತಿಯ ತಂಡದಲ್ಲಿ ವಲಯ ಮಟ್ಟದ ಕ್ರಿಕೆಟ್ ನಲ್ಲೂ ಶಿವಂ ಶತಕದ ದಾಖಲೆ ಬರೆದು ಅಚ್ಚರಿ ಮೂಡಿಸಿದರು. ಕೇವಲ ಆರು ಪಂದ್ಯಗಳಲ್ಲಿ 548 ರನ್ ಗಳಿಸಿರುವುದು ಶಿವಂ ಅವರ ಕ್ರಿಕೆಟ್ ಸಾಮರ್ಥ್ಯವನ್ನು ಹೇಳುತ್ತದೆ. ವಲಯ ಮಟ್ಟದಲ್ಲಿ ಅತಿ ಹೆಚ್ಚು ಟಿ=ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಪ್ರಸಿದ್ಧ ಕ್ಲಬ್ ಸ್ವಸ್ತಿಕ್ ಯೂನಿಯನ್ 2 ರ ನಾಯಕನಾಗಿಯೂ ಶಿವಂ ಮಿಂಚಿದ್ದಾರೆ.
ಅಪ್ಪನೇ ಬೌಲರ್!
ಶಿವಂ ಅವರ ಅಭ್ಯಾಸ ಕೇವಲ ಕೆಐಒಸಿ  ಅಕಾಡೆಮಿಗೆ ಮಾತ್ರ ಸೀಮಿತವಾಗಿಲ್ಲ, ತಂದೆ ಮದನ್ ನಿತ್ಯವೂ ಮಗನಿಗೆ ತರಬೇತಿಯಲ್ಲಿ ನೆರವಾಗುತ್ತಿದ್ದಾರೆ. ತಂದೆ ಎಸೆದ ಸುಮಾರು 500 ಚೆಂಡುಗಳನ್ನು ಪ್ರತಿನಿತ್ಯವೂ ಎದುರಿಸಿ ತನ್ನ ಬ್ಯಾಟಿಂಗ್ ಕೌಶಲ್ಯವನ್ನು ಉತ್ತಮಪಡಿಸಿಕೊಂಡಿದ್ದಾರೆ. ಏನ್ ಸಿ ಎ ಅಂಗಣದಲ್ಲಿ ಒಮ್ಮೆ ಶಿವಂ ಅಭ್ಯಾಸ ಮಾಡುವಾಗ ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ ಅವರು ಶಿವಂ ಅವರ ಬ್ಯಾಟಿಂಗ್ ಗಮನಿಸುತ್ತಿದ್ದರು. ಸುಮಾರು ೪೫ ನಿಮಿಷಗಳ ಕಾಲ ವಿವಿಧ ಬೌಲರ್ ಗಳಿಂದ ಬೌಲಿಂಗ್ ಮಾಡಿಸಿದರು. ಯಾವುದೇ ಚೆಂಡನ್ನು ಕೀಪರ್ ಗೆ  ಬಿಡದೆ ಶಿವಂ ಸಮರ್ಥವಾಗಿ ಎದುರಿಸಿದರು. ಬಾಲಕನ ಬ್ಯಾಟಿಂಗ್ ಸಾಮರ್ಥ್ಯವನ್ನು ಗಮನಿಸಿದ ಕಿರ್ಮಾನಿ ಈತ ”ಡೈಮಂಡ್ ಆಫ್ ಡೈಮಂಡ್ಸ್” ಎಂದು ಹೆಮ್ಮೆಯಿಂದ ನುಡಿದರು.
ರಾಹುಲ್ ದ್ರಾವಿಡ್ ಪುಟ್ಟ ಪ್ರತಿಭೆ ಶಿವಂ ಅವರ ಕ್ರಿಕೆಟ್ ಅನ್ನು ಗಮನಿಸುತ್ತಿದ್ದು, ಈತ ಭವಿಷ್ಯದ ತಾರೆ ಎಂದು ಗುಣಗಾನ ಮಾಡಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟ್ ಬರಹಗಾರರೊಬ್ಬರು ಈ ಪುಟ್ಟ ಬಾಲಕನ ಸಾಧ್ನೆಯನ್ನು ಗುಣಗಾನ ಮಾಡಿರುವುದನ್ನು ಮದನ್ ಸ್ಮರಿಸುತ್ತಾರೆ.
ಶಿವಂ ಭಾರತದ ಭವಿಷ್ಯದ ತಾರೆ : ಇರ್ಫಾನ್
”ನಮ್ಮ ಅಕಾಡೆಮಿಯಲ್ಲಿ ಇದುವರೆಗೂ  ಅದೆಷ್ಟೋ ಪ್ರತಿಭಾವಂತ ಕ್ರಿಕೆಟಿಗರು ಬದುಕನ್ನ ರೂಪಿಸಿಕೊಂಡಿದ್ದಾರೆ, ಬಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ, ಇದು ಹೆಮ್ಮೆಯ ಸಂಗತಿ. ಆದರೆ ಶಿವಂ ನನಗೆ ವಿಶೇಷವಾಗಿ ಕಾಣುತ್ತಾನೆ. ಆತನನ್ನು ”ಸೆಂಚೂರಿಯನ್ ಬಾಯ್ ” ಎಂದೇ ಕರೆಯಲಾಗುತ್ತಿದೆ. ೪೧ ಶತಕಗಳನ್ನು ಕೇವಲ ೧೪ನೇ ವಯಸ್ಸಿನಲ್ಲಿ ದಾಖಲಿಸಿದ್ದನೆಂದರೆ ಆತ ನಿಜವಾಗಿಯೂ ಭಾರತದ ಭವಿಷ್ಯದ ತಾರೆ, ಅಂಥ ಪ್ರತಿಭೆ ಆತನಲ್ಲಿದೆ, ಆತ ಭಾರತದ ಕ್ರಿಕೆಟ್ ನ ಆಸ್ತಿ” ಎಂದು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ನ ಪ್ರಧಾನ ಕೋಚ್ ಇರ್ಫಾನ್ ಸೇಟ್ ಹೇಳಿದ್ದಾರೆ.

Related Articles