Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮನ ಕಲಕುವ ಮನೆಯಿಂದ ಲಾರ್ಡ್ಸ್‌ ಅಂಗಣಕೆ ರಾಜೇಶ್‌ ಕಣ್ಣೂರ್‌

ಬಿಜಾಪುರದ ಆನಕುಂಟ ಎಂಬ ಗ್ರಾಮ. ಅಲ್ಲೊಂದು ಪುಟ್ಟ ಗುಡಿಸಲು. ಕಸ ಆಯ್ದು ಬದುಕುವ ಕುಟುಂಬ. ಆ ಕಟುಂಬದ ಸದಸ್ಯರಲ್ಲಿ ಒಬ್ಬ ರಾಜೇಶ್‌ ಕಣ್ಣೂರ್‌. ಉತ್ತಮ ಬ್ಯಾಟ್ಸ್‌ಮನ್‌ ಆಗಿದ್ದರೂ ವಿಶೇಷ ಚೇತನ ಎಂಬ ಕಾರಣಕ್ಕೆ ಸಾಮಾನ್ಯರೊಂದಿಗೆ ಆಡಲು ಸಿಗಲಿಲ್ಲ. ವಿಶೇಷ ಚೇತನ ಎಂದು ಹೊರಗಿಟ್ಟರು. ಇವರೊಂದಿಗೆ ಆಡಿದವರು ಈಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡುತ್ತಿದ್ದಾರೆ. ರಣಜಿ ಆಡುತ್ತಿದ್ದಾರೆ. ಭಾರತ ವಿಶೇಷ ಚೇತನರ ಕ್ರಿಕೆಟ್‌ ತಂಡ ಇದೇ ತಿಂಗಳು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಭಾರತ ತಂಡದಲ್ಲಿ ರಾಜೇಶ್‌ಗೆ ಸ್ಥಾನ ಸಿಕ್ಕಿದೆ. Rajesh Kannur from Vijayapura representing India Disability T20 Series against England.

ರಾಜೇಶ್‌ ಅವರ ಮನೆಯನ್ನು ನೋಡಿದರೆ ಮನಸ್ಸಿಗೆ ಬಹಳ ನೋವಾಗುತ್ತದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ U14 ಮತ್ತು U16 ಟೂರ್ನಿಗಳಲ್ಲಿ ರಾಯಚೂರು ವಲಯದ ಪರ ಆಡಿದ್ದ ರಾಜೇಶ್‌ಗೆ ಒಂದ ಕಾಲು ಗಿಡ್ಡವಿದ್ದ ಕಾರಣ ತಂಡದಲ್ಲಿ ಮುನ್ನಡೆಯಲು ಅವಕಾಶ ನೀಡಲಿಲ್ಲ. ವೈಶಾಖ್‌ ವಿಜಯ್‌ ಕುಮಾರ್‌, ಮನೋಜ್‌ ಬಾಂಡಗೆ ಹಾಗೂ ಬಿ.ಆರ್.‌ ಶರತ್‌ ಅವರ ವಿರುದ್ಧ ಆಡಿ ಮಿಂಚಿದ್ದ ರಾಜೇಶ್‌ ಇಂದು ಇಂದು ತನ್ನ ಸ್ಥಿತಿಯ ಬಗ್ಗೆ ನೋವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅವರಲ್ಲಿರುವ ಉತ್ತಮ ಕ್ರಿಕೆಟ್‌ ಆಟ ಇಂದು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳುವಂತೆ ಮಾಡಿದೆ.

ಕಸ ಆಯುವುದೇ ಬದುಕು:

ಬೆಂಗಳೂರಿನಿಂದ sportsmail ಜೊತೆ ಮಾತನಾಡಿದ ರಾಜೇಶ್‌, “ನಾನು ಕ್ರಿಕೆಟನ್ನೇ ನಂಬಿಕೊಂಡು ಬಂದವ. ಅಂಗವಿಕಲ ಎಂದು ರಾಜ್ಯ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ನಮ್ಮ ಮನೆಯಲ್ಲಿ ಕಸ ಆಯುವುದೇ ಉದ್ಯೋಗ. ಕ್ರಿಕೆಟ್‌ನಿಂದ ಬದುಕು ಕಟ್ಟಿಕೊಳ್ಳಬೇಕೆಂದು ಕನಸು ಕಂಡವ. ಆದರೆ ಸಾಧ್ಯವಾಗಲಿಲ್ಲ. ವಿಶೇಷಚೇತನರ ಕ್ರಿಕೆಟ್‌‌ ಸೇರಿದೆ. ಇಂಗ್ಲೆಂಡ್‌, ಪಾಕಿಸ್ತಾನ, ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಸರಣಿಶ್ರೇಷ್ಠ, ಉತ್ತಮ ಬ್ಯಾಟ್ಸ್‌ಮನ್‌ ಪ್ರಶಸ್ತಿ ಗಳಿಸಿರುವೆ. ನನ್ನ ಜೊತೆಯಲ್ಲಿ ಆಡಿದವರು ಇಂದು ಐಪಿಎಲ್‌ ಹಾಗೂ ರಣಜಿ ಆಡುತ್ತಿದ್ದಾರೆ. ಸಾಮಾನ್ಯರೊಂದಿಗೆ ಲೀಗ್‌ ಪಂದ್ಯಗಳಲ್ಲಿ ಡಬಲ್‌ ಸೆಂಚುರಿ ಗಳಿಸಿರುವೆ. ಇಂಗ್ಲೆಂಡ್‌ ವಿರುದ್ಧ 119 ರನ್‌ ಗಳಿಸಿರುವೆ. ನಾಲ್ಕು ಪಂದ್ಯಗಳಲ್ಲಿ 900 ರನ್‌. ಮೊನ್ನೆ ಶ್ರೀಲಂಕಾ ವಿರುದ್ಧ ಎರಡು ಅರ್ಧ ಶತಕ ಗಳಿಸಿರುವೆ. ಆದರೆ ಏನು ಮಾಡುವುದು? ನಾನು ಆಡುತ್ತಿರುವುದು ನಮ್ಮ ಸಾಧನೆಗೆ ಬೆಲೆ ಇಲ್ಲದಂತಾಗಿದೆ. ಶಾಲೆಗೆ ಹೋಗಿರಲಿಲ್ಲ. ಎಷ್ಟೇ ಉತ್ತಮ ಪ್ರದರ್ಶನ ತೋರಿದರೂ ಆರ್ಥಿಕ ಪ್ರಯೋಜನ ಇಲ್ಲ. ಯಾರೂ ನಮ್ಮ ಶ್ರಮವನ್ನು ಗುರುತಿಸುತ್ತಿಲ್ಲ,” ರಾಜೇಶ್‌ ನೋವಿನಿಂದ ಹೇಳಿಕೊಂಡಿದ್ದಾರೆ.

ಬಿಸಿಸಿಐ ನೆರವು ಅಗತ್ಯ: ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆ ಎನಿಸಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಥ ಸಾಧಕರನ್ನು ಗುರುತಿಸಿ ಅವರ ಬದುಕಿಗೆ ನೆರವಾಗಬೇಕಿದೆ. ಕ್ರಿಕೆಟ್‌ನಿಂದ ಸಾವಿರಾರು ಕೋಟಿ ಗಳಿಸುವ ಬಿಸಿಸಿಐ ತನ್ನ ಸಾಮಾಜಿಕ ಕಾಳಜಿಯ ಭಾಗದ ಮೊತ್ತವನ್ನು ವಿಶೇಷ ಚೇತನರ ಕ್ರಿಕೆಟ್‌ಗೂ ವ್ಯಯ ಮಾಡಬೇಕಾದ ಅಗತ್ಯವಿದೆ.

ರಾಜ್ಯ ಸರಕಾರ ನೆರವು ನೀಡಲಿ:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯಗಳನ್ನು ವೀಕ್ಷಿಸಿ, ಸಂಭ್ರಮಿಸುವ ಜನಪ್ರತಿನಿಧಿಗಳು ಇಂಥವರ ಬದುಕಿಗೂ ನೆರವಾಗಬೇಕಾದ ಅಗತ್ಯವಿದೆ. ಸಮಾಜದಲ್ಲಿ ಸಮರ್ಥರು ಹೇಗಾದರೂ ದುಡಿದು ಬದುಕುತ್ತಾರೆ, ಆದರೆ ವಿಶೇಷಚೇತನರ ಬದುಕು ಅನುಭವಿಸಿದವರಿಗೆ ಮಾತ್ರ ಗೊತ್ತಾಗುತ್ತದೆ. ಬಿಜಾಪುರ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ರಾಜೇಶನ ಕ್ರಿಕೆಟ್‌ ಬದುಕಿಗೆ ನೆರವಾಗಬೇಕಾದ ಅನಿವಾರ್ಯತೆ ಇದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟಿ20 ಸರಣಿಯ ವೇಳಾಪಟ್ಟಿ

Saturday, 21 June – 1st IT20 – Taunton, 6:30 PM

Monday, 23 June – 2nd IT20 – Wormsley, 5:00 PM

Wednesday, 25 June – 3rd IT20 – Lord’s, 3:30 PM

Friday, 27 June – 4th IT20 – Worcester, 5:00 PM

Sunday, 29 June – 5th IT20 – Worcester, 2:30 PM

Tuesday, 1 July – 6th IT20 – Bristol, 2:00 PM

Thursday, 3 July – 7th IT20 – Bristol, 6:30 PM


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.