ಸ್ಪೋರ್ಟ್ಸ್ ಮೇಲ್ ವರದಿ: ಎರಿಕ್ ಪಾರ್ಥಲು (8ನೇ ನಿಮಿಷ) ಹಾಗೂ ನಾಯಕ ಸುನಿಲ್ ಛೆಟ್ರಿ (63ನೇ ನಿಮಿಷ) ಗಳಿಸಿದ ಗೋಲುಗಳು ಮತ್ತು ಗುರ್ಪ್ರೀತ್ ಸಿಂಗ್ ಸಂಧೂ ಅವರ ಅದ್ಭುತ ಗೋಲ್ ಕೀಪಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡ 2-0 ಗೋಲುಗಳ ಅಂತರದಲ್ಲಿ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಅಮೂಲ್ಯ ಜಯ ಗಳಿಸಿತು. ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪ್ರಥಮ ಹಾಗೂ ದ್ವಿತಿಯಾರ್ಧಗಳಲ್ಲಿ ತಲಾ ಒಂದು ಗೋಲು ಗಳಿಸಿದ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿತು.
ಮುನ್ನಡೆ ನೀಡಿದ ಪಾರ್ಥಲು
ಮನೆಯಂಗಣದಲ್ಲಿ ಬೆಂಗಳೂರು ತಂಡವನ್ನು ಸೋಲಿಸುವುದು ಕಷ್ಟ. ಬ್ಲೂಸ್ ಪ್ರೇಕ್ಷಕರ ಬೆಂಬಲ ಇದರಲ್ಲಿ ಪ್ರಮುಖಪಾತ್ರವಹಿಸುತ್ತದೆ, ಜತೆಯಲ್ಲಿ ಶಿಸ್ತಿನ ಆಟ ಎದುರಾಳಿಯನ್ನು ಕಟ್ಟಿಹಾಕುವಂತೆ ಮಾಡುತ್ತದೆ. ಟಾಟಾ ಪಡೆಯ ವಿರುದ್ಧವೂ ಬೆಂಗಳೂರು ತನ್ನ ನೈಜ ಆಟ ಪ್ರದರ್ಶಿಸಿದ ಪರಿಣಾಮ 8ನೇ ನಿಮಿಷದಲ್ಲೇ ಎರಿಕ್ ಪಾರ್ಥಲು ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಿಕ್ಕಿತು. ಈ ಗೋಲು ಪ್ರಥಮಾರ್ಧದಲ್ಲಿ 1-0 ಮುನ್ನಡೆಗೆ ಅವಕಾಶ ಕಲ್ಪಿಸಿತು. ದಿಮಾಸ್ ಡೆಲ್ಗಾಡೋ ನೀಡಿದ ಕಾರ್ನರ್ ಪಾಸ್ ಗೆ ಪಾರ್ಥಲು ಉತ್ತಮ ರೀತಿಯಲ್ಲಿ ಸ್ಪಂದಿಸಿದರು. ಅತ್ಯಂತ ಎತ್ತರದಲ್ಲಿ ಸಾಗಿ ಬಂದ ಚೆಂಡನ್ನು ಅಷ್ಟೇ ಎತ್ತರದಲ್ಲಿ ನೆಟ್ ಗೆ ಹೆಡರ್ ಮೂಲಕ ತಳ್ಳುವಲ್ಲಿ ಪಾರ್ಥಲು ಯಶಸ್ವಿಯಾದರು. ಮುನ್ನಡೆ ಕಂಡರೂ ಬೆಂಗಳೂರು ತಂಡ ತಾಳ್ಮೆಯ ಆಟವಾಡಲಿಲ್ಲ. ಆದರೆ ಆಕ್ರಮಣದ ಆಟದಿಂದ ಗೋಲು ದಾಖಲಾಗಲಿಲ್ಲ. ಪ್ರಥಮಾರ್ಧದ ಕೊನೆಯ ಹಂತದಲ್ಲಿ ಜೆಮ್ಷೆಡ್ಪುರ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರೂ ಗುರ್ಪ್ರೀತ್ ಸಿಂಗ್ ಸಂಧೂ ಅವರ ಕೈಯನ್ನು ದಾಟಿ ಚೆಂಡು ನೆಟ್ ಸೇರಲಿಲ್ಲ.
ಬೆಂಗಳೂರು ಫೇವರಿಟ್
ಇಂಡಿಯನ್ ಸೂಪರ್ ಲೀಗ್ ನ 55ನೇ ಪಂದ್ಯದಲ್ಲಿ ಹಾಲ್ ಚಾಂಪಿಯನ್ ಬೆಂಗಳೂರು ಹಾಗೂ ಜೆಮ್ಷೆಡ್ಪುರ ಎಫ್ ಸಿ ತಂಡಗಳು ಮುಖಾಮುಖಿಯಾದವು. ಒಂದು ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದ್ದರೆ, ಇನ್ನೊಂದು ತಂಡ ನಾಲ್ಕರಲ್ಲಿ ಸ್ಥಾನ ಪಡೆಯುವ ತವಕದಲ್ಲಿದೆ. ಕಳೆದ ಐದು ಪಂದ್ಯಗಳಲ್ಲಿ ಬೆಂಗಳೂರು ಮೂರು ಪಂದ್ಯಗಳಲ್ಲಿ ಜಯ ಗಳಿಸಿ, ಎರಡರಲ್ಲಿ ಸೋಲು ಅನುಭವಿಸಿತ್ತು. ಹಿಂದಿನ ಪಂದ್ಯದಲ್ಲಿ ಜಯ ಗಳಿಸಿರುವ ಬೆಂಗಳೂರು ಈಗ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸುವ ಗುರಿ ಹೊಂದಿ ಅಂಗಣಕ್ಕಿಳಿಯಿತು. ಬೆಂಗಳೂರಿನ ಯಶಸ್ಸಿನಲ್ಲಿ ನಾಯಕ ಸುನಿಲ್ ಛೆಟ್ರಿ ಅವರ ಪಾತ್ರ ಪ್ರಮುಖವಾಗಿದೆ. ಈಗಾಗಲೇ ಏಳು ಗೋಲು ಗಳಿಸಿರುವ ಛೆಟ್ರಿ, ಸ್ಥಿರ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. ಬೆಂಗಳೂರಿನ ಬ್ಯಾಕ್ ಲೈನ್ ತಡೆಗೋಡೆ ಉತ್ತಮವಾಗಿದ್ದು, ಈ ಋತವಿನಲ್ಲಿ ಅತಿ ಕಡಿಮೆ ಗೋಲು ನೀಡಿದ ತಂಡವೆನಿಸಿದೆ.
ಜೆಮ್ಷೆಡ್ಪುರ ಎಫ್ ಸಿ ನಿಜವಾಗಿಯೂ ಸಂಕಷ್ಟ ಎದುಎಇಸುತ್ತದ್ದು, ಕಳೆದ ಐದು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿದೆ. ಸರ್ಗಿಯೊ ಕ್ಯಾಸ್ಟೆಲ್ ಅವರ ಅನುಪಸ್ಥಿತಿ ತಂಡವನ್ನು ಕಾಡಲಿದೆ, ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಗ್ರಾಂಡೆ ಉತ್ತಮ ಪ್ರದರ್ಶನ ನೀಡುತ್ತಾರೆಂಬ ನಂಬಿಕೆ ತಂಡದ್ದು. ಚೌಧರಿ, ಜೈರು ಹಾಗೂ ವಿನೀತ್ ಉತ್ತಮವಾಗಿ ಆಡಿದರೆ ಬೆಂಗಳೂರಿಗೆ ಜಯ ಅಷ್ಟು ಸುಲಭವಲ್ಲ.