Friday, March 1, 2024

ಅಮ್ಮನ ಪ್ರೀತಿಯ ನೆನಪಲ್ಲಿ ರಾಷ್ಟ್ರೀಯ ಚೆಸ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

Sports not only build better athletes but also better people: Julie Foudy

ಬರುವ ಮೇ ತಿಂಗಳ 1 ಮತ್ತು 2 ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರಾವಡಿ ಗ್ರಾಮದ ಕಡಲ ಕಿನಾರೆಯಲ್ಲಿ ಮೊದಲನೇ ಟಾರ್ಪೆಡೊಸ್ ಅಖಿಲ ಭಾರತ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ ನಡೆಯಲಿದ್ದು ಇದು ಶ್ರೀಮತಿ ರಶ್ಮಿ ಶೆಟ್ಟಿ ಅವರ ನೆನಪಿನಲ್ಲಿ ನಡೆಯಲಿದೆ.

ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ನ ಸ್ಪೋರ್ಟ್ಸ್ ಕಾರ್ನಿವಲ್ ನ ಭಾಗವಾಗಿ ಅಖಿಲ ಭಾರತ ಚೆಸ್ ಟೂರ್ನಿ ನಡೆಸಯುತ್ತಿದೆ. ರಶ್ಮಿ ಶೆಟ್ಟಿ ಅವರ ಪರಿಚಯ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ, ಆದರೆ ಅವರ ಮಗ ರಂಜನ್ ನಾಗರಕಟ್ಟೆ ರಾಷ್ಟ್ರೀಯ ಕ್ರೀಡೆಯಲ್ಲಿ ಚಿರಪರಿಚಿತರು.

ಜೀವವಿಮೆ ಕ್ಷೇತ್ರದಲ್ಲಿ ರಂಜನ್ ಅವರ ಹೆಸರು ಚಿರಪರಿಚಿತ. 3000ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ರಂಜನ್, ಒಲಿಂಪಿಕ್ಸ್ ಕ್ರೀಡೆಗಳ ಪ್ರೋತ್ಸಾಹಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮುಂಬೈಯಲ್ಲಿ ನೆಲೆಸಿರುವ ರಂಜನ್ ನಾಗರಕಟ್ಟೆ ಮೂಲತಃ ಕಾರವಾರ ಜಿಲ್ಲೆಯ ಅಂಕೋಲದವರು.

ಅಂಕೋಲದಲ್ಲಿ ಜನಿಸಿದರೂ ಬೆಳೆದದ್ದು, ಬದುಕನ್ನು ಕಟ್ಟಿಕೊಂಡಿದ್ದು ಮುಂಬೈಯಲ್ಲಿ. ಡಿಜಿಫ್ಲಿಕ್ (DgFlick) ಇನ್ಸುರೆನ್ಸ್ ಎಂಬ ಸಾಫ್ಟ್ ವೇರ್ ಕಂಪೆನಿಯ ಮಾಲೀಕರಾಗಿರುವ ರಂಜನ್, ದೇಶದ ಜನಪ್ರಿಯ ಟ್ರೈನರ್ ಆಗಿದ್ದಾರೆ. ಇದುವರೆಗೂ 3,000ಕ್ಕೂ ಅಧಿಕ ಟಾಪ್ ಅಡ್ವೈಸರ್ ಗಳಿಗೆ ತರಬೇತಿ ನೀಡಿದ್ದಾರೆ. ಚಿಕ್ಕಂದಿನಿಂದಲೂ ಒಲಿಂಪಿಕ್ಸ್ ಕ್ರೀಡೆಗಳ ಬಗ್ಗೆ ಆಸಕ್ತಿ ಹೊಂದಿ ಅದಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿರುವ ರಂಜನ್ ಈಗಲೂ ಆ ಕೆಲಸವನ್ನು ಮುತುವರ್ಜಿಯಿಂದ ಮುಂದುವರಿಸಿದ್ದಾರೆ

. “ಕ್ರೀಡೆಯನ್ನು ಜೀವನ ಮಾರ್ಗವನ್ನಾಗಿ ಯಾಕೆ ಆರಿಸಿಕೊಳ್ಳಬೇಕು”? ಎಂಬ ವಿಷಯದ ಕುರಿತು ಕುರಿತು ಹಲವಾರು ವಿಚಾರ ಸಂಕಿರಣಗಳನ್ನು ನಡೆಸಿದ್ದಾರೆ. ಭಾರತದ ಕ್ರೀಡೆಯ ಬಗ್ಗೆ ಅಪಾರ ಅನುಭವಹೊಂದಿರು ರಂಜನ್, ಭಾರತದ ಶ್ರೇಷ್ಠ ಕ್ರೀಡಾ ಇತಿಹಾಸ ತಜ್ಞರಲ್ಲೂ ಒಬ್ಬರು. ಅವರು ತಮ್ಮಲ್ಲಿರುವ ಕ್ರೀಡಾ ಜ್ಞಾನವನ್ನು ಯುವಕರಿಗೆ ನೀಡುವ ಸಲುವಾಗಿ ಹಲವಾರು ಕ್ವಿಝ್ ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸಿಕೊಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ರಂಜನ್ ದೇಶದ ಉತ್ತಮ ಅನುಭವಿ ಕ್ವಿಝ್ ಮಾಸ್ಟರ್ ಗಳಲ್ಲಿ ಒಬ್ಬರೆನಿಸಿದ್ದಾರೆ. ಭಾರತ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಬೇಕೆಂಬುದು ರಂಜನ್ ಅವರ ಉದ್ದೇಶವಾಗಿದೆ.

ಚಾಂಪಿಯನ್ ಮಕ್ಕಳು:

ತಂದೆಯಂತೆ ಮಕ್ಕಳು: ರಂಜನ್ ಅವರ ಮಕ್ಕಳು ಇಂದು ಉತ್ತಮ ಚೆಸ್ ಆಟಗಾರರಾಗಲು ಅವರ ತಾಯಿ ರಶ್ಮಿ ಶೆಟ್ಟಿ ಹಾಗೂ ಪತ್ನಿ ರತ್ನ ನಾಗರಕಟ್ಟೆ ಅವರ ಪಾತ್ರ ಪ್ರಮುಖವಾದುದು. ರಂಜನ್ ಅವರ ಮಕ್ಕಳಾದ ವೇದಾಂತ್ (15 ವರ್ಷ) ಮತ್ತು ಸೈನಾ (11 ವರ್ಷ) ಉತ್ತಮ ಚೆಸ್ ಆಟಗಾರರು. ಇಬ್ಬರೂ ಈಗಾಗಲೇ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ಗೆದ್ದಿರುತ್ತಾರೆ. ಇಬ್ಬರೂ ಮಕ್ಕಳನ್ನು ವೃತ್ತಿಪರ ಚೆಸ್ ಆಟಗಾರರನ್ನಾಗಿ ರೂಪಿಸಬೇಕೆಂಬುದು ರಂಜನ್ ಅವರ ಆಶಯವಾಗಿದೆ. ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ರತ್ನಾ ನಾಗರಕಟ್ಟೆ ರಂಜನ್ ಅವರ ಕ್ರೀಡಾ ಬದುಕು ಮತ್ತು ಮಕ್ಕಳ ಚೆಸ್ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಮಕ್ಕಳಿಗೆ ನೆರವಾಗುತ್ತಾರೆ. ರಂಜನ್ ಅವರು ಇಂದು ರಾಷ್ಟ್ರಮಟ್ಟದಲ್ಲಿ ಉತ್ತಮ ಕ್ರೀಡಾ ಪ್ರೋತ್ಸಾಹಕರಾಗಿ ಮಿಂಚುವಲ್ಲಿ ರತ್ನ ಅವರ ತ್ಯಾಗವೂ ಇದೆ.

ಗೌತಮ್ ಶೆಟ್ಟಿಗೆ ಪ್ರೋತ್ಸಾಹ:

ಕರ್ನಾಟಕದ ಹಿರಿಯ ಸ್ಪೋರ್ಟ್ಸ್ ಕ್ಲಬ್ ಗಳಲ್ಲಿ ಒಂದಾಗಿರುವ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಹಾಗೂ ರಂಜನ್ ನಾಗರಕಟ್ಟೆ ಉತ್ತಮ ಸ್ನೇಹಿತರು. ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ರಂಜನ್ ಹಲವು ಬಾರಿ ಸ್ಫೂರ್ತಿದಾಯಕ ತರಬೇತಿ ನೀಡಿರುತ್ತಾರೆ. ಈಗ ಗೌತಮ್ ಶೆಟ್ಟಿ ಅವರು ಕರ್ನಾಟಕದ ಕ್ರೀಡಾ ಇತಿಹಾಸದಲ್ಲೇ ವಿನೂತನ ಎನಿಸಿರುವ ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್-2021ರ ಯಶಸ್ಸಿಗಾಗಿ ರಂಜನ್ ಎಲ್ಲ ರೀತಿಯ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ. ರಂಜನ್ ಅವರ ತಾಯಿ ರಶ್ಮಿ ಶೆಟ್ಟಿ ಅವರು 2019ರ ಮೇ ತಿಂಗಳಲ್ಲಿ ಸ್ವರ್ಗಸ್ಥರಾದರು. ಚೆಸ್ ಕ್ರೀಡೆಯ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಈ ಕಾರಣಕ್ಕಾಗಿಯೇ ಮೊದಲ ಟಾರ್ಪೆಡೊಸ್ ಅಖಿಲ ಭಾರತ ರಾಪಿಡ್ ಚೆಸ್ ಟೂರ್ನಿಯನ್ನು ರಂಜನ್ ಅವರು ತಮ್ಮ ತಾಯಿಯ ಸ್ಮರಣಾರ್ಥ ನಡೆಸಲು ಗೌತಮ್ ಶೆಟ್ಟಿಯವರೊಂದಿಗೆ ಕೈ ಜೋಡಿಸಿದರು. “ಇಂಥ ಅದ್ಭುತ ಕ್ರೀಡಾ ಹಬ್ಬದಲ್ಲಿ ನನ್ನ ತಾಯಿಯ ಹೆಸರಿನಲ್ಲಿ ಅಖಿಲ ಭಾರತ ಚೆಸ್ ಟೂರ್ನಿ ನಡೆಯುತ್ತಿದೆ. ಅದರ ಭಾಗವಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ನಾನಿಂದು ಬದುಕಿನಲ್ಲಿ ಯಶಸ್ಸಿನ ಹೆಜ್ಜೆ ಇಡಲು ತಮ್ಮ ತಾಯಿಯೇ ಕಾರಣ,” ಎಂದು ರಂಜನ್ ನಾಗರಕಟ್ಟೆ ಸ್ಪೋರ್ಟ್ಸ್ ಮೇಲ್ ಗೆ ತಿಳಿಸಿದ್ದಾರೆ.

ಕಾರವಾರ ಸಂಜಾತೆ ಶ್ರೀಮತಿ ರಶ್ಮಿ ಶೆಟ್ಟಿ ಅವರು ರಮೇಶ್ ಶೆಟ್ಟಿ ಅವರನ್ನು ಮದುವೆಯಾದ ನಂತರ ಮುಂಬೈಗೆ ಬಂದು ನೆಲೆಸಿದರು. ರಮೇಶ್ ಶೆಟ್ಟಿ ಅವರು ಟಾಟಾ ಸಮೂಹದಲ್ಲಿ ಉಪಾಧ್ಯಕ್ಷರಾಗಿ ನಿವೃತ್ತಿಹೊಂದಿದವರು. ರಶ್ಮಿ ಶೆಟ್ಟಿಯವರು ತಮ್ಮ ಮಕ್ಕಳಾದ ರಂಜನ್ ಮತ್ತು ನಿತಿನ್ ಅವರ ಬದುಕಿನ ಯಶಸ್ಸಿನಲ್ಲಿ ಅಪಾರ ಪ್ರಭಾವ ಬೀರಿದ್ದಾರೆ. ರಂಜನ್ ಅವರ ಸಹೋದರ ನಿತಿನ್ ಕೂಡಾ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದ್ದು, ಅವರ ಕುಟುಂಬ ಒಂದು ಕ್ರೀಡಾ ಪ್ರೋತ್ಸಾಹಕ ಕುಟುಂಬವಾಗಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದೆ. ಆಖಿಲ ಭಾರತ ರಾಷ್ಟ್ರೀಯ ಫಿಡೆ ರೆಟೆಡ್ ರಾಪಿಡ್ ಚೆಸ್ ಟೂರ್ನಿಯನ್ನು ತಮ್ಮ ತಾಯಿ ರಶ್ಮಿ ಶೆಟ್ಟಿ ಅವರ ಹೆಸರಿನಲ್ಲಿ ನಡೆಸಲು ಒಪ್ಪಿಗೆ ನೀಡಿರುವುದುದಕ್ಕೆ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಡಿ ಅವರಿಗೆ ತಾನು ಚಿರ ಋಣಿ ಎಂದು ರಂಜನ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್ -2021ಕ್ಕೆ ಪ್ರೋತ್ಸಾಹ ನೀಡುತ್ತಿರುವ ರಂಜನ್ ನಾಗರಕಟ್ಟೆ ಅವರಿಗೆ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. “ದೂರದ ಮುಂಬೈಯಲ್ಲಿ ನೆಲೆಸಿದ್ದರೂ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಕ್ರೀಡಾ ಹಬ್ಬಕ್ಕೆ ಪ್ರೋತ್ಸಾಹ ನೀಡುತ್ತಿರುವ ರಂಜನ್ ಅವರ ಕ್ರೀಡಾ ಸ್ಫೂರ್ತಿ ಎಲ್ಲರಿಗೂ ಮಾದರಿ,” ಎಂದು ಗೌತಮ್ ಶೆಟ್ಟಿ ಹೇಳಿದ್ದಾರೆ.

Related Articles