Saturday, October 12, 2024

ಭಾರತ ಗೆಲ್ಲಲೆಂದು ಬೆಟ್ಟವೇರಿ ಧ್ಯಾನಿಸಿದ ಸುಧೀರ್ ಕುಮಾರ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಭಾರತ ಕ್ರಿಕೆಟ್ ತಂಡ ಗೆಲ್ಲಲೆಂದು ಕೊಟ್ಯಂತರ ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಾರೆ, ತಂಡದ ಆಟಗಾರರು ಶ್ರಮಿಸುತ್ತಾರೆ. ಅಂಗಣದ ಹೊರಗಿರಲಿ ಒಳಗಿರಲಿ ಈ ಧ್ಯಾನ ನಡೆದಿರುತ್ತದೆ. ಆದರೆ ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಕುಮಾರ್ ಈ ಬಾರಿ ಬೆಟ್ಟವೇರಿ ತಂಡದ ಜಯಕ್ಕಾಗಿ ಧ್ಯಾನ, ಗೆದ್ದಾಗ ಸಂಭ್ರಮಿಸಿದ್ದಾರೆ.

ಮೊನ್ನೆ ಪುಣೆಯಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ವೇಳೆ ಕೋವಿಡ್ ಕಾರಣ ಪ್ರೇಕ್ಷಕರಿಗೆ ಕ್ರೀಡಾಂಗಣದ ಒಳಗಡೆ ಪ್ರವೇಶ ಇರಲಿಲ್ಲ. ಎಂದಿನಂತೆ ಜನ ಮನೆಯಲ್ಲೇ ಕುಳಿತು ಪಂದ್ಯ ವೀಕ್ಷಿಸಿದರು. ಆದರೆ ಸಚಿನ್ ಅಭಿಮಾನಿಗೆ ಕ್ರೀಡಾಂಗಣದ ಒಳಗಡೆ ಪ್ರವೇಶ ನೀಡಲಿಲ್ಲ. ಮೈಗೆ ತ್ರಿವರ್ಣ ಧ್ವಜದ ಬಣ್ಣದಿಂದ ಅಲಂಕರಿಸಿಕೊಂಡು ಕೈಯಲ್ಲಿ ಶಂಖ ಮತ್ತು ತ್ರಿವರ್ಣ ಧ್ವಜ ಹಿಡಿದ ಸುಧೀರ್ ಕುಮಾರ್ ಗೆ ಅತೀವ ನಿರಾಸೆಯಾಯಿತು. ಪುಣೆಗೆ ಆಗಮಿಸಲು ಸಚಿನ್ ತೆಂಡೂಲ್ಕರ್ ವಿಮಾನದ ಟಿಕೆಟ್ ನೀಡಿದ್ದರು. ಆದರೆ ಪ್ರವೇಶ ಇರಲಿಲ್ಲ. ಇದರಿಂದ ಬೇಸತ್ತ ಸುಧೀರ್ ಕುಮಾರ್ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದ ಸಮೀಪವಿರುವ ಬೆಟ್ಟವನ್ನೇರಿ ಭಾರತ ತಂಡದ ಜಯಕ್ಕಾಗಿ ಧ್ಯಾನಿಸಿದರು.

ಈ ಕುರಿತು ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಸುಧೀರ್ ಕುಮಾರ್, “ವಿಐಪಿ ಗಳಿಗೆ ಯಾವ ನಿಯಮವೂ ಅನ್ವಯಿಸುವುದಿಲ್ಲ. ನನ್ನಂಥ ಒಬ್ಬ ಕ್ರಿಕೆಟ್ ಅಭಿಮಾನಿಗೆ ಅವಕಾಶ ನೀಡಿದರೆ ಇದ್ದ ಕೊರೊನಾ ಎಲ್ಲಾ ಕ್ರೀಡಾಂಗಣದ ಒಳಗೆ ಪ್ರವೇಶಿಸುತ್ತದಾ?. ವಿಶ್ವ ರೋಡ್ ಸೇಫ್ಟಿ ಸಿರೀಸ್ ನಲ್ಲಿ ಪಾಲ್ಗೊಂಡ ನಂತರ ರಾಯ್ಪುರದಿಂದ ಪುಣೆಗೆ ನೇರ ವಿಮಾನ ಇರಲಿಲ್ಲ. ಸಚಿನ್ ಅವರೊಂದಿಗೆ ಮುಂಬೈಗೆ ಬಂದು ನಂತರ ಅವರೇ ನನಗೆ ಪುಣೆಯ ವಿಮಾನದ ಟಿಕೆಟ್ ಕೊಡಿಸಿದರು. ಇಲ್ಲಿ ಬಂದಾಗ ನಿರಾಸೆ ಕಾಡಿತ್ತು. ಆದರೂ ತಂಡ ಗೆಲ್ಲಲಿ ಎಂದು ಬೆಟ್ಟವನ್ನೇರಿ ಧ್ಯಾನ ಮಾಡಿದೆ. ಕುಳಿತಲ್ಲಿಂದ ಕ್ರಿಕೆಟ್ ಅಂಗಣ ತೋರುತ್ತಿತ್ತು, ಅದೇ ಸಂತೋಷ.” ಎಂದು ಹೇಳಿದರು.

ಕೇವಲ ನೀರು ಆಹಾರ!

ಸುಧೀರ್ ಕುಮಾರ್ ಬಗ್ಗೆ ಕ್ರಿಕೆಟ್ ಜಗತ್ತಿಗೇ ಗೊತ್ತು. 2011ರಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಾಗ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ಸುಧೀರ್ ಕುಮಾರ್ ಅವರನ್ನು ಡ್ರೆಸ್ಸಿಂಗ್ ರೂಮಿಗೆ ಕರೆದು ಟ್ರೋಫಿ ಹಿಡಿಯುವ ಅವಕಾಶ ನೀಡಿದ್ದರು. ಮೊನ್ನೆ ರೊಡ್ ಸೆಫ್ಟಿ ವಿಶ್ವಕಪ್ ಗೆದ್ದಾಗಲೂ ಸಚಿನ್ ತಮ್ಮ ಅಪ್ಪಟ ಅಭಿಮಾನಿ ಸುದೀರ್ ಕುಮಾರ್ ಅವರನ್ನು ಮರೆತಿಲ್ಲ. ಹತ್ತಿರಕ್ಕೆ ಕರೆದು ಟ್ರೋಫಿಯನ್ನು ಹಸ್ತಾಂತರಿಸಿದ್ದರು. ಕ್ರೀಡಾಂಗಣದ ಒಳಗಡೆ ಇರುವಾಗ ಸುಧೀರ್ ಕುಮಾರ್ ನೀರು ಹೊರತಾಗಿ ಬೇರೆನನ್ನೂ ಸೇವಿಸುವುದಿಲ್ಲ. “ಪಂದ್ಯ ಇರುವಾಗ ಕ್ರೀಡಾಂಗಣ ಒಳಗಡೆ ಪಂದ್ಯ ಮುಗಿಯುವ ವರೆಗೂ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಕೇವಲ ನೀರು ನನ್ನ ಆಹಾರ. ಮೊನ್ನೆ ಬೆಟ್ಟವೇರಿದಾಗ ಕೈಯಲ್ಲಿ ಇದ್ದುದು ಎರಡೇ ನೀರಿನ ಬಾಟಲಿ. ಅದೇ ನನ್ನ ಆಹಾರವಾಗಿತ್ತು. ಭಾರತ ತಂಡ ಸೋತಾಗ ಆಹಾರ ಸೇವಿಸುವುದೇ ಇಲ್ಲ. ನೋವೇ ನನ್ನ ಆಹಾರ,” ಎಂದು ಸುಧೀರ್ ಕುಮಾರ್ ಹೇಳಿದರು.

ಕ್ರಿಕೆಟನ್ನೇ ಮದುವೆಯಾಗಿರುವೆ!!!

ನಿಮಗೆ ಮದುವೆಯಾಗಿದೆಯಾ? ಎಂದು ಸುಧೀರ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, “ನನಗೆ ಕಳೆದ ತಿಂಗಳು 40 ವರ್ಷ ಪೂರ್ಣಗೊಂಡಿತು. ಮದವೆಯಾಗಿಲ್ಲ. ಸದ್ಯ ಕ್ರಿಕೆಟ್ ನನ್ನ ಪತ್ನಿ. ನಾನು ಕ್ರಿಕೆಟನ್ನೇ ಮದುವೆಯಾಗಿರುವೆ,” ಎಂದು ನಗುತ್ತ ನುಡಿದ ಸುಧೀರ್ ಕುಮಾರ್, “ಸಚಿನ್ ಪಾಜಿ ಇರುವ ತನಕ ನನ್ನ ಪ್ರಯಾಣಕ್ಕೆ ಯಾವುದೇ ಅಡ್ಡಿಯಾಗದು. ಅವರು ಪ್ರಯಾಣದ ವೆಚ್ಚವನ್ನು ಭರಿಸುತ್ತಾರೆ, ಅವರಿಗೆ ದೇವರು ಇನ್ನೂ ಹೆಚ್ಚಿನ ಆರೋಗ್ಯ ಮತ್ತು ಐಶ್ವರ್ಯ ನೀಡಲಿ ಎಂದು ಪ್ರಾರ್ಥಿಸುವೆ,” ಎಂದರು.

ಕ್ರಿಕೆಟ್ ನಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ, ಆದರೆ ಸುಧೀರ್ ಕುಮಾರ್ ಅವರ ಕ್ರಿಕೆಟ್ ಪ್ರೀತಿಗೆ, ಸಚಿನ್ ಅಭಿಮಾನಕ್ಕೆ ಸೋಲೇ ಇಲ್ಲ….

Related Articles