Saturday, October 5, 2024

ಚೆಸ್‌: ಬೆಳ್ತಂಗಡಿಯ ಈಶಾ ಶರ್ಮಾಗೆ ಐಎಂ ಮತ್ತು ಡಬ್ಲ್ಯುಜಿಎಂ ನಾರ್ಮ್‌

ಬೆಂಗಳೂರು: ಬೆಳ್ತಂಗಡಿಯ ನಿವಾಸಿ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನ ಅಂತಿಮ ವರ್ಷದ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಈಶಾ ಶರ್ಮಾ ಅವರು ಸ್ಲೊವಾಕಿಯಾ ಓಪನ್‌ ಪೆಸ್ಟಾನಿ 2022 ಟೂರ್ನಿಯಲ್ಲಿ ಅಂತಾರಾಷ್ಟ್ರೀ ಮಾಸ್ಟರ್‌ ಮತ್ತು ಮಹಿಳಾ ಗ್ರ್ಯಾಂಡ್‌ ಮಾಸ್ಟರ್‌ ನಾರ್ಮ್‌ ಗಳಿಸಿದ ಸಾಧನೆ ಮಾಡಿದ್ದಾರೆ.

ಜುಲೈ 18ರಂದು ಟೂರ್ನಿ ಮುಕ್ತಾಯಗೊಂಡ ಟೂರ್ನಿಯಲ್ಲಿ ಈಶಾ, 5/9 ಅಂಕ ಗಳಿಸಿದರು. ಇದರ ಜೊತೆಯಲ್ಲಿ 2453 ಎಲೋ ರೇಟಿಂಗ್‌ನೊಂದಿಗೆ 48.8 ಅಂಕಗಳ ಸಾಧನೆ ಮಾಡಿದ್ದಾರೆ.

ಮೂರನೇ ಸುತ್ತಿನಲ್ಲಿ ಈಶಾ, ಪೊಲೆಂಡ್‌ನ ಗ್ರ್ಯಾಂಡ್‌ ಮಾಸ್ಟರ್‌ ಕ್ರಸೆಂಕೋವ್‌ ಮೈಕಲ್‌ (2569) ಅವರ ವಿರುದ್ಧ ಜಯ ಗಳಿಸಿದರು. ಫಿಡೆ ಟ್ರೈನರ್‌ ಕೆ. ವಿಶ್ವೇಶ್ವರನ್‌ ಅವರಲ್ಲಿ ತರಬೇತಿ ಪಡೆಯುತ್ತಿರುವ ಈಶಾ ಅವರ ಉತ್ತಮ ಸಾಧನೆ ಇದಾಗಿದೆ.

ಧರ್ಮಸ್ಥಳದ ಉಜಿರೆಯಲ್ಲಿರುವ ಎಸ್‌ಡಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಅರ್ಥಶಾಸ್ತ್ರದ ವಿದ್ಯಾರ್ಥಿನಿಯಾಗಿರುವ ಈಶಾ, ಕರ್ನಾಟಕದ ಮೊದಲ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್‌ ಎನಿಸಿದ್ದಾರೆ. 2019ರಲ್ಲಿ ಇಶಾ ಅವರು ಕರ್ನಾಟಕದ ಮೊದಲ ಅಂತಾರಾಷ್ಟ್ರೀಯ ಮಾಸ್ಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಸಾಧನೆಯ ಹಾದಿಯಲ್ಲಿ ಅವರು ಸ್ಲೊವಾಕಿಯಾದ ಐಎಂ, ನ್ಯುಗೆಬವೆರ್‌ ಮಾರ್ಟಿನ್‌ (2528) ಅವರನ್ನು ಸೋಲಿಸಿ, ಐಸ್ಲೆಂಡ್‌ನ ಐಎಂ ಸ್ಟೆಫಾನ್ಸನ್‌ ವಿಗ್ನಿರ್‌ ವಾಟ್ನರ್‌ ವಿರುದ್ಧ ಡ್ರಾ ಸಾಧಿಸಿದ್ದರು.

2015ರಲ್ಲಿ ನಡೆದ ಏಷ್ಯನ್‌ ಸ್ಕೂಲ್‌ ಚಾಂಪಿಯನ್‌ಷಿಪ್‌ನಲ್ಲಿ ಈಶಾ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರು. 2017ರಲ್ಲಿ ಇರಾನ್‌ನಲ್ಲಿ ನಡೆದ ಬಾಲಕಿಯರ ಏಷ್ಯನ್‌ ಜೂನಿಯರ್‌ ರಾಪಿಡ್‌ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್‌ಪಟ್ಟ ಗೆದ್ದಿದ್ದರು. ಪ್ರಶಸ್ತಿಯ ಹಾದಿಯಲ್ಲಿ ಮುನ್ನಡೆದಿರುವ ಈಶಾ, ಹಂಗರಿಯ ಬುಡಾಪೆಸ್ಟ್‌ನಲ್ಲಿ  ನಡೆಯುತ್ತಿರುವ ವೆಜರ್‌ಕೆಪ್ಜೋ ಜಿಎಂ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಈಶಾ ಅವರ ತಾಯಿ ಡಾ. ವಿದ್ಯಾ  ಅವರು ಸದ್ಯ ಬುಡಾಪೆಸ್ಟ್‌ನಲ್ಲಿದ್ದು ಮಗಳಿಗೆ ಸ್ಪರ್ಧೆಯಲ್ಲಿ ಸಹಕರಿಸುತ್ತಿದ್ದಾರೆ.

Related Articles