ದ್ರಾವಿಡ್ ಜತೆ ಆಡಿದ್ದೇ ಸ್ಫೂರ್ತಿ: ನಿಹಾಲ್ ಉಳ್ಳಾಲ್
ಸೋಮಶೇಖರ್ ಪಡುಕರೆ, ಬೆಂಗಳೂರು
ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿದ ನಂತರ ತಾವು ಅಧ್ಯಕ್ಷರಾಗಿರುವ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿಯುಸಿಸಿ)ಯಲ್ಲಿ ಎಂಟು ಲೀಗ್ ಪಂದ್ಯಗಳನ್ನು ಆಡಿದ್ದರು. ಆ ತಂಡದಲ್ಲಿದ್ದ ಯುವಕನೊಬ್ಬ ಅವರಿಂದ ಸ್ಫೂರ್ತಿ ಪಡೆದು ಕ್ರಿಕೆಟ್ ಬದುಕಿನಲ್ಲಿ ಹೊಸ ಹೆಜ್ಜೆಯನ್ನಿಟ್ಟ. ರಾಜ್ಯ ತಂಡಕ್ಕೆ ಎರಡನೇ ಬಾರಿಗೆ ಆಯ್ಕೆಯಾದ. ಆ ಯುವ ಕ್ರಿಕೆಟಿಗ ಬೇರೆ ಯಾರೂ ಅಲ್ಲ ಕರಾವಳಿಯಲ್ಲಿ ಮನೆಮಾತಾಗಿರುವ ಮಂಗಳೂರಿನ ನಿಹಾಲ್ ಉಳ್ಳಾಲ್.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ನಿಹಾಲ್ ಉಳ್ಳಾಲ್ ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಪಳಗಿ ಈಗ ರಾಷ್ಟ್ರಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಭವಿಷ್ಯದಲ್ಲಿ ಭಾರತ ತಂಡವನ್ನು ಸೇರುವ ಸಾಮರ್ಥ್ಯವನ್ನು ಹೊಂದಿರುವ ನಿಹಾಲ್ ಉಳ್ಳಾಲ್ ಸ್ಪೋರ್ಟ್ಸ್ ಮೇಲ್ ಜತೆ ತಮ್ಮ ಕ್ರಿಕೆಟ್ ಬದುಕಿನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಟೆನಿಸ್ ಬಾಲ್ ಕ್ರಿಕೆಟ್ ಮೂಲ:
ಮಂಗಳೂರಿನ ಉಳ್ಳಾಲದ ಉಮೇಶ್ ಕೋಟ್ಯಾನ್ ಮತ್ತು ನಾಗವೇಣಿ ದಂಪತಿಯ ಹಿರಿಯ ಮಗ ನಿಹಾಲ್ ಆರಂಭದಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಿ ಸಾಕಷ್ಟು ಜನಪ್ರಿಯಗೊಂಡವರು. ಮಂಳೂರಿನ ಸೇಂಟ್ ಅಲೋಶಿಯಸ್ ನಲ್ಲಿ ಪ್ರಾಥಮಿಕ ಮತ್ತು ಪಿಯುಸಿ ಶಿಕ್ಷಣವನ್ನು ಮುಗಿಸಿ ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರ ಸಲಹೆ ಮೇರೆಗೆ ಬೆಂಗಳೂರಿನ ಜೈನ್ ಕಾಲೇಜು ಸೇರಿದರು. ರಾಹುಲ್ ಮತ್ತು ನಿಹಾಲ್ ಇಬ್ಬರೂ ಬೆಂಗಳೂರಿನಲ್ಲಿ ಒಟ್ಟಿಗೆ ತಂಗಿದ್ದರು. ಇದರಿಂದಾಗಿ ರಾಹುಲ್ ಅವರ ಪ್ರಭಾವವೂ ನಿಹಾಲ್ ಮೇಲಿದೆ. ಆದರೆ ಕ್ರಿಕೆಟ್ ಬದುಕಿನಲ್ಲಿ ಅತ್ಯಂತ ಪ್ರಮುಖ ಪ್ರಭಾವ ಬೀರಿದ್ದು ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್.
ಟಿವಿ ನೋಡಿಕೊಂಡು, ಟೆನಿಸ್ ಬಾಲ್ ಕ್ರಿಕೆಟ್ ಆಡಿಕೊಂಡಿದ್ದ ನಿಹಾಲ್ ಆರಂಭದ ದಿನಗಳಲ್ಲಿ ಅಭ್ಯಾಸದಲ್ಲಿ ಪಾಲ್ಗೊಳ್ಳಲು ಸಾಕಷ್ಟು ಕಷ್ಟಪಡುತ್ತಿದ್ದರು. ಮಂಗಳೂರಿನ ಹೊರವಲಯದಲ್ಲಿ ಮನೆ ಇದ್ದ ಕಾರಣ ಅಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ನಂತರ ಉಮೇಶ್ ಕೋಟ್ಯಾನರು ಮಂಗಳೂರು ನಗರಕ್ಕೆ ಮನೆಯನ್ನು ಸ್ಥಳಾಂತರಿಸಿದ ಕಾರಣ ಕ್ರಿಕೆಟ್ ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು.
13 ವರ್ಷ ವಯೋಮಿತಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕ ನಂತರ ನಿಹಾಲ್ ಕ್ರಿಕೆಟನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲೇ ತಮ್ಮ ಬದುಕನ್ನು ರೂಪಿಸಿಕೊಳ್ಳಲು ದೃಢ ನಿರ್ಧಾರ ಮಾಡಿದರು.
ಕೆಎಲ್ ರಾಹುಲ್ ಆಗ ಸೇಂಟ್ ಅಲೋಶಿಯನ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು. ನಂತರ ಜೈನ್ ಕಾಲೇಜಿಗೆ ಸೇರ್ಪಡೆಗೊಂಡರು. ನಿಹಾಲ್ ಮತ್ತು ರಾಹುಲ್ ಒಟ್ಟಿಗೆ ಆಡುತ್ತಿದ್ದರು. ರಾಹಲ್ ಅವರು ನಿಹಾಲ್ ಅಔರ ತಂದೆಗೆ ಮಗನನ್ನು ಕ್ರಿಕೆಟ್ ನಲ್ಲೇ ಮುಂದುವರಿಸುವುದಾದರೆ ಬೆಂಗಳೂರಿನ ಕಾಲೇಜಿಗೆ ಸೇರಿಸಿ ಎಂದು ಸಲಹೆ ನೀಡಿದರು. ಉಚೇಶ್ ಕೋಟ್ಯಾನ್ ಅವರು ಬೆಂಗಳೂರಿನ ಡೈರಿ ಡೆವಲಪ್ಮೆಂಟ್ ಬೋರ್ಡ್‌ನಲ್ಲಿ ಉದ್ಯೋಗಿಯಾಗಿದ್ದ ಕಾರಣ ರಾಹುಲ್ ಅವರ ಸಲಹೆಯನ್ನು ಧನಾತ್ಮಕವಾಗಿ ಸ್ವೀಕರಿಸಿ ಮಗನನ್ನು ಜೈನ್ ಕಾಲೇಜಿಗೆ ಸೇರಿಸಿದರು, ಇದರಿಂದಾಗಿ ನಿಹಾಲ್ ಕರ್ನಾಟಕ ರಾಜ್ಯ ತಂಡದಲ್ಲಿ 13, 15, 16, 19 ಮತ್ತು 23 ವಯೋಮಿತಿಯ ತಂಡದಲ್ಲಿ ಆಡಿ ಮಿಂಚಿದರು. ಈಗ ಎರಡನೇ ಬಾರಿ ರಾಜ್ಯ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದರು. ಕಳೆದ ಬಾರಿಯೂ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡದಲ್ಲಿ ಆಡಿದ್ದರು. ಅದೇ ರೀತಿ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದರು.
ಯುಪಿ ವಿರುದ್ಧ ಮಿಂಚಿದ್ದ ಯುವ ನಿಹಾಲ್:
16 ವರ್ಷ ವಯೋಮಿತಿಯ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧದ ಪಂದ್ಯ. ಆಗ ಕುಲದೀಪ್ ಯಾದವ್ ಸ್ಪಿನ್ ಮಂತ್ರಕ್ಕೆ ಕರ್ನಾಟಕ ನಲುಗಿತ್ತು. ಕರ್ನಾಟಕ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ನಿಹಾಲ್ ಕುಲದೀಪ್ ಅವರ ಸ್ಪಿನ್ ಜಾಲಕ್ಕೆ ತಕ್ಕ ಉತ್ತರ ನೀಡಿ ಅರ್ಧ ಶತಕ ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಅಂದಿನಿಂದ ನಿಹಾಲ್ ರಾಜ್ಯ ತಂಡದಲ್ಲಿ ನಿರಂತರವಾಗಿ ಸ್ಥಾನ ಪಡೆಯುತ್ತಿದ್ದರು, ಹಾಗೂ ಅವಕಾಶ ಸಿಕ್ಕಲ್ಲೆಲ್ಲ ಉತ್ತಮ ಪ್ರದರ್ಶನ ತೋರುತ್ತಿದ್ದರು.
ಪ್ರತಿಯೊಂದು ಅವಕಾಶವೂ ಕೊನೆಯ ಅವಕಾಶ:
ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ ನಿಮ್ಮ ಕ್ರಿಕೆಟ್ ಬದುಕಿಗೆ ಎಷ್ಟು ಮುಖ್ಯವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಿಹಾಲ್, “ನನ್ನ ಕ್ರಿಕೆಟ್ ಬದುಕಿನಲ್ಲಿ ಪ್ರತಿಯೊಂದು ಅವಕಾಶವನ್ನೂ ಕೊನೆಯ ಅವಕಾಶವೆಂದು ಪರಿಗಣಿಸುತ್ತೇನೆ. ಸಿಕ್ಕ ಅವಕಾಶದಲ್ಲೇ ಉತ್ತಮ ಪ್ರದರ್ಶನ ತೋರುವುದು ನನ್ನ ನಿರ್ಧಾರ. ಅದಕ್ಕಾಗಿ ಎರಡನೇ ಬಾರಿಗೆ ಹಿರಿಯರ ತಂಡದಲ್ಲಿ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವೆ. ಅಲ್ಲದೆ ಮುಂದಿನ ಮೂರು ನಾಲ್ಕು ಅವರ್ಷಗಳ ಅವಧಿಗೆ ತಂಡದಲ್ಲಿ ನನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನೆಲೆಯಲ್ಲಿ ಪ್ರದರ್ಶನ ತೋರುವೆ, ಏಕೆಂದರೆ ಸಾಕಷ್ಟು ಸ್ಪರ್ಧೆಗಳು ಇರುವುದು ಸಾಮಾನ್ಯವಾಗಿದೆ. ಯಾರು ಉತ್ತಮ ಪ್ರದರ್ಶನ ತೋರುತ್ತಾರೋ ಅವರ ಆಯ್ಕೆ ಆನಿವಾರ್ಯವಾಗುತ್ತದೆ. ಉಳ್ಳಾಲದಂಥ ಗ್ರಾಮೀಣ ಪ್ರದೇಶದಿಂದ ಬಂದ ನನಗೆ ಈ ಅವಕಾಶ ಅತ್ಯಂತ ಪ್ರಮುಖವಾಗಿದೆ,” ಎಂದು ಹೇಳಿದರು.
ರಾಹುಲ್ ದ್ರಾವಿಡ್ ಆದರ್ಶ:
ಕ್ರಿಕೆಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯಾವುದೇ ಯುವಕರನ್ನು ಕೇಳಿದರೂ ಅವರು ನನಗೆ ಆದರ್ಶ ರಾಹುಲ್ ದ್ರಾವಿಡ್ ಎಂದು ಹೇಳುತ್ತಾರೆ. ದ್ರಾವಿಡ್ ಅವರದ್ದು ಅಂಥ ವ್ಯಕ್ತಿತ್ವ. ಈ ಆದರ್ಶ ಕೇಲವ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶದ ಆಟಗಾರರಿಗೂ ದ್ರಾವಿಡ್ ಮಾದರಿ. ನಿಹಾಲ್ ಅವರಿಗೆ ದ್ರಾವಿಡ್ ಮಾದರಿಯಾಗಲು ಅವರು ನೀಡುವ ಕಾರಣವೇ ಬೇರೆ. “ರಾಹುಲ್ ದ್ರಾವಿಡ್ ಅವರು ನಿವೃತ್ತಿಯಾದ ಕೂಡಲೇ ತಾವು ಅಧ್ಯಕ್ಷರಾಗಿದ್ದ ಬಿಯುಸಿಸಿ ಕ್ಲಬ್‌ನಲ್ಲಿ ಎರಡು ಲೀಗ್ ಪಂದ್ಯಗಳು ಮತ್ತು ನಾಲ್ಕೈದು ಟಿ20 ಪಂದ್ಯಗಳನ್ನು ಆಡಿದ್ದರು. ಆಗ ನಾನು ಬಿಯುಸಿಸಿ ಪರ ಆಡುತ್ತಿದ್ದೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಹೊರ ಬಂದು ಲೀಗ್‌ನಲ್ಲಿ ಆಡುವುದು ಸ್ಫೂರ್ತಿದಾಯಕ. ಇದು ಯುವ ಆಟಗಾರರಿಗೆ ನೀಡಿದ ಕರೆಯಂತಿತ್ತು. ರಾಹುಲ್ ದ್ರಾವಿಡ್ ಜತೆ ಆಡಬೇಕೆಂದಿಲ್ಲ, ಅವರ ಜತೆ ನಿಂತರೇ ಅದೊಂದು ಸ್ಫೂರ್ತಿ,” ಎಂದು ನಿಹಾಲ್ ತಮ್ಮ ಬದುಕಿನಲ್ಲಿ ರಾಹುಲ್ ದ್ರಾವಿಡ್ ಯಾವ ರೀತಿಯಲ್ಲಿ ಪ್ರಭಾವ ಬೀರಿದರು ಎಂಬುದನ್ನು ವಿವರಿಸಿದರು.
ಆಡಂ ಗಿಲ್‌ಕ್ರಿಸ್ಟ್, ಲ್ಯಾನ್ಸ್ ಕ್ಲೂಸ್ನರ್ ಮತ್ತು ಹರ್ಷಲ್ ಗಿಬ್ಸ್ ಅವರಂಥ ಶ್ರೇ಼ಷ್ಠ ಆಟಗಾರರ ಜತೆ ನಿಹಾಲ್ ಆಡಿದ್ದು ಅವರ ಕ್ರಿಕೆಟ್ ಬದುಕಿಗೆ ನೆರವಾಗಿದೆ. ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯಲ್ಲಿ ನಿಹಾಲ್ ಆಡಿದಾಗ ಈ ಎಲ್ಲ ಆಟಗಾರರ ಜತೆ ಆಡುವ ಅವಕಾಶವಿದ್ದಿತ್ತು. ಆಗ ಪ್ರತಿಯೊಂದು ತಂಡದಲ್ಲೂ ಇಬ್ಬರು ವಿದೇಶಿ ಆಟಗಾರರು ಆಡಿದ್ದರು, ಮೊದಲ ಋತುವಿನಲ್ಲಿ ನಿಹಾಲ್ ಮ್ಯಾನ್ ಆಫ್ ದಿ ಸಿರೀಸ್ ಗೌರವಕ್ಕೆ ಪಾತ್ರರಾಗಿ ರಾಯಲ್ ಎನ್ಫೀಲ್ಡ್ ಬುಲೆಟ್ ಬಹುಮಾನ ಗಳಿದ್ದರು.
ಉಳ್ಳಾಲದಂಥ ಸಣ್ಣ ಹಳ್ಳಿಯಿಂದ ಬಂದು ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಪಳಗಿ, ನಂತರ ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ಮಿಂಚಿ ಈಗ ಕರ್ನಾಟಕ ತಂಡಕ್ಕಾಗಿ ಮತ್ತೆ ಆಡಲು ಸಜ್ಜಾಗಿರುವ ನಿಹಾಲ್ ಉಳ್ಳಾಲ್ ಅವರ ಕ್ರಿಕೆಟ್ ಬದುಕು ಉಜ್ವಲವಾಗಲಿ. ಬೆಂಗಳೂರಿನ ಬಿಯುಸಿಸಿ, ರಾಜಾಜಿನಗರ ಕ್ರಿಕೆಟರ್ಸ್ ಕ್ಲಬ್‌ಗಳ ಪರ ಆಡಿರುವ ನಿಹಾಲ್, ಕೆಪಿಎಲ್ ನಲ್ಲಿ ಮೈಸೂರು ವಾರಿಯರ್ಸ್ ತಂಡದಲ್ಲಿದ್ದರು. ಭಾರತ ತಂಡದಲ್ಲಿ ಅವರಿಗೆ ಮುಂದಿನ ದಿನಗಳಲ್ಲಿ ಆಡುವ ಅವಕಾಶ ಸಿಗಲಿ ಎಂಬುದೇ ಮನದಾಳದ ಹಾರೈಕೆ.